ಭಾನುವಾರ, ಆಗಸ್ಟ್ 25, 2019
27 °C

`ಐಎಂಎಫ್' ಸಾಲ ಅನಗತ್ಯ: ಆರ್‌ಬಿಐ

Published:
Updated:

ಮುಂಬೈ(ಪಿಟಿಐ): `ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ(ಐಎಂಎಫ್) ಸಾಲ ಪಡೆದು `ಚಾಲ್ತಿ ಖಾತೆ ಕೊರತೆ' (ಕರೆಂಟ್ ಅಕೌಂಟ್ ಡಿಫಿಸಿಟ್-ಸಿಎಡಿ) ತಗ್ಗಿಸುವಷ್ಟರ ಮಟ್ಟಿಗೇನೂ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿಲ್ಲ' ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಡಿ.ಸುಬ್ಬರಾವ್ ಹೇಳಿದ್ದಾರೆ.ಬುಧವಾರ ಇಲ್ಲಿ `ಆರ್‌ಬಿಐ ತ್ರೈಮಾಸಿಕ ಹಣಕಾಸು ನೀತಿ' ನಂತರದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ `ಐಎಂಎಫ್' ಸಾಲದ ಅಗತ್ಯವಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದರು.`ಸಿಎಡಿ'(ಅಂದರೆ ಆಮದು-ರಫ್ತು ಅಂತರ ಸೇರಿದಂತೆ ವಿದೇಶಿ ನಗದು ಹರಿವಿನ ಕೊರತೆ) ದಾಖಲೆ ಮಟ್ಟಕ್ಕೆ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ `ಐಎಫ್‌ಎಂ'ನಿಂದ ಸಾಲ ಪಡೆದು ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿಸುವ ಪ್ರಸ್ತಾವವೂ ಇದೆ.ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುಬ್ಬರಾವ್, `ಅಷ್ಟರಮಟ್ಟಿಗೆ ದೇಶದ ಆರ್ಥಿಕತೆ ಕುಸಿದಿಲ್ಲ' ಎಂದರು. `ಐಎಂಎಫ್' ಸಾಲದ ಹೊರತಾಗಿ ಸರ್ಕಾರಿ ಸಾಲ ಪತ್ರ ಮತ್ತು `ಎನ್‌ಆರ್‌ಐ' ಬಾಂಡ್‌ಗಳನ್ನು ಮಾರಾಟ ಮಾಡುವ ಮೂಲಕವೂ `ಸಿಎಡಿ' ತಗ್ಗಿಸಬಹುದು ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಬಾಕಿ ಪಾವತಿ ಸಮಸ್ಯೆ ಉಲ್ಬಣಿಸಿದಾಗ ಎರಡು ಭಾರಿ ಭಾರತ `ಐಎಂಎಫ್' ಸಾಲದ ನೆರವು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಆಹಾರ ಭದ್ರತೆ-ಹಣದುಬ್ಬರ

`ಯುಪಿಎ' ಸರ್ಕಾರದ ಪ್ರಸ್ತಾವಿತ ಆಹಾರ ಭದ್ರತೆ ಮಸೂದೆಯಿಂದ (ಎಫ್‌ಎಸ್‌ಬಿ) ವಿತ್ತಿಯ ಕೊರತೆ, ಹಣದುಬ್ಬರ ಹೆಚ್ಚಲಿದೆ. ದೇಶದ ಆರ್ಥಿಕ ಪ್ರಗತಿ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸುಬ್ಬರಾವ್ ಗಮನ ಸೆಳೆದಿದ್ದಾರೆ. `ಎಫ್‌ಎಸ್‌ಬಿ'ಯ ಪ್ರತಿಕೂಲ ಪರಿಣಾಮಗಳ ಕುರಿತು `ಆರ್‌ಬಿಐ' ಅಧ್ಯಯನ ನಡೆಸುತ್ತಿದೆ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Post Comments (+)