ಮಂಗಳವಾರ, ಮಾರ್ಚ್ 9, 2021
23 °C
ಉಗ್ರರ ಸಂಘಟನೆಯಲ್ಲಿ ಹಣಕಾಸಿನ ಕೊರತೆ

ಐಎಸ್‌ನಲ್ಲಿ ಸಂಬಳ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಎಸ್‌ನಲ್ಲಿ ಸಂಬಳ ಕಡಿತ

ಜೆರುಸಲೆಂ (ಪಿಟಿಐ): ಇರಾಕ್‌ ಮತ್ತು ಸಿರಿಯಾಗಳಾಚೆಗೂ ತನ್ನ ಹಿಡಿತವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಇಸ್ಲಾಮಿಕ್‌ ಸ್ಟೇಟ್‌ನ ಉಗ್ರರು ಈಗ ತೀವ್ರ ಹಣಕಾಸಿನ ಕೊರತೆ ಎದುರಿಸುತ್ತಿದ್ದಾರೆ.ತನ್ನ ಹೋರಾಟಗಾರರಿಗೆ ನೀಡುತ್ತಿರುವ ಸಂಬಳದ ಪ್ರಮಾಣದಲ್ಲಿ  ಅರ್ಧದಷ್ಟು ಕಡಿತ ಮಾಡಲು ಐಎಸ್‌ ತೀರ್ಮಾನಿಸಿದೆ. ಅನಿವಾರ್ಯ ಕಾರಣಗಳಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ಹೇಳಿದೆ. ಈ ಕ್ರಮವು, ಐಎಸ್‌ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದರ ಸೂಚನೆ ಎಂದು ವಿಶ್ಲೇಷಿಸಲಾಗಿದೆ.ಐಎಸ್‌ ಕಳೆದ ತಿಂಗಳು ಬಿಡುಗಡೆ ಮಾಡಿರುವ ಕೆಲವು ದಾಖಲೆಗಳನ್ನು ಉಲ್ಲೇಖಿಸಿರುವ ದಿ ಜೆರುಸಲೆಂ ಪೋಸ್ಟ್‌ ಪತ್ರಿಕೆ, ‘ಅನಿವಾರ್ಯ ಕಾರಣಗಳಿಂದ’ ಐಎಸ್‌ ಹೋರಾಟಗಾರರ ವೇತನವನ್ನು ಅರ್ಧದಷ್ಟು ಕಡಿತಗೊಳಿಸಲು ಸಂಘಟನೆಯ ಖಜಾನೆ ಸಚಿವ ಬಾಯ್ತ್‌ ಅಲ್‌ಮಾಲ್‌ ನಿರ್ಧರಿಸಿರುವುದಾಗಿ ವರದಿ ಮಾಡಿದೆ.ಈ ತಿಂಗಳ ಆರಂಭದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಇರಾಕ್‌ನ ಮೊಸುಲ್ ನಗರದಲ್ಲಿರುವ ಐಎಸ್‌ನ ಹಣ ಶೇಖರಣೆಯ ಘಟಕವನ್ನು ನಾಶಪಡಿಸಿದ್ದವು. ಅದರಲ್ಲಿ ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳು ಹಾಗೂ ಹೋರಾಟಗಾರರಿಗೆ ನೀಡಲು ಕೋಟ್ಯಂತರ ಡಾಲರ್‌ ಇರಿಸಲಾಗಿತ್ತು. ಈ ಹಣವೆಲ್ಲವೂ ವಾಯುದಾಳಿಯಿಂದಾಗಿ ಭಸ್ಮವಾಗಿದೆ ಎನ್ನಲಾಗಿದೆ.‘ಐಎಸ್‌ನ ದಾಖಲೆಗಳು ಹೊರಬಂದ ಸಂದರ್ಭಕ್ಕಿಂತಲೂ ಈಗಿನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ’ ಎಂದು ಪತ್ರಿಕೆ ಹೇಳಿದೆ.

ಈಗ ಉಂಟಾಗಿರುವ ಆರ್ಥಿಕ ನಷ್ಟವನ್ನು ತುಂಬಲು ಸ್ಥಳೀಯ ನಾಗರಿಕರಿಗೆ ತೆರಿಗೆ ವಿಧಿಸುವ ಮೂಲಕ ಹಣ ಸಂಗಹಣೆ ಮಾಡಬೇಕು ಎಂದು ಐಎಸ್‌  ನೇಮಿಸಿರುವ ಮೊಸುಲ್‌ ಗವರ್ನರ್‌ ಫತ್ವಾ ಹೊರಡಿಸಿದ್ದಾನೆ.ಮುಖ್ಯಾಂಶಗಳು

* ಹಣದ ಸಂಗ್ರಹ ಭಂಡಾರ ನಾಶ ಮಾಡಿದ್ದ ಅಮೆರಿಕ

* ನಾಗರಿಕರಿಂದ ಸುಂಕ ಸಂಗ್ರಹಕ್ಕೆ ಫತ್ವಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.