ಏ.15ರವರೆಗೆ ನೀರು ಹರಿಸಲು ಮನವಿ

7

ಏ.15ರವರೆಗೆ ನೀರು ಹರಿಸಲು ಮನವಿ

Published:
Updated:

ಯಾದಗಿರಿ: ನಾರಾಯಣಪುರ ಜಲಾಶಯದಿಂದ ವ್ಯಾಪ್ತಿಯ ರೈತರ ಬೆಳೆಗಳಿಗೆ ಏಪ್ರಿಲ್ 15 ರವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನ ರೈತರು ಜಲಾಶಯ ನೀರನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ನ. 30 ರಂದು ಆಲಮಟ್ಟಿಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿಯಲ್ಲಿ ಫೆಬ್ರವರಿ 20 ರವರೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಹಿಂಗಾರು ಅಲ್ಪಾವಧಿ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಜೋಳ, ಸಜ್ಜೆ, ಕಡ್ಲಿ ಮುಂತಾದ ಬೆಳೆಗಳು ಬೆಳೆಯಲು ಸಾಧ್ಯವಿಲ್ಲ. ಈ ಬೆಳೆಗಳಿಗೆ ಕನಿಷ್ಠ 3 ರಿಂದ ಮೂರುವರೆ ತಿಂಗಳು ಕಾಲಾವಕಾಶ ಬೇಕು. ಮುಂಗಾರು ಮಳೆ ತಡವಾಗಿ ಬಂದಿದ್ದರಿಂದ ಬಿತ್ತನೆ ಕೂಡಾ ತಡವಾಗಿದೆ.ಹೀಗಾಗಿ ಮುಂಗಾರು ಬೆಳೆಯನ್ನು ಕಟಾವು ಮಾಡಿ ಮತ್ತೆ ಭೂಮಿಯನ್ನು ಹದಗೊಳಿಸಿ ಡಿಸೆಂಬರ್ ಅಂತ್ಯದವರೆಗೆ ಬಿತ್ತನೆ ಮಾಡಿದ್ದಾರೆ. ಏಪ್ರೀಲ್ 15 ರವರೆಗೆ ನೀರು ಹರಿಸಿದರೆ ಮಾತ್ರ ಹಿಂಗಾರು ಬೆಳೆ ಪಡೆಯಲು ಸಾಧ್ಯ ಎಂದು ವಿವರಿಸಿದರು.ಕಳೆದ ವರ್ಷ ಕಾಲುವೆ ದುರಸ್ತಿಗಾಗಿ ಹಿಂಗಾರು ಬೆಳೆಗೆ ನೀರು ಬಿಡಲಿಲ್ಲ. ರೈತರು ಆರ್ಥಿಕ ನಷ್ಟ ಅನುಭವಿಸಿದರು. ಈ ಸಮಸ್ಯೆ ಪರಿಹಾರಕ್ಕಾಗಿ ಸುರಪುರದಿಂದ ನಾರಾಯಣಪೂರ ಕೆ.ಬಿ.ಜೆ.ಎನ್.ಎಲ್. ಮುಖ್ಯ ಎಂಜಿನಿಯರ್ ಕಚೇರಿವರೆಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಯಿತು. ಜೊತೆಗೆ ಈ ವಿಚಾರವಾಗಿ ವಿಧಾನಸಭೆ ವಿರೊಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ನೀರಾವರಿ ಸಚಿವ ಬಸವರಾಜ ಬೊಮ್ಮೋಯಿ ಮತ್ತು ನೀರಾವರಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಎರಡು ವಾರ ಕಳೆದರೂ ಏ. 15ರವರೆಗೆ ನೀರು ಬಿಡುವ ಲಕ್ಷಣ ಕಾಣುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು,ಗೊಂದಲದಲ್ಲಿರುವ ರೈತರಲ್ಲಿ ಆತಂಕ ಹೆಚ್ಚಾಗಿದೆ. ತಾಲ್ಲೂಕಿನ ಪರಸನಳ್ಳಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತರು ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರ ಕೂಡಲೇ ರೈತರಿಗೆ ಸ್ಪಷ್ಟನೆ ನೀಡಿ, ಮಹಾರಾಷ್ಟ್ರದಿಂದ ನೀರು ಖರೀದಿಸಿ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.ಒಂದು ವಾರದೊಳಗೆ ಸರ್ಕಾರ ನೀರು ಒದಗಿಸುವ ಕುರಿತು ಸ್ಪಷ್ಟನೆ ನೀಡದಿದ್ದಲ್ಲಿ ರಸ್ತೆ ಬಂದ್ ಮಾಡಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಮುಖಂಡರಾದ ಸೂಲಪ್ಪ ಕಮತಿಗಿ, ವಿಠಲ ಯಾದವ, ತಿಪ್ಪರಾಜಗೌಡ ಬಾಚಿಮಟ್ಟಿ, ಮಲ್ಲಯ್ಯ ಕಮತಿಗಿ. ಅಬ್ದುಲ್ ಗಫೂರ ನಗನೂರಿ, ಮಲ್ಲಣ್ಣ ನಡಕೂರ, ಮಾನಪ್ಪ ಸೂಗೂರ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry