ಐಐಎಸ್ಸಿಗೆ ವಿಶ್ವದರ್ಜೆಯ ಸ್ಥಾನ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಾರ್ವರ್ಡ್ ವಿವಿ ಸೇರಿದಂತೆ ಜಗತ್ತಿನ ಶ್ರೇಷ್ಠ ವಿವಿಗಳ ಮಟ್ಟಕ್ಕೆ ಏರಬೇಕು’ ಎಂದು ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್. ಆರ್. ರಾವ್ ಆಶಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಶುಕ್ರವಾರ ನಡೆದ ಹಳೆವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ದೇಶದ ಶ್ರೇಷ್ಠ ಸಂಸ್ಥೆಗಳಲ್ಲಿ ಇದೂ ಒಂದು. ಅತ್ಯುತ್ತಮ ವಿಜ್ಞಾನಿಗಳು ಇಲ್ಲಿದ್ದಾರೆ. ಮೊದಲನೇ ದರ್ಜೆಯ ಪತ್ರಿಕೆ ಹಾಗೂ ಎರಡನೇ ದರ್ಜೆಯ ಪತ್ರಿಕೆಯ ನಡುವೆ ಸಣ್ಣ ಪ್ರಮಾಣದ ವ್ಯತ್ಯಾಸ ಇದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಾಮರ್ಥ್ಯವೃದ್ಧಿ ಮಾಡಿ ಅತ್ಯುನ್ನತ ದರ್ಜೆಯ ಸಂಸ್ಥೆಯನ್ನಾಗಿ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
‘ದಕ್ಷಿಣ ಕೊರಿಯಾ ಹಾಗೂ ಚೀನಾ ದೇಶಗಳಲ್ಲಿ 10 ವರ್ಷಗಳ ಹಿಂದೆ ಆರಂಭವಾದ ಶಿಕ್ಷಣ ಸಂಸ್ಥೆಗಳು ಈಗ ಶ್ರೇಷ್ಠ ಸಂಸ್ಥೆಗಳಾಗಿ ರೂಪಾಂತರ ಹೊಂದಿವೆ. ನಮ್ಮಲೂ ಹಾಗೆಯೇ ಆಗಬೇಕು. ದುರಂತವೆಂದರೆ, ನಮ್ಮಲ್ಲಿ ಮಹತ್ವವಲ್ಲದ ವಿಷಯಗಳೇ ಹೆಚ್ಚು ಪ್ರಚಾರ ಪಡೆಯುತ್ತಿವೆ’ ಎಂದು ಅವರು ವಿಷಾದಿಸಿದರು.
ಈ ಸಂಸ್ಥೆಯ ಜತೆಗೆ ನನಗೆ ಅವಿನಾಭಾವ ಸಂಬಂಧ ಇದೆ. ಅತ್ಯುತ್ತಮ ಗೆಳೆಯರು ಸಿಕ್ಕಿದ್ದು ಇಲ್ಲಿಯೇ. ಶ್ರೇಷ್ಠ ವಿಜ್ಞಾನಿ ಸತೀಶ್ ಧವನ್ ಹಾಗೂ ಜೆಆರ್ಡಿ ಟಾಟಾ ಅವರನ್ನು ಭೇಟಿ ಮಾಡಿದ್ದು ಇದೇ ಸಂಸ್ಥೆಯಲ್ಲೇ’ ಎಂದು ನೆನಪಿಸಿಕೊಂಡರು.
‘ಇದು ಸುಮಾರು 56 ವರ್ಷಗಳ ಹಿಂದಿನ ಕಥೆ. ಆಗ ರಾಸಾಯನಿಕ ಭೌತವಿಜ್ಞಾನ ವಿಭಾಗದಲ್ಲಿ ಇದ್ದೆ. ವಿಭಾಗದಲ್ಲಿ ಇದ್ದುದು ಒಂದೇ ದೂರವಾಣಿ. ಪತ್ನಿ ಇಂದುಮತಿಗೆ ಮೊದಲ ಬಾರಿಗೆ ಪ್ರೇಮ ನಿವೇದನೆ ಮಾಡಿದ್ದು ಕಚೇರಿಯ ದೂರವಾಣಿಯಿಂದಲೇ’ ಎಂದು ಅವರು ಹೇಳಿದಾಗ ಸಭಾಂಗಣದ ತುಂಬಾ ನಗುವಿನ ಅಲೆ ಎದ್ದಿತು.
ಇಸ್ರೊ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ ಮಾತನಾಡಿ, ‘ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆಗಿನ ಸಂಪರ್ಕದಿಂದಲೇ ಇಂದು ಇಸ್ರೊ ಉಳಿದಿದೆ. ಭಾರತೀಯ ಬಾಹ್ಯಾಕಾಶ ಯೋಜನೆಗಳ ರೂವಾರಿಗಳಾದ ಡಾ.ವಿಕ್ರಮ್ ಸಾರಾಬಾಯ್ ಹಾಗೂ ಪ್ರೊ. ಸತೀಶ್ ಧವನ್ ಅವರು ಐಐಎಸ್ಸಿ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು’ ಎಂದರು.
ಭಾರತೀಯ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಮಹಾನಿರ್ದೇಶಕ ಡಾ. ಭುಜಂಗ ರಾವ್ ಮಾತನಾಡಿ, ‘ಭಾರತೀಯ ವಿಜ್ಞಾನ ಸಂಸ್ಥೆಯ ಅನೇಕ ವಿಜ್ಞಾನಿಗಳು ಡಿಆರ್ಡಿಒ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು’ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಅನುರಾಗ್ ಕುಮಾರ್ ಅವರು ಮಾತನಾಡಿ, ‘ಸಮಾವೇಶಕ್ಕೆ 40 ಹಳೆಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಮೂರು ದಿನಗಳ ಕಾಲ ವಿವಿಧ ವಿಷಯಗಳ ಬಗ್ಗೆ ಗೋಷ್ಠಿಗಳು, ಹಳೆವಿದ್ಯಾರ್ಥಿಗಳೊಂದಿಗೆ ಸಂವಾದ ಆಯೋಜಿಸಲಾಗಿದೆ’ ಎಂದು ಹೇಳಿದರು.
ಸಾಕಷ್ಟು ಇಂಧನ: ಮಂಗಳಯಾನ ನಡೆಸುತ್ತಿರುವ ಇಸ್ರೊ ನೌಕೆಯಲ್ಲಿ ಸಾಕಷ್ಟು ಇಂಧನ ಇದ್ದು, ಅದು ಇನ್ನೂ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೌಕೆಯಲ್ಲಿ ಇನ್ನೂ 45 ಕೆ.ಜಿ. ಇಂಧನ ಇದೆ. ನಾವು ಸಾಕಷ್ಟು ಕಡಿಮೆ ಇಂಧನ ಬಳಸುತ್ತಿದ್ದೇವೆ. ಈಗ ಇಂಧನದ ಅವಶ್ಯಕತೆಯೂ ತೀರಾ ಕಡಿಮೆ’ ಎಂದರು.
‘ಅವಕಾಶ ಬಳಸದ ಕೇಂದ್ರ ಸರ್ಕಾರ’
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಒಂದು ವರ್ಷದಲ್ಲಿ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ’ ಎಂದು ಬಿಜೆಪಿ ಮುಖಂಡ ಅರುಣ್ ಶೌರಿ ಟೀಕಿಸಿದರು.
ಸಮ್ಮೇಳನದಲ್ಲಿ ಪಾಲ್ಗೊಂಡ ಅವರು ಮೋದಿ ಸರ್ಕಾರದ ಸಾಧನೆಯ ಬಗ್ಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
‘125 ಕೋಟಿ ಜನಸಂಖ್ಯೆ ಇರುವ ಈ ದೇಶವನ್ನು ಆಳಲು ಈಗಿನ ರಾಜಕೀಯ ವ್ಯವಸ್ಥೆ ಹಾಗೂ ಆಡಳಿತ ವ್ಯವಸ್ಥೆ ಸಮರ್ಥವಾದುದು ಅಲ್ಲ’ ಎಂದು ಅವರು ವ್ಯಾಖ್ಯಾನಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.