ಶುಕ್ರವಾರ, ನವೆಂಬರ್ 15, 2019
20 °C

ಐಐಪಿ, ತ್ರೈಮಾಸಿಕ ಫಲಿತಾಂಶ ಪ್ರಭಾವ

Published:
Updated:
ಐಐಪಿ, ತ್ರೈಮಾಸಿಕ ಫಲಿತಾಂಶ ಪ್ರಭಾವ

ನವದೆಹಲಿ(ಪಿಟಿಐ): ಕಾರ್ಪೊರೇಟ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ, ಮಾರ್ಚ್‌ನಲ್ಲಿನ ಕೈಗಾರಿಕಾ ಪ್ರಗತಿ ಸೂಚ್ಯಂಕ(ಐಐಪಿ) ಈ ವಾರ ಷೇರು ಪೇಟೆ ವಹಿವಾಟಿನ ಗತಿಯನ್ನು ನಿರ್ಧರಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಇನ್ಫೊಸಿಸ್ ಶುಕ್ರವಾರ (ಏ. 12) ಜನವರಿ-ಮಾರ್ಚ್ ಅವಧಿಯ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ. ಕೈಗಾರಿಕಾ ಪ್ರಗತಿ ಸೂಚ್ಯಂಕವೂ ಅಂದೇ ಬಿಡುಗಡೆಯಾಗಲಿದೆ. `ಐಐಪಿ' ಅಂಕಿ-ಅಂಶಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಮೇಲೆ ಪ್ರಭಾವ ಬೀರುವುದರಿಂದ ಈ ಕುರಿತು ಹೂಡಿಕೆದಾರರು ನಿಗಾ ವಹಿಸುತ್ತಿದ್ದಾರೆ.ಪರಿಕರಗಳ ತಯಾರಿಕಾ ವಲಯದ ಕಳಪೆ ಸಾಧನೆಯಿಂದ ಒಟ್ಟಾರೆ ಕೈಗಾರಿಕಾ ಪ್ರಗತಿ ಈ ಬಾರಿಯೂ ಕುಸಿಯುವ ಸಾಧ್ಯತೆಯೇ ಹೆಚ್ಚು ಎಂದು ಷೇರು ದಲ್ಲಾಳಿ ಸಂಸ್ಥೆ `ಕಾರ್ವಿ' ಹೇಳಿದೆ.ರಾಜಕೀಯ ಅಸ್ಥಿರತೆ ಸೇರಿದಂತೆ ದೇಶೀಯ ಸಂಗತಿಗಳು ಪ್ರಭಾವಿಯಾಗಿರುವುದರಿಂದ ರಾಷ್ಟ್ರೀಯ ಷೇರು  ವಿನಿಮಯ ಕೇಂದ್ರದ(ಎನ್‌ಎಸ್‌ಇ) ಸೂಚ್ಯಂಕ `ನಿಫ್ಟಿ' ಈ ವಾರ 5,548 ಅಂಶಗಳಿಗಿಂತ ಕೆಳಗೆ ಇಳಿಯುವ ಸಾಧ್ಯತೆಯೇ ಹೆಚ್ಚಿದೆ ಎಂದು `ಆದಿತ್ಯಾ ಟ್ರೇಡಿಂಗ್ ಸಲ್ಯೂಷನ್ಸ್' ಸ್ಥಾಪಕ ವಿಕಾಸ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.ಯೂರೋಪ್ ಬಿಕ್ಕಟ್ಟು ಮತ್ತು ಜಾಗತಿಕ ಸಂಗತಿಗಳಿಂದ ಕಳೆದ ವಾರ   `ಬಿಎಸ್‌ಇ' ಒಟ್ಟು ಶೇ 2ರಷ್ಟು ಕುಸಿತ ಕಂಡರೆ, `ನಿಫ್ಟಿ'129 ಅಂಶಗಳಷ್ಟು ಹಾನಿಗೊಳಗಾಗಿದೆ.ಆದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಚಟುವಟಿಕೆ(ಎಫ್‌ಐಐ) ಹೆಚ್ಚಿದ್ದು, ರೂ 639 ಕೋಟಿಯಷ್ಟು ದೊಡ್ಡ ಮೊತ್ತದ ಹೂಡಿಕೆ ಮಾಡಿದ್ದಾರೆ.ಅಮೆರಿಕದ ನಿರುದ್ಯೋಗ ಪ್ರಮಾಣ ಶೇ 7.6ರಷ್ಟು ತಗ್ಗಿರುವುದು ಕೂಡ ಜಾಗತಿಕ ಷೇರುಪೇಟೆಗಳಿಗೆ ಚೇತರಿಕೆ ನೀಡಲಿದೆ ಎಂದು `ಬೊನಾಂಜಾ ಪೋರ್ಟ್‌ಪೊಲಿಯೊ' ಸಂಸ್ಥೆ ಉಪಾಧ್ಯಕ್ಷ ರಾಕೇಶ್ ಗೋಯಲ್ ಹೇಳಿದ್ದಾರೆ. `ಆರ್‌ಬಿಐ' ಮೇ 3ರಂದು ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ.

ಪ್ರತಿಕ್ರಿಯಿಸಿ (+)