ಐಎಸ್‌ಐ ಇಲ್ಲದ ನೀರಿಗೆ ನಿಷೇಧ

7

ಐಎಸ್‌ಐ ಇಲ್ಲದ ನೀರಿಗೆ ನಿಷೇಧ

Published:
Updated:
ಐಎಸ್‌ಐ ಇಲ್ಲದ ನೀರಿಗೆ ನಿಷೇಧ

ಬೆಂಗಳೂರು: ಐಎಸ್‌ಐ ಗುಣಮಟ್ಟ ಹೊಂದಿರದ ಪ್ಯಾಕ್ ಮಾಡಿದ ನೀರಿನ (ಬಾಟಲಿ, ಕ್ಯಾನ್ ಇತ್ಯಾದಿ) ಉತ್ಪಾದನೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.ಈ ಆದೇಶವನ್ನು ಶೀಘ್ರದಲ್ಲಿ ಪಾಲಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.ಧಾರವಾಡದ `ಪ್ರಜಾಂದೋಲನ ಗ್ರಾಹಕರ ವೇದಿಕೆ~ಯ ಅಧ್ಯಕ್ಷ ಲೋಚನೇಶ ಹೂಗಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.ಅರ್ಜಿದಾರರ ದೂರೇನು?: `ಭಾರತೀಯ ಗುಣಮಟ್ಟದ ಉತ್ಪಾದನೆ ಕಾಯ್ದೆ~ಯ 15ನೇ ಕಲಮು ಹಾಗೂ `ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ~ಯ ಅಡಿ ಕುಡಿಯುವ ನೀರನ್ನು ಮಾರಾಟ ಮಾಡುವಾಗ ಸಂಬಂಧಿತ ಇಲಾಖೆಗಳ ಅನುಮತಿ, ಪರವಾನಗಿ ಅಥವಾ ಪ್ರಮಾಣ ಪತ್ರ ಪಡೆದುಕೊಳ್ಳುವುದು ಕಡ್ಡಾಯ.ಆದರೆ ರಾಜ್ಯದ ಹಲವಾರು ಕಡೆಗಳಲ್ಲಿ ಈ ಕಾನೂನು ಪಾಲನೆ ಆಗುತ್ತಿಲ್ಲ. ಕುಡಿಯುವ ನೀರನ್ನು ಮನಸೋ ಇಚ್ಛೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ~ ಎನ್ನುವುದು ಅರ್ಜಿದಾರರ ದೂರು.`ರಾಜ್ಯದಲ್ಲಿ ಕುಡಿಯುವ ನೀರನ್ನು ಸಂಸ್ಕರಿಸುವ ಹಲವಾರು ಘಟಕಗಳಿವೆ. ಹೆಚ್ಚಿನ ಕಡೆಗಳಲ್ಲಿ ನೀರನ್ನು ಕೃಷಿ ಭೂಮಿಯಲ್ಲಿನ ಕೊಳವೆ ಬಾವಿಗಳಿಂದ ಸಂಗ್ರಹಿಸಲಾಗುತ್ತಿದೆ. ಈ ಕೊಳವೆ ಬಾವಿಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಕೆಲವು ವ್ಯಕ್ತಿಗಳು ಹಾಗೂ ಕಂಪೆನಿಗಳು ಕುಡಿಯುವ ನೀರನ್ನು ಸಂಗ್ರಹಿಸುವ ಮೂಲಕ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕುಡಿಯಲು ಯೋಗ್ಯವಲ್ಲದ ನೀರು ಕೂಡ ಮಾರಾಟವಾಗುತ್ತಿದೆ.`ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಬೆಂಗಳೂರು ನೀರು ಸರಬರಾಜು ಮಂಡಳಿ ಪೂರೈಕೆ ಮಾಡುವ ಕಾವೇರಿ ನೀರನ್ನು ಬಾಟಲಿಗಳಲ್ಲಿ ತುಂಬಿಸಲಾಗುತ್ತದೆ. ಇದು ಕೆಲವೊಮ್ಮೆ ಕಲುಷಿತವಾಗಿರುವ ಕಾರಣ, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ~ ಎನ್ನುವುದು ಅರ್ಜಿದಾರರ ಆರೋಪ.ಲೋಕಸಭೆಯಲ್ಲಿ ಚರ್ಚೆ: `ಕುಡಿಯಲು ಯೋಗ್ಯವಲ್ಲದ ನೀರು ದೇಶದಾದ್ಯಂತ ಮಾರಾಟ ಆಗುತ್ತಿದೆ ಎಂಬ ವಿಷಯ 2004ರ ಜುಲೈನಲ್ಲಿ ಲೋಕಸಭೆಯಲ್ಲಿ ಚರ್ಚೆಗೆ ಬಂದಿತ್ತು. ನಲ್ಲಿ ನೀರನ್ನು `ಮಿನರಲ್ ವಾಟರ್~ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ವಿಷಯ ಚರ್ಚೆಗೆ ಒಳಗಾಗಿತ್ತು. ಕುಡಿಯುವ ನೀರನ್ನು ಹೇಗೆ ಸಂಸ್ಕರಣೆ ಹಾಗೂ ಮಾರಾಟ ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಆದರೆ, ಇದಾವುದೂ ಜಾರಿಗೆ ಬಂದಿಲ್ಲ~.`ಕುಡಿಯಲು ಮಾರಾಟ ಆಗುತ್ತಿರುವ ನೀರಿನ ಗುಣಮಟ್ಟ ಕಾಪಾಡಲು ಕ್ರಮ ಜರುಗಿಸುವಂತೆ ಕೋರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಅರ್ಜಿದಾರರು ಪತ್ರ ಬರೆದಿದ್ದರು. ಆದರೆ ಯಾರೊಬ್ಬರೂ ಅದರಲ್ಲಿ ಆಸಕ್ತಿ ತೋರಿಲ್ಲ~ ಎಂದು ಅರ್ಜಿದಾರರ ಪರ ವಕೀಲ ಜಯಕುಮಾರ್ ಎಸ್. ಪಾಟೀಲ್ ಕೋರ್ಟ್ ಗಮನಕ್ಕೆ ತಂದರು.ಆದುದರಿಂದ ಯಾವುದೇ ವ್ಯಕ್ತಿ, ವ್ಯಾಪಾರಿ ಅಥವಾ ಕಂಪೆನಿ ಇದರ ತಯಾರಿಕೆ ಅಥವಾ ಮಾರಾಟದಲ್ಲಿ ತೊಡಗಿದ್ದರೆ ಅದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಅವರು ಕೋರಿದರು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry