ಶುಕ್ರವಾರ, ನವೆಂಬರ್ 22, 2019
20 °C

ಐ.ಟಿ ನೌಕರಿ ಬದಲಾವಣೆ ಬಿಸಿ

Published:
Updated:

ಹಳೆ ನೀರು ಕೊಚ್ಚಿ ಹೋಗುತ್ತಿದ್ದಂತೆ ಹೊಸ ನೀರು ಬಂದು ಸೇರುವುದು ಜಗದ ನಿಯಮ. ಇದೇ ನಿಯಮದಲ್ಲಿ ನಂಬಿಕೆ ಇಟ್ಟಿರುವ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಕಂಪೆನಿಗಳೂ ಪ್ರತಿ ವರ್ಷ ತನ್ನಲ್ಲಿರುವ ಹಳೆ ನೀರು ಹೊರ ಹಾಕಿ ಹೊಸ   ಆಲೋಚನೆಯುಳ್ಳ, ಚುರುಕಿನ, ಕಂಪೆನಿ ಕೇಳಿದ್ದನ್ನು ನೀಡುವ ಸಾಮರ್ಥ್ಯವುಳ್ಳ ಹೊಸ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಇಚ್ಛಿಸುತ್ತವೆ.ಇದರಿಂದ ಕಂಪೆನಿಗಳಿಗೆ ದುಬಾರಿ ಸಂಬಳದ ಹಿರಿಯ ಉದ್ಯೋಗಿ ಹೊರಹೋದರೆ ಅದಕ್ಕಿಂತ ಅರ್ಧ ಸಂಬಳಕ್ಕೆ ಹೊಸ ಆಲೋಚನೆಯುಳ್ಳ ತರುಣ/ತರುಣಿಯರು ಒಳಬರುತ್ತಾರೆ. ಇದು ಒಂದು ಕೋನದ ಮಾತಾಯಿತು. ಈಗ ಬೇರೆಯದೇ ಬಗೆಯ ಬದಲಾವಣೆಯೂ ಕಾಣಲಾರಂಭಿಸಿದೆ. ಅನುಭವಿ ನೌಕರರನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಳೆದುಕೊಳ್ಳುವ ಭೀತಿಯನ್ನೂ ಪ್ರತಿಷ್ಠಿತ ಕಂಪೆನಿಗಳು ಇತ್ತೀಚೆಗೆ ಎದುರಿಸಲಾರಂಭಿಸಿವೆ.ಅಮೆರಿಕ ಹಾಗೂ ಚೀನಾಕ್ಕೆ ಹೋಲಿಸಿದಲ್ಲಿ ಭಾರತದಲ್ಲಿ ಖಾಸಗಿ ಕ್ಷೇತ್ರದ ಬೃಹತ್ ಕಂಪೆನಿಗಳು ವಾರ್ಷಿಕ ವೇತನ ಹೆಚ್ಚಳವನ್ನು ಉತ್ತಮ ಮಟ್ಟದಲ್ಲಿ ನೀಡುತ್ತಿದ್ದರೂ (ಶೇ 10.3) ಇದು ಕಳೆದ 10ವರ್ಷಗಳಲ್ಲೇ ಕನಿಷ್ಠ ಮಟ್ಟದ ಏರಿಕೆಯಾಗಿದೆ ಎನ್ನುತ್ತದೆ ವೇತನ-ಭತ್ಯೆ ಕುರಿತು ಸಮೀಕ್ಷೆ ನಡೆಸಿದ ಸಂಸ್ಥೆ. ಇದರಿಂದಾಗಿ ಕಂಪೆನಿಗಳನ್ನು ತೊರೆದು ಹೆಚ್ಚು ವೇತನದ ಆಮಿಷ ಒಡ್ಡುವ ಕಂಪೆನಿಗಳ ಬಳಿಗೆ ಓಡುತ್ತಿರುವವರ ಪ್ರಮಾಣವೂ ಶೇ 31ಕ್ಕೆ ಏರಿದೆ.ಅದರಲ್ಲೂ ಜೂನ್ ವೇಳೆಗೆ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಂಪೆನಿಗಳು ಪ್ರತಿಭಾವಂತ ಅನುಭವಿ ನೌಕರರನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ. ಜತೆಗೆ ಪ್ರತಿಭಾವಂತರತ್ತ ಮಾತ್ರ ತಮ್ಮ ಚಿತ್ತ ಹರಿಸಿರುವ ಕಂಪೆನಿಗಳೂ ಅಂಥವರಿಗೆ ಸರಾಸರಿ ಶೇ 14ರಷ್ಟು ಸಂಬಳ ಹೆಚ್ಚಿಸಿ ಅವರನ್ನು ಉಳಿಸಿಕೊಳ್ಳುವ ತಂತ್ರಗಾರಿಕೆಯನ್ನೂ ನಡೆಸಿರುವುದರಿಂದ ಸರಾಸರಿ ಕಾರ್ಯಕ್ಷಮತೆಯ ನೌಕರರ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ.ಹೀಗೆ ನೌಕರಿ ಬದಲಿಸುತ್ತಿರುವವರ ಪ್ರಮಾಣ  ಕೇವಲ ಐಟಿ, ಬಿಪಿಒ (ಬಿಜಿನೆಸ್ ಪ್ರೊಸೆಸ್ ಔಟ್‌ಸೋರ್ಸಿಂಗ್-ಹೊರಗುತ್ತಿಗೆ) ಕ್ಷೇತ್ರಗಳಲ್ಲಷ್ಟೇ (ಶೇ 31) ಅಲ್ಲ, ದೂರಸಂಪರ್ಕ (ಶೇ 26), ಬ್ಯಾಂಕ್ ಹಾಗೂ ಹಣಕಾಸು ಸೇವೆಗಳ ಕ್ಷೇತ್ರ (ಶೇ 23), ವಿಮಾನಯಾನ ಹಾಗೂ ಆರೋಗ್ಯ (ಶೇ 22), ರಿಯಲ್  ಎಸ್ಟೇಟ್ (ಶೇ 15) ವಲಯದಲ್ಲಿಯೂ ಕಳವಳ ಉಂಟು ಮಾಡುವಷ್ಟು ಭಾರಿ ಪ್ರಮಾಣದಲ್ಲಿಯೇ ಇದೆ. ಅಲ್ಲದೆ, ದಿನನಿತ್ಯ ಬಳಕೆಯ ವಸ್ತುಗಳ ತಯಾರಿಕೆ ಹಾಗೂ ಮಾರಾಟ ಕ್ಷೇತ್ರ (ಶೇ 21)ಗಳಿಗೂ ಈ `ಅನುಭವಿಗಳು ಕಂಪೆನಿ ತೊರೆಯುವ' ಚಟುವಟಿಕೆ ಬಿಸಿ ತಟ್ಟಿದೆ.ಅಷ್ಟೇ ಏಕೆ, ಸಾಲು ಸಾಲು ಅಪಘಾತ, ಹಿರಿಯ ಪೈಲೆಟ್‌ಗಳ ನಿವೃತ್ತಿ ಹಾಗೂ ನಾಗರಿಕ ವಿಮಾನ ಯಾನದಲ್ಲಿನ ಆಕರ್ಷಕ ಸಂಬಳದಿಂದಾಗಿ ವಾಯು ಸೇನೆಯ ಪೈಲೆಟ್‌ಗಳು ಈಗ ನೌಕರಿ ಬದಲಿಸುವ ಚಿಂತನೆಯಲ್ಲಿದ್ದಾರೆ ಎಂದು `ಸ್ಟ್ರಾಟಜಿ ಪೇಜ್' ಎಂಬ ಸುದ್ದಿ ಜಾಲವೊಂದು ಇತ್ತೀಚೆಗಷ್ಟೇ ವರದಿ ಮಾಡಿತ್ತು.ಸಮೀಕ್ಷೆ ಪ್ರಕಾರ ಭಾರತದಲ್ಲಿ ಮೇಲ್ದರ್ಜೆ ಮತ್ತು ಕೆಳ ಹಂತದ ನೌಕರರ ಸಂಬಳದ ಅಂತರ ದೊಡ್ಡದಿದೆ. ಇದು ಚೀನಾ, ಅಮೆರಿಕದಲ್ಲಿ ಇರುವುದಕ್ಕಿಂತ ಹೆಚ್ಚಿನದಾಗಿದೆ. ಚೀನಾದಲ್ಲಿ ಶೇ 500ರಷ್ಟಿದ್ದರೆ, ಅಮೆರಿಕದಲ್ಲಿ ಶೇ 600ರಷ್ಟಿದೆ. ಆದರೆ ಭಾರತದಲ್ಲಿ ಮಾತ್ರ ಈ ಅಂತರ ಶೇ 850ರಷ್ಟು ಇರುವುದೂ ನೌಕರರ ವಲಸೆಗೆ ಕಾರಣ ಎಂದೇ ಹೇಳಲಾಗುತ್ತಿದೆ.ಇಂದು ನೌಕರ-ನಾಳೆ ಮಾಲೀಕ!

ಪ್ರತಿಷ್ಠಿತ ಕಂಪೆನಿಗಳ ಪ್ರಮುಖ ಹುದ್ದೆಗಳನ್ನು ಒಂದಿಷ್ಟು ವರ್ಷ ನಡೆಸಿ ಸಾಕಷ್ಟು ಅನುಭವ ಪಡೆದ ಹಿರಿಯ ಶ್ರೇಣಿ ಅಧಿಕಾರಿಗಳೇ, ನಂತರ ಅದೇ ಅನುಭವದ ಅಡಿಪಾಯದ ಮೇಲೆ ಮತ್ತು ಗ್ರಾಹಕ ಕಂಪೆನಿಗಳ ಸಂಪರ್ಕದ ಕೊಂಡಿಗಳನ್ನು ಆಧರಿಸಿಕೊಂಡು ತಮ್ಮದೇ ಆದ ಸ್ವಂತ ಕಂಪೆನಿಗಳನ್ನು ಆರಂಭಿಸುತ್ತಿದ್ದಾರೆ. ಇದೂ ಸಹ ದೊಡ್ಡ ಕಂಪೆನಿಗಳ ಪಾಲಿಗೆ ಭಾರಿ ಹೊಡೆತವನ್ನೇ ನೀಡುತ್ತಿದೆ.ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಫ್ಟ್‌ವೇರ್ ಕಂಪೆನಿಗಳಿಗೆ ಇತ್ತೀಚಿನ ದಿನಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹೊಸ ಕೆಲಸಗಳೇ ಬರುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ, ನೌಕರರು ಒಂದೇ ರೀತಿಯ ಕೆಲಸದಲ್ಲಿ ಬೇಸರ ಮೂಡಿ ಬೇರೆ ಸಣ್ಣ ಕಂಪೆನಿಗಳತ್ತ ಮುಖ ಮಾಡುತ್ತಿರುವುದೂ ಅಷ್ಟೇ ಸತ್ಯ. ಸಣ್ಣ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿ ಸವಾಲಿನ ಕೆಲಸಗಳನ್ನು ನಿರ್ವಹಿಸಿ ನೆಮ್ಮದಿ ಪಡೆಯುತ್ತಿದ್ದಾರೆ.ಒಂದೇ ರೀತಿಯ ಕೆಲಸದಿಂದಾಗಿ ಸಾಫ್ಟ್‌ವೇರ್ ಉದ್ಯೋಗಿಗಳು ಬಹಳ ಬೇಗ ವೃತ್ತಿಯಿಂದ ವಿಮುಕ್ತರಾಗಲು ಬಯುಸುತ್ತಾರೆ. ಅದರಲ್ಲೂ `ಸಿಎಂಎಂ' 5ರ ಕಂಪೆನಿಗಳಲ್ಲಿ ದೊಡ್ಡ ದೊಡ್ಡ ತಂಡಗಳಲ್ಲಿ ಕೆಲಸ ನಿರ್ವಹಿಸುವಾಗ ವೈಯಕ್ತಿಕ ಸಾಮರ್ಥ್ಯ ಗಮನಕ್ಕೆ ಬಾರದಿರುವುದೂ ಹಾಗೂ ಒಂದೇ ರೀಕೆಲಸದಿಂದ ಏಕತಾನತೆ ಕಾಡುವುದು ವಲಸೆಗೆ ಕಾರಣ.ಇದರೊಂದಿಗೆ ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿರುವ ಸುಮಾರು 700 ಕಂಪೆನಿಗಳಲ್ಲಿ 2-3 ಲಕ್ಷ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಆದರೂ ಜಾಗತಿಕ ಮಾರುಕಟ್ಟೆಗೆ ಈ `ಆರ್ ಅಂಡ್ ಡಿ' ಕ್ಷೇತ್ರದ ಕೊಡುಗೆ ಕೇವಲ ಶೇ 2-3ರಷ್ಟು ಮಾತ್ರ. ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಹೊರಗಿನಿಂದ ಬಂದ ಕೆಲಸಗಳಲ್ಲಿ ಗರಿಷ್ಠ ಭಾಗ ಮುಗಿದಿದೆ. ಇದರಿಂದಲೂ ಹೊಸ ನೇಮಕಾತಿ ಸ್ಥಗಿತಗೊಂಡಿವೆ.ನೌಕರಿ ಬಿಡುತ್ತಿರುವವರ ಸಂಖ್ಯೆ ಹೆಚ್ಚಾದಂತೆಲ್ಲಾ ಕಂಪೆನಿಗಳು ಸಾಕಷ್ಟು ನಷ್ಟವನ್ನೂ ಅನುಭವಿಸುತ್ತಿವೆ. ಸೂಕ್ತ ಅಭ್ಯರ್ಥಿಗಳ ಹುಡುಕಾಟ, ನೇಮಕಾತಿ ಪ್ರಕ್ರಿಯೆ, ತಿಂಗಳುಗಟ್ಟಲೆ ತರಬೇತಿ ಮೊದಲಾದ ವೆಚ್ಚಗಳು ಹಾಗೂ ಅದಕ್ಕೆ ತಗಲುವ ಸಮಯ ಇತ್ಯಾದಿ ಅಂಶಗಳೂ ಐ.ಟಿ ಕಂಪೆನಿಗಳ ಉತ್ಪಾದಕತೆಯ ಸಾಮರ್ಥ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ.ಕೆಲಸ ಬಿಡುವ-ಸೇರುವ ಲೆಕ್ಕಾಚಾರ

2013-14ನೇ ಹಣಕಾಸು ವರ್ಷ ಪರಿಗಣಿಸಿದಲ್ಲಿ ಮೊದಲ ತ್ರೈಮಾಸಿಕದಲ್ಲಿಯೇ ಕಂಪೆನಿ ಬಿಡುವವರ ಸಂಖ್ಯೆ ಹೆಚ್ಚುವ ಸೂಚನೆ ಹೊರಬಿದ್ದಿದೆ. ಇದರ ಹಿಂದೆಯೂ ಒಂದು ಲಾಭದ ಲೆಕ್ಕಾಚಾರವಿದೆ. ಈ ಅವಧಿಯಲ್ಲಿ ನೌಕರಿ ಬದಲಾಯಿಸಿ ಬೇರೆ ಕಂಪೆನಿಗೆ ಸೇರಿದರೆ ಅಲ್ಲಿನ ಕೆಲಸಕ್ಕೆ ಬೆಲೆ ಕಟ್ಟುವಿಕೆ  (ಅಪ್ರೈಸೈಲ್) ವೃತ್ತದೊಳಕ್ಕೆ ಸೇರಿಕೊಳ್ಳುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಹೀಗಾಗಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲೇ ನೌಕರಿ ಬದಲಿಸುವವರ ಪ್ರಮಾಣ ಶೇ 30-31ರಷ್ಟು ಹೆಚ್ಚಳವಾಗಿದೆ.ಕಳೆದ ಹಣಕಾಸು ವರ್ಷದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ಕೆಲವು ಪ್ರತಿಷ್ಠಿತ ಕಂಪೆನಿಗಳ ನೌಕರರಲ್ಲಿ ಬಹುತೇಕರು, ಸಂಬಳದಲ್ಲಿ ಕೇವಲ ಶೇ 10-15ರಷ್ಟು ವಾರ್ಷಿಕ ಏರಿಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಜತೆಗೆ ಬಡ್ತಿ ಹಾಗೂ ಭತ್ಯೆಗಳ ಕುರಿತೂ ಅವರ ಆಕ್ಷೇಪಗಳಿವೆ. ಸಂಬಳದಲ್ಲಿ ಕನಿಷ್ಠ ಶೇ 20ರಷ್ಟಾದರೂ ಹೆಚ್ಚಳ ಆಗಬೇಕು ಎಂಬುದು ಅವರ ನಿರೀಕ್ಷೆ ಹಾಗೂ ಆಗ್ರಹ.ಹೊಸಬರ ನೇಮಕವೂ ಅಷ್ಟಕಷ್ಟೆ

ಅನುಭವಿ ಸಿಬ್ಬಂದಿಗಳು ನೌಕರಿ ಬಿಟ್ಟಾಕ್ಷಣ ಹೊಸಬರಿಗೆ ಆ ಹುದ್ದೆಗಳು ಲಭಿಸುತ್ತವೆ ಎಂದೇನೂ ಹೇಳುವಂತಿಲ್ಲ. ಇದಕ್ಕೊಂದು ನಿದರ್ಶನ 'ಎಚ್‌ಸಿಎಲ್ ಟೆಕ್ನಾಲಜೀಸ್' ಕಂಪೆನಿ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆ (ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿಯೂ ಪ್ರತಿಭಟನೆ ನಡೆದಿತ್ತು).2011ರ ಕೊನೆಯ ಭಾಗದಲ್ಲಿ `ಎಚ್‌ಸಿಎಲ್' ಕಂಪೆನಿ ದೇಶದಾದ್ಯಂತ 5000 ಎಂಜಿನಿಯರಿಂಗ್ ಪದವೀಧರರನ್ನು ಅವರದೇ ಕಾಲೇಜು ಕ್ಯಾಂಪಸ್‌ಗೆ ತೆರಳಿ ಆಯ್ಕೆ ಮಾಡಿಕೊಂಡಿತ್ತು. ಆದರೆ ಆಯ್ಕೆಯಾದವರನ್ನು ನೌಕರಿಗೆ ಸೇರಿಸಿಕೊಳ್ಳುವ ದಿನಾಂಕವನ್ನು ಕನಿಷ್ಠ ಐದು ಬಾರಿ ಅಧಿಕೃತವಾಗಿ ಮುಂದೂಡಿತು. ಆದರೆ ಆಗಸ್ಟ್ 2012ರಲ್ಲಿ ಹೊಸತಾಗಿ ಆಯ್ಕೆ ಪ್ರಕ್ರಿಯೆ ಆರಂಭಿಸಿತು. ಇದರಿಂದ ಬೇಸತ್ತ ನೌಕರಿ ಆಕಾಂಕ್ಷಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದು ವರದಿಯಾಗಿದೆ.`ಇನ್ಫೊಸಿಸ್' ಕೂಡಾ ಈ ಬಾರಿ ತನ್ನ ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿ ಕುರಿತಂತೆ ಸ್ಪಷ್ಟ ನಿಲುವು ತೆಳೆದಿಲ್ಲ.ಅಗತ್ಯವಿದ್ದಲ್ಲಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ಹೇಳಿದೆಯೇ ಹೊರತು, ನೇಮಕ ಪ್ರಕ್ರಿಯೆ ಯಾವಾಗ, ಎಷ್ಟು ಪ್ರಮಾಣದಲ್ಲಿ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸದಾಗಿ ಒಟ್ಟು 10 ಸಾವಿರ ಉದ್ಯೋಗಿಗಳು ಇನ್ಫೊಸಿಸ್ ಸೇರಲಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿಗೆ ಕಳೆದ ವರ್ಷವೇ ನೇಮಕಾತಿ ಪತ್ರ ನೀಡಲಾಗಿದೆ. ಆದಾಗ್ಯೂ ಕಂಪೆನಿ ಅನುಭವಿಗಳು ಹಾಗೂ ಹೊಸಬರನ್ನು 70:30ರ ಅನುಪಾತದಲ್ಲಿ ನೇಮಕ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತದೆ.ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ವೇಳೆ ಸುಮಾರು ಒಂಬತ್ತು ಸಾವಿರ ಉದ್ಯೋಗಿಗಳು ಹೊಸದಾಗಿ ಕಂಪೆನಿಗೆ ಕೆಲಸಕ್ಕೆ ಸೇರಿದ್ದಾರೆ. ಅದೇ ವೇಳೆ ಎಂಟು ಸಾವಿರ ಮಂದಿ ಕಂಪೆನಿ ತೊರೆದಿದ್ದಾರೆ. ಇದರಿಂದಾಗಿ ಮಾರ್ಚ್ 31ರ ವೇಳೆಗೆ ಕಂಪೆನಿಯಲ್ಲಿ ಒಟ್ಟು 1.56 ಲಕ್ಷ ಉದ್ಯೋಗಿಗಳು ಉಳಿದಿದ್ದಾರೆ. ಆದರೂ ವೇತನದಲ್ಲಿ ಏರಿಕೆ ಮಾತ್ರ ಆಗುತ್ತಿಲ್ಲ ಎಂಬ ಗುಸುಗುಸು ಈಗಾಗಲೇ ಕಂಪೆನಿಯಲ್ಲಿ ಹರಿದಾಡುತ್ತಿದೆ.ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಕಂಪೆನಿ `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'(ಟಿಸಿಎಸ್) ವರದಿ ಮಾತ್ರ ಕೊಂಚ ಭಿನ್ನವಾಗಿದೆ. ವೇತನದಲ್ಲಿ ಶೇ 7ರಷ್ಟು ಹೆಚ್ಚು ಮಾಡಲು ಮುಂದಾಗಿರುವ ಟಾಟಾ ಸಮೂಹದ ಈ ಸಂಸ್ಥೆ, 2013-14ನೇ ಹಣಕಾಸು ವರ್ಷದಲ್ಲಿ ಒಟ್ಟು 45 ಸಾವಿರ ಉದ್ಯೋಗಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವ ಯೋಜನೆ ಹೊಂದಿದೆ. ಇವರಲ್ಲಿ 25 ಸಾವಿರ ಉದ್ಯೋಗಿಗಳನ್ನು `ಕ್ಯಾಂಪಸ್ ಆಯ್ಕೆ' ಮೂಲಕ ಗುರುತಿಸಿರುವ ಕಂಪೆನಿ ಈಗಾಗಲೇ ಅವರಿಗೆ ನೇಮಕ ಪತ್ರ ರವಾನಿಸಿದೆ.ಅವರೆಲ್ಲರೂ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ(ಜುಲೈ-ಸೆಪ್ಟೆಂಬರ್) ಅವಧಿಯಲ್ಲಿ ಕಂಪೆನಿ ಸೇರಲಿದ್ದಾರೆ. ಆದರೆ ಉಳಿದ ಐ.ಟಿ ಕಂಪೆನಿಗಳಲ್ಲಿ ಹೊಸ ನೇಮಕ ಪ್ರಕ್ರಿಯೆ ಕುರಿತ ಚಟುವಟಿಕೆ ಅಷ್ಟೇನೂ ಉತ್ತಮವಾಗಿಲ್ಲ.ಇದೇ ಏಪ್ರಿಲ್ 19ರಂದು ಕಳೆದ ಹಣಕಾಸು ವರ್ಷದ 4ನೇ ತ್ರೈಮಾಸಿಕ ವರದಿ ಪ್ರಕಟಸಿದ `ವಿಪ್ರೊ' ತನ್ನಲ್ಲಿ ನೌಕರರ ವಲಸೆ ಈ ಹಿಂದಿನ ಎರಡುವರ್ಷಗಳಿಗೆ ಹೋಲಿಸಿದಲ್ಲಿ ಕಡಿಮೆಯಾಗಿದೆ ಎಂದು ತಿಳಿಸಿದೆ. ಇದಕ್ಕಾಗಿ ವಿಪ್ರೊ ಮಾನವ ಸಂಪನ್ಮೂಲದ ರೂಪುರೇಷೆಯನ್ನೇ ಬದಲಿಸಿದೆ. 2012 ಹಾಗೂ 13ನೇ ಆರ್ಥಿಕ ವರ್ಷದಲ್ಲಿ ನೌಕರರು ಬಿಡುವ ಪ್ರಮಾಣ ಕೇವಲ ಶೇ 13.7 ಮಾತ್ರ ಎಂದು ಹೇಳಲಾಗಿದೆ. ಪ್ರತಿಯೊಂದು ವ್ಯಾವಹಾರಿಕ ವಿಭಾಗಕ್ಕೂ ಪ್ರತ್ಯೇಕ ಮಾನವ ಸಂಪನ್ಮೂಲ ವಿಭಾಗವನ್ನು ತೆರೆದು ನೌಕರರ ಸಮಸ್ಯೆಗಳನ್ನು ಬುಡದಲ್ಲೇ ನಿವಾರಿಸುವ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ ಎಂದು ಸಂಸ್ಥೆಯ ಮೂಲಗಳು ಹೇಳಿವೆ.ಆದರೂ ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ವೇತನ ಏರಿಕೆ ಪ್ರಮಾಣ ತಗ್ಗಲಿದೆ ಎಂಬುದು ಸದ್ಯ ಉದ್ಯಮ ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು. ದೇಶದೊಳಗೆ ಹಾಗೂ ಹೊರದೇಶದಲ್ಲಿ ಕೆಲಸ ಮಾಡುವ ನೌಕರರಿಗೆ ಶೇ 8 ಹಾಗೂ ಶೇ 3ರ ಆಧಾರದಲ್ಲಿ ವೇತನ ಏರಿಕೆ ಮಾಡಲಾಗಿತ್ತು. ಆದರೆ ಹೊರಗಿರುವ ಕಂಪೆನಿಯ ಗ್ರಾಹಕರಲ್ಲಿ ಶೇ 36ರಷ್ಟು ಸ್ಥಳೀಯ ಪ್ರತಿಭೆಗಳೇ ಇದ್ದಾರೆ. ಇದು ಈ ವರ್ಷ ಶೇ 50ಕ್ಕೆ ಏರಲಿದೆ ಎಂದು ಹೇಳಲಾಗಿದೆ.ಅಮೆರಿಕದತ್ತ ಒಲವು

ಈ ನಡುವೆ ಭಾರತದಿಂದ ಅಮೆರಿಕಕ್ಕೆ ವಲಸೆ ಅರ್ಜಿ(ವೀಸಾ) ಸಲ್ಲಿಸುವವರ ಸಂಖ್ಯೆ ಈ ಬಾರಿ ಶೇ 20ರಷ್ಟು ಹೆಚ್ಚಾಗಿದೆ. ಇದು ಈ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದ್ದಾಗಿದೆ. ರಾಷ್ಟ್ರೀಯ ಸಾಫ್ಟ್‌ವೇರ್ ಸೇವಾ ಕಂಪೆನಿಗಳ ಒಕ್ಕೂಟ(ನಾಸ್‌ಕಾಂ) ವರದಿ ಪ್ರಕಾರ ಈ ವರ್ಷ ದೇಶೀಯ ಐ.ಟಿ ಮಾರುಕಟ್ಟೆಯಲ್ಲಿ 50 ಸಾವಿರ ಉದ್ಯೋಗ ಖೋತಾ ಆಗಲಿದೆ!ಇದೇ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಪದವೀಧರರ ನೇಮಕಾತಿ ಸಮೀಕ್ಷೆ, ಭಾರತೀಯ ಅರ್ಜಿದಾರರು ಕಳೆದ ವರ್ಷ ಕೇವಲ ಶೇ 4ರಷ್ಟಿದ್ದರೆ ಈ ಬಾರಿ ಶೇ 20ರಷ್ಟು ಹೆಚ್ಚಾಗಿದ್ದರೆ, ಚೀನಾ ಅರ್ಜಿ ಶೇ 5ರಷ್ಟು ಇಳಿಮುಖವಾಗಿದೆ. ಬ್ರೆಜಿಲ್ (ಶೇ 24) ದೇಶದಿಂದ ಅರ್ಜಿಗಳು ಹೆಚ್ಚಾಗಿದ್ದರೆ ಕೊರಿಯಾ (ಶೇ -13), ತೈವಾನ್ (ಶೇ -13), ಮೆಕ್ಸಿಕೊ (ಶೇ -11) ಹಾಗೂ ಕೆನಡಾ (ಶೇ -4) ಅರ್ಜಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂಬ ಅಂಕಿ-ಅಂಶ ಹೊರಹಾಕಿದೆ.ಭಾರತದಿಂದ ಈ ರೀತಿಯ ಪ್ರತಿಕ್ರಿಯೆಗೆ ಇಳಿಮುಖವಾಗಿರುವ ಕ್ಯಾಂಪಸ್ ಸಂದರ್ಶನ ಹಾಗೂ ಹೊಸ ನೇಮಕಾತಿ ಕೊರತೆಯೇ ಮುಖ್ಯ ಕಾರಣ ಎಂದು ಅಂದಾಜು ಮಾಡಲಾಗಿದೆ. ಈ ವರ್ಷ ಹೊಸಬರ ನೇಮಕಾತಿ ಶೇ 60ರಷ್ಟು ಕಡಿಮೆಯಾಗಿದೆ. ಈ ಪ್ರಮಾಣ ಐ.ಟಿ ಕ್ಷೇತ್ರದಲ್ಲೇ ಅಧಿಕ.ಎಂಜಿನಿಯರಿಂಗ್ ಕಾಲೇಜುಗಳಲ್ಲಿ ರ‍್ಯಾಂಕಿಂಗ್ ಪಟ್ಟಿಯ ಮೊದಲ 30 ಕಾಲೇಜುಗಳಿಗೆ ಇದು ಬಾಧಿಸದಿದ್ದರೂ, ಉಳಿದ ಕಾಲೇಜುಗಳಿಗೂ `ಕ್ಯಾಂಪಸ್ ಆಯ್ಕೆ' ಇಲ್ಲದ ಬಿಸಿ ಮುಟ್ಟಿದೆ. ಈ ವರ್ಷ `ಕಾಗ್ನಿಜೆಂಟ್' ಏಳು ಕಾಲೇಜುಗಳಿಗೆ ಭೇಟಿ ನೀಡಿರುವುದು ವರದಿಯಾಗಿದೆ. `ಟಿಸಿಎಸ್' ಕೂಡಾ ಕಾಲೇಜು ಕ್ಯಾಂಪಸ್‌ಗೆ ಭೇಟಿ ನೀಡಿದ್ದರೂ ಅದು ಈ ಹಿಂದಿನ ವರ್ಷಗಳಿಗಿಂತ ಕಡಿಮೆ ಪ್ರಮಾಣವಾಗಿದೆ. ಹೀಗಾಗಿ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ವಿಷಯ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಅಮೆರಿಕ ವಲಸೆ ಈಗ ಗಣನೀಯವಾಗಿ ಹೆಚ್ಚುತ್ತಿದೆ.ಈ ಎಲ್ಲಾ ಬೆಳವಣಿಗೆಗಳು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಒತ್ತಡ ಸೃಷ್ಟಿಸುತ್ತಿದೆ. ಅದಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ದೇಶದ ಯುವಜನತೆ, ಅದರಲ್ಲೂ ತಾಂತ್ರಿಕ ಶಿಕ್ಷಣವನ್ನೇ ಆಧರಿಸಿದವರು ಉದ್ಯೋಗದ ಬರ ಎದುರಿಸಬೇಕಾಗಬಹುದೇ ಎಂಬ ಪ್ರಶ್ನೆಯೂ ಈಗ ಕಾಣಿಸಿಕೊಳ್ಳಲಾರಂಭಿಸಿದೆ. 

 

ಪ್ರತಿಕ್ರಿಯಿಸಿ (+)