ಏ ಆ ಬಸ್‌ ಹತ್ತಬ್ಯಾಡ್ರೀ...

7

ಏ ಆ ಬಸ್‌ ಹತ್ತಬ್ಯಾಡ್ರೀ...

Published:
Updated:

ತಾಳಿಕೋಟೆ: ‘ಏ... ಆ ಬಸ್‌ ಹತ್ತಬ್ಯಾಡ್ರಿ..! ಬೇಕಾದರ ಹಿಂದ ಇನ್ನೊಂದು ಡಿಪೋದ ಬಸ್‌ ತಾಸು ತಡ ಮಾಡಿ ಬರುವಲ್ದ್ಯಾಕ ಅದರಾಗ ಹೋಗೂಣು..’ಇದು ನಿತ್ಯ ಜನ ಸಾಮಾನ್ಯರು ತಾಳಿಕೋಟೆ ಬಸ್‌ ನಿಲ್ದಾಣದಲ್ಲಿರಲಿ ಬೇರೆ ಊರುಗಳ ನಿಲ್ದಾಣಗಳಲ್ಲಿ ಕಾಯುತ್ತಿರಲಿ ಅವರು ಆಡಿಕೊಳ್ಳುವ ಮಾತುಗಳಿವು.‘ಈ ಬಸ್ ಎಲ್ಲಿ ನಿಂದರತಾವ, ಎಷ್ಟು ಸಲ ನಿಂದರತಾವ ಅನ್ನೂ..ದ ತಿಳಿಂಗಿಲ್ಲ ಮಾರಾಯಾ...’  ಎಂಬ ಮಾತುಗಳು ಪ್ರಯಾಣಿಕರಿಂದ ನಿತ್ಯ ಸಹಜವಾಗಿ ಕೇಳಿಬರುತ್ತಿವೆ.ಅವರು ಆಡಿದಂತೆ ನಿತ್ಯ ತಾಳಿಕೋಟೆ ಘಟಕದ  ಬಸ್‌ಗಳ ಸ್ಥಿತಿ ಹೀನಾಯವಾಗಿದೆ. ನಿತ್ಯ ವಿಜಾಪುರಕ್ಕೆ ಹೋಗುವ ರಸ್ತೆಯಲ್ಲಿ ಕನಿಷ್ಠ ಒಂದು ಸಲವಾದರೂ ಹೆಚ್ಚಾಗಿ ಎಲ್ಲ ಬಸ್‌ಗಳು ಪಂಕ್ಚರ್‌ ಆಗಿಯೋ, ಬ್ರೇಕ್‌ ಫೇಲ್‌ ಆಗಿಯೋ, ಪಾಟಾ ಕಟ್‌ ಆಗಿಯೋ ಇಲ್ಲಾ ಯಾವುದೋ ಕಾರಣಕ್ಕೆ ನಿಲ್ಲುತ್ತವೆ. ಅವಸರದ ಕೆಲಸಗಳಿಗೆ ಹೋಗುವವರು, ಅನೇಕ ಲಗೇಜುಗಳೊಂದಿಗೆ ಪ್ರಯಾಣಿಸುವವರು, ವೃದ್ಧರು, ಮಕ್ಕಳೊಂದಿಗೆ ಇರುವವರು, ನಿಂತ ಬಸ್‌ನಿಂದ ಬೇರೆ ಬಸ್‌ ಬದಲಿಸುವ ಯತ್ನದಲ್ಲಿ ಓಡಬೇಕು. ಅಲ್ಲಿ ಸೀಟ್‌ ಸಿಗುವುದಂತೂ ದುರ್ಲಭ. ನಿಲ್ಲಲೂ ಅವಕಾಶವಿಲ್ಲ. ಇದು ಪ್ರಯಾಣಿಕರಿಗೆ ನಿತ್ಯದ ಕಿರಿಕಿರಿ.  ಬಸ್‌ ಓಡಿಸುವ ಚಾಲಕ ಟಿಕೆಟ್‌ ನೀಡುವ ನಿರ್ವಾಹಕರು ತಮ್ಮದಲ್ಲದ ತಪ್ಪಿಗೆ ಪ್ರಯಾಣಿಕರ ಹಿಡಿಶಾಪ, ಬೈಗುಳ ತಿನ್ನಬೇಕು.ಮೂರು–ನಾಲ್ಕು ಬಸ್‌ಗಳು ಸರದಿಯಂತೆ ನಿಂತ ಉದಾಹರಣೆಗಳೂ ಸಾಕಷ್ಟಿವೆ. ಈಚೆಗೆ ಪಟ್ಟಣದಿಂದ ಹೂವಿನ ಹಿಪ್ಪರಗಿ ಹೋಗುವ 25 ಕಿ.ಮೀ. ಅಂತರದಲ್ಲಿ ಮೂರು ಬಸ್‌ಗಳು ವಿವಿಧ ಕಾರಣಗಳಿಂದ ರಸ್ತೆಯಲ್ಲಿಯೇ ನಿಂತಿದ್ದವು. ಇದಕ್ಕೆ ಹದಗೆಟ್ಟ ರಸ್ತೆ ಸಾಥ್‌ ನೀಡಿದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಎಡ–ಬಲ ರಸ್ತೆಗಳಲ್ಲಿ ನೀರು ನಿಂತು ರಸ್ತೆ ಹಾಳಾಗಿ ಹೋಗಿದೆ. ‘ಆದರೆ ರಸ್ತೆ ಹಾಳಾಗಿದ್ದರೆ ಉಳಿದ ಘಟಕಗಳ ಬಸ್‌ಗಳು ಯಾಕೇ ನಿಲ್ಲುತ್ತಿಲ್ಲ ಹೇಳಿ’ ಎನ್ನುವ ಪ್ರಯಾಣಿಕರ ಮಾತು ಸ್ಥಳೀಯ ಘಟಕದ ಅವ್ಯವಸ್ಥೆಯನ್ನು ಎತ್ತಿ ತೋರುತ್ತದೆ.ಇನ್ನೂ ಗ್ರಾಮೀಣ ಸಾರಿಗೆ ಸ್ಥಿತಿಯಂತೂ ಇನ್ನೂ ಶೋಚನೀಯ. ಹಳ್ಳಿಯ ಜನತೆ ಹಾಕುವ ನಿತ್ಯದ ಶಾಪಗಳು ಇಲ್ಲಿ ತಗುಲುತ್ತಿಲ್ಲ.

ಘಟಕದಲ್ಲಿ ಒಟ್ಟು 80 ಬಸ್‌ಗಳಿವೆ. ಅವಧಿ ಮುಗಿದ 14 ಬಸ್‌ಗಳಿಗೆ ಬದಲಾಗಿ 14 ಹೊಸ ಬಸ್‌ಗಳು ಬಂದಿವೆ. ಹಿಂದೆ ಬಿರ್ಲಾ ಕಂಪೆನಿ ಟೈರ್‌ಗಳಿದ್ದವು ಅವನ್ನು ಬದಲಿಸಲಾಗಿದೆ ಇನ್ನು ಪರಿಸ್ಥಿತಿ ಸುಧಾರಿಸುತ್ತದೆ  ಎಂದು ತಿಂಗಳ ಹಿಂದೆ  ಘಟಕ ವ್ಯವಸ್ಥಾಪಕರು ಹೇಳಿದ ಮಾತು ನಿಜವಾಗಿಲ್ಲ.  ಹೊಸ ಗಾಡಿಗಳು ಬಂದಿರುವುದು ಆರು ಮಾತ್ರ. 15ಕ್ಕೂ ಅಧಿಕ ಹಾಳಾದ ಬಸ್‌ಗಳನ್ನೆ ಓಡಿಸಲಾಗುತ್ತಿದೆ. ಬಿಡಿಭಾಗ ಪೂರೈಕೆಯಲ್ಲಿ ವ್ಯತ್ಯಯವಿದೆ. ಸರಿಯಾಗಿ ದುರಸ್ತಿ ಮಾಡುವುದಿಲ್ಲ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.ಬಸ್‌ಗಳ ಮೇಲ್ಛಾವಣಿ ಸೋರುತ್ತಿವೆ. ಅನೇಕ ಬಸ್‌ಗಳಿಗೆ ಸರಿಯಾದ ಕಿಟಕಿ ಗಾಜುಗಳಿಲ್ಲ. ಬಸ್‌ಗಳನ್ನು ಸ್ವಚ್ಛತೆ ಮಾಡುವ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ. ಡಿಪೋ ಬಿಟ್ಟರೂ  ಬಸ್‌ಗಳು ನಿಲ್ದಾಣದಿಂದ ಸಮಯಕ್ಕೆ ಸರಿಯಾಗಿ ಹೊರಡುವುದೇ ಇಲ್ಲ. ಸದ್ಯ ಹೊರಗಿನ ಘಟಕದ 30ರಷ್ಟು ಬಸ್‌ಗಳು ಈಗ ಪ್ರಯಾಣಿಕರ ಕೈ ಹಿಡಿದಿವೆ.ಕೆಲ ದಿನಗಳ ಹಿಂದೆ ಶಾಸಕರು ಕರೆದ ಸಭೆಯಲ್ಲಿ ‘ಹುಬ್ಬಳ್ಳಿ, ಗೋಕರ್ಣದತ್ತ ಹೊಸ ಮಾರ್ಗ ಮಾಡಿ ಬಸ್‌ ಬಿಡಿ’ ಎಂದು ಜನತೆಯ ಬೇಡಿಕೆಯನ್ನು ಹೇಳಿದ್ದರು ಇಂದಿನವರೆಗೆ ಅವರ ಮಾತಿಗೆ ಕವಡೆ ಕಿಮ್ಮತ್ತು ದೊರೆತಿಲ್ಲ. ಲಭ್ಯ ಮಾಹಿತಿ ಪ್ರಕಾರ ನಿತ್ಯ ₨ ಎಂಟು ಲಕ್ಷ  ಆದಾಯ ತರುತ್ತಿದ್ದ ಘಟಕದ ಬಸ್‌ಗಳು ₨ ಆರು ಲಕ್ಷಕ್ಕೆ ಇಳಿದಿವೆ.ಆರ್ಥಿಕ ವರ್ಷದಿಂದ ಇಂದಿನವರೆಗೆ ಘಟಕದ ಆದಾಯ ₨ 35–40 ಲಕ್ಷ ಹಣ ಕಡಿಮೆಯಾಗಿದೆ. ಸರಾಸರಿ  ವರ್ಷಕ್ಕೆ ಒಂದು ಕೋಟಿ ಆದಾಯ ಖೋತಾ. ಬಸ್‌ ನಿಲ್ದಾಣದ ಅವ್ಯವಸ್ಥೆಯೂ ಮುಂದುವರಿದಿದೆ. ಸ್ವಚ್ಛತೆ ಇಲ್ಲದ ನಿಲ್ದಾಣ ಅನಾರೋಗ್ಯಕ್ಕೆ ದಾರಿ ಮಾಡಿದೆ.  ಒಂದು ಕಾಲಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಆದಾಯ ತರುವ ಹೆಗ್ಗಳಿಕೆಯ ತಾಳಿಕೋಟೆ ಘಟಕ ಕಡಿಮೆ ಆದಾಯ ತರುತ್ತಿದೆ. –ಶರಣು ಗಡೇದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry