ಗುರುವಾರ , ಮೇ 26, 2022
32 °C

ಐಐಟಿ ಪ್ರವೇಶಕ್ಕೆ ಸಂಧಾನ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಕ್ಕೆ 2013ನೇ ಸಾಲಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ `ಸಂಧಾನ ಸೂತ್ರ~ ಒಪ್ಪಿಕೊಳ್ಳುವುದರೊಂದಿಗೆ ಈ ಸಂಬಂಧ ಸರ್ಕಾರ ಹಾಗೂ ಐಐಟಿ ಮಂಡಳಿಗಳ ಮಧ್ಯೆ ಉದ್ಭವಿಸಿದ್ದ ವಿವಾದಕ್ಕೆ ತೆರೆಬಿದ್ದಿದೆ.

ಐಐಟಿ ಪ್ರವೇಶ ನಿಯಮಗಳ ಸಂಬಂಧ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿದ ಉನ್ನತ ಸಂಸ್ಥೆಯಾದ ಐಐಟಿ  ಮಂಡಳಿಯ ಸಭೆಯಲ್ಲಿ ಬುಧವಾರ ಈ ಸಂಧಾನ ಸೂತ್ರ  ಒಪ್ಪಿಕೊಳ್ಳಲಾಯಿತು. ಸರ್ಕಾರದ ಪ್ರತಿನಿಧಿಗಳು ಹಾಗೂ ಎಲ್ಲಾ 16 ಐಐಟಿಗಳ ನಿರ್ದೇಶಕರನ್ನು ಒಳಗೊಂಡ ಮಂಡಳಿ ಇದಾಗಿದೆ.

ಮಂಡಳಿಯ ಮುಖ್ಯಸ್ಥರಾದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಈ ಮಹತ್ವದ ಸಭೆಗೆ ಹಾಜರಾಗಿರಲಿಲ್ಲ. ಮದ್ರಾಸ್ ಐಐಟಿಯ ನಿರ್ದೇಶಕರ ಮಂಡಲಿಯ ಅಧ್ಯಕ್ಷ ಎಂ.ಎನ್.ಶರ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೊಸ ಪರೀಕ್ಷಾ ಕ್ರಮದ ಪ್ರಕಾರ, `ಅಡ್ವಾನ್ಸ್‌ಡ್ ಪರೀಕ್ಷೆ~ ನಡೆಸಲಾಗುತ್ತದೆ.

ವಿವಿಧ ರಾಜ್ಯ ಪರೀಕ್ಷಾ ಮಂಡಳಿಗಳು ನಡೆಸುವ ಪರೀಕ್ಷೆಯಲ್ಲಿ ಮೊದಲ 20 ಅತಿ ಹೆಚ್ಚು ಶೇಕಡಾವಾರು ಅಂಕ ತೆಗೆಯುವ ವಿದ್ಯಾರ್ಥಿಗಳಿಗೆ ಐಐಟಿಗಳು ಪ್ರವೇಶ ನೀಡಲಿವೆ ಎಂದು ಐಐಟಿ ಮಂಡಲಿಯ ಸದಸ್ಯ ದೀಪೇಂದ್ರ ಹೂಡಾ ಸಭೆಯ ನಂತರ ತಿಳಿಸಿದರು.

2013ರಿಂದ ಐಐಟಿ ಪ್ರವೇಶಕ್ಕೆ ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ ಗಳಿಸಿದ ರ‌್ಯಾಂಕ್‌ನ್ನು ಮಾತ್ರ ಪರಿಗಣಿಸಲಾಗುವುದು. ಆದರೆ, ಈ ಅಭ್ಯರ್ಥಿಗಳು, ರಾಜ್ಯ ಮಂಡಳಿಗಳು ನಡೆಸುವ ಪರೀಕ್ಷೆಯಲ್ಲಿ ಮೊದಲ 20 ಶೇಕಡಾವಾರು ಅಂಕಗಳನ್ನು ಗಳಿಸಿದವರಾಗಿರಬೇಕು ಎಂಬ ನಿಬಂಧನೆ ಇದಕ್ಕೆ ಅನ್ವಯವಾಗುತ್ತದೆ (ಇದನ್ನೇ ಮೊದಲ 20 ಪರ್ಸಂಟೈಲ್ ಎಂದೂ ಹೇಳಲಾಗುತ್ತದೆ).

ಸರ್ಕಾರ ಈ ಮುನ್ನ ಜಾರಿಗೆ ತರಲು ಉದ್ದೇಶಿಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ಸ್ವರೂಪದ ವಿರುದ್ಧ ಐಐಟಿ ದೆಹಲಿ ಮತ್ತು ಐಐಟಿ ಕಾನ್ಪುರ ಆಕ್ಷೇಪ ಎತ್ತಿದ್ದವು.

ಮುಖ್ಯ ಪರೀಕ್ಷೆ ಹಾಗೂ ಅಡ್ವಾನ್ಸ್‌ಡ್ ಪರೀಕ್ಷೆಯ ನಡುವೆ ಸಾಕಷ್ಟು ಕಾಲಾವಧಿ ಇರಬೇಕು. ಇದರಿಂದ ಅಡ್ವಾನ್ಸ್‌ಡ್ ಪರೀಕ್ಷೆಗೆ ಮುನ್ನ ಮುಖ್ಯ ಪರೀಕ್ಷೆಯ ಫಲಿತಾಂಶ ಲಭ್ಯವಾಗುತ್ತದೆ. ಎಲ್ಲ ವರ್ಗಗಳಿಗೆ ಸೇರಿದ ಮೊದಲ 1.50 ಲಕ್ಷ ಅಭ್ಯರ್ಥಿಗಳಿಗೆ ಮಾತ್ರ ಅಡ್ವಾನ್ಸ್‌ಡ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಐಐಟಿ ಜಂಟಿ ಪ್ರವೇಶ ಮಂಡಲಿ (ಜೆಎಬಿ) ಒತ್ತಾಯಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.