ಐ.ಟಿ ಉದ್ಯಮ ಚೇತರಿಕೆ

7

ಐ.ಟಿ ಉದ್ಯಮ ಚೇತರಿಕೆ

Published:
Updated:
ಐ.ಟಿ ಉದ್ಯಮ ಚೇತರಿಕೆ

ಲಖನೌದ ಎಂಜಿನಿಯರಿಂಗ್ ಪದವೀಧರೆ ಶ್ರೀದೇವಿ ಗುಪ್ತಾ ಗೊಂದಲದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅವರಿಗೆ ಮೂರು ಪ್ರಮುಖ ಕಂಪೆನಿಗಳಿಂದ ಕೆಲಸದ ಕೊಡುಗೆ ಬಂದಿತ್ತು. ಅದರಲ್ಲಿ ಎರಡು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕದ ಕಂಪೆನಿಗಳಾದರೆ, ಒಂದು ದೇಶದ ಅತಿ ದೊಡ್ಡ ಕಂಪೆನಿ. ಮೂರೂ ಕಂಪೆನಿಗಳು ವಿದೇಶಕ್ಕೆ ತೆರಳುವ ಅವಕಾಶ ಸಹಿತ ಉತ್ತಮ ವೇತನದ ಕೊಡುಗೆ ನೀಡಲು ಮುಂದೆ ಬಂದಿವೆ. ಅವರಿಗೆ ಈಗ ಎದುರಾಗಿರುವ ಗೊಂದಲ ಏನೆಂದರೆ ಯಾವ ಕಂಪೆನಿ ಆಯ್ದುಕೊಳ್ಳುವುದು ಎಂದು.ಶ್ರೀದೇವಿ ಗುಪ್ತಾ ಅವರೊಬ್ಬರೇ ಅಲ್ಲ, ಇಂದು ಅವರಂತಹ ಅದೆಷ್ಟೋ ಪ್ರತಿಭಾವಂತ ಯುವಕ/ ಯುವತಿಯರನ್ನು ಭಾರಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಹುಡುಕಿಕೊಂಡು ಬರುತೊಡಗಿವೆ. 2008ರಿಂದ 2010ರ ಮಧ್ಯಭಾಗದ ತನಕ ಆವರಿಸಿದ್ದ ಜಾಗತಿಕ ಆರ್ಥಿಕ ಹಿಂಜರಿತ ಕರಗಿ ಹೋಗಿರುವುದರ ಲಕ್ಷಣ ಇದು.ಐಟಿ ಕಂಪೆನಿಗಳು ಪರಸ್ಪರ ಸ್ಪರ್ಧೆಗೆ ಇಳಿದು ನೇಮಕಾತಿಗೆ ತೊಡಗಿವೆ. ವೇತನವೂ ಅಧಿಕವೇ ಇರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.ದೇಶದ ಅತಿ ದೊಡ್ಡ ಐಟಿ ಕಂಪೆನಿ ಟಿಸಿಎಸ್ ಈಚೆಗೆ ತನ್ನ ತ್ರೈಮಾಸಿಕ ಸಾಧನೆಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ತನ್ನ ಯೋಜನೆಯನ್ನೂ ಪ್ರಕಟಿಸಿತು. 2010-11ನೇ ಸಾಲಿನಲ್ಲಿ ಕಂಪೆನಿ 60ರಿಂದ 65 ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ಹೇಳಿತು. ಈ ಮೊದಲು ಅದು 50 ಸಾವಿರ ಉದ್ಯೊಗಿಗಳನ್ನು ನೇಮಿಸಿಕೊಳ್ಳುವ ಅಂದಾಜು ಮಾಡಿತ್ತಷ್ಟೇ. ‘ಮಾರ್ಚ್ ಒಳಗೆ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆಗ ಕಂಪೆನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 2 ಲಕ್ಷ ಮೀರಲಿದೆ’ ಎಂದು ಕಂಪೆನಿಯ  ಮಾನವ ಸಂಪನ್ಮೂಲ ವಿಭಾಗದ ಜಾಗತಿಕ ಮುಖ್ಯಸ್ಥ ಅಜಯ್ ಮುಖರ್ಜಿ ಹೇಳಿದ್ದಾರೆ.ಇನ್ಫೋಸಿಸ್ ಟೆಕ್ನಾಲಜೀಸ್, ಕಾಗ್ನಿಜೆಂಟ್ ಟೆಕ್ನಾಲಜಿ ಸೊಲೂಷನ್ಸ್, ವಿಪ್ರೊ, ಎಚ್‌ಸಿಎಲ್ ಟೆಕ್ನಾಲಜೀಸ್‌ಗಳಂತಹ ಇತರ ದೊಡ್ಡ ಐಟಿ ಕಂಪೆನಿಗಳೂ ಪ್ರತಿಭಾವಂತರನ್ನು ಭಾರಿ ಸಂಖ್ಯೆಯಲ್ಲಿ ತಮ್ಮಲ್ಲಿ ಸೇರಿಸಿಕೊಳ್ಳಲು ಮುಂದಾಗಿವೆ. ಪ್ರಮುಖ ಐದು ಐಟಿ ಕಂಪೆನಿಗಳು ಮಾರ್ಚ್ ಒಳಗೆ 1.5 ಲಕ್ಷದಿಂದ 1.8 ಲಕ್ಷ ಮಂದಿಗೆ ಉದ್ಯೋಗ ನೀಡುವ ನಿರೀಕ್ಷೆ ಇದೆ ಎಂದು ಇನ್ಫೋಸಿಸ್ ಸಿಇಒ ಕ್ರಿಸ್ ಗೋಪಾಲಕೃಷ್ಣನ್ ಹೇಳುತ್ತಾರೆ.‘ಐಟಿ ಕಂಪೆನಿಗಳು ಮತ್ತೆ ಪ್ರಗತಿಯ ಹಾದಿಯಲ್ಲಿ ಬಂದು ನಿಂತಿವೆ. ಕಂಪೆನಿಗಳು ಭಾರಿ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳತೊಡಗಿವೆ. 2007ರಲ್ಲಿ ಇಂತಹ ದೃಶ್ಯ ನಿರ್ಮಾಣವಾಗಿತ್ತು.ಆ ವರ್ಷ 4 ಲಕ್ಷ ಹೊಸ ಐ.ಟಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿತ್ತು. 2009ರಲ್ಲಿ ನೇಮಕಾತಿ ಪ್ರಮಾಣ 1.5 ಲಕ್ಷಕ್ಕೆ ಕುಸಿದಿದ್ದರೆ, 2010ರಲ್ಲಿ 1 ಲಕ್ಷಕ್ಕೆ ಕುಸಿದಿತ್ತು. ಈ ಹಣಕಾಸು ವರ್ಷದಲ್ಲಿ ಎಲ್ಲಾ ಐಟಿ ಕಂಪೆನಿಗಳು ಸೇರಿದರೆ ಒಟ್ಟು 20 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವುದು ನಿಶ್ಚಿತ’ ಎಂದು ಗೋಪಾಲಕೃಷ್ಣನ್ ಅವರು ವಿವರ ನೀಡುತ್ತಾರೆ.ಕ್ಯಾಂಪಸ್‌ಗಳತ್ತ ದೃಷ್ಟಿ

ಯುವ ಎಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಐ.ಟಿ ಕಂಪೆನಿಗಳು ಕ್ಯಾಂಪಸ್‌ಗಳತ್ತ ದೃಷ್ಟಿ ನೆಟ್ಟಿವೆ. ಟಿಸಿಎಸ್ ಕಂಪೆನಿ 2011-12ರಲ್ಲಿ ಕ್ಯಾಂಪಸ್ ಸಂದರ್ಶನ ಮೂಲಕವೇ 37 ಸಾವಿರ ಪದವೀಧರರನ್ನು ಆಯ್ಕೆ ಮಾಡಿಕೊಳ್ಳಲು ಈಗಾಗಲೇ ಯೋಜನೆ ಹಾಕಿಕೊಂಡಿದೆ. ಇದು ಈ ಹಣಕಾಸು ವರ್ಷದಲ್ಲಿ ಮಾಡಿಕೊಂಡ ನೇಮಕಾತಿಗಿಂತ 13 ಸಾವಿರದಷ್ಟು ಅಧಿಕವಾಗಿರುತ್ತದೆ. ಕಾಗ್ನಿಜೆಂಟ್ ಕಂಪೆನಿ 2011ರಲ್ಲಿ 25 ಸಾವಿರದಷ್ಟು  ಉದ್ಯೋಗಿಗಳನ್ನು  ನೇಮಿಸಿಕೊಳ್ಳಲಿದ್ದು, ಈ ಪೈಕಿ ಅರ್ಧದಷ್ಟು ಮಂದಿಯನ್ನು ಎಂಜಿನಿಯರಿಂಗ್ ಕಾಲೇಜುಗಳಿಂದ ನೇರವಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಕಾಗ್ನಿಜೆಂಟ್ ಕಂಪೆನಿಯ ಉದ್ಯೋಗಿಗಳ ಸಂಖ್ಯೆ 2010ರ ಡಿಸೆಂಬರ್‌ಗೆ 1 ಲಕ್ಷ ದಾಟಿತ್ತು. ಬೇರೆ ಕಂಪೆನಿಗಳಲ್ಲಿ ದುಡಿಯುತ್ತಿರುವ ಪ್ರತಿಭಾವಂತರನ್ನು ಕರೆಸುವುದಾದರೆ ಅಧಿಕ ವೇತನ ನೀಡಬೇಕಾಗುತ್ತದೆ. ಹೀಗಾಗಿ ಕಂಪೆನಿಗಳು ಇಂದು ಹೊಸಬರನ್ನೇ ಹೆಚ್ಚು ನೆಚ್ಚಿಕೊಂಡಿವೆ.ಪ್ರಗತಿಯ ಹಾದಿ ಹಿಡಿದಂತೆ ಐಟಿ ಕಂಪೆನಿಗಳ ಉತ್ಸಾಹವೂ ಗರಿಗೆದರಿದೆ. ಹಾಲಿ ಇರುವ ಉದ್ಯೋಗಿಗಳ ವೇತನವನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸತೊಡಗಿವೆ. ಟಿಸಿಎಸ್ ಈಗಾಗಲೇ ಕಿರಿಯ ಎಂಜಿನಿಯರ್‌ಗಳಿಗೆ ಮೂರು ತಿಂಗಳಿಗೊಮ್ಮೆ ಅವರ ಕೆಲಸದ ಗುಣಮಟ್ಟ ನೋಡಿಕೊಂಡು ಬಡ್ತಿ ನೀಡುವ ಕೆಲಸ ಆರಂಭಿಸಿದೆ.ಹಿರಿಯ ಉದ್ಯೋಗಿಗಳಿಗೆ ಜವನರಿ ಮತ್ತು ಜುಲೈನಲ್ಲಿ ಬಡ್ತಿ ಸಿಗುವಂತೆ ನೋಡಿಕೊಳ್ಳುವ ವರ್ಷಕ್ಕೆ ಎರಡು ಬಾರಿ ಬಡ್ತಿಗೆ ಅವಕಾಶ ಕಲ್ಪಿಸುವ ಯೋಜನೆಯನ್ನು ಪುನರಾರಂಭಿಸಿದೆ. 1.30 ಲಕ್ಷ ಉದ್ಯೋಗಿಗಳಿರುವ  ಇನ್ಫೋಸಿಸ್ ತನ್ನ ನೌಕರರ ವೇತನವನ್ನು ಈಗಾಗಲೇ ಶೇ 17ರಷ್ಟು ಹೆಚ್ಚಿಸಿದೆ ಹಾಗೂ ಮುಂದಿನ ಮೂರು ತಿಂಗಳೊಳಗೆ ಮತ್ತೆ ವೇತನ ಹೆಚ್ಚಿಸುವ ಯೋಜನೆ ಹಾಕಿಕೊಂಡಿದೆ.ಅಧಿಕ ಲಾಭ

ಉದ್ಯೋಗಿಗಳನ್ನು ಅಧಿಕ ಪ್ರಮಾಣದಲ್ಲಿ ನೇಮಿಸಿಕೊಳ್ಳುವುದರೊಂದಿಗೆ ದೇಶದ ಪ್ರಮುಖ ಐಟಿ ಕಂಪೆನಿಗಳು ಭಾರಿ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸುತ್ತಿರುವುದೂ 2010ರ ಡಿಸೆಂಬರ್‌ನಲ್ಲಿ ಪ್ರಕಟವಾದ ಮೂರನೇ ತ್ರೈಮಾಸಿಕದ ಹಣಕಾಸು ಸಾಧನೆಯಿಂದ ಸ್ಪಷ್ಟವಾಗಿದೆ.ಅಮೆರಿಕ ಮತ್ತು ಯೂರೋಪ್‌ನಲ್ಲಿ ಐಟಿಗೆ ವ್ಯಯಿಸುವ ಪ್ರಮಾಣ ಹೆಚ್ಚಿರುವುದರ ಪ್ರಭಾವ ಇದು. ಹಣಕಾಸು ವಿಚಾರದಲ್ಲಿ ಭಾರತೀಯ ಐಟಿ ಕಂಪೆನಿಗಳಿಗೆ ಅಂತಹ ಒತ್ತಡವೇನಿಲ್ಲ. ಇದರಿಂದ ಬಹುತೇಕ ಕಂಪೆನಿಗಳು ಲಾಭ ಗಳಿಸುತ್ತಿವೆ ಮತ್ತು ವೇಗವಾಗಿ ಪ್ರಗತಿ ಹೊಂದುವ ನಿಟ್ಟನಲ್ಲಿ ಹೊಸ ಕ್ಷೇತ್ರಗಳತ್ತ ಗಮನ ಹರಿಸತೊಡಗಿವೆ.ದೇಶದ ಅತಿ ದೊಡ್ಡ ಐಟಿ ಕಂಪೆನಿ ಟಿಸಿಎಸ್‌ನ ವರಮಾನ 2010ರ ಡಿಸೆಂಬರ್ ತ್ರೈಮಾಸಿಕದಲ್ಲಿ  ರೂ 9,663 ಕೋಟಿಗಳಿಗೆ ನೆಗೆದಿತ್ತು. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 26ರಷ್ಟು ಅಧಿಕ. ನಿವ್ವಳ ಲಾಭ ರೂ 2,370 ಕೋಟಿಗಳು. ಇದು ಕಳೆದ ವರ್ಷಕ್ಕಿಂತ ಶೇ 30ರಷ್ಟು ಅಧಿಕವಾಗಿದೆ.ಎರಡನೇ ಅತಿ ದೊಡ್ಡ ಕಂಪೆನಿ ಇನ್ಫೋಸಿಸ್‌ನ ವರಮಾನದಲ್ಲಿ ಶೇ 24ರಷ್ಟು ಮತ್ತು ನಿವ್ವಳ ಲಾಭದಲ್ಲಿ ಶೇ 14ರಷ್ಟು ಏರಿಕೆ ಕಂಡುಬಂದಿದೆ. ಮೈಂಡ್‌ಟ್ರೀ ಕಂಪೆನಿ ಹೊರತುಪಡಿಸಿದರೆ ಉಳಿದೆಲ್ಲಾ ಕಂಪೆನಿಗಳು ಭಾರಿ ಲಾಭ ಗಳಿಸಿಕೊಂಡಿವೆ.ಮಾರುಕಟ್ಟೆ ವಿಚಾರದಲ್ಲೂ ಐ.ಟಿ ಕಂಪೆನಿಗಳು ಹೊಸ ಹೊಸ ಕಾರ್ಯತಂತ್ರ ರೂಪಿಸಿಕೊಂಡಿವೆ. ದೊಡ್ಡ ಗ್ರಾಹಕರನ್ನು ತಮ್ಮ ಕೈಯಲ್ಲೇ ಉಳಿಸಿಕೊಳ್ಳುವ ಅವುಗಳ ತಂತ್ರಕ್ಕೆ ಫಲ ಸಿಕ್ಕಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೊಗಳಂತಹ ಕಂಪೆನಿಗಳು ಹೊಸ ಹೊಸ ಗ್ರಾಹಕರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಲೇ ಹಳೆಯ ದೊಡ್ಡ ಗ್ರಾಹಕರನ್ನೂ ಹಾಗೆಯೇ ಉಳಿಸಿಕೊಳ್ಳುವಲ್ಲಿ ಸಫಲವಾಗಿವೆ. ದೊಡ್ಡ ದೊಡ್ಡ ಗ್ರಾಹಕ ಕಂಪೆನಿಗಳಿಗೆ ಟಿಸಿಎಸ್‌ಗೆ ಶೇ 30ರಷ್ಟು ವರಮಾನ ಪಡೆದಿದ್ದರೆ, ಇನ್ಫೋಸಿಸ್ ಶೇ 25ರಷ್ಟು ಹಾಗೂ ವಿಪ್ರೊ ಶೇ 19ರಷ್ಟು ವರಮಾನ ಗಳಿಸಿಕೊಂಡಿವೆ.ಇಂತಹ ಪ್ರಗತಿಯ ಹಾದಿಯಲ್ಲಿ ಕೆಲವೊಂದು ಹಿನ್ನಡೆಗಳನ್ನೂ ಗಮನಿಸಬೇಕು. ಮುಖ್ಯವಾಗಿ ಭಾರತೀಯ ಕಂಪೆನಿಗಳು ಹೊಸ ಹೊಸ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ (ಅಪ್ಲಿಕೇಷನ್ ಡೆವಲಪ್‌ಮೆಂಟ್ ಆ್ಯಂಡ್ ಮೆಂಟೆನೆನ್ಸ್-ಎಡಿಎಂ) ಈ ಮೊದಲು ಶೇ 80ರಿಂದ 90ರಷ್ಟು ವರಮಾನ ಗಳಿಸುತ್ತಿದ್ದವು. ಆದರೆ ಇಂದು ಅದರ ಪ್ರಮಾಣ ಶೇ 50ಕ್ಕೆ ಕುಸಿದಿದೆ. ಉದಾಹರಣೆಗೆ ಇನ್ಫೋಸಿಸ್‌ನ ‘ಎಡಿಎಂ’ 3ನೇ ತ್ರೈಮಾಸಿಕದಲ್ಲಿ ಶೇ 38ಕ್ಕೆ ಕುಸಿದಿದೆ. ಸಂಕೀರ್ಣವಾದ ಕನ್ಸಲ್ಟಿಂಗ್ ಮತ್ತು ಪ್ಯಾಕೇಜ್ ಜಾರಿಯಂತಹ ಕ್ಷೇತ್ರಗಳಿಂದ ಕಂಪೆನಿಗೆ ಶೇ 26ರಷ್ಟು ವರಮಾನ ಬಂದಿದೆ.ಜಾಗತಿಕ ಆರ್ಥಿಕ ಹಿನ್ನಡೆಯಿಂದ ಹೊರಬಂದಾಗ ಅದರ ಲಾಭವನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಎಲ್ಲಾ ಕಂಪೆನಿಗಳೂ ಪೂರ್ಣವಾಗಿ ಸಫಲವಾಗಿಲ್ಲದಿರುವುದೂ ಗೊತ್ತಾಗುತ್ತದೆ. ವಿಪ್ರೊ ಕಂಪೆನಿಯ ಮಾರಾಟ  ಮತ್ತು ಲಾಭಾಂಶ ಕಡಿಮೆಯಾಗಿರುವುದು ಇದಕ್ಕೆ ಉತ್ತಮ ನಿದರ್ಶನ. ಈ ಕಂಪೆನಿ ಲಾಭಾಂಶದ ಬಗ್ಗೆ ಅತಿಯಾಗಿ ಗಮನ ಹರಿಸಿದ್ದೇ ಇದಕ್ಕೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ. ಹಿಂಜರಿತ ಸಮಯದಲ್ಲಿ ವಿಪ್ರೊ ಹಲವು ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ ಹಿಂಜರಿತ ಹೋದ ತಕ್ಷಣ ವೇಗವಾಗಿ ಪುಟಿದ ಕ್ಷೇತ್ರ ಇದುವೇ. ಈ ಅವಕಾಶ ಬಳಸಿಕೊಳ್ಳುವಲ್ಲಿ ವಿಪ್ರೊ ವಿಫಲವಾಯಿತು.ಆದರೂ, ಒಟ್ಟಾರೆ ಐಟಿ ಕ್ಷೇತ್ರ ನೋಡಿದಾಗ ಅವುಗಳ ಪ್ರಗತಿಗೆ ವೇಗ ದೊರೆತಿರುವುದು ಸ್ಪಷ್ಟ. 60 ಶತಕೋಟಿ ಡಾಲರ್‌ಗಳಷ್ಟು ವ್ಯವಹಾರ ನಡೆಸುವ ದೇಶದ ಐಟಿ ಕಂಪೆನಿಗಳ ಭರವಸೆಯ ಬೆಳಕು ಇದೇ. ಅಮೆರಿಕ ಮತ್ತು ಯೂರೋಪ್‌ಗಳ ದೊಡ್ಡ ದೊಡ್ಡ ಗ್ರಾಹಕರತ್ತ ಇವುಗಳು ಮುಖ ಮಾಡಿವೆ. ಯೂರೋಪ್‌ನಲ್ಲಿ ಯೂರೊ ಕರೆನ್ಸಿ ಬಿಕ್ಕಟ್ಟು ಸಹ ನಿಯಂತ್ರಣದಲ್ಲಿ ಇದ್ದಂತೆ ಕಾಣಿಸುತ್ತಿದೆ.

ಬೇಡಿಕೆ ಹೆಚ್ಚುತ್ತಿರುವುದರಿಂದ ಭಾರತೀಯ ಐಟಿ ಕಂಪೆನಿಗಳು ಪೂರೈಕೆಯತ್ತ ವಿಶೇಷ ಗಮನ ಹರಿಸಬೇಕಾಗಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳ ನೇಮಕಾತಿ ಇದರಲ್ಲಿ ಮುಖ್ಯವಾದುದು.ಈಗಾಗಲೇ ಈ ಕೆಲಸ ಆರಂಭವಾಗಿದೆ. ಜತೆಗೆ ಕೌಶಲ್ಯ ಅಭಿವೃದ್ಧಿ, ತರಬೇತಿಗಳಿಗೂ ಭಾರಿ ದುಡ್ಡು ವಿನಿಯೋಗಿಸಲಾಗುತ್ತಿದೆ. ಐಟಿ ಕಂಪೆನಿಗಳು ತಮ್ಮ ವೆಚ್ಚ ಕಡಿಮೆ ಮಾಡದೆ ಇದ್ದರೆ ಹಣದುಬ್ಬರ ಸಹಿತ ಇತರ ಸಮಸ್ಯೆಗಳು ಕಂಪೆನಿಗಳ ಲಾಭಾಂಶಗಳನ್ನು ತಿಂದುಬಿಡುವ ಸಾಧ್ಯತೆ ಇದೆ.     

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry