ಐಟಂ ಹಾಡು ಅಮ್ಮನ ಪಾಡು

7

ಐಟಂ ಹಾಡು ಅಮ್ಮನ ಪಾಡು

Published:
Updated:
ಐಟಂ ಹಾಡು ಅಮ್ಮನ ಪಾಡು

ಗಾಲ್ಫ್ ಕ್ಲಬ್‌ನಲ್ಲಿ ಅಭ್ಯಾಸನಿರತ ಜ್ಯೋತಿ ರಾಂಧವ. ಅವರ ಮಗ ಜೋರಾವರ್‌ಗೂ ಅಪ್ಪನ ಆಟ ನೋಡುವುದೆಂದರೆ ಖುಷಿ. ದೂರದಲ್ಲಿ ಕುಳಿತ ಅಮ್ಮ ಚಿತ್ರಾಂಗದಾ ಸಿಂಗ್ ಹೊಸ ಚಿತ್ರದ ಚರ್ಚೆಯನ್ನು ಫೋನ್‌ನಲ್ಲಿ ನಡೆಸಿದ್ದಾರೆ.

 

ಅಭ್ಯಾಸ ಮುಗಿದ ಮೇಲೆ ದಣಿವಾರಿಸಿಕೊಳ್ಳಲು ಅಪ್ಪ ಬಂದರೂ ಅಮ್ಮನ ಮಾತು ಮುಗಿದಿಲ್ಲ. ಜೋರಾವರ್, `ಅಮ್ಮ ತುಂಬಾ ಬಿಜಿ, ಪಾಪ~ ಎನ್ನುತ್ತಾ ಅಪ್ಪನ ಮುಖದ ಮೇಲಿನ ಬೆವರನ್ನು ಒರೆಸಿ, ತೊಡೆಮೇಲೆ ಕೂತ. ಚಿತ್ರಾಂಗದಾ ಮಾತು ಮುಂದುವರಿದೇ ಇತ್ತು.ಬಾಲಿವುಡ್‌ನಲ್ಲಿ ಅಮ್ಮನಾದ ಮೇಲೆ ಐಟಂ ಡ್ಯಾನ್ಸ್ ಮಾಡುವವರು ವಿರಳ. ಚಿತ್ರಾಂಗದಾ ಮೊನ್ನೆಮೊನ್ನೆ ಸುದ್ದಿಯಲ್ಲಿದ್ದದ್ದು ಅದೇ ಕಾರಣಕ್ಕೆ. `ಜೋಕರ್~ ಚಿತ್ರದಲ್ಲಿ ಅವರು ಐಟಂ ಹಾಡಿಗೆ ಕುಣಿದದ್ದನ್ನು ಕಂಡ ಕೆಲವರು, `ಉಡುಗೆಯೆಲ್ಲಾ ಮಾಧುರಿ ದೀಕ್ಷಿತ್ ಸ್ಟೈಲ್‌ನಲ್ಲಿದೆ~ ಎಂದು ಕಾಮೆಂಟ್ ಮಾಡಿದ್ದರು. ಪ್ರತೀಕ್ ಬಬ್ಬರ್ ಈ ನಟಿಯ ಮುಖ ನೋಡಿದರೆ ತಮ್ಮ ತಾಯಿಯ ನೆನಪಾಗುತ್ತದೆ ಎಂದಿದ್ದರು. ಅಂದಹಾಗೆ, ಅವರ ತಾಯಿ ಸ್ಮಿತಾ ಪಾಟೀಲ್.`ನನ್ನ ಚಹರೆಯಲ್ಲಿ ಸ್ಮಿತಾ ಪಾಟೀಲ್ ಲಕ್ಷಣವಿದೆ ಎಂದು ಖುದ್ದು ಪ್ರತೀಕ್ ಹೇಳಿರುವುದನ್ನು ಕೇಳಿ ಸಂತೋಷವೂ ಅಚ್ಚರಿಯೂ ಆಯಿತು. ಕನ್ನಡಿ ಮುಂದೆ ನಿಂತು ಪದೇಪದೇ ಮುಖ ನೋಡಿಕೊಂಡೆ. ಸ್ಮಿತಾ ಅವರ ಹಳೆಯ ಫೋಟೊಗಳ ಜೊತೆ ಹೋಲಿಸಿಕೊಂಡೆ.ಆಪ್ತೇಷ್ಟರನ್ನೂ ನನಗೂ ಅವರಿಗೂ ಹೋಲಿಕೆ ಇದೆಯಾ ಎಂದು ಕೇಳಿದೆ. ಅನೇಕರು ನಿಜ ಎಂದರು. ಅಂಥ ಸುಂದರಿಯನ್ನು ನಾನು ಹೋಲುತ್ತೇನೆ ಎಂಬ ಮಾತು ನನ್ನ ಬದುಕಿನಲ್ಲಿ ಸಿಕ್ಕ ದೊಡ್ಡ ಹೊಗಳಿಕೆ~ ಎನ್ನುವ ಚಿತ್ರಾಂಗದಾ ಸುಲಭಕ್ಕೆ ಮಾತಿನಲ್ಲಿ ತೊಡಗುವವರಲ್ಲ.

ಅವರು ಸುದ್ದಿಗೋಷ್ಠಿಯಲ್ಲೇ ಚಟಾಕಿಗಳನ್ನು ಹಾರಿಸಿದ ಉದಾಹರಣೆಗಳಿವೆ.

 

`ನಿಮ್ಮ ಮಗನ ವಯಸ್ಸೆಷ್ಟು~ ಎಂದು ಯಾರೋ ಕೇಳಿದಾಗ, ಯೋಚನೆ ಮಾಡುತ್ತಾ, `ಮೂರು ನಾಲ್ಕು ಐದು...~ ಎಂದೆಲ್ಲಾ ಹೇಳಿದ್ದರು. ಮರುಕ್ಷಣವೇ, `ನನ್ನ ಮಗನ ವಯಸ್ಸನ್ನು ಕೇಳುವ ಮೂಲಕ ನನ್ನ ವಯಸ್ಸೆಷ್ಟಾಗಿದೆ ಎಂದು ಪತ್ತೆ ಮಾಡುವ ತಂತ್ರ ನಿಮ್ಮದಲ್ಲವೋ~ ಎಂದು ಅವರೇ ಮರುಪ್ರಶ್ನೆ ಹಾಕಿದ್ದರು.ಧವಳಕೇಶಿ ನಿರ್ದೇಶಕ ಸುಧೀರ್ ಮಿಶ್ರ ಜೊತೆಗೆ ಚಿತ್ರಾಂಗದಾ ಸಂಬಂಧವಿರಿಸಿಕೊಂಡಿದ್ದಾರೆ ಎಂಬ `ಗಾಸಿಪ್~ ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಯಿತು. ಅದನ್ನು ಪತಿಸಮೇತರಾಗಿ ಓದಿ ನಕ್ಕಿದ್ದ ಅವರು, ಮಗ ಅದೇನು ಸುದ್ದಿ ಎಂದು ಕೇಳಿದಾಗ ಮಾತ್ರ ಪೆಚ್ಚಾಗಿದ್ದರು.`ನಟಿಯರು ಯಾರದ್ದಾದರೂ ಜೊತೆ ರೆಸ್ಟೋರೆಂಟ್‌ನಲ್ಲಿ ಕೂತು ಕಾಫಿ ಕುಡಿಯುವುದೂ ಕಷ್ಟವಾಗಿದೆ. ಇಬ್ಬರು ಮಾತನಾಡುತ್ತಾ ನಕ್ಕರೆ ಅದಕ್ಕೊಂದು ಅರ್ಥ ಕಲ್ಪಿಸುತ್ತಾರೆ. ರಾತ್ರಿ ಕಾರಿನಲ್ಲಿ ಡ್ರಾಪ್ ಕೊಟ್ಟರಂತೂ ಮುಗಿದೇಹೋಯಿತು. ಒಂದೇ ಚಿತ್ರದಲ್ಲಿ ಕೆಲಸ ಮಾಡುವವರ ನಡುವೆ ಇಂಥ ಸಂಬಂಧಗಳಿಗೆ ವೃತ್ತಿಪರ ಚೌಕಟ್ಟು ಇರುತ್ತದೆ ಎಂಬುದು ಯಾಕೋ ನಮ್ಮ ಜನರಿಗೆ ಅರ್ಥವಾಗುವುದೇ ಇಲ್ಲವಲ್ಲ~ ಎಂಬುದು ಅವರ ಬೇಸರ.ಸುಧೀರ್ ಮಿಶ್ರ ಐತಿಹಾಸಿಕ ಚಿತ್ರ ಮಾಡಲು ಹೊರಟಿದ್ದು, ಅದರಲ್ಲಿ ಮೆಹರುನ್ನೀಸಾ ಪಾತ್ರಕ್ಕೆ ಚಿತ್ರಾಂಗದಾ ಆಯ್ಕೆಯಾಗಿರುವ ಸುದ್ದಿ ಇದೆ. ಅಮಿತಾಬ್ ಬಚ್ಚನ್ ಹಾಗೂ ರಿಷಿ ಕಪೂರ್ ಸಹ ಆ ಚಿತ್ರದಲ್ಲಿ ನಟಿಸಲಿದ್ದಾರೆ.

 

ಚಿತ್ರಾಂಗದಾ ಪ್ರಕಾರ ರಿಷಿ ಕಪೂರ್ ಅದ್ಭುತ ನಟ. `ಅವರ ತಣ್ಣಗಿನ ಅಭಿನಯ ನನಗಿಷ್ಟ. ಮೊದಲಿಂದ ಅವರ ಪ್ರತಿಭೆಗೆ ತಕ್ಕ ಮನ್ನಣೆ ಚಿತ್ರೋದ್ಯಮದಲ್ಲಿ ಅವರಿಗೆ ಸಿಕ್ಕಿಲ್ಲ ಎನ್ನಿಸುತ್ತದೆ. ಅಮಿತಾಬ್ ನಟರಾಗಿ ನನಗೆ ಎಷ್ಟು ಮುಖ್ಯ ಎನ್ನಿಸುತ್ತದೋ, ರಿಷಿ ಕಪೂರ್ ಕೂಡ ಅಷ್ಟೇ ಮುಖ್ಯ~ ಎಂಬುದು ಚಿತ್ರಾಂಗದಾ ಅಭಿಪ್ರಾಯ.`ಹಜಾರೋಂ ಖ್ವಾಯಿಷ್ ಐಸಿ~, `ಯೇ ಸಾಲಿ ಜಿಂದಗಿ~ಯಂಥ ಆಫ್‌ಬೀಟ್ ಚಿತ್ರಗಳಲ್ಲಿ ಅಭಿನಯಿಸಿದ ಚಿತ್ರಾಂಗದಾ `ದೇಸಿ ಬಾಯ್ಸ~ನಲ್ಲಿ ಸಣ್ಣ ಪಾತ್ರವನ್ನು ಒಪ್ಪಿಕೊಂಡರು. `ಜೋಕರ್~ನಲ್ಲಿ ಐಟಂಗೀತೆಗೆ ಅವರು ಹೆಜ್ಜೆ ಹಾಕಿದಾಗ ಅನೇಕರು ಹುಬ್ಬೇರಿಸಿದರು. ಆ ನೃತ್ಯ ನೋಡಿದ ಎಷ್ಟೋ ಮಂದಿಗೆ ಚಿತ್ರಾಂಗದ ಒಂದು ಮಗುವಿನ ತಾಯಿ ಎಂಬುದೇ ಗೊತ್ತಾಗಲಿಲ್ಲ.`ಸಿನಿಮಾ ಬೇರೆ, ಬದುಕೇ ಬೇರೆ~ ಎನ್ನುವ ಚಿತ್ರಾಂಗದಾ, ಬದುಕಿನ ಯಾವ ಸಂಗತಿಯನ್ನೂ ಗುಟ್ಟಾಗಿಡಲು ಬಯಸುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry