ಐಎಂಎ ವಿರೋಧಿಸುತ್ತಿರುವುದೇಕೆ?

7

ಐಎಂಎ ವಿರೋಧಿಸುತ್ತಿರುವುದೇಕೆ?

Published:
Updated:
ಐಎಂಎ ವಿರೋಧಿಸುತ್ತಿರುವುದೇಕೆ?

ಆರೋಗ್ಯ ಸೇವೆಗಳಲ್ಲಿ ಮಾನವ ಸಂಪನ್ಮೂಲಗಳ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸುವ ಮಸೂದೆಯನ್ನು ಬದಲಿ ಪದ್ಧತಿಗಳ ವೈದ್ಯರು ವಿರೋಧಿಸುತ್ತಿರುವಂತೆಯೇ ಆಧುನಿಕ ವೈದ್ಯರೂ ವಿರೋಧಿಸುತ್ತಿದ್ದಾರೆ, ಅದಕ್ಕಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ಒಂದು ದಿನದ ಮುಷ್ಕರವನ್ನೂ ಮಾಡಿದ್ದಾಗಿದೆ.ಈ ಮಸೂದೆಯಿಂದ ತಮ್ಮ ವೃತ್ತಿಗೇ ಕುತ್ತು ಬರಬಹುದೆಂದು ಆಧುನಿಕ ವೈದ್ಯರ ಸಂಘಟನೆಗಳೂ, ಬದಲಿ ವೈದ್ಯರ ಸಂಘಟನೆಗಳೂ ಒಕ್ಕೊರಳಿನಿಂದ ಪ್ರತಿಭಟಿಸುತ್ತಿವೆ. ಬದಲಿ ಪದ್ಧತಿಗಳವರು ತಮ್ಮನ್ನು ಮಸೂದೆಯಿಂದ ಹೊರಗಿಟ್ಟದ್ದಕ್ಕಾಗಿ ವಿರೋಧಿಸುತ್ತಿದ್ದರೆ, ಆಧುನಿಕ ವೈದ್ಯರು ತಮ್ಮನ್ನು ಅದರಲ್ಲಿ ಸೇರಿಸಿರುವುದಕ್ಕಾಗಿ ವಿರೋಧಿಸುತ್ತಿದ್ದಾರೆ.

 

ಈ ಮಸೂದೆಯ ಹೆಸರಿನಲ್ಲಿ ಆಧುನಿಕ ವೈದ್ಯ ವಿಜ್ಞಾನದೊಂದಿಗೆ ಸಮಾನತೆಯನ್ನು ಗಳಿಸುವುದು ಬದಲಿಗಳ ಹವಣಿಕೆಯಾದರೆ,  ತಮ್ಮ ಮೇಲೆ ಯಾವುದೇ ನಿಯಂತ್ರಣಗಳಿರಬಾರದೆನ್ನುವುದು ಆಧುನಿಕ ವೈದ್ಯರ ಬಯಕೆಯಾಗಿದೆ.

ಆದರೆ ಐಎಂಎ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬೆರಳೆಣಿಕೆಯ ವೈದ್ಯರಷ್ಟೇ ಭಾಗವಹಿಸಿದ್ದನ್ನು ಗಮನಿಸಿದರೆ, ಬಹುಪಾಲು ವೈದ್ಯರು ಸಂಘದ ನಿಲುವನ್ನು ಬೆಂಬಲಿಸುತ್ತಿಲ್ಲವೆನ್ನುವುದು ವೇದ್ಯವಾಗುತ್ತದೆ.ಇದಕ್ಕೂ ಕಾರಣಗಳಿಲ್ಲದಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆಯ ವಿಶ್ವಾಸಾರ್ಹತೆಯು ಕುಸಿದಿರುವುದಕ್ಕೆ, ವೈದ್ಯಶಿಕ್ಷಣದ ಗುಣಮಟ್ಟವು ಸೊರಗಿ ಕಳಪೆಯಾಗಿರುವುದಕ್ಕೆ, ಭಾರತೀಯ ವೈದ್ಯಕೀಯ ಪರಿಷತ್ತು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಲ್ಲಷ್ಟೆ ಅತ್ಯಾಸಕ್ತವಾಗಿದ್ದು ತನ್ನ ಬೇರೆಲ್ಲ ಜವಾಬ್ದಾರಿಗಳಿಂದಲೂ ವಿಮುಖವಾಗಿರುವುದಕ್ಕೆ ಕೇಂದ್ರ ಸರಕಾರದಷ್ಟೇ ಐಎಂಎ ಕೂಡಾ ಹೊಣೆಯಾಗಿದೆ. ಊರು ಸೂರೆಗೊಳ್ಳುತ್ತಿದ್ದಾಗ ಸರ್ಕಾರವಾಗಲೀ, ಐಎಂಎಯಾಗಲಿ ಬಾಯಿ ಬಿಡಲಿಲ್ಲ. ಈಗ ದಿಡ್ಡಿ ಬಾಗಿಲು ಮುಚ್ಚಲು ಸರಕಾರವು ಹೊರಟಿದ್ದು, ಐಎಂಎ ಅದನ್ನೂ ತಡೆಯಲೆತ್ನಿಸಿದರೆ ಅದಕ್ಕೆ ಬೆಂಬಲ ಹೇಗೆ ಸಿಕ್ಕೀತು?ತೊಂಭತ್ತರ ದಶಕದಿಂದೀಚೆಗೆ ನಮ್ಮ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯು ಒಮ್ಮಿಂದೊಮ್ಮೆಗೇ ದುಪ್ಪಟ್ಟಾಗಿದೆ: 1965ರ ವೇಳೆಗೆ ನಮ್ಮ ದೇಶದಲ್ಲಿ 86 ವೈದ್ಯಕೀಯ ಕಾಲೇಜುಗಳಿದ್ದರೆ, 1980 ರ ವೇಳೆಗೆ 112 ಆಗಿ, 1990ರ ವೇಳೆಗೆ 143ಕ್ಕೆ ಏರಿ, ಅಲ್ಲಿಂದೀಚೆಗೆ 336ಕ್ಕೆ ಜಿಗಿದಿದೆ.ಕಳೆದ ಐದು ವರ್ಷಗಳಲ್ಲಿ 76 ಹೊಸ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಈ ಹೊಸ ಕಾಲೇಜುಗಳಲ್ಲಿ ಅಗತ್ಯವಿರುವ ಶಿಕ್ಷಕರನ್ನು ನೇಮಿಸುವುದೇ ದುಸ್ತರವಾಗಿದ್ದು, ಲಭ್ಯ ಶಿಕ್ಷಕರ ನಿವೃತ್ತಿಯ ವಯಸ್ಸನ್ನು ಈಗಾಗಲೇ ಹೆಚ್ಚಿಸಲಾಗಿದೆ. ಹಲವು ಕಾಲೇಜುಗಳಲ್ಲಿ ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಯಾ ಕೆಲವೆಡೆ ವರ್ಷಕ್ಕೊಮ್ಮೆಯೋ ಮುಖ ತೋರಿಸುವ, ವೈದ್ಯಕೀಯ ಪರಿಷತ್ತಿನ ಪರಿಶೀಲನೆಯ ಸಂದರ್ಭದಲ್ಲಷ್ಟೇ ಹಾಜರಾಗುವ ಶಿಕ್ಷಕರೂ ಸಾಕಷ್ಟಿದ್ದಾರೆ.ಆ ರೀತಿ ದುಡಿದಿದ್ದರೂ ಪೂರ್ಣಕಾಲಿಕ ಶಿಕ್ಷಕರಾಗಿದ್ದರೆಂದು ಪ್ರಮಾಣಪತ್ರವನ್ನು ಪಡೆದು ಆ ಆಧಾರದಲ್ಲಿ ಇನ್ನೊಂದು ಕಾಲೇಜನಲ್ಲಿ ಸೇವಾ ಬಡ್ತಿಯನ್ನು ಗಿಟ್ಟಿಸಿಕೊಂಡ ಕೆಲವರು ನ್ಯಾಯಾಲಯಗಳ ಕಟಕಟೆಯೇರಿರುವ ಸುದ್ದಿಗಳನ್ನೂ ನಾವೆಲ್ಲ ಓದಿದ್ದೆೀವೆ.  ಅನೇಕ ಹೊಸ ಕಾಲೇಜುಗಳಲ್ಲಿ ವೈದ್ಯಕೀಯ ಪರಿಷತ್ತಿನ ಪರಿಶೀಲನೆಯ ದಿನಗಳಂದು ಬಸ್ಸು-ಲಾರಿಗಳಲ್ಲಿ `ರೋಗಿಗಳನ್ನು~ ಹೇರಿಕೊಂಡು ಬಂದು ಹಾಸಿಗೆಗಳಲ್ಲಿ ಮಲಗಿಸುವ ಹಾಗೂ ಹೊರರೋಗಿ ವಿಭಾಗಗಳೆದುರು ಸರದಿ ಕಾಯಿಸುವ ವ್ಯವಸ್ಥೆಯನ್ನು ಮಾಡುವ ಗುತ್ತಿಗೆದಾರರ ಬಗೆಗೂ ಪತ್ರಿಕೆಗಳು ವರದಿ ಮಾಡಿಲ್ಲವೇ? ವೈದ್ಯಕೀಯ ಪರಿಷತ್ತಿನ ಪ್ರತಿನಿಧಿಗಳು ಇಂತಹ ಕಾಲೇಜುಗಳಿಗೆ ಮಾನ್ಯತಾ ಪರಿಶೀಲನೆಗೆ ಆಗಮಿಸುವಾಗ ಆಸೆಗಣ್ಣುಗಳನ್ನು ಹೊತ್ತಿದ್ದು ನಿರ್ಗಮಿಸುವಾಗ ಕಣ್ಣುಮುಚ್ಚಿಕೊಳ್ಳುವುದಿಲ್ಲವೇ?ಇನ್ನು ಹಲವು ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ, ಪರೀಕ್ಷೆಗಳ ಗುಣಮಟ್ಟ ಹಾಗೂ ಪಾರದರ್ಶಕತೆಗಳ ಬಗ್ಗೆ ದೊಡ್ಡ ಪ್ರಶ್ನೆಗಳಿಲ್ಲವೇ? ಈ ಕಾಲೇಜುಗಳಲ್ಲಿ ಪ್ರಾಚಾರ್ಯರೂ, ಪ್ರಾಧ್ಯಾಪಕರೂ ವೈದ್ಯರುಗಳೇ ಆಗಿದ್ದು, ತಮ್ಮ ವೃತ್ತಿಯ ಘನತೆ, ಗೌರವಗಳನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಿದವರೇ ಆಗಿರುತ್ತಾರೆ, ಅವರಲ್ಲಿ ಬಹಳಷ್ಟು ಮಂದಿ ಐಎಂಎ ಸದಸ್ಯರೂ, ಪದಾಧಿಕಾರಿಗಳೂ ಆಗಿರುತ್ತಾರೆ.ಆಧುನಿಕ ವೈದ್ಯ ಶಿಕ್ಷಣದ ಗತಿ ಹೀಗೆ ಮಣ್ಣುಪಾಲಾಗುತ್ತಿರುವುದನ್ನು ಕಂಡೂ ಕಾಣದಂತೆ ಇವರೆಲ್ಲರೂ ವರ್ತಿಸುತ್ತಿರುವುದೇಕೆ? ಅದರಲ್ಲಿ ಭಾಗಿಗಳಾಗುತ್ತಿರುವುದೇಕೆ? ಇದನ್ನು ತಡೆಯಲು ಐಎಂಎ ಈ ವರೆಗೆ ಮಾಡಿದ್ದಾದರೂ ಏನು? ಕೇತನ್ ದೇಸಾಯಿ ಎಂಬ ಮಹಾಶಯನೊಬ್ಬ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷನಾಗಿದ್ದು, ಒಮ್ಮೆ ಪದಚ್ಯುತನಾಗಿ ಮತ್ತೆ ಆ ಸ್ಥಾನವನ್ನು ಗಿಟ್ಟಿಸಿ, ಕೊನೆಗೆ ಭ್ರಷ್ಟಾಚಾರದ ಆರೋಪದಿಂದ ಸಿಬಿಐಯಿಂದ ಜೈಲು ಸೇರಿದ ಕಾಲದಲ್ಲಿ ಆತ ಜೊತೆಜೊತೆಗೆ ಐಎಂಎ ರಾಷ್ಟ್ರೀಯ ಅಧ್ಯಕ್ಷನೂ ಆಗಿದ್ದ ಹಾಗೂ ಜಾಗತಿಕ ವೈದ್ಯಕೀಯ ಸಂಘಟನೆಯ ಅಧ್ಯಕ್ಷನಾಗಿಯೂ ನಿಯುಕ್ತನಾಗಿದ್ದನೆಂದರೆ ಈ ಎಲ್ಲ ಸಂಘಟನೆಗಳ ಎಡೆಬಿಡಂಗಿತನವು ಬಯಲಾಗುವುದಿಲ್ಲವೇ?ಲೋಕಸಭೆಯು ಈಗಾಗಲೇ ಒಪ್ಪಿಗೆ ನೀಡಿರುವ ವೈದ್ಯಕೀಯ ಸಂಸ್ಥೆಗಳ(ನೋಂದಣಿ ಮತ್ತು ನಿಯಂತ್ರಣ) ಮಸೂದೆಗೂ ಐಎಂಎ ವಿರೊಧ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಹಾಗೂ ಇನ್ನೂ ಕೆಲವು ರಾಜ್ಯಗಳಲ್ಲಿ ಇಂತಹದೇ ಕಾಯಿದೆಯಡಿಯಲ್ಲಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿದ್ದು, ಈ ಕಾಯಿದೆಯನ್ನು ರೂಪಿಸುವಲ್ಲಿಯೂ, ಪ್ರಾಧಿಕಾರಗಳ ರಚನೆ ಹಾಗೂ ನೋಂದಣಿ ಪ್ರಕ್ರಿಯೆಗಳಲ್ಲೂ ಐಎಂಎ ಪದಾಧಿಕಾರಿಗಳು ಸಕ್ರಿಯ ಪಾತ್ರಗಳನ್ನು ವಹಿಸಿರುವಾಗ ಅದೇ ರೂಪದ ಕೇಂದ್ರೀಯ ಕಾಯಿದೆಗೆ ವಿರೋಧವನ್ನು ವ್ಯಕ್ತ ಪಡಿಸುವುದರಲ್ಲಿ ಅರ್ಥವಿದೆಯೇ?ಈ ಕಾಯಿದೆಯನುಸಾರ ಎಲ್ಲ ಆಸ್ಪತ್ರೆಗಳು, ಪ್ರಯೋಗಾಲಯಗಳು ಹಾಗೂ ವೈದ್ಯರ ವೃತ್ತಿನಿಲಯಗಳಿಗೆ ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದ್ದು, ಅದಾವುದರ ಅಗತ್ಯವೂ ಇಲ್ಲವೆಂದು ವಿರೋಧಿಸುತ್ತಿರುವುದೇಕೆ? ಈ ಕಾಯಿದೆಯಡಿಯಲ್ಲಿ ವೈದ್ಯನಾದವನು ತನ್ನ ವೃತ್ತಿ ತರಬೇತಿಯ ಪುರಾವೆಯನ್ನು ಕಡ್ಡಾಯವಾಗಿ ನೀಡಬೇಕಾಗುವುದರಿಂದ ಎಲ್ಲಾ ನಕಲಿ ವೈದ್ಯರನ್ನು ಗುರುತಿಸಿ ನಿಷ್ಕ್ರಿಯಗೊಳಿಸುವುದಕ್ಕೆ ಇದಕ್ಕಿಂತ ಉತ್ತಮವಾದ ಅವಕಾಶವು ದೊರೆಯಲಾರದು.ಆದ್ದರಿಂದ ಐಎಂಎ ತನ್ನದೇ ಭಾಗೀದಾರಿಕೆಯಿದ್ದ ಈ ಮಸೂದೆಯನ್ನು ವಿರೋಧಿಸುವ ಬದಲು ಅದನ್ನು ಸರಿಯಾಗಿ ಜಾರಿಗೆ ತರುವಲ್ಲಿ ಹಾಗೂ ನಕಲಿ ವೈದ್ಯರ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ಸರ್ಕಾರದೊಂದಿಗೆ ಸಹಕರಿಸುವುದೇ ಒಳ್ಳೆಯದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry