ಬುಧವಾರ, ನವೆಂಬರ್ 13, 2019
21 °C

ಐಎಎಸ್ ಅಧಿಕಾರಿಗಳಲ್ಲಿ `ವರ್ಗ' ರಾಜಕೀಯ?

Published:
Updated:

ಬೆಂಗಳೂರು: ಇಂದಿಗೂ `ರಾಜ ಹುದ್ದೆ' ಎಂದೇ ಪರಿಗಣಿಸಿರುವ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳ ಪೈಕಿ ನೇರ ನೇಮಕ ಆದವರು ಹಾಗೂ ಬಡ್ತಿ ಪಡೆದವರ ಹಾಗೂ ನಡುವೆ ಇದ್ದ ಒಡಕು ಚುನಾವಣೆ ಸಂದರ್ಭದಲ್ಲಿ ಆದ ವರ್ಗಾವಣೆಯಿಂದ ಮತ್ತಷ್ಟು ಆಳವಾಗಿ ಕಂದಕವೇ ನಿರ್ಮಾಣವಾಗುವ ಸ್ಥಿತಿ ಉಂಟಾಗಿದೆ.ರಾಜಕಾರಣಿಗಳು ತಾವೇ ಅಧಿಕಾರದ ಚುಕ್ಕಾಣಿ ಹಿಡಿಯುವುದು ಎಂದೇ ಭಾವಿಸುತ್ತಾರೆ. ಆದರೆ ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿಗಳು ನಿವೃತ್ತಿಯಾಗುವ ತನಕ ರಾಜರ ರೀತಿ ಮೆರೆಯುತ್ತಾರೆ. ರಾಜಕಾರಣಿಗಳು ಇವರ ಮೇಲೆ ಹತೋಟಿ ಸಾಧಿಸದಿದ್ದರೆ ಇವರನ್ನು ನಿಯಂತ್ರಿಸುವವರೇ ಇಲ್ಲ. ರಾಜಕೀಯ ನಿಯಂತ್ರಣವಿಲ್ಲದ ಚುನಾವಣಾ ಸಮಯದಲ್ಲಂತೂ ಇವರು ನಿಜಕ್ಕೂ ದೊರೆಗಳೇ.ಈ ಹುದ್ದೆಗಳಲ್ಲೂ ಒಂದು ರೀತಿಯ `ವರ್ಗಭೇದ'ವಿದೆ. ರಾಜ್ಯ ಆಡಳಿತ ಸೇವೆಯಲ್ಲಿರುವ ಅಧಿಕಾರಿಗಳ ಸೇವಾ ಹಿರಿತನ, ಬದ್ಧತೆಯನ್ನು ಪರಿಗಣಿಸಿ ಐಎಎಸ್‌ಗೆ ಬಡ್ತಿ ನೀಡುತ್ತಾರೆ. ಇವರ ಸಂಖ್ಯೆ ಒಟ್ಟು ಆಡಳಿತ ಸೇವೆ ಅಧಿಕಾರಿಗಳ ಪೈಕಿ ಶೇ 33ರಷ್ಟಿರುತ್ತದೆ. ಆದರೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದವರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನೋಡುವ ಪರಿಪಾಠ ಹಿಂದಿನಿಂದಲೂ ಇದೆ ಎನ್ನುವುದು ಸರ್ವಸತ್ಯ. ಈ ಪಾಡನ್ನು ಐಪಿಎಸ್ ಹಾಗೂ  ಐಎಫ್‌ಎಸ್ ಹುದ್ದೆಗೆ ಬಡ್ತಿ ಪಡೆದ ರಾಜ್ಯ ಶ್ರೇಣಿಯ ಅಧಿಕಾರಿಗಳು ಸಹ ಅನುಭವಿಸುತ್ತಿದ್ದಾರೆ.ಈ ನೋವು ಚುನಾವಣೆ ಸಂದರ್ಭದಲ್ಲಿ ಆದ ಹನ್ನೊಂದು ಐಎಎಸ್ ಅಧಿಕಾರಿಗಳ ವರ್ಗಾವಣೆಯ ಮೂಲಕ ಮತ್ತಷ್ಟು ಆಳವಾದ ಕಂದಕ ಸೃಷ್ಟಿಗೆ ಕಾರಣವಾಗಿದೆ. ಚುನಾವಣೆಯ ಸಂದರ್ಭದಲ್ಲೇ ನಡೆದ ವರ್ಗಾವಣೆಯ ರಾಜಕೀಯಕ್ಕೆ ಐಎಎಸ್ ಅಧಿಕಾರಿಗಳಲ್ಲೇ ಇರುವ ಒಂದು ಪ್ರಬಲ `ವರ್ಗ'ದ ಒಳರಾಜಕೀಯ ಪೆಟ್ಟೇ ಕಾರಣ ಎನ್ನುವ ಗುಸುಗುಸು ಅಧಿಕಾರಿ ವಲಯದಲ್ಲಿ ದಟ್ಟವಾಗಿದೆ.ಬಡ್ತಿ ಪಡೆದ ಐಎಎಸ್ ಅಧಿಕಾರಿಗಳ ವರ್ಗಾವಣೆಯೂ ಸೇರಿದಂತೆ ಬೆಂಗಳೂರು ಪೊಲೀಸ್ ಆಯುಕ್ತರ ಎತ್ತಂಗಡಿಯಲ್ಲಿಯೂ `ಅದೇ ವರ್ಗದ ಒಳಸುಳಿ'ಗಳು ಕೆಲಸ ಮಾಡಿವೆ ಎನ್ನುವ ಅನುಮಾನ ಅಧಿಕಾರಿ ವಲಯದಲ್ಲಿ ಹರಡಿದೆ. ಈ ಒಳಸುಳಿಯ ಕೇಂದ್ರ ಬಿಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲೇ ಇದೆ ಎನ್ನುವ ಮಾತು ಕೇಳಿಬರುತ್ತಿದೆ.`ಬಡ್ತಿಯ ಮೂಲಕ ಐಎಎಸ್ ಹುದ್ದೆಗಳನ್ನು ಭರ್ತಿ ಮಾಡುವ ಅವಕಾಶಗಳಿದ್ದರೂ 2008ರಿಂದ 2011ರವರೆಗೆ ಸಕಾರಣವಿಲ್ಲದೇ ಬಡ್ತಿ ತಡೆಹಿಡಿಯಲಾಗಿತ್ತು. ಐಎಎಸ್‌ಗೆ ಬಡ್ತಿ ಪಡೆಯಲು ಇವರು ಅನರ್ಹರೇನೋ ಎನ್ನುವ ರೀತಿ ನಮ್ಮನ್ನು ನಡೆಸಿಕೊಳ್ಳಲಾಗಿತ್ತು. 2011ರಲ್ಲಿ 25 ಅಧಿಕಾರಿಗಳಿಗೆ ಬಡ್ತಿ ದೊರೆತರೂ 10 ಜನರಿಗೆ ಜಿಲ್ಲಾಧಿಕಾರಿ ಹುದ್ದೆ ನೀಡಲಾಯಿತು. ಆದರೆ ಒಂದೂವರೆ ವರ್ಷದಲ್ಲೇ ನಮ್ಮನ್ನು ಎತ್ತಂಗಡಿ ಮಾಡಿದರು. ನಮಗೇನು ಜಿಲ್ಲಾಧಿಕಾರಿಗಳಾಗುವ ಅರ್ಹತೆ ಇಲ್ಲವೇ' ಎಂದು ಹೆಸರು ಹೇಳಲು ಬಯಸದ, ಐಎಎಸ್‌ಗೆ ಬಡ್ತಿ ಪಡೆದ ಅಧಿಕಾರಿಯೊಬ್ಬರು ಪ್ರಶ್ನಿಸಿದರು.`ಚುನಾವಣೆಯ ನಿಯಮಗಳ ಪ್ರಕಾರ ಒಂದೇ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದ್ದರೆ, ಹುಟ್ಟಿದ ಜಿಲ್ಲೆಯಲ್ಲಿ ಅಧಿಕಾರ ನಡೆಸುತ್ತಿದ್ದರೆ ಅಥವಾ ಸೇವಾ ಅವಧಿಯಲ್ಲಿ ರಾಜಕೀಯ ಪಕ್ಷವೊಂದರ ಜೊತೆ ನಿಕಟವಾಗಿದ್ದರೆ ವರ್ಗಾವಣೆ ಮಾಡಬಹುದು. ಆದರೆ ನಮ್ಮನ್ನು ಸಕಾರಣವಿಲ್ಲದೇ ವರ್ಗಾವಣೆ ಮಾಡಲಾಗಿದೆ. ತಳ ಮಟ್ಟದಲ್ಲಿ ರಾಜಕೀಯ ಜಿದ್ದಾಜಿದ್ದಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸುಸೂತ್ರವಾಗಿ ನಡೆಸಿದ ನಮಗೆ ವಿಧಾನಸಭಾ ಚುನಾವಣೆ ಕಷ್ಟವೇ? ಚುನಾವಣಾ ವೇಳೆ ನಡೆದ ವರ್ಗಾವಣೆಯಿಂದ ನಮ್ಮ ವೃತ್ತಿಜೀವನದ ಮೇಲೆ ಕಪ್ಪು ಚುಕ್ಕೆ ಇರಿಸಿದಂತಾಗಿದೆ. ಒಟ್ಟಿನಲ್ಲಿ ಸ್ಥಳೀಯರಾದ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇದರಲ್ಲಿ ಜಾತಿಯೂ ಕೆಲಸ ಮಾಡಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.`ಮೂರು ವರ್ಷ ಒಂದೇ ಹುದ್ದೆಯಲ್ಲಿದ್ದರೆ ವರ್ಗಾವಣೆ ಮಾಡಬೇಕು ಎನ್ನುವುದಾದರೆ ರಾಜ್ಯ ಮುಖ್ಯ ಕಾರ್ಯದರ್ಶಿಯನ್ನೇ ಬದಲಿಸಬೇಕಾಗುತ್ತದೆ. ಅವರು ಕಾಂಗ್ರೆಸ್‌ನ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗ, ಮುಖ್ಯಮಂತ್ರಿಗಳಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮುಖ್ಯಮಂತ್ರಿಗೆ ಪ್ರಧಾನಕಾರ್ಯದರ್ಶಿಯಾದವರು ಸಿಎಂಗೆ ತೀರಾ ಆಪ್ತರಾಗಿರುತ್ತಾರೆ. ಅಂತಹ ಅಧಿಕಾರಿಯನ್ನೇ ತಮ್ಮ ಪ್ರಧಾನಕಾರ್ಯದರ್ಶಿಯಾಗಿ ಮುಖ್ಯಮಂತ್ರಿಯು ಆಯ್ಕೆ ಮಾಡಿಕೊಳ್ಳುತ್ತಾರೆ. ರಂಗನಾಥ್ ಇದೇ 31ಕ್ಕೆ ನಿವೃತ್ತಿಯಾಗುತ್ತಿದ್ದಾರೆ. ಇವರ ಸೇವಾವಧಿ ವಿಸ್ತರಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಕೋರಿದೆ. ಈ ಕ್ರಮಕ್ಕೆ ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಯಾವ ಕ್ರಮ ತೆಗೆದುಕೊಂಡಿದೆ' ಎಂದು ಅವರು ಪ್ರಶ್ನಿಸಿದರು.ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಜ್ಯೋತಿಪ್ರಕಾಶ್ ಮಿರ್ಜಿ ಅವರನ್ನು ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯ ಆದೇಶದ ಮೇಲೆ ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿ ನಡೆದುಕೊಂಡ ರೀತಿಗೆ ಕೆಲವು ಐಪಿಎಸ್ ಅಧಿಕಾರಿಗಳಲ್ಲಿ ಬೇಸರವಿದೆ. ರಾಜ್ಯ ಸರ್ಕಾರವು ಸೇವಾ ಹಿರಿತನವಿರುವ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಾದ ಬಿಪಿನ್ ಗೋಪಾಲಕೃಷ್ಣ, ಕಿಶೋರ್ ಚಂದ್ರ ಹಾಗೂ ಎಂ.ಎನ್.ರೆಡ್ಡಿ ಅವರನ್ನು ಒಳಗೊಂಡ ಪಟ್ಟಿಯನ್ನು ಸರ್ಕಾರವು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನೀಡಿತ್ತು. ಆದರೆ ಪಟ್ಟಿಯಲ್ಲೇ ಇಲ್ಲದ ರಾಘವೇಂದ್ರ ಔರಾದಕರ್ ಅವರನ್ನೇ ನೇಮಿಸಬೇಕು ಎಂದು ಚುನಾವಣಾಧಿಕಾರಿಗಳ ಕಚೇರಿ ಸೂಚನೆ ನೀಡಿತ್ತು. ಇದನ್ನು ರಾಜ್ಯ ಸರ್ಕಾರ ಒಪ್ಪಿ ಅನುಷ್ಠಾನಕ್ಕೆ ತಂದಿದೆ.ಇದರ ಅರ್ಥ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ಬೆಂಗಳೂರಿನ ಕಮಿಷನರ್ ಆಗಲು ಯೋಗ್ಯರಲ್ಲ ಎನ್ನಬಹುದೇ? ಎನ್ನುವ ಪ್ರಶ್ನೆಯ ಜೊತೆಗೆ ಕಮಿಷನರ್ ನೇಮಕದ ಹಿಂದೆಯೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿರುವ ಪ್ರಬಲ `ವರ್ಗ'ವೇ ಕೆಲಸ ಮಾಡಿದೆ ಎನ್ನುವ ಗುಸುಗುಸು ಕೇಳಿಬರುತ್ತಿದೆ.

ಪ್ರತಿಕ್ರಿಯಿಸಿ (+)