ಮಂಗಳವಾರ, ಮೇ 18, 2021
22 °C

ಐಟಿ ಕ್ಷೇತ್ರಕ್ಕೆ ಮಾರಿಕೊಳ್ಳಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಸ್ತು ಸಂಗ್ರಹಾಲಯಗಳು ಬರೀ ಪಳಿಯುಳಿಕೆಗಳ ಸಂಗ್ರಹ ಎನ್ನುವುದು ತಪ್ಪು ಕಲ್ಪನೆ. ಅವು ಜೀವಂತ ದೇವಾಲಯಗಳಿದ್ದಂತೆ~ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಬಣ್ಣಿಸಿದರು.ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿಯು (ಎನ್‌ಸಿಎಸ್‌ಎಂ) ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ `ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವ~ದಲ್ಲಿ ಪ್ರದರ್ಶನ ನೀಡಿದ ನಾಟಕ ತಂಡಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.ವಸ್ತು ಸಂಗ್ರಹಾಲಯಗಳಿಂದ ಸಾಕಷ್ಟು ಮಾಹಿತಿ ದೊರೆಯುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನೂ ತಿಳಿಯಬಹುದು. ಆದ್ದರಿಂದ ಅವುಗಳ ಸಂಖ್ಯೆ ಹೆಚ್ಚಬೇಕಿದೆ ಎಂದು ಅಭಿಪ್ರಾಯಪಟ್ಟರು.

ಐವತ್ತು ವರ್ಷಗಳ ನಂತರ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ.ಸೌರವ್ಯೆಹದಾಚೆ ಏನಿದೆ ಎಂಬುದು ಗೊತ್ತಿರದ ನಮಗೆ, ಅದರಾಚೆ ಇರುವ 500 ಗ್ರಹಗಳ ಶೋಧನೆ ಸಾಧ್ಯವಾಗಿದೆ. 2030ರ ವೇಳೆಗೆ ಮಂಗಳ ಗ್ರಹದ ಮೇಲೆ ಮಾನವ ನೆಲೆಯೂರುವ ಪ್ರಯತ್ನಗಳು ಸಾಗಿವೆ. ಈ ಯತ್ನ ಕೈಗೂಡಿದರೆ ಇಲ್ಲಿನ ಕೆಟ್ಟ ರಾಜಕಾರಣಿಗಳನ್ನು ಅಲ್ಲಿಗೆ ಅಟ್ಟಬಹುದಾಗಿದೆ. ಆ ನಂತರವಷ್ಟೇ ನಾವು ಸಹನೀಯವಾಗಿ ಬದುಕಬಹುದು~ ಎಂದು ವ್ಯಂಗ್ಯವಾಡಿದರು.`ಮಾಹಿತಿ ತಂತ್ರಜ್ಞಾನ ವಲಯ ಬೇಡ ಅನ್ನೋರು ಯಾರಿದ್ದೀರಿ~ ಎಂದು ಕಾರ್ಯಕ್ರಮದಲ್ಲಿದ್ದ ವಿದ್ಯಾರ್ಥಿಗಳನ್ನು ಕೇಳಿದಾಗ ಒಬ್ಬರೂ ಕೈ ಎತ್ತಲಿಲ್ಲ. ಇದರಿಂದ ಕೊಂಚ ಬೇಸರಗೊಂಡ ರಾವ್, `ದ್ವಿತೀಯ ದರ್ಜೆಯ ಜಗತ್ತಿಗೆ ನಿಮ್ಮನ್ನು ಮಾರಿಕೊಳ್ಳುತ್ತಿದ್ದೀರಿ~ ಎಂದು ಎಚ್ಚರಿಸಿದರು. `ಐಟಿ ಉದ್ಯೋಗದಿಂದ ಹಣ ಬರಬಹುದು. ಆದ್ದರಿಂದಲೇ ನಿಮ್ಮ ಪೋಷಕರು ಐಟಿ ಉದ್ಯೋಗಿಯಾಗುವಂತೆ ಒತ್ತಡ ಹೇರಬಹುದು. ಆದರೆ ನಿಮ್ಮ ಹೃದಯಕ್ಕೆ ಹತ್ತಿರವಾದುದನ್ನು ನೀವು ನಿರ್ಧರಿಸಿ ಆಯ್ದುಕೊಳ್ಳಬೇಕು. ಖ್ಯಾತ ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರ ತಂದೆ ಬಾಬಾರನ್ನು ಮೆಕಾನಿಕಲ್ ಓದಲು ವಿದೇಶಕ್ಕೆ ಕಳುಹಿಸಿದ್ದರು. ಆದರೆ ಆ ಬಗ್ಗೆ ಆಸಕ್ತಿ ಇರದ ಹೋಮಿ ಬಾಬಾ ವಾಪಸ್ ಬಂದರು. ಅಂಥ ನಿರ್ಧಾರವನ್ನು ನೀವೂ ತೆಗೆದುಕೊಳ್ಳಬೇಕು~ ಎಂದು ಸಲಹೆ ನೀಡಿದರು.ಎನ್‌ಸಿಎಸ್‌ಎಂ ಮಹಾನಿರ್ದೇಶಕ ಜಿ.ಎಸ್.ರೌಟೆಲಾ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕ ಶಿವಪ್ರಸಾದ್ ಖೆಣೆದ, ನಾಟಕೋತ್ಸವದ ಸಂಚಾಲಕ ಸಜು ಭಾಸ್ಕರನ್, ನಾಟಕ ತೀರ್ಪುಗಾರ್ತಿ ಸುಚಿತ್ರಾ ಗುಪ್ತಾ ವೇದಿಕೆಯಲ್ಲಿದ್ದರು. 

ಕೇರಳ ನಾಟಕ ತಂಡಕ್ಕೆ 3 ಪ್ರಶಸ್ತಿ
ನಾಟಕ ಪ್ರದರ್ಶನ ನೀಡಿದ ಎಲ್ಲ ಎಂಟು ತಂಡಗಳಿಗೆ ಬಹುಮಾನ ನೀಡಲಾಯಿತು. ಉತ್ತಮ ನಿರ್ದೇಶಕ, ಉತ್ತಮ ನಟಿ ಮತ್ತು ಉತ್ತಮ ನಟ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕೇರಳದ ಕೋಯಿಕ್ಕೋಡ್‌ನ ಮೇಮುಂಡ ಹಿರಿಯ ಮಾಧ್ಯಮಿಕ ಶಾಲೆ ಪ್ರಸ್ತುತಪಡಿಸಿದ `ಎಝಂ ಜನ್ಮಾಮ್~ ನಾಟಕ ಚಾಂಪಿಯನ್ ಸ್ಥಾನ ಪಡೆಯಿತು.

ಉತ್ತಮ ನಿರ್ದೇಶಕ-ಜಿ.ವಕ್ಕಂ, ಉತ್ತಮ ನಟಿ-ಎ.ಆರ್ಯ, ಉತ್ತಮ ನಟ-ಸಂಗೀತ್ ಬಿ. ಉತ್ತಮ ಕಥೆಗಾರ: ಪ್ರಮೋದ್ ಶೇಲಾರ್, ನಾಟಕ-ವಿಕ್ರಂ ಮತ್ತು ಬೇತಾಳ (ಚಿಲ್ಡ್ರನ್ಸ್ ಅಕಾಡೆಮಿ, ಕಂಡಿವಲಿ, ಮುಂಬೈ), ಉತ್ತಮ ಕಿರಿಯ ನಟ-ಸನ್ನಿ ಮಹತೊ, ನಾಟಕ-ಪಿಧಿರ್ ಪಿಧಿ ಎಕೊಯ್ ಸಿಧಿ (ಬಬ್ಲಿಂಗ್ ಬಡ್ಸ್ ಶಾಲೆ, ಪುರುಲಿಯಾ, ಪ.ಬಂಗಾಳ). 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.