ಐಒಎ ತೀರ್ಮಾನ ಒಪ್ಪದ ಐಒಸಿ

7
ಮುಂದುವರಿದ ಹಗ್ಗಜಗ್ಗಾಟ, ಅಮಾನತು ತೆರವುಗೊಳಿಸುವ ಕಾರ್ಯಕ್ಕೆ ಮತ್ತಷ್ಟು ತೊಡಕು

ಐಒಎ ತೀರ್ಮಾನ ಒಪ್ಪದ ಐಒಸಿ

Published:
Updated:

ನವದೆಹಲಿ (ಪಿಟಿಐ): ‘ತಪ್ಪಿತಸ್ಥರೆಂದು ಸಾಬೀತಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾದವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಾರದು’ ಎಂದು ತೀರ್ಮಾನ ತೆಗೆದು­ಕೊಂಡಿದ್ದ ಭಾರತ ಒಲಿಂಪಿಕ್‌ ಸಂಸ್ಥೆಗೆ (ಐಒಎ) ಮತ್ತೊಮ್ಮೆ ಹಿನ್ನಡೆಯಾಗಿದೆ. ಈ ‘ಪರ್ಯಾಯ ಹಾದಿ’ಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಸಿ) ಸ್ಪಷ್ಟವಾಗಿ ತಿರಸ್ಕರಿಸಿದೆ.ಹೋದ ವರ್ಷದ ಡಿಸೆಂಬರ್‌ನಿಂದ ಐಒಎ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯಿಂದ ಅಮಾನತಿನಲ್ಲಿದೆ. ಅಮಾನತು ತೆರವುಗೊಳಿಸುವ ಕಾರ್ಯಕ್ಕೆ ಇದು ಮತ್ತಷ್ಟು ತೊಡಕು ಉಂಟು ಮಾಡಲಿದೆ.ಭ್ರಷ್ಟಾಚಾರ ಸೇರಿದಂತೆ ಇತರ ಯಾವುದೇ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿ­ರುವವರು ಸ್ಪರ್ಧಿಸಲು ಅವಕಾಶ ನೀಡದಂತೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕೆಂದು ಐಒಸಿ ಐಒಎಗೆ ನಿರ್ದೇಶನ ನೀಡಿತ್ತು. ಆದರೆ, ಇದನ್ನು ಭಾರತ ಒಲಿಂಪಿಕ್ಸ್‌ ಸಂಸ್ಥೆ ಒಪ್ಪಿಕೊಂಡಿರಲಿಲ್ಲ. ಬದಲಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾದವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ಪರ್ಯಾಯ ಹಾದಿ­ಯೊಂದನ್ನು ಐಒಎ ಹುಡುಕಿಕೊಂಡಿತ್ತು. ಆದರೆ, ಇದನ್ನು ಐಒಸಿ ನಿರಾಕರಿಸಿದೆ.‘ಐಒಎ 2012ರಿಂದಲೇ ಅಮಾನತಿನಲ್ಲಿದೆ. ಐಒಎ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಐಒಸಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. ಬುಧವಾರ ನಡೆದ ಐಒಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.‘ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾ­ಗಿರುವವರು ಸ್ಫರ್ಧಿಸಲಿ. ಇದರ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ಆದರೆ, ಕ್ರಿಮಿನಲ್‌ ಆರೋ­ಪಕ್ಕೆ ಗುರಿಯಾದವರು ಮಾತ್ರ ಕಣಕ್ಕಿಳಿ­ಯಲು ಅವಕಾಶ ನೀಡುವುದಿಲ್ಲ. ನಮ್ಮ ಈ ತೀರ್ಮಾನ­ವನ್ನು ಐಒಎಗೆ ತಿಳಿಸಲಾಗಿದೆ’ ಎಂದು ಐಒಸಿ ಹೇಳಿದೆ.‘ನ್ಯಾಯಾಲಯದ ದೋಷಾರೋಪ ಪಟ್ಟಿಯಲ್ಲಿ­ರುವವರಿಗೆ ಕ್ರೀಡೆಯಲ್ಲಿ ಯಾವುದೇ ಸ್ಥಾನವಿಲ್ಲ. ಆದರೆ, ಭಾರತದ ಕಾನೂನಿನ ಪ್ರಕಾರ ಅಂತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಆದ್ದರಿಂದ ಐಒಸಿ ನಿರ್ದೇಶನ ಪಾಲಿಸುವುದು ಸುಲಭವಲ್ಲ’ ಎಂದು ಹೋದ ತಿಂಗಳು ನಡೆದ ಐಒಎ ವಾರ್ಷಿಕ ಸಭೆಯಲ್ಲಿ ನಿರ್ಧರಿಸಲಾಗಿತ್ತು.‘ನಾವು ನಮ್ಮ ನೆಲದ ಕಾನೂನನ್ನು ಉಲ್ಲಂಘಿಸುವುದಿಲ್ಲ. ನಮ್ಮ ಸಂವಿಧಾನದ ಪ್ರಕಾರ ನಿಯಮಾವಳಿಗಳನ್ನು ರೂಪಿಸುತ್ತೇವೆ. ಹಿಂದೆಯೂ ಈ ವಿಷಯವನ್ನು ಐಒಸಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಐಒಎ ‘ಅಧ್ಯಕ್ಷ’ ಅಭಯ್‌ ಸಿಂಗ್‌ ಚೌಟಾಲಾ ಪುನರುಚ್ಚರಿಸಿದ್ದಾರೆ.‘ಐಒಸಿಯಿಂದ ನಮಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ಐಒಸಿಯನ್ನು ಸಂಪರ್ಕಿಸುತ್ತೇವೆ. ನಮ್ಮ ನಿರ್ಧಾರವನ್ನು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ ಒಪ್ಪಿಕೊಳ್ಳಬೇಕು. ಐಒಸಿ ತೀರ್ಮಾನ ಭಾರತದ ಕ್ರೀಡಾಪಟುಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ವಿಜಯ್‌ ಕುಮಾರ್ ಮಲ್ಹೋತ್ರಾ ಹೇಳಿದ್ದಾರೆ.ಐಒಸಿ ನಿರ್ಧಾರಕ್ಕೆ ಎಚ್‌ಒಎ ಬೆಂಬಲ

ಚಂಡೀಗಡ (ಪಿಟಿಐ):  ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಐಒಎ  ‘ಪರ್ಯಾಯ ಹಾದಿ’ಯನ್ನು ತಳ್ಳಿ ಹಾಕಿರುವುದನ್ನು ಹರಿಯಾಣ ಒಲಿಂಪಿಕ್ಸ್‌ ಸಂಸ್ಥೆ (ಎಚ್‌ಒಎ) ಸ್ವಾಗತಿಸಿದೆ.‘ಉತ್ತಮ ಆಡಳಿತಗಾರರು ಹಾಗೂ ಪ್ರಮಾಣಿಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾದ ಆರೋಪ ಹೊತ್ತವರು, ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾದವರು ಮಾತ್ರ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.  ಇದರಿಂದ ಕ್ರೀಡಾ ಆಡಳಿತವನ್ನು ಶುದ್ದಗೊಳಿಸಲು ಸಾಧ್ಯವಾಗುತ್ತಿಲ್ಲ. ಆದರೀಗ, ಐಒಸಿ ನಿರ್ಧಾರ ಸೂಕ್ತವಾಗಿದೆ’ ಎಂದು ಎಚ್‌ಒಎ ತಿಳಿಸಿದೆ.‘ಐಒಸಿ ನಿರ್ಧಾರ ಸ್ವಾಗತಾರ್ಹ. ಇದರಿಂದ ಭಾರತದ ಕ್ರೀಡಾಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ. ಐಒಸಿಗೆ ಧನ್ಯವಾದ’ ಎಂದೂ ಅವರು ಹೇಳಿದ್ದಾರೆ.ಐಒಸಿ ನಿರ್ಧಾರ ಐಒಎ ಒಪ್ಪಿಕೊಳ್ಳಬೇಕು: ಸುಶೀಲ್‌

ನವದೆಹಲಿ (ಐಎಎನ್‌ಎಸ್‌): ಐಒಸಿ ಹೇಳಿದ ಮಾತನ್ನು ಐಒಎ ಕೇಳಬೇಕು. ಐಒಸಿ ವಿಧಿಸಿದ ಷರತ್ತನ್ನು ಒಪ್ಪಿಕೊಳ್ಳಬೇಕು ಎಂದು ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಪದಕ ಜಯಿಸಿರುವ ಸುಶೀಲ್‌ ಕುಮಾರ್‌ ಹೇಳಿದ್ದಾರೆ.‘ವಿಶ್ವದ ಬೇರೆ ಬೇರೆ ದೇಶಗಳು ಐಒಸಿ ನಿಯಮಗಳನ್ನು ಒಪ್ಪಿಕೊಂಡಿವೆ. ಆದರೆ, ಐಒಎ ಮಾತ್ರ ತನ್ನ ಹಠಮಾರಿತನವನ್ನು ಮುಂದುವರಿಸುತ್ತಲೇ ಬಂದಿದೆ. ಐಒಎ ಅಮಾನತಿನಲ್ಲಿರುವ ಕಾರಣ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ದೇಶದ ಧ್ವಜದ ಅಡಿ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದೆ. ಒಬ್ಬ ಕ್ರೀಡಾಪಟುವಿಗೆ ಇದಕ್ಕಿಂತ ಬೇಸರದ ಸಂಗತಿ ಇನ್ನೇನಿದೆ’ ಎಂದು 2008ರ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸುಶೀಲ್ ಪ್ರಶ್ನಿಸಿದ್ದಾರೆ.

ಐಒಸಿ ನಿಯಮಾವಳಿಗಳನ್ನು ಐಒಎ ಅಳವಡಿಸಿ­ಕೊಳ್ಳಬೇಕು. ಇದರಿಂದ ಭ್ರಷ್ಟಾಚಾರ ತೊಡೆದು ಹಾಕಿ, ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗುತ್ತದೆ

–ಜಿತೇಂದರ್‌ ಸಿಂಗ್‌, ಕೇಂದ್ರ ಕ್ರೀಡಾ ಸಚಿವಐಒಸಿ ಸೂಚಿಸಿರುವುಂತೆ ಐಒಎ ನಡೆದುಕೊಳ್ಳಬೇಕು. ಸ್ವಚ್ವ ಆಡಳಿತ ನೀಡಲು ನಿಯಮಾವಳಿಗಳಲ್ಲಿ ರಾಜೀ ಸಲ್ಲದು.

ಮಹೇಶ್‌ ಭೂಪತಿ, ಟೆನಿಸ್‌ ಆಟಗಾರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry