ಗುರುವಾರ , ಫೆಬ್ರವರಿ 25, 2021
24 °C

ಐಎಸ್ ನಂಟು- ಇಮಾಂ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಎಸ್ ನಂಟು- ಇಮಾಂ ಬಂಧನ

ಕಾಸರಗೋಡು: ಕಾಸರಗೋಡಿನ ಪಡನ್ನ ಮತ್ತು ತ್ರಿಕರಿಪುರದಿಂದ 17 ಮಂದಿಯನ್ನು ಭಯೋತ್ಪಾದಕ ಸಂಘಟನೆ ಐಎಸ್ ನೆಲೆಗೆ ತಲುಪಿಸಿದ ಪ್ರಕರಣಕ್ಕೆ ಸಂಬಂಧಿಸಿ, ತೀವ್ರ ಇಸ್ಲಾಮಿಕ್‌ ಜೀವನ ಪದ್ಧತಿಯ ಬಗ್ಗೆ ಬೋಧನೆ ನಡೆಸಿದ ಮಸೀದಿಯ ಇಮಾಂ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಕಣ್ಣೂರು ಪೆರಿಂಗೋತ್ ಪುಲ್ಲೂಕರೆ ಸಲಫಿ ಮಸೀದಿಯ ಇಮಾಂ ಆಗಿದ್ದ ಮುಹಮ್ಮದ್ ಹನೀಫ್ (27) ಬಂಧಿತ. ವಯನಾಡು ಕಂಬಳಕ್ಕಾಡು ನಿವಾಸಿಯಾದ ಹನೀಫ್‌  ವಿರುದ್ಧ ಈ ಮೊದಲೇ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದೀಗ ಕೇರಳದಲ್ಲಿ ಬಂಧಿತನಾದ ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸುವ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.ಪಡನ್ನದಿಂದ ಐಎಸ್‌ ನೆಲೆಗೆ ತೆರಳಿರುವವರಲ್ಲಿ ಒಬ್ಬನಾದ ಅಶ್ಫಾಕ್ ಮಜೀದ್‌ನ ತಂದೆ, ಮುಂಬೈಯಲ್ಲಿ ವ್ಯಾಪಾರಿಯಾಗಿರುವ ಕೆ. ಅಬ್ದುಲ್ ಮಜೀದ್‌ ಅವರ ದೂರಿನಂತೆ ಹನೀಫ್‌ನನ್ನು ಮುಂಬೈ ಪೊಲೀಸರ ಸಲಹೆಯಂತೆ ಬಂಧಿಸಲಾಗಿದೆ. ತನ್ನ ಮಗ ಉಗ್ರಗಾಮಿಗಳ ಬಲೆಯಲ್ಲಿ ಬೀಳಲು ಇಮಾಂ ಹನೀಫ್‌  ನಡೆಸಿದ  ತೀವ್ರಗಾಮಿ ಬೋಧನೆಗಳೇ ಕಾರಣವೆಂದು ಆರೋಪಿಸಿ ಅಬ್ದುಲ್ ಮಜೀದ್ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದರು.ಈಗ  ಐಎಸ್ ನೆಲೆಯಲ್ಲಿದ್ದಾರೆನ್ನಲಾದ ಪಡನ್ನ ಮತ್ತು ತ್ರಿಕರಿಪುರದವರಾದ ಅಶ್ಫಾಕ್, ಡಾ. ಇಜಾಸ್, ಅಬ್ದುಲ್ ರಾಶೀದ್, ಮರ್ವಾನ್ ಎಂಬವರಿಗೆ  ಮುಹಮ್ಮದ್ ಹನೀಫ್ ಪಡನ್ನದ ಸಲಫಿ ಮಸೀದಿಯಲ್ಲಿ ತೀವ್ರ ಇಸ್ಲಾಂ ಸಲಫಿಸಂ ಬಗ್ಗೆ ಬೋಧನೆ ನಡೆಸಿ ಅವರ ಮನ ಪರಿವರ್ತನೆ ಮಾಡಿದ್ದ ಎನ್ನಲಾಗಿದೆ.ಪಡನ್ನ ಮಸೀದಿಯಿಂದ ಹನೀಫ್ ವರ್ಗಾವಣೆಗೊಂಡ ಬಳಿಕವೂ ಆತ ನಿರಂತರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಮುಂಬೈಯಿಂದ ಬಂದಿರುವ ಎಸಿಪಿ ನೇತೃತ್ವದಲ್ಲಿರುವ ನಾಲ್ವರ ಪೊಲೀಸರ ತಂಡ ಆರೋಪಿಯನ್ನು ವಿಚಾರಣೆ ನಡೆಸುತ್ತಿದೆ. ಜಿಲ್ಲೆಯಿಂದ ಕಾಣೆಯಾಗಿರುವವರ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್‌ ದಳವೂ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.