ಐಟಿಎಫ್ ಟೆನಿಸ್: ಎಂಟರ ಘಟ್ಟಕ್ಕೆ ವಿಷ್ಣು

7

ಐಟಿಎಫ್ ಟೆನಿಸ್: ಎಂಟರ ಘಟ್ಟಕ್ಕೆ ವಿಷ್ಣು

Published:
Updated:
ಐಟಿಎಫ್ ಟೆನಿಸ್: ಎಂಟರ ಘಟ್ಟಕ್ಕೆ ವಿಷ್ಣು

ಮೈಸೂರು: ಅಗ್ರಶ್ರೇಯಾಂಕದ ತೈಪೆ ದೇಶದ ಟಿ. ಚೆನ್ ಮತ್ತು ಭಾರತದ ದ್ವಿತೀಯ ಶ್ರೇಯಾಂಕದ ಆಟಗಾರ ವಿಷ್ಣುವರ್ಧನ್ ಇಲ್ಲಿ ನಡೆಯುತ್ತಿರುವ ಜುವಾರಿ ಗಾರ್ಡನ್ ಸಿಟಿ ಐಟಿಎಫ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರೆ, ಕರಣ್ ರಸ್ತೋಗಿ ಆಘಾತ ಅನುಭವಿಸಿದರು.

ಮೈಸೂರು ಟೆನಿಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ ಎರಡನೇ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಟಿ ಚೆನ್ 6-1, 6-3ರಿಂದ ಆಸ್ಟ್ರೇಲಿಯಾದ ಗಾವಿನ್ ವ್ಯಾನ್ ಪೆಪರ್‌ಜೀಲ್ ವಿರುದ್ಧ ಜಯಿಸಿದರು. ಆದರೆ 75 ನಿಮಿಷ ನಡೆದ ಪಂದ್ಯದಲ್ಲಿ ತೈಪೆ ಆಟಗಾರ ಮಾತ್ರ ಶಾಂತಚಿತ್ತದಿಂದ ಆಡಿ ಗೆಲುವಿನ ದಡ ಸೇರಿದರು.

ವಿಷ್ಣು ಮಿಂಚು: ಡೆವಿಸ್ ಕಪ್ ಆಟಗಾರ ವಿಷ್ಣುವರ್ಧನ್ 7-5, 6-2ರಿಂದ ಭಾರತದ ಅಭಿಜಿತ್ ತಿವಾರಿ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಮೊದಲ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಒಡ್ಡಿದ ತಿವಾರಿ ಕೆಲವು ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸಿದರು. ಆದರೆ ತಾಳ್ಮೆಯಿಂದ ಆಡಿದ ವಿಷ್ಣು ತಿರುಗೇಟು ನೀಡಿದರು. ಎರಡನೇ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ವಿಷ್ಣುವರ್ಧನ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡರು.

ರಸ್ತೋಗಿಗೆ ಆಘಾತ: ಮಧ್ಯಾಹ್ನ ನಡೆದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ ಕರಣ್ ರಸ್ತೋಗಿ ಸೋಲನುಭವಿಸಿದರು. ಭಾರತದ ಶ್ರೇಯಾಂಕರಹಿತ ಆಟಗಾರ ಸಿದ್ಧಾರ್ಥ ರಾವತ್ 0-6, 6-2, 6-3ರಿಂದ ಕರಣ್ ರಸ್ತೋಗಿಯನ್ನು ಸೋಲಿಸಿದರು.

ಎರಡೂ ಸೆಟ್‌ಗಳಲ್ಲಿ ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿದ ರಸ್ತೋಗಿಯವರಿಗೆ ದಿಟ್ಟ ಉತ್ತರ ನೀಡಿದ ರಾವತ್ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.

ಮಂಡ್ಯದ ಟೂರ್ನಿಯ ಪ್ರಶಸ್ತಿ ವಿಜೇತ ಭಾರತದ ಸಾಕೇತ್ ಮೈನೆನಿ 7-6(2), 6-4ರಿಂದ ಭಾರತದ ಅಜಯ್ ಸೆಲ್ವರಾಜ್ ವಿರುದ್ಧ ಗೆದ್ದರು.

ಎರಡನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಭಾರತದ ಜೀವನ್ ನೆಡುಂಚೆಳಿಯನ್ 6-4, 6-3ರಿಂದ ಆಸ್ಟ್ರೇಲಿಯಾದ ಜ್ಯಾಕ್ ಜೆಸ್ಟಿನ್ ವಿರುದ್ಧ; ಥಾಯ್ಲೆಂಡ್‌ನ ಕಿಟ್ಟಿಪಾಂಗ್ ವಾಚಿರ್‌ಮನೋವಾಂಗ್ 6-1, 6-0ಯಿಂದ  ಭಾರತದ ನೀರಜ್ ಇಳಂಗೋವನ್ ವಿರುದ್ಧ; ಏಳನೇ ಶ್ರೇಯಾಂಕದ ಎನ್. ಶ್ರೀರಾಮ ಬಾಲಾಜಿ 6-3, 6-4ರಿಂದ  ಚೀನಾದ ಬೊವೆನ್ ಓಯುಂಗ್ ವಿರುದ್ಧ; ಭಾರತದ ವೈಜಯಂತ್ ಮಲಿಕ್ 6-0, 6-1ರಿಂದ ಬೆಂಗಳೂರಿನ ಹುಡುಗ ವಿನೋದಗೌಡ ವಿರುದ್ಧ ಗೆದ್ದರು.

ಸೆಮಿಫೈನಲ್‌ಗೆ ನೀರಜ್-ಫರೀದ್: ಡಬಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಭಾರತದ ನೀರಜ್ ಇಳಂಗೋವನ್ ಮತ್ತು ಫರೀದ್ ಮೊಹ್ಮದ್ 7-6(2), 5-7, 10-1ರಿಂದ ಭಾರತದ ಖಾಜಾ ವಿನಾಯಕ್ ಶರ್ಮಾ ಮತ್ತು ಅಭಿಜಿತ್ ತಿವಾರಿ ವಿರುದ್ಧ; ಭಾರತದ ಎನ್. ಶ್ರೀರಾಮ ಬಾಲಾಜಿ ಮತ್ತು ಅರುಣ್‌ಪ್ರಕಾಶ್ ರಾಜಗೋಪಾಲನ್ 6-2, 6-2ರಿಂದ ಶಾಭಾಜ್ ಖಾನ್ ಮತ್ತು ಸುಮಿತ್ ಶಿಂಧೆ ವಿರುದ್ಧ; ಭಾರತದ ಕುನಾಲ್ ಆನಂದ್ ಮತ್ತು ಅಜಯ್ ಸೆಲ್ವರಾಜ್ 6-3, 6-4ರಿಂದ ಭಾರತದ ಜತಿನ್ ದಹಿಯಾ ಮತ್ತು ಯೋಗೇಶ್ ಪೊಗಟ್ ವಿರುದ್ಧ; ವೆಂಕಟ್ ಅಯ್ಯರ್ ಮತ್ತುಚೀನಾದ ಬೋವೆನ್ ಯುಂಗ್ 1-6, 6-3, 10-6ರಿಂದ  ಆಸ್ಟ್ರೇಲಿಯಾದ ಸ್ಕಾಟ್ ಪುಡ್ಜಿನಿಯಸ್ ಮತ್ತು ಗಾವಿನ್ ವ್ಯಾನ್ ಪೆಪರ್‌ಜೀಲ್ ವಿರುದ್ಧ ಜಯಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry