ಐಎಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ

7

ಐಎಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ

Published:
Updated:

ಬೆಂಗಳೂರು: ತೋಟಗಾರಿಕಾ ನರ್ಸರಿಗಾಗಿ ಬಳಸಬೇಕೆಂಬ ಷರತ್ತಿನ ಮೇಲೆ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದ 7.29 ಎಕರೆ ಭೂಮಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಐವರು ಐಎಎಸ್ ಮತ್ತು ಒಬ್ಬ ಕೆಎಎಸ್ ಅಧಿಕಾರಿ ಸೇರಿದಂತೆ 13 ಜನರ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.ಬನ್ನೇರುಘಟ್ಟ ರಸ್ತೆಯ ಅರಕೆರೆ ಗ್ರಾಮದಲ್ಲಿರುವ 7.29 ಎಕರೆ ಭೂಮಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಿ.ಲಕ್ಷ್ಮೀನಾರಾಯಣ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಖಾಸಗಿ ದೂರು ಸಲ್ಲಿಸಿದ್ದರು.ಶನಿವಾರ ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ದೂರನ್ನು ವಿಚಾರಣೆಗೆ ಅಂಗೀಕರಿಸುವ ನಿರ್ಧಾರ ಪ್ರಕಟಿಸಿದರು. ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಮಾರ್ಚ್ 30ರೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿಗೆ ನ್ಯಾಯಾಧೀಶರು ಆದೇಶಿಸಿದರು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾಗಿದ್ದ ಸಿದ್ದಯ್ಯ, ಹಾಲಿ ಆಯುಕ್ತ ಭರತ್‌ಲಾಲ್ ಮೀನಾ, ಹಿಂದೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಈಗ ಅಭಿವೃದ್ಧಿ ಆಯುಕ್ತರಾಗಿರುವ ಸುಬೀರ್ ಹರಿಸಿಂಗ್, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕರ ಹುದ್ದೆಯಲ್ಲಿರುವ ಎಂ.ವಿ.ವೀರಭದ್ರಯ್ಯ, ಗೃಹ ಸಚಿವರ ಆಪ್ತ ಕಾರ್ಯದರ್ಶಿ ಡಾ.ರಾಮೇಗೌಡ, ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್, ಬಿಡಿಎ ಕಾನೂನು ಸಲಹೆಗಾರರಾಗಿದ್ದ ನಿವೃತ್ತ ನ್ಯಾಯಾಧೀಶ ಸೋಸಲೆ ಇಂದೂಧರ, ಉಪ ನೋಂದಣಾಧಿಕಾರಿ ಯಶೋಧರ ಅವರನ್ನು ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಈ ಎಲ್ಲರೂ ಸರ್ಕಾರಿ ಅಧಿಕಾರಿಗಳು.ದೂರಿನಲ್ಲಿ ಉಲ್ಲೇಖಿಸಿರುವ ಭೂಮಿಯನ್ನು ಜಂಟಿ ಪಾಲುದಾರಿಕೆಗೆ ಪಡೆದಿರುವ ಎಸ್‌ಜೆಆರ್ ಡೆವಲಪರ್ಸ್ ಕಂಪೆನಿಯ ಭೂಪೇಶ್ ರೆಡ್ಡಿ, ವಿಜಯ್ ರೆಡ್ಡಿ, ಭೂಮಿಯ ಮೂಲ ಮಾಲೀಕರಾದ ಎಂ.ಆರ್.ರಮೇಶ್, ಎಂ.ಆರ್.ಸತೀಶ್ ಮತ್ತು ಎಂ.ಆರ್.ರವಿ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.ದೂರಿನಲ್ಲಿರುವ ಆರೋಪಗಳೇನು?: ಅರಕೆರೆ ಗ್ರಾಮದ ಸರ್ವೆ ನಂಬರ್ 100, 101, 100-ಪಿ/1ಗಳ 7.29 ಎಕರೆ ಭೂಮಿಯನ್ನು ಜೆ.ಪಿ.ನಗರ ಒಂಬತ್ತನೇ ಹಂತದ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಅಧಿಸೂಚನೆ ಹೊರಡಿಸಿತ್ತು. ಭೂಮಿಯ ಮಾಲೀಕರು ಇಲ್ಲಿ ನರ್ಸರಿ ಚಟುವಟಿಕೆ ನಡೆಸುತ್ತಿದ್ದರು. ಅದೇ ಚಟುವಟಿಕೆ ಮುಂದುವರಿಸುವ ಉದ್ದೇಶಕ್ಕೆ ಸದರಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮಾಲೀಕರು ಅರ್ಜಿ ಸಲ್ಲಿಸಿದ್ದರು. ಈ ಭೂಮಿಯನ್ನು ನರ್ಸರಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂಬ ಷರತ್ತಿನೊಂದಿಗೆ 1996ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು.ನಂತರ ಭೂಮಿಯ ಮಾಲೀಕರು ಅದನ್ನು ಎಸ್‌ಜೆಆರ್ ಡೆವಲಪರ್ಸ್‌ಗೆ ಜಂಟಿ ಪಾಲುದಾರಿಕೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದಾರೆ. ಅಕ್ರಮವಾಗಿ ನಡೆದ ಈ ಪ್ರಕ್ರಿಯೆಗೆ ಬಿಡಿಎ ಸಮ್ಮತಿ ನೀಡಿದೆ. ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಮುನ್ನ ವಿಧಿಸಿದ್ದ ಷರತ್ತನ್ನು ಮುಚ್ಚಿಟ್ಟು, ಭೂಮಿಯ ಪರಿವರ್ತನೆಗೆ ಅರ್ಜಿ ಸಲ್ಲಿಸಲಾಗಿತ್ತು. ಬಿಡಿಎ ಅಧಿಕಾರಿಗಳು ಕೂಡ ಈ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರು. ಅದರ ಆಧಾರದಲ್ಲಿ ವಿಶೇಷ ಜಿಲ್ಲಾಧಿಕಾರಿ, ಭೂ ಪರಿವರ್ತನಾ ಆದೇಶ ಹೊರಡಿಸಿದ್ದರು.ಈ ಮಧ್ಯೆ 1.17 ಎಕರೆ ವಿಸ್ತೀರ್ಣದಲ್ಲಿ ಮೂಲ ಮಾಲೀಕರು ಮನೆ ನಿರ್ಮಿಸಿದ್ದಾರೆ. ಆದರೂ, 7.29 ಎಕರೆ ವಿಸ್ತೀರ್ಣವನ್ನು ಜಂಟಿ ಪಾಲುದಾರಿಕೆಗೆ ನೀಡಿರುವ ಕರಾರು ನೋಂದಣಿ ಮಾಡಲಾಗಿದೆ. ಅದರ ಆಧಾರದಲ್ಲೇ ಬಹುಮಹಡಿ ಕಟ್ಟಡದ ನಕ್ಷೆಗೆ ಅನುಮೋದನೆ ನೀಡಲಾಗಿತ್ತು. ಈ ಎಲ್ಲ ಪ್ರಕ್ರಿಯೆಗಳಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಅಕ್ರಮ ಕಟ್ಟಡ ನಿರ್ಮಾಣ ತಡೆಯುವಂತೆ ಸಲ್ಲಿಸಿದ ಮನವಿಗೆ ಯಾವುದೇ ಅಧಿಕಾರಿಯೂ ಸ್ಪಂದಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry