ಐಟಿಐ: ಕೌಶಲ ವೃದ್ಧಿಗಾಗಿ ತಾಂತ್ರಿಕ ವಿನ್ಯಾಸಕ್ಕೆ ನೆರವು

7

ಐಟಿಐ: ಕೌಶಲ ವೃದ್ಧಿಗಾಗಿ ತಾಂತ್ರಿಕ ವಿನ್ಯಾಸಕ್ಕೆ ನೆರವು

Published:
Updated:
ಐಟಿಐ: ಕೌಶಲ ವೃದ್ಧಿಗಾಗಿ ತಾಂತ್ರಿಕ ವಿನ್ಯಾಸಕ್ಕೆ ನೆರವು

ಬೆಂಗಳೂರು:  ರಾಜ್ಯದ 1446 ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 1.60 ಲಕ್ಷ ವಿದ್ಯಾರ್ಥಿಗಳ ಕೌಶಲ ವೃದ್ಧಿಗಾಗಿ ತಾಂತ್ರಿಕ ವಿನ್ಯಾಸಕ್ಕೆ ನೆರವಾಗುವಂತಹ ತಂತ್ರಾಂಶವನ್ನು ಒದಗಿಸುವ ಸಂಬಂಧ ಉದ್ಯೋಗ ಮತ್ತು ತರಬೇತಿ ಇಲಾಖೆಯು ಗುರುವಾರ ಆಟೋಡೆಸ್ಕ್ ಏಷ್ಯಾ ಪ್ರೈ. ಲಿಮಿಟೆಡ್‌ನ ಜತೆ ಒಪ್ಪಂದ ಮಾಡಿಕೊಂಡಿತು.ಖಾಸಗಿ ಹೋಟೆಲೊಂದರಲ್ಲಿ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಸಮ್ಮುಖದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಎನ್. ಶ್ರೀರಾಮನ್ ಹಾಗೂ ಆಟೋಡೆಸ್ಕ್ ಏಷ್ಯಾ ಪ್ರೈ. ಲಿಮಿಟೆಡ್‌ನ ಜಾರ್ಜ್ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪರಸ್ಪರ ಕಡತಗಳನ್ನು ವಿನಿಮಯ ಮಾಡಿಕೊಂಡರು.ಒಪ್ಪಂದದ ಪ್ರಕಾರ, ಆಟೋಡೆಸ್ಕ್ ಕಂಪೆನಿಯು ಸುಮಾರು 45 ಕೋಟಿ ರೂಪಾಯಿ ಮೌಲ್ಯದ ತಂತ್ರಾಂಶವನ್ನು ರಾಜ್ಯದ 158 ಸರ್ಕಾರಿ, 195 ಅನುದಾನಿತ ಹಾಗೂ 1093 ಖಾಸಗಿ ಐಟಿಐಗಳಿಗೆ ಉಚಿತವಾಗಿ ಒದಗಿಸಲಿದೆ. ಈ ತಂತ್ರಾಂಶದ ನೆರವಿನೊಂದಿಗೆ ಐಟಿಐ ವಿದ್ಯಾರ್ಥಿಗಳಿಗೆ ಉತ್ತಮ ಕೌಶಲ ತರಬೇತಿ ನೀಡುವ ಮೂಲಕ ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತದೆ ಎಂದು ಸಚಿವ ಬಚ್ಚೇಗೌಡ ಮಾಹಿತಿ ನೀಡಿದರು.ಕೇರಳ ರಾಜ್ಯದ ನಂತರ ಕರ್ನಾಟಕವು ಆಟೋಡೆಸ್ಕ್ ಕಂಪೆನಿ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಎರಡನೇ ರಾಜ್ಯವಾಗಿದೆ ಎಂದು ಅವರು ಹೇಳಿದರು.`ರಾಜ್ಯದ ಎಲ್ಲಾ ಐಟಿಐಗಳಿಗೆ ಮೊದಲು ನಾವು ತಂತ್ರಾಂಶವನ್ನು ಒದಗಿಸುತ್ತೇವೆ. ಆನಂತರ ಉಪನ್ಯಾಸಕರಿಗೆ ತರಬೇತಿ ನೀಡುತ್ತೇವೆ. ಮೂರನೇ ಹಂತದಲ್ಲಿ ಯಾವ ರೀತಿ ವಿದ್ಯಾರ್ಥಿಗಳು ಈ ತಂತ್ರಾಂಶವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಪರೀಕ್ಷೆ ನಡೆಸಿ ಪ್ರಮಾಣ ಪತ್ರಗಳನ್ನು ನೀಡುತ್ತೇವೆ~ ಎಂದು ಕಂಪೆನಿಯ ನಿರ್ದೇಶಕ (ಮಾರಾಟ ವಿಭಾಗ) ಅಜಯ್ ಬಾಗೇಪಲ್ಲಿ ತಿಳಿಸಿದರು.1.04 ಲಕ್ಷ ಯುವಕರಿಗೆ ಉದ್ಯೋಗ: ಕರ್ನಾಟಕ ವೃತ್ತಿ ತರಬೇತಿ ಹಾಗೂ ಕೌಶಲ ಅಭಿವೃದ್ಧಿ ನಿಗಮದ ಮೂಲಕ ಇದುವರೆಗೆ 3,56,222 ಮಂದಿಗೆ ತರಬೇತಿ ನೀಡಿ 175 ಮಿನಿ ಹಾಗೂ 34 ಬೃಹತ್ ಉದ್ಯೋಗ ಮೇಳಗಳ ಮೂಲಕ 1.04 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.ರಾಜ್ಯದ 29 ಉದ್ಯೋಗ ವಿನಿಮಯ ಕೇಂದ್ರಗಳ ಪೈಕಿ ಏಳನ್ನು ಮಾನವ ಸಂಪನ್ಮೂಲ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, 2013ರ ಮಾರ್ಚ್ ವೇಳೆಗೆ ಉಳಿದ ಕೇಂದ್ರಗಳನ್ನೂ ಮಾನವ ಸಂಪನ್ಮೂಲ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದರು.ವೃತ್ತಿಪರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕ ಸಹಭಾಗಿತ್ವದಲ್ಲಿ ಸುಮಾರು 190 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಕೆ.ವಿ. ರಾಜು, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಜಿ.ಎಸ್. ನಾರಾಯಣಸ್ವಾಮಿ ಮಾತನಾಡಿದರು.ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎ. ಕೇಶವಮೂರ್ತಿ, ಆಟೋಡೆಸ್ಕ್‌ನ ಕಾರ್ಯಕ್ರಮ ವ್ಯವಸ್ಥಾಪಕ ಆನಂದ್ ಪಿಳ್ಳೈ, ಹಿರಿಯ ವ್ಯವಸ್ಥಾಪಕ ದೀಪಾಂಕರ್ ಭಟ್ಟಾಚಾರ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry