ಐಟಿಯಿಂದ ಉದ್ಧಾರವಾಗಿದ್ದಕ್ಕಿಂತ ಹಾಳಾಗಿದ್ದೇ ಹೆಚ್ಚು

7
ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಹ್ಮಣಿಯನ್ ಬೇಸರ

ಐಟಿಯಿಂದ ಉದ್ಧಾರವಾಗಿದ್ದಕ್ಕಿಂತ ಹಾಳಾಗಿದ್ದೇ ಹೆಚ್ಚು

Published:
Updated:

ಬೆಂಗಳೂರು: ‘ಮಾಹಿತಿ ಮತ್ತು ತಂತ್ರಜ್ಞಾನವು ಬೆಂಗಳೂರು ನಗರವನ್ನು ಉದ್ಧಾರ ಮಾಡಿದ್ದಕ್ಕಿಂತ ಹಾಳು ಮಾಡಿದ್ದೇ ಹೆಚ್ಚು’ ಎಂದು ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಹ್ಮಣಿಯನ್  ಹೇಳಿದರು.ಐಎಎಸ್ ಅಧಿಕಾರಿಗಳ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬೆಂಗಳೂರು: ಉಚ್ಛ್ರಾಯ ಸ್ಥಿತಿಯಿಂದ ಅಳಿವಿನೆಡೆಗೆ‘ ಕುರಿತು ಅವರು ಮಾತನಾಡಿದರು.‘ಐಟಿ ಕ್ಷೇತ್ರದಿಂದ ನಗರವೂ ಅಭಿವೃದ್ಧಿಯಾಗಿದೆ ಎಂಬ ತಪ್ಪು ನಂಬಿಕೆಯಿದೆ. ಅಷ್ಟು ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದ್ದ  ನೂರಾರು ಕೆರೆಗಳನ್ನು ಈ ಉದ್ಯಮವು ನುಂಗಿಹಾಕಿದೆ’ ಎಂದು ದೂರಿದರು.‘ಕೆರೆಗಳ ಒತ್ತುವರಿಯಿಂದ ಜಲಮಾಲಿನ್ಯ, ವಾಯುಮಾಲಿನ್ಯ ಹಾಗೂ ವಾಹನ ದಟ್ಟಣೆಯಂತಹ ಗಂಭೀರ ಸಮಸ್ಯೆಗಳು ಎದುರಾಗಿವೆ. ಇದರಿಂದ ನಗರದ ಜನರ ನೆಮ್ಮದಿಯೇ ಹಾಳಾಗಿದೆ’ ಎಂದು ಆರೋಪಿಸಿದರು.‘2006ರಲ್ಲಿ 254 ಚದರ ಕಿ. ಮೀ ಭೌಗೋಳಿಕ ವಿಸ್ತಾರ ಹೊಂದಿದ್ದ ಬೆಂಗಳೂರು 2007-–08 ರ ಹೊತ್ತಿಗೆ 772

ಚದರ ಕಿ.ಮೀ.  ವಿಸ್ತರಿಸಿತು. ಸದ್ಯ ಪೂರೈಕೆಯಾಗುತ್ತಿರುವ 1,140 ದಶಲಕ್ಷ ಲೀಟರ್‌ ನೀರು ಕೇವಲ 254 ಚದರ ಕಿ.ಮೀ. ವಿಸ್ತಾರದ ನಗರಕ್ಕೆ ಮಾತ್ರ ಸಾಕಾಗುತ್ತದೆ’ ಎಂದ ಅವರು, ‘ನಗರ ಮೂರರಷ್ಟು ಬೆಳೆದಿರುವುದರಿಂದ ಅಂತರ್ಜಲದ ನೀರನ್ನು ಸಾಮರ್ಥ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿಗೆ ಸಂಗ್ರಹಿಸಲಾಗುತ್ತಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದು ಕೂಡ ಐಟಿ– ಬಿಟಿಯ ಕೊಡುಗೆ’ ಎಂದು ವ್ಯಂಗ್ಯವಾಡಿದರು.ಮೂವತ್ತು ಅಡಿ ಇರಬೇಕಾದದ್ದು 3 ಅಡಿ!: ‘ನಗರದಲ್ಲಿನ ರಾಜಕಾಲುವೆಗಳ ಒಟ್ಟು ಉದ್ದ 850 ಕಿ.ಮೀ.  ನಕ್ಷೆಯಲ್ಲಿ ಮಾತ್ರ ಇದರ ಅಗಲ ಮೂವತ್ತು ಅಡಿ ಆದರೆ, ವಾಸ್ತವದಲ್ಲಿ ಕೇವಲ ಮೂರು ಅಡಿ ಇದೆ. ಈ ಮಟ್ಟಿಗೆ ಭೂಮಿ ಒತ್ತುವರಿ ಆಗುತ್ತಿರುವುದು ಆತಂಕಕಾರಿ ವಿಚಾರ’ ಎಂದು ಹೇಳಿದರು.‘ಇನ್ ಫಾರ್ಮೇಷನ್ ಕಮ್ಯುನಿಕೇಷನ್ ಟೆಕ್ನಾಲಜಿ (ಐಸಿಟಿ)  ಸಮೂಹದಡಿ ಐಟಿ –ಬಿಟಿ ತಜ್ಞರು ಬೆಂಗಳೂರಿನ ಅಭಿವೃದ್ಧಿಗಾಗಿ ‘ಐಸಿಟಿ –2020’ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಒಂದು ವೇಳೆ ಈ ಪ್ರಸ್ತಾವನೆ ಅನುಷ್ಠಾನಗೊಂಡರೆ, 12 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಇದರ ಬೆನ್ನಲ್ಲೇ 14,500 ಎಕರೆ ಭೂಮಿ ಸ್ವಾಧೀನಗೊಂಡು, 50  ಲಕ್ಷ ಜನಸಂಖ್ಯೆ ಸೇರ್ಪಡೆಯಾಗುತ್ತದೆ’ ಎಂದು ಮಾಹಿತಿ ನೀಡಿದರು.ಮೂರು ಸಾವಿರ ವಿಧಾನಸೌಧ ನಿರ್ಮಿಸಬಹುದು!: ‘ಈ ಇಡೀ ಯೋಜನೆಗೆ ₨ 2.56 ಲಕ್ಷ ಕೋಟಿ ಖರ್ಚಾಗುತ್ತದೆ. ಈ ಯೋಜನೆಯು ಅನುಷ್ಠಾನಗೊಳ್ಳುವ ಜಾಗದ ವಿಸ್ತಾರ 57 ಕೋಟಿ ಚದರಡಿ.  ಈ ಜಾಗದಲ್ಲಿ 3,068 ವಿಧಾನಸೌಧ ನಿರ್ಮಿಸಬಹುದು’ ಎಂದು ಹೇಳಿದರು.ಪೂರೈಕೆಯಾಗುತ್ತಿರುವುದು ನೀರಲ್ಲ ಟಿಡಿಎಸ್!: ‘ನಗರದಲ್ಲಿ ಪೂರೈಕೆಯಾಗುತ್ತಿರುವ  ಶೇ 69 ರಷ್ಟು ನೀರು, ನೀರಲ್ಲ.  ಅದು ವಿಷಯುಕ್ತ ನೀರು (ಟೋಟಲ್ ಡಿಸಾಲ್ಟ್ ಸಾಲಿಡ್). ಇದರ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ಜನರಿಗೆ ಈ ಬಗ್ಗೆ ಅರಿವೇ ಇಲ್ಲದಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry