ಐಒಎಗೆ ಅಕ್ಟೋಬರ್‌ 31ಗಡುವು

7
ಭಾರತ ಒಲಿಂಪಿಕ್‌ ಸಂಸ್ಥೆಗೆ ಮತ್ತೆ ಸಂಕಷ್ಟ, ಕಗ್ಗಂಟಾದ ಸಮಸ್ಯೆ

ಐಒಎಗೆ ಅಕ್ಟೋಬರ್‌ 31ಗಡುವು

Published:
Updated:

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಮತ್ತು ಭಾರತ ಒಲಿಂಪಿಕ್ಸ್‌ ಸಂಸ್ಥೆ ನಡುವಿನ ಹಗ್ಗಜಗ್ಗಾಟ ಇನ್ನಷ್ಟು ತೀವ್ರಗೊಂಡಿದ್ದು, ಐಒಎ ತನ್ನ ಸಂವಿಧಾನದಲ್ಲಿ  ತಿದ್ದುಪಡಿ ಮಾಡಿಕೊಂಡು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು’ ಎಂದು ಐಒಸಿ ಹೇಳಿದೆ. ಇದಕ್ಕಾಗಿ ಅಕ್ಟೋಬರ್‌ 31ರ ತನಕ ಕಾಲಾವಕಾಶ ನೀಡಿದೆ.ಐಒಸಿಯಿಂದ ಐಒಎ ಹೋದ ವರ್ಷದಿಂದ ಅಮಾನತು ಶಿಕ್ಷೆ ಎದುರಿಸುತ್ತಿದೆ. ಇದೇ ವರ್ಷದ ಡಿಸೆಂಬರ್‌ 15ರ ಒಳಗೆ ಭಾರತ ಒಲಿಂಪಿಕ್ಸ್‌ ಸಂಸ್ಥೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಐಒಸಿ ಸ್ಪಷ್ಟ ಸೂಚನೆ ನೀಡಿದೆ.‘ಭಾರತದಲ್ಲಿರುವ ಕಾನೂನು ವ್ಯವಸ್ಥೆಯ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಭಾರತದ ಕಾನೂನಿನ ಪ್ರಕಾರ ದೋಷಾರೋಪ ಪಟ್ಟಿಯಲ್ಲಿ ಹೆಸರು ಇರುವವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಹೊಂದಿರುತ್ತಾರೆ. ವ್ಯಕ್ತಿಯೊಬ್ಬರ ಮೇಲಿರುವ ಆರೋಪ ಸಾಬೀತಾಗುವ ತನಕ ಆ ವ್ಯಕ್ತಿ ಮುಗ್ದ. ಭಾರತದ ಕಾನೂನಿಗೆ ನಾವು   ಗೌರವ ನೀಡುತ್ತೇವೆ. ಆದರೆ, ಒಲಿಂಪಿಕ್ಸ್‌ ನಿಯಮಗಳ ವಿರುದ್ಧ ನಡೆದುಕೊಳ್ಳಲು ಆಗುವುದಿಲ್ಲ’ ಎಂದು ಐಒಸಿ ಪ್ರಧಾನ  ನಿರ್ದೇಶಕ ಕ್ರಿಸ್ಟೋಫರ್‌ ಡೇ ಕೆಪ್ಪರ್‌  ಹೇಳಿದ್ದಾರೆ.ಭ್ರಷ್ಟಾಚಾರ ಒಳಗೊಂಡಂತೆ ಇತರ ಯಾವುದೇ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರು­ವವರು  ಚುನಾವಣೆಯಲ್ಲಿ  ಸ್ಪರ್ಧಿಸಲು ಅವಕಾಶ ನೀಡದಂತೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು ಎಂದು ಐಒಸಿ ಈ ಹಿಂದೆ ನಿರ್ದೇಶಿಸಿತ್ತು. ಆದರೆ, ಇದನ್ನು ಪೂರ್ಣಪ್ರಮಾ­ಣದಲ್ಲಿ ಐಒಎ ಒಪ್ಪಿಕೊಂಡಿರಲಿಲ್ಲ. ನ್ಯಾಯಾಲ­ಯದ ದೋಷಾ­ರೋಪ ಪಟ್ಟಿಯಲ್ಲಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವ ಐಒಸಿ ಪ್ರಸ್ತಾಪವನ್ನು ಐಒಎ ಒಪ್ಪಿಕೊಂಡಿರಲಿಲ್ಲ. ಹೋದ ತಿಂಗಳು ನಡೆದ ಐಒಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐಒಸಿ ನಿರ್ದೇಶನವನ್ನು ಧಿಕ್ಕರಿಸಿ ಐಒಎ ‘ಪರ್ಯಾಯ ಹಾದಿ’ಯೊಂದನ್ನು ಕಂಡುಕೊಂಡಿತ್ತು.ತಪ್ಪಿತಸ್ಥರೆಂದು ಸಾಬೀತಾಗಿ ಎರಡು ಮತ್ತು ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾದವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಐಒಎ ತೀರ್ಮಾನ ತೆಗೆದುಕೊಂಡಿತ್ತು. ಆದರೆ, ಗುರುವಾರ ಈ ‘ಹೊಂದಾಣಿಕೆಯ ಸೂತ್ರ’ವನ್ನು ಐಒಸಿ ತಿರಸ್ಕರಿಸಿತ್ತು. ಇದು ಅಮಾನತು­ಗೊಂಡಿರುವ ಭಾರತ ಒಲಿಂಪಿಕ್ಸ್‌ ಸಂಸ್ಥೆಗೆ ಇನ್ನಷ್ಟು ಸಮಸ್ಯೆ ಉಂಟು ಮಾಡಿದೆ. ಅಮಾನತು   ಶಿಕ್ಷೆ ತೆರವುಗೊಳಿಸುವ ಕಾರ್ಯಕ್ಕೂ ಅಡ್ಡಿಯಾಗಲಿದೆ.‘ಐಒಎ ಅಕ್ಟೋಬರ್‌ 31ರ ಒಳಗೆ ತನ್ನ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕು. ಅಲ್ಲಿಯವರೆಗೂ ನಾವು ಯಾವುದೇ ಪತ್ರ ವ್ಯವಹಾರ ನಡೆಸುವುದಿಲ್ಲ. ನಿಯಮಗಳಂತೆ   ನಡೆದುಕೊಂಡರೆ, ಭಾರತ ಒಲಿಂಪಿಕ್ಸ್‌ ಸಂಸ್ಥೆಗೆ ತನ್ನ ಮೇಲಿರುವ ಅಮಾನತು ಶಿಕ್ಷೆಯಿಂದ ಮುಕ್ತವಾಗುವ ಹಾದಿ ಸುಗಮವಾಗಲಿದೆ’ ಎಂದೂ ಅವರು ಹೇಳಿದ್ದಾರೆ.‘ಮನವರಿಕೆ ಮಾಡಿಕೊಡಬೇಕು’

ರಾಂಚಿ (ಪಿಟಿಐ): ‘
ಭಾರತದಲ್ಲಿ ಇರುವ ಪದ್ದತಿ­ಯನ್ನು ಐಒಸಿಗೆ ಮನವರಿಕೆ ಮಾಡಿಕೊಡ­ಬೇಕು. ಐಒಸಿ ಇಲ್ಲಿನ ನಿಯಮಗಳ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿರುವಂತೆ ಕಾಣುತ್ತದೆ’ ಎಂದು ಮಾಜಿ ಅಥ್ಲೀಟ್‌ ಪಿ.ಟಿ. ಉಷಾ ಅಭಿಪ್ರಾಯಪಟ್ಟಿದ್ದಾರೆ.‘ಭಾರತದಲ್ಲಿ ಕ್ರೀಡೆ ಮತ್ತು ರಾಜಕೀಯ ಬೆರೆತು ಹೋಗಿವೆ. ನಮ್ಮ ದೇಶದ ಪದ್ಧತಿಯಂತೆಯೇ ಐಒಎ ನಡೆದುಕೊಳ್ಳಬೇಕು’ ಎಂದು ಒಲಿಂಪಿಯನ್‌ ಉಷಾ ಹೇಳಿದರು. ಇದರ ಜೊತೆಗೆ ಮಾಜಿ ಅಥ್ಲೀಟ್‌ ಅಶ್ವಿನಿ ನಾಚಪ್ಪ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

‘ದೋಷಾರೋಪ ಪಟ್ಟಿಯಲ್ಲಿ ಹೆಸರು ಇರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಕಳಂಕಿತರನ್ನು ಐಒಎನಿಂದ ಹೊರದಬ್ಬಬೇಕು’ ಎಂದು ಅಶ್ವಿನಿ ಹೇಳಿದ್ದರು.‘ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳು ಇರುವುದರಿಂದ ಸಮಸ್ಯೆಯೇನಿಲ್ಲ. ಆದರೆ, ಅವರಿಗೆ ಕ್ರೀಡೆಯ ಬಗ್ಗೆ ಅರಿವು ಇರಬೇಕು’ ಎಂದು ಹೇಳುವ ಮೂಲಕ ಐಒಎಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry