ಗುರುವಾರ , ಮೇ 28, 2020
27 °C

ಐಎಎಸ್ ಅಧಿಕಾರಿ ಮನೆಗೆ ಐಟಿ ದಾಳಿ: ರೂ 360 ಕೋಟಿ ಅಕ್ರಮ ಆಸ್ತಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್ (ಪಿಟಿಐ): ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ದಂಪತಿ ನಿವಾಸದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (ಐಟಿ) 360 ಕೋಟಿ ರೂಪಾಯಿ ಮೌಲ್ಯದ ಭಾರಿ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಅರವಿಂದ್ ಮತ್ತು ಟಿನು ಜೋಷಿ ದಂಪತಿ ಮನೆ ಮೇಲೆ ದಾಳಿ ನಡೆಸಿ ಸುಮಾರು 67 ಲಕ್ಷ ರೂ ಮೌಲ್ಯದ ಆಭರಣಗಳು, ಏಳು ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ಮತ್ತು ಏಳು ಸೂಟ್‌ಕೇಸ್‌ಗಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. ದೇಶದಲ್ಲಿಯೇ ಐಎಎಸ್ ಅಧಿಕಾರಿ ಬಳಿ ದೊರೆತಿರುವ ಅತಿ ಹೆಚ್ಚಿನ ಅಕ್ರಮ ಸಂಪತ್ತು ಇದಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ವಿಮಾ ಕಂಪೆನಿಯೊಂದರಲ್ಲಿ ಭಾರಿ ಪ್ರಮಾಣದ ಹಣ ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಅಮಾನತುಗೊಂಡಿರುವ ಅರವಿಂದ್ ಮತ್ತು ಟಿನು ಜೋಷಿ ದಂಪತಿ ಮನೆ ಮೇಲೆ ಈ ಹಿಂದೆ ಹಲವು ಬಾರಿ ದಾಳಿ ನಡೆದಿದ್ದರೂ ಅಕ್ರಮ ಆಸ್ತಿ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿರಲಿಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿ ನಡೆಸಿದ್ದ ಪರಿಶೀಲನೆಯಲ್ಲಿ ದಂಪತಿ ಬಳಿ ಮೂರು ಕೋಟಿ ರೂಪಾಯಿ ಹಾಗೂ ಲೆಕ್ಕಪತ್ರವಿಲ್ಲದ ಹೂಡಿಕೆಗಳ ಕುರಿತಾದ ಹಲವಾರು ಮಾಹಿತಿಗಳು ದೊರೆತಿದ್ದವು.

ಕೃಷಿ, ರಿಯಲ್ ಎಸ್ಟೇಟ್ ಮತ್ತು ಷೇರು ಮಾರುಕಟ್ಟೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಈ ದಂಪತಿ ಹಣ ಹೂಡಿದ್ದರು. ರಾಜ್ಯದ ಹಲವಾರು ಭಾಗಗಳಲ್ಲಿ ಕೃಷಿ ಮತ್ತು ಕೃಷಿಯೇತರ ಜಮೀನು ಖರೀದಿಸಿದ್ದರು. ಅಲ್ಲದೆ ಇಬ್ಬರೂ 25 ಫ್ಲ್ಯಾಟ್‌ಗಳನ್ನು ಕೊಂಡಿದ್ದು, ಇದರಲ್ಲಿ ಗುವಾಹತಿಯಲ್ಲಿ 18, ಭೋಪಾಲ್‌ನಲ್ಲಿ 6 ಮತ್ತು ನವದೆಹಲಿಯಲ್ಲಿ ಒಂದು ಇರುವುದಾಗಿ ಅಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿರುವ 7 ಸಾವಿರ ಪುಟಗಳ ವರದಿಯಲ್ಲಿ ತಿಳಿಸಿದೆ.

ಅರವಿಂದ್ ಮತ್ತು ಟಿನು ಇಬ್ಬರೂ ಮಧ್ಯಪ್ರದೇಶದಲ್ಲಿ 1979ರಲ್ಲಿ ಐಎಎಸ್ ಅಧಿಕಾರಿಗಳಾಗಿ ಸೇವೆ ಪ್ರಾರಂಭಿಸಿದ್ದರು. ಟಿನು 1988ರಿಂದ 1990ರವರೆಗೆ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಉಪಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅರವಿಂದ್ ರಕ್ಷಣಾ ಸಚಿವಾಲಯದಲ್ಲಿ 1999ರ ಸಮಯದಲ್ಲಿ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.