ಐಟಿಎಫ್ ಟೆನಿಸ್: ಪ್ರಧಾನ ಹಂತಕ್ಕೆ ಸೂರಜ್, ವಿಕ್ರಮ್ ನಾಯ್ಡು

7
ಅರ್ಹತಾ ಸುತ್ತಿನಲ್ಲಿಯೇ ನಿರಾಸೆ ಕಂಡ ಕುನಾಲ್ ಆನಂದ್

ಐಟಿಎಫ್ ಟೆನಿಸ್: ಪ್ರಧಾನ ಹಂತಕ್ಕೆ ಸೂರಜ್, ವಿಕ್ರಮ್ ನಾಯ್ಡು

Published:
Updated:

ದಾವಣಗೆರೆ: ನಿಖರವಾದ ಹೊಡೆತಗಳ ಮೂಲಕ ಆಕರ್ಷಕ ಆಟ ಪ್ರದರ್ಶಿಸಿದ ಕರ್ನಾಟಕದ ಯುವ ಆಟಗಾರರಾದ ಸೂರಜ್ ಆರ್. ಪ್ರಬೋಧ್ ಹಾಗೂ ವಿಕ್ರಮ್ ನಾಯ್ಡು ಅವರು ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಹಂತಕ್ಕೆ ಪ್ರವೇಶಿಸಿದ್ದಾರೆ.

ಸರ್ಕಾರಿ ಹೈಸ್ಕೂಲ್‌ನ ಟೆನಿಸ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಅರ್ಹತಾ ಹಂತದ ಕೊನೆಯ ಸುತ್ತಿನ ಪಂದ್ಯಗಳಲ್ಲಿ ಈ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಮೈಸೂರಿನ ಸೂರಜ್ 7-6, 6-4ರಲ್ಲಿ ಕುನಾಲ್ ಆನಂದ್ ಅವರನ್ನು ಮಣಿಸಿದರೆ, ವಿಕ್ರಮ್ 6-3, 6-3ರ ನೇರ ಸೆಟ್‌ಗಳಿಂದ ಚಿನ್ಮಯ್ ಪ್ರಧಾನ್ ಎದುರು ಗೆಲುವು ಪಡೆದು ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟರು.

ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ, ದಾವಣಗೆರೆ ಜಿಲ್ಲಾ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸೋಮವಾರ ಪ್ರಧಾನ ಹಂತದ ಪಂದ್ಯಗಳು ಆರಂಭವಾಗಲಿವೆ. ಇಲ್ಲಿ  ಅಗ್ರಶ್ರೇಯಾಂಕ ಪಡೆದಿರುವ ಶ್ರೀರಾಮ ಬಾಲಾಜಿ, ರಾಷ್ಟ್ರೀಯ ಚಾಂಪಿಯನ್ ಜೀವನ್ ನೆಡಂಚುಳಿಯನ್, ಡೇವಿಸ್ ಕಪ್‌ನಲ್ಲಿ ಆಡಿದ ಅನುಭವ ಹೊಂದಿರುವ ಸನಮ್ ಸಿಂಗ್, `ವೈಲ್ಡ್ ಕಾರ್ಡ್' ಪ್ರವೇಶ ಪಡೆದಿರುವ ಸ್ಥಳೀಯ ಪ್ರತಿಭೆ ಸಾಗರ್ ಮಂಜಣ್ಣ ಹಾಗೂ ಅಲೋಕ್ ಆರಾಧ್ಯ ಈ ಟೂರ್ನಿಯ ನೆಚ್ಚಿನ ಆಟಗಾರರು ಎನಿಸಿಕೊಂಡಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಸೂರಜ್ ಅವರು ಚಂದ್ರಿಲ್ ಸೂದ್ ಮೇಲೂ, ಬೆಂಗಳೂರಿನ ವಿಕ್ರಮ್ ಅವರು ವಿನಾಯಕ್ ಖಾಜಾ ಶರ್ಮಾ ವಿರುದ್ಧವೂ ಪೈಪೋಟಿ ನಡೆಸಲಿದ್ದಾರೆ.

ಇನ್ನೊಂದು ಅರ್ಹತಾ ಹಂತದ ಪಂದ್ಯದಲ್ಲಿ ಹೈದರಾಬಾದ್‌ನ ಶಶಿಕುಮಾರ್ ಮುಕುಂದ್ ಜಯ ಸಾಧಿಸಿದರು. ಮುಕುಂದ್ ಮೊದಲ ಸೆಟ್‌ನಲ್ಲಿ 6-0ರಲ್ಲಿ ಫರೀಜ್ ಮಹಮದ್ ವಿರುದ್ಧದ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದರು.

ಎರಡನೇ ಸೆಟ್‌ನಲ್ಲಿ 1-0ರಲ್ಲಿ ಮುಕುಂದ್ ಮುನ್ನಡೆ ಸಾಧಿಸಿದ್ದ ವೇಳೆ ಫರೀಜ್ ಅಸ್ವಸ್ಥತೆಯಿಂದ ಬಳಲಿ ಪಂದ್ಯದಿಂದ ಹಿಂದೆ ಸರಿದರು. ಇದರಿಂದ ಮುಕುಂದ್ ಪ್ರವೇಶದ ಹಾದಿ ಸುಗಮವಾಯಿತು.

ಅರ್ಹತಾ ಹಂತದ ಇತರ ಪಂದ್ಯಗಳಲ್ಲಿ ಜರ್ಮನಿಯ ಟಾರ್ಸ್ಟನ್ ವಿಟೋಸ್ಕಾ 6-1, 6-1ರಲ್ಲಿ ಭಾರತದ ಪೂರ್ವಾ ಎಸ್. ಕುಮಾರ್ ಮೇಲೂ, ನೀರಜ್ ಇಳಂಗೋವನ್ 3-6, 7-6, 6-2ರಲ್ಲಿ ಶಹಬಾಜ್ ಖಾನ್ ವಿರುದ್ಧವೂ, ಸೂರಜ್ ಬೆನಿವಾಲ್ 7-6, 6-3ರಲ್ಲಿ ಜತಿನ್ ದಹಿಯಾ ಮೇಲೂ, ಬ್ರಹ್ಮಜಿತ್ ಸಿಂಗ್ 0-6, 6-1, 6-4ರಲ್ಲಿ ರಜತ್ ಮಹೇಶ್ವರಿ ವಿರುದ್ಧವೂ, ರೋನಕ್ ಮನುಜ 6-3, 6-0ರಲ್ಲಿ ಮಹಮದ್ ಅಶ್ರಫ್ ಮೇಲೂ ಜಯ ಪಡೆದು ಪ್ರಧಾನ ಹಂತ ಪ್ರವೇಶಿಸಿದರು.

`ಇಲ್ಲಿ ಗೆಲುವು ಅನಿರೀಕ್ಷಿತವಾಗಿತ್ತು. ಹೊಸ ಅಂಕಣದಲ್ಲಿ ಮೊದಮೊದಲು ಸಮತೋಲನ ಸಾಧಿಸಲು ಕಷ್ಟವಾಯಿತು. ಆರಂಭದಲ್ಲಿ ಕೊಂಚ ಆತಂಕಗೊಂಡಿದ್ದೆ. ಆದ್ದರಿಂದ ಈ ವೇಳೆ ಕೆಲವು ಪಾಯಿಂಟ್ ಕಳೆದುಕೊಳ್ಳಬೇಕಾಯಿತು. ನಂತರ ಚೇತರಿಸಿಕೊಂಡೆ. ಈ ಗೆಲುವು ವಿಶ್ವಾಸ ಹೆಚ್ಚಿಸಿದೆ. ಮುಂದಿನ ಪಂದ್ಯಗಳಲ್ಲಿ ಇದೇ ರೀತಿಯ ಪ್ರದರ್ಶನ ನೀಡುವೆ' ಎಂದು ವಿಟೋಸ್ಕಾ ಹೇಳಿದರು. ಜರ್ಮನಿಯ ಲೀರ್ ನಗರದ ವಿಟೋಸ್ಕಾ ಅವರಿಗೆ ಭಾರತದಲ್ಲಿ ಇದು ಚೊಚ್ಚಲ ಪಂದ್ಯ ಎನ್ನುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry