ಬುಧವಾರ, ನವೆಂಬರ್ 13, 2019
28 °C
ಮೇ 7ರಂದು ಲೂಸಾನ್‌ನಲ್ಲಿ ಜಂಟಿ ಸಭೆ ನಡೆಸಲು ನಿರ್ಧಾರ

ಐಒಸಿಯಿಂದ ಐಒಎಗೆ ಆಹ್ವಾನ

Published:
Updated:

ನವದೆಹಲಿ (ಪಿಟಿಐ): ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯ ಮೇಲಿರುವ ನಿರ್ಬಂಧವನ್ನು ರದ್ದುಪಡಿಸಲು ಅಗತ್ಯವಾದ ಕ್ರಮಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮತ್ತೊಮ್ಮೆ ಆಹ್ವಾನ ನೀಡಿದೆ. ಲೂಸಾನ್‌ನಲ್ಲಿ ಮೇ ಏಳರಂದು ಜಂಟಿ ಸಭೆಗೆ ಹಾಜರಾಗುವಂತೆ ಐಒಎ ಮತ್ತು ಕೇಂದ್ರ ಕ್ರೀಡಾ ಸಚಿವಾಲಯದ ಪ್ರತಿನಿಧಿಗಳನ್ನು ಆಹ್ವಾನಿಸಿದೆ.ಐಒಎ ಮತ್ತು ಕ್ರೀಡಾ ಸಚಿವಾಲಯ ದ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದ ಕಾರಣ ಏಪ್ರಿಲ್ 15 ಮತ್ತು 16ರಂದು ನಿಗದಿಯಾಗಿದ್ದ ಜಂಟಿ ಸಭೆಯನ್ನು ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ, ನಿರ್ಬಂಧವನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಸೂಚಿಸಿ ಎಂದು ಐಒಎ ಹಂಗಾಮಿ ಮುಖ್ಯಸ್ಥ ವಿ.ಕೆ. ಮಲ್ಹೋತ್ರಾ ಐಒಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.ಮಲ್ಹೋತ್ರಾ ಅವರ ಪತ್ರಕ್ಕೆ ಪ್ರತಿಕ್ರಿಯಿಸಿ ಮರುಪತ್ರ ಬರೆದಿರುವ ಐಒಸಿ ಅಧಿಕಾರಿ ಪೆರೆ ಮಿರೋ, `ಐಒಎ ಮೇಲಿನ ಅಮಾನತು ರದ್ದಾಗಲು ಅನುಸರಿಸಬೇಕಾದ ಕ್ರಮಗಳಿಗೆ ಮಾರ್ಗದರ್ಶನ ಕೋರಿ ನೀವು ಪತ್ರ ಬರೆದಿರುವುದು ನಮಗೆ ಅಚ್ಚರಿಯಾಗಿದೆ. ಮುಂದಿನ ಮಾರ್ಗೋಪಾಯಗಳ ಬಗ್ಗೆ ಎಲ್ಲರೂ ಜೊತೆಯಾಗಿ ಚರ್ಚಿಸುವುದೊಂದೇ ದಾರಿ ಎಂದು ಜನವರಿಯಲ್ಲೇ ನಾವು ನಿಮಗೆ ಸ್ಪಷ್ಟಪಡಿಸಿದ್ದೇವೆ' ಎಂದು ಹೇಳಿದ್ದಾರೆ.`ಲೂಸಾನ್‌ನಲ್ಲಿ ಜಂಟಿ ಸಭೆಗೆ ದಿನಾಂಕವೊಂದನ್ನು ಸೂಚಿಸಿ ಈ ಮೊದಲೇ ನಿಮಗೆ ಆಹ್ವಾನ ನೀಡಿದ್ದೆವು. ಆದರೆ, ಅದಕ್ಕೆ ನೀವು ಉತ್ತರಿಸಲಿಲ್ಲ. ಹೀಗಾಗಿ ಮೇ 7ರಂದು ಲೂಸಾನ್‌ನಲ್ಲಿ ಸಭೆ ಕರೆಯುತ್ತಿದ್ದೇವೆ. ಸಭೆಯಲ್ಲಿ ಭಾಗವಹಿಸುವ ಬಗ್ಗೆ ಏಪ್ರಿಲ್ 16ರ ಮೊದಲು ದೃಢಪಡಿಸಿ' ಎಂದು ಪೆರೆ ತಮ್ಮ ಪತ್ರದಲ್ಲಿ ಬರೆದಿದ್ದಾರೆ.ಕ್ರೀಡಾ ಸಚಿವಾಲಯಕ್ಕೂ ಐಒಸಿ ಅಧಿಕಾರಿಗಳು ಪ್ರತ್ಯೇಕ ಪತ್ರ ಬರೆದಿದ್ದು, ಸಭೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಮತ್ತು ಅವರ ಹುದ್ದೆಯ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ, ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಸಭೆಗೆ ಪ್ರತ್ಯೇಕ ಆಹ್ವಾನ ಕಳುಹಿಸುವುದಾಗಿಯೂ ತಿಳಿಸಿದ್ದಾರೆ.ಐಒಸಿ ಪತ್ರದಿಂದ ಅಚ್ಚರಿ: ಕ್ರೀಡಾ ಸಚಿವಾಲಯಕ್ಕೆ ಐಒಸಿ ಪ್ರತ್ಯೇಕ ಪತ್ರ ಬರೆದಿರುವುದರಿಂದ ಐಒಎ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಈ ಹಿಂದೆ ಯಾವತ್ತೂ ಐಒಸಿ ಅಧಿಕಾರಿಗಳು ಸರಕಾರವನ್ನು ನೇರವಾಗಿ ಸಂಪರ್ಕಿಸಿರಲಿಲ್ಲ. ಅವರು ಅಮಾನತಾದ ಭಾರತೀಯ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿ.ಕೆ ಮಲ್ಹೋತ್ರಾ ಮತ್ತು ಭಾರತಕ್ಕೆ ಐಒಸಿ ಸದಸ್ಯ ರಣ್‌ಧೀರ್ ಸಿಂಗ್ ಜೊತೆಗೆ ಮಾತ್ರ ಮಾತುಕತೆ ನಡೆಸಿದ್ದರು.ಈಗ ಕ್ರೀಡಾ ಸಚಿವಾಲಯಕ್ಕೆ ಪ್ರತ್ಯೇಕ ಪತ್ರ ಬರೆಯುವ ಮೂಲಕ ತನ್ನದೇ ನಿಯಮದ ವಿರುದ್ಧ ಐಒಸಿ ನಡೆದುಕೊಂಡಿದೆ ಎಂಬುದು ಅಧಿಕಾರಿಯೊಬ್ಬರ ಆರೋಪ. `ಭಾರತೀಯ ಒಲಿಂಪಿಕ್ ಸಂಸ್ಥೆಯನ್ನು ಐಒಸಿಯೇ ಅಮಾನತಿನಲ್ಲಿಟ್ಟಿದೆ. ಅಲ್ಲದೇ ಐಒಎನಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲೇಬಾರದು ಎಂದೂ ಹೇಳಿದೆ. ಹೀಗಿರುವಾಗ ಐಒಸಿ ಸರ್ಕಾರವನ್ನು ನೇರವಾಗಿ ಸಂಪರ್ಕಿಸುವುದು ಎಷ್ಟು ಸರಿ?' ಎಂದು ಅವರು ಪ್ರಶ್ನಿಸಿದ್ದಾರೆ.

 

ಪ್ರತಿಕ್ರಿಯಿಸಿ (+)