ಗುರುವಾರ , ಜೂನ್ 24, 2021
29 °C

ಏ.2 ರಿಂದ ಸಕಾಲ ಎಲ್ಲೆಡೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ ಒಂದರಿಂದ ಪ್ರಾಯೋಗಿಕವಾಗಿ ರಾಜ್ಯದ 4 ತಾಲ್ಲೂಕುಗಳಲ್ಲಿ ಪ್ರಾರಂಭಗೊಂಡ `ಸಕಾಲ~ (ನಾಗರಿಕ ಸೇವಾ ಖಾತರಿ ನಿಯಮ) ಏಪ್ರಿಲ್ 2 ರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ ನಂತರ ಈ ಘೋಷಣೆ ಮಾಡಿದರು. `ಸಕಾಲ~ ಮಿಷನ್ ಜಾರಿಗೊಳಿಸಲು ನಡೆಸಿರುವ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.ಎಲ್ಲಾ ಜಿಲ್ಲಾಧಿಕಾರಿಗಳು ಜನರಲ್ಲಿ ಈ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಜಿಲ್ಲೆಗಳಲ್ಲಿ ಕಂಪ್ಯೂಟರ್ ಒಳಗೊಂಡಂತೆ ಇತರೆ ಸೌಲಭ್ಯವುಳ್ಳ  ಹೆಲ್ಪ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದ್ದು ಇವುಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕಿದೆ. ಸಕಾಲ ಮಿಷನ್‌ನ ಪ್ರಗತಿಯ ಕುರಿತು ಪ್ರಾದೇಶಿಕ ಆಯುಕ್ತರು ವಿಶೇಷ ಆಸಕ್ತಿ ವಹಿಸಿ ಜಿಲ್ಲಾಧಿಕಾರಿಗಳ ಕಾರ್ಯ  ಪ್ರಗತಿಯ ಪರಿಶೀಲನೆ ನಡೆಸಬೇಕು ಎಂದು ರಂಗನಾಥ್ ಸೂಚಿಸಿದರು.ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ `ಸಕಾಲ~ ಮಿಷನ್‌ಗೆ ಒಳಪಡುವ ಎಲ್ಲ 11 ಇಲಾಖೆಗಳು ಅಗತ್ಯ ಸಿಬ್ಬಂದಿ ಮತ್ತು ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಅದರ ಕುರಿತು ತಲಾ 200 ಪುಸ್ತಕಗಳನ್ನು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಈ ಸಂಬಂಧ ಎಲ್ಲಾ ಇಲಾಖೆಗಳು ತಾವು ಒದಗಿಸುವ ಸೇವೆಗಳ ಕುರಿತಂತೆ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಕಚೇರಿಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕಿದೆ. ಮಾದರಿ ಸೂಚನಾ ಫಲಕಗಳನ್ನು ಈಗಾಗಲೇ ಎಲ್ಲಾ ಇಲಾಖೆಗಳಿಗೂ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.ಈವರೆಗೆ ಈ ಯೋಜನೆಯಡಿ 97 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 80 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿರುವುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. ಸಕಾಲ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕರಿಗೆ ಪಾರದರ್ಶಕವಾದ ಸೇವೆ ದೊರಕಿಸಿಕೊಡುವ ಸರ್ಕಾರದ ಆಶಯಕ್ಕೆ ಇಂಬುಕೊಟ್ಟಂತಾಗಿದೆ ಎಂದು ಶಾಲಿನಿ ತಿಳಿಸಿದರು.ಪ್ರಾಯೋಗಿಕವಾಗಿ ಕಾಯಿದೆ ಜಾರಿಗೆ ಬಂದ ಎಲ್ಲಾ ತಾಲ್ಲೂಕುಗಳಲ್ಲಿ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಚಿತ್ರದುರ್ಗದಲ್ಲಿ ಈ ಕುರಿತು ಜನರಲ್ಲಿ ಅರಿವಿನ ಮಟ್ಟ ಬಹಳಷ್ಟಿದ್ದು ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ವಿವರಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.