ಐಟಿಗರ ರಾಕ್ ಪ್ರೀತಿ

7

ಐಟಿಗರ ರಾಕ್ ಪ್ರೀತಿ

Published:
Updated:
ಐಟಿಗರ ರಾಕ್ ಪ್ರೀತಿ

 ಬೆಳಗಾದರೆ ಕೆಲಸದ ಚಿಂತೆ. ಸಂಜೆಯಾದಂತೆ ಮನೆ ಸೇರುವ ತವಕ. ನಿದ್ದೆ ಸಾಲುವುದಿಲ್ಲವಲ್ಲ ಎಂಬ ಆತಂಕ ಇನ್ನೊಂದೆಡೆ. ಊಟ, ತಿಂಡಿಯ ವಿಷಯವೂ ಇವರಿಗೆ ಗೊಡವೆಯೇ. ತಿಂಗಳಾದರೆ ಎಣಿಸುವ ರಾಶಿರಾಶಿ ದುಡ್ಡಿನಲ್ಲಿ ಹೃದಯದ ಮಾತು ಆಲಿಸಲಾಗದ ಐಟಿ ಬದುಕು ಕೆಲವೊಮ್ಮೆ ನೀರಸವೆಂದು ಅನಿಸದೇ ಇರದು.ಇಂಥವರ ನಡುವೆ ಮನಸಿನ ಮಾತು, ಬದುಕಿನ ಓಟ ಎರಡನ್ನೂ ಸರಿದೂಗಿಸಿಕೊಳ್ಳುವಲ್ಲಿ ಯಶಸ್ವಿಯಾದ ಈ `ಐಟಿಗರು~ (ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು) ಬ್ಯಾಂಡ್ ಕಟ್ಟಿಕೊಂಡು ಸಂಗೀತ ಪಯಣ ಮುಂದುವರಿಸಿದ್ದಾರೆ.`ನಮ್ಮದು ರಾಕ್ ಬ್ಯಾಂಡ್. ಸದಾ ಬ್ಯುಸಿ ಆಗಿರುವ ಈ ಜೀವನ ಶೈಲಿಯಲ್ಲಿ ಮನಸ್ಸನ್ನು ಹಗುರಗೊಳಿಸಿಕೊಳ್ಳಲು ಏನಾದರೊಂದು ಬೇಕಿತ್ತು. ಹೀಗಾಗಿ ವಿಸ್ಮಯ ಸೃಷ್ಟಿಸುವ ಸಂಗೀತ, ಮನದಾಸೆ ಹೇಳುವ ಮಾಧ್ಯಮವಾಯಿತು~ ಎನ್ನುತ್ತದೆ ಮ್ಯಾಪಲ್‌ರೀಡ್ ಮ್ಯೂಸಿಕ್ ಬ್ಯಾಂಡ್ ತಂಡ.  ಮ್ಯಾಪಲ್‌ರೀಡ್ ಬ್ಯಾಂಡ್ ಕಟ್ಟಿಕೊಂಡ ಆರೂ ಜನ ಐಟಿ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಕೇರಳ ಮೂಲದವರಾದ ಇವರೆಲ್ಲ ಬೆಂಗಳೂರಿನಲ್ಲಿ ಸುಮಾರು ಏಳು ವರ್ಷಗಳ ಹಿಂದೆ ಬ್ಯಾಂಡ್ ಕಟ್ಟಿಕೊಂಡು ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು.ಕಾಲೇಜು ದಿನಗಳಿಂದಲೇ ರಾಕ್ ಸಂಗೀತದ ಗೀಳು ಅಂಟಿಸಿಕೊಂಡ ಎಲ್ಲರೂ ಸ್ನೇಹಿತರು. ಸಂಗೀತದ ಅಭಿರುಚಿ, ಬದುಕಿನ ದಾರಿ ಹಾಗೂ ಮನೋಧರ್ಮದಲ್ಲಿ ಸಾಮ್ಯವಿದ್ದ ಈ ಗೆಳೆಯರ ಸಂಗೀತ ಪ್ರೀತಿ ಕಂಡು ಕುಟುಂಬವೂ ಸಂಪೂರ್ಣ ಪ್ರೋತ್ಸಾಹ ನೀಡಿದೆ.ಬಿಜೇಶ್ ಹಾಗೂ ಸೀಕಾಂತ್ ಮನದ ಪದಗಳನ್ನು ಕವಿತೆಗಳಾಗಿಸಿದರು. ತಂಡದ ಇತರ ಸದಸ್ಯರ ಜೊತೆಗೂಡಿ ಹಾಡುಗಳಿಗೆ ಮಟ್ಟನ್ನೂ ಹಾಕಲಾಯಿತು. ಪದಗಳ ಓಘದಲ್ಲಿ ಇಂಗ್ಲಿಷಿನ ಗೀತೆಯೊಂದು ಹಿಂದಿಯಲ್ಲಿ `ಯೇ ಪ್ಯಾರ್ ಮೇ~ ಎಂಬ ಹಾಡಾಗಿ ರೂಪುಗೊಂಡಿತು. ಅದನ್ನು ವಿಡಿಯೊ ಆಲ್ಬಂ ಆಗಿ ರಚಿಸಿದ್ದು ಸಾವಿರಾರು ಜನರ ಮೆಚ್ಚುಗೆಯನ್ನೂ ಗಳಿಸಿದೆ.worldsings.com ಆನ್‌ಲೈನ್ ಸ್ಪರ್ಧೆಯ 20 ಉತ್ತಮ ಹಾಡುಗಳಲ್ಲಿ `ಯೇ ಪ್ಯಾರ್ ಮೇ~ ವಿಡಿಯೊ ಅಲ್ಬಂ ಆರನೇ ಸ್ಥಾನ ಗಳಿಸಿದೆ. ಇದೀಗ ಇನ್ನೊಂದು ಆಲ್ಬಂ ನಿರ್ಮಾಣದಲ್ಲಿ ನಿರತವಾಗಿರುವ ತಂಡ ಮತ್ತೊಂದು ಜನಪ್ರಿಯ ಹಾಡನ್ನು ನೀಡುವ ವಿಶ್ವಾಸ ಹೊಂದಿದೆ.ವೃತ್ತಿ ಬದುಕು, ಸಂಗೀತ, ಕುಟುಂಬ ಎಲ್ಲವನ್ನೂ ನಿಭಾಯಿಸುವುದು ಈ ತಂಡಕ್ಕೆ ಕಷ್ಟವೇ ಅಲ್ಲವಂತೆ. ಸಮಯ ನಿರ್ವಹಣೆಯ ಕೌಶಲವಿದ್ದರೆ ನಮ್ಮ ಎಲ್ಲಾ ಆಸಕ್ತಿಗಳಿಗೂ ಒಂದಿಷ್ಟು ಅವಧಿ ಮೀಸಲಿಡುವುದು ಸುಲಭ. ಸಂಗೀತ ಪ್ರೀತಿಯನ್ನು ನೋಡಿ ಕುಟುಂಬದವರೂ ಸಹಕರಿಸುತ್ತಿದ್ದಾರೆ.ಪ್ರತಿ ಶುಕ್ರವಾರ ನಮ್ಮ ಅಭ್ಯಾಸ ತಪ್ಪುವುದಿಲ್ಲ. ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ಹೊಸ ಹಾಡು, ವಿಷಯ, ಹಾಡಿಗೆ ಹೊಸ ಧಾಟಿಯ ಕುರಿತು ಚರ್ಚೆ ನಡೆಯುತ್ತದೆ. ಅಭ್ಯಾಸ ನಡೆಸಿ ಮನೆಗೆ ಮರಳುವಾಗ ಆಗುವ ಹತ್ತಾರು ವಿಷಯಗಳ ವಿನಿಮಯದಿಂದಲೇ ಹೊಸತನ ಮೂಡುತ್ತದೆ. ಹಾಗಾಗಿಯೇ ಅಭ್ಯಾಸಕ್ಕೆ ಬ್ರೇಕ್ ಹಾಕುವ ಪ್ರಶ್ನೆಯೇ ಇಲ್ಲ ಎನ್ನುವುದು ತಂಡದ ಗಟ್ಟಿ ನಿಲುವು.ವೃತ್ತಿ, ಸಂಗೀತ, ಕುಟುಂಬ ಮೂರೂ ಮುಖ್ಯವಾದ್ದರಿಂದ ದಿನನಿತ್ಯ ಅಭ್ಯಾಸ ನಡೆಸುವುದು ಅಸಾಧ್ಯ. ದಶಕಗಳಿಂದಲೂ ಸಂಗೀತ ಪಯಣದಲ್ಲಿ ಹೊರಟಿರುವ ಇವರಿಗೆ ಬ್ಯಾಂಡ್ ಕಟ್ಟಿಕೊಂಡ ನಂತರ ಅವಕಾಶಗಳ ದೊಡ್ಡ ಬಾಗಿಲು ತೆರೆದುಕೊಂಡಿದೆಯಂತೆ. ಆದರೆ, ಕೆಲಸಗಳ ಮಧ್ಯೆ ಕಾರ್ಯಕ್ರಮ ನೀಡುವ ಅವಕಾಶ ಕೈಚೆಲ್ಲಿದಾಗ ಮನಸ್ಸು ಭಾರವಾಗುತ್ತದೆ.ಇಂಥ ಸಂದರ್ಭಗಳಲ್ಲಿ ಹವ್ಯಾಸದ ಗೀಳು ಯಾಕೆ ಹತ್ತಿಸಿಕೊಂಡೆವು ಎಂದು ಅಲವತ್ತುಕೊಂಡ ಸಂದರ್ಭಗಳೂ ಇವೆಯಂತೆ. `ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡ ಮೇಲೆ ಸಾಂಘಿಕ ಯತ್ನ ಎಷ್ಟು ಮುಖ್ಯ ಎಂಬುದು ಅರಿವಾಗುತ್ತದೆ. ಪ್ರತೀ ಬಾರಿ ಸವಾಲಿನ ಸಂದರ್ಭಗಳು ಎದುರಾದಾಗ ಈ ತಂಡ ಇನ್ನಷ್ಟು ಗಟ್ಟಿಗೊಳ್ಳುತ್ತಂತೆ. ಬೇರೆ ಬೇರೆ ಚಿಂತನೆಯ ವ್ಯಕ್ತಿತ್ವ ಒಂದೆಡೆ ಸೇರಿದಾಗ ತಂಡದ ದೃಷ್ಟಿ ಬದಲಾಗುತ್ತದೆ. ವಿಭಿನ್ನ ಚಿಂತನೆಗೆ ಪ್ರೋತ್ಸಾಹಿಸುವ ನಮ್ಮ ನಿಲುವೇ ತಂಡದ ಗಟ್ಟಿತನದ ಗುಟ್ಟು~ ಎನ್ನುತ್ತಾರೆ ಬಿಜೇಶ್.`ಲೋಬೊ~, `ಸ್ಕಾರ್ಪಿಯನ್ಸ್~, `ಪಿಂಕ್ ಫ್ಲಾಯಿಡ್~, `ಡೀಪ್ ಪರ್ಪಲ್~, `ವೈಟ್ ಸ್ನೇಕ್~ ಮುಂತಾದ ಬ್ಯಾಂಡ್‌ಗಳು ತಮ್ಮ ತಂಡಕ್ಕೆ ಸ್ಫೂರ್ತಿ ನೀಡಿದವು ಎನ್ನುವ ಮ್ಯಾಪಲ್ ರೀಡ್ ಮ್ಯೂಸಿಕ್ ತಂಡದ ಸಾಥಿದಾರರು- ಬಿಜೇಶ್ (ಸಾಹಿತ್ಯ ಹಾಗೂ ಗಾಯನ), ಸೀಕಾಂತ್ (ಸಾಹಿತ್ಯ ಹಾಗೂ ಲೀಡ್ ಗಿಟಾರ್), ಅಜೇಶ್ (ರಿದಂ ಗಿಟಾರ್), ಡ್ಯಾನಿ (ಕೀಬೋರ್ಡ್), ನವೀನ್ (ಬಾಸ್ ಗಿಟಾರ್), ರಂಜಿತ್ (ಡ್ರಮ್ಸ). ಸಂಪರ್ಕಕ್ಕೆ- 98450 26726. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry