ಬುಧವಾರ, ಜೂನ್ 23, 2021
28 °C

ಐಟಿಎಫ್ ಟೆನಿಸ್: ಪ್ರೇರಣಾ, ಅಂಕಿತಾ ರೈನಾಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಟಿಎಫ್ ಟೆನಿಸ್: ಪ್ರೇರಣಾ, ಅಂಕಿತಾ ರೈನಾಗೆ ಸೋಲು

ಬೆಂಗಳೂರು: ಭಾರತದ ಸ್ಪರ್ಧಿಗಳು ಇಲ್ಲಿ ಆರಂಭವಾದ ಕ್ಯೂನೆಟ್ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಸೋಮವಾರ ನಡೆದ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಪ್ರೇರಣಾ ಭಾಂಬ್ರಿ, ರಿಷಿಕಾ ಸುಂಕರ, ನಿಧಿ ಚಿಲುಮುಲ ಮತ್ತು ಅಂಕಿತಾ ರೈನಾ ಸೋಲುಂಡರು.ಟೂರ್ನಿಗೆ `ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿದ್ದ ಪ್ರೇರಣಾ 3-6, 2-6 ರಲ್ಲಿ ಬೆಲ್ಜಿಯಂನ ತಮರಿನ್ ಹೆಂಡ್ಲೆರ್ ಎದುರು ಸೋತರು. ಇಲ್ಲಿ ಅಗ್ರಶ್ರೇಯಾಂಕ ಪಡೆದಿರುವ ತಮರಿನ್ ಸುಲಭ ಗೆಲುವು ತಮ್ಮದಾಗಿಸಿಕೊಂಡರು.

ಆರಂಭದಲ್ಲಿ ಎದುರಾಳಿಗೆ ಅಲ್ಪ ಪೈಪೋಟಿ ಒಡ್ಡಿದ ಪ್ರೇರಣಾ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು.

ಅರ್ಹತಾ ಹಂತದಲ್ಲಿ ಗೆದ್ದು ಬಂದಿದ್ದ ರಿಷಿಕಾ 6-1, 3-6, 2-6 ರಲ್ಲಿ ಇಟಲಿಯ ನಿಕೋಲ್ ಕ್ಲೆರಿಕೊ ಎದುರು ಪರಾಭವಗೊಂಡರು. ಮೊದಲ ಸೆಟ್ ಜಯಿಸಿದ್ದ ಭಾರತದ ಆಟಗಾರ್ತಿ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಆದರೆ ಮರುಹೋರಾಟ ನಡೆಸಿದ ನಿಕೋಲ್ ಮುಂದಿನ ಎರಡೂ ಸೆಟ್‌ಗಳನ್ನು ತಮ್ಮದಾಗಿಸಿಕೊಂಡು ಎರಡನೇ ಸುತ್ತಿಗೆ ಮುನ್ನಡೆದರು.ಐದನೇ ಶ್ರೇಯಾಂಕದ ಆಟಗಾರ್ತಿ ಸ್ಲೊವೇಕಿಯದ ತದೆಜಾ ಮಜೆರಿಕ್ 7-6, 6-4 ರಲ್ಲಿ ಅಂಕಿತಾ ಅವರನ್ನು ಮಣಿಸಿದರು.ಆಸ್ಟ್ರಿಯದ ಮೆಲಾನಿ ಕ್ಲಾಫ್ನೆರ್ 6-0, 6-1 ರಲ್ಲಿ ನಿಧಿ ವಿರುದ್ಧ ಸುಲಭ ಜಯ ಪಡೆದರು. ಭಾರತದ ಆಟಗಾರ್ತಿ ಕೇವಲ ಒಂದು ಪಾಯಿಂಟ್ ಗೆಲ್ಲುವಲ್ಲಿ ಮಾತ್ರ ಯಶ ಕಂಡರು. ಮೆಲಾನಿ ವೇಗದ ಸರ್ವ್ ಹಾಗೂ ಆಕರ್ಷಕ ರಿಟರ್ನ್‌ಗಳ ಮೂಲಕ ಮಿಂಚಿದರು.ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಕ್ರೊಯೇಷ್ಯದ ಡೋನಾ ವೆಕಿಕ್ 7-5, 6-4 ರಲ್ಲಿ ಸರ್ಬಿಯದ ತಮಾರ ಕ್ಯುರೋವಿಕ್ ಎದುರೂ, 2ನೇ ಶ್ರೇಯಾಂಕದ ಆಟಗಾರ್ತಿ ಜಪಾನ್‌ನ ಅಕಿಕೊ ಒಮಾಯೆ 7-5, 6-2 ರಲ್ಲಿ ಇಸ್ರೇಲ್‌ನ ಡೆನಿಜ್ ಕಜನಾಯುಕ್ ಮೇಲೂ ಗೆಲುವು ಪಡೆದರು. ಮೆಲಿಸ್ ಸೆಜೆರ್ 6-1, 6-4 ರಲ್ಲಿ ದಲಿಲಾ ಜಕುಪೊವಿಕ್ ವಿರುದ್ಧ ಗೆದ್ದರೆ, ಅಂಜಾ ಪ್ರಿಸ್ಲನ್ 7-5, 6-3 ರಲ್ಲಿ ಸ್ಟೆಫಾನಿ ಸಿಮೋನ್ ಅವರನ್ನು ಸೋಲಿಸಿದರು.ಸ್ಫೂರ್ತಿ, ಶರ್ಮದಾಗೆ ಸೋಲು: ಸ್ಥಳೀಯ ಪ್ರತಿಭೆಗಳಾದ ಸ್ಫೂರ್ತಿ ಶಿವಲಿಂಗಯ್ಯ ಮತ್ತು ಶರ್ಮದಾ ಬಾಲು ಇದೇ ಟೂರ್ನಿಯ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಇಸ್ರೆಲ್‌ನ ಡೆನಿಜ್ ಕಜನಾಯುಕ್ ಮತ್ತು ಚೀನಾದ ಯಾ ಜಾವೊ ಜೋಡಿ 7-5, 6-3 ರಲ್ಲಿ ಸ್ಫೂರ್ತಿ ಹಾಗೂ ಜರ್ಮನಿಯ ಮಿಶೆಲಾ ಫ್ರಾಲಿಕಾ ಎದುರು ಗೆದ್ದರು.ಕೊರಿಯಾದ ಸುಂಗ್ ಹಿ ಹಾನ್ ಮತ್ತು ಇಸ್ರೇಲ್‌ನ ಕರೆನ್ ಶ್ಲೋಮೊ 6-3, 7-6 ರಲ್ಲಿ ಶರ್ಮದಾ ಹಾಗೂ ಟರ್ಕಿಯ ಸೆದಾ ಅರಂತೆಕಿನ್ ಅವರನ್ನು ಮಣಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.