ಐಟಿ ಪರಿಸರದಲ್ಲಿ ಹಸಿರು ಹಕ್ಕಿಗಳು

7

ಐಟಿ ಪರಿಸರದಲ್ಲಿ ಹಸಿರು ಹಕ್ಕಿಗಳು

Published:
Updated:

ಸಿರು ಸೀರೆಯುಟ್ಟಂತೆ ಕಾಣುವ ವಿಶಾಲ ಅಂಗಳ. ಅಲ್ಲಲ್ಲಿ ಕಾಡು ಮರಗಳು, ಬಿದಿರಿನ ಮೆಳೆ, ಬೃಹತ್ ಕಟ್ಟಡಗಳನ್ನೇ ಮರೆ ಮಾಡುವಷ್ಟು ಹಸಿರ ಸಿರಿ. ಬಿಸಿಲಿನ ನಡುವೆಯೂ ತಂಪು ಸೂಸುವ ತಂಗಾಳಿ, ಕಣ್ಮನ ತಣಿಸುವ ಬಣ್ಣಬಣ್ಣದ ಪುಷ್ಪಗಳ ನಿತ್ಯೋತ್ಸವ. ಮುಂಜಾನೆ ಮಂಜಿನೊಡನೆ ಹಾರಾಡುವ ಗಿಳಿ, ಗೊರವಂಕ, ಪಿಕಳಾರ, ಕಿಂಗ್‌ಫಿಷರ್‌ನಂತಹ ಪಕ್ಷಿಗಳ ಕಲರವ.ಇದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಸ್ಯಾಪ್ ಲ್ಯಾಬ್ ಸಾಫ್ಟ್‌ವೇರ್ ಕಂಪೆನಿಯ ವಿಶಾಲ ಅಂಗಳದಲ್ಲಿರುವ ಪಕ್ಷಿ-ಪರಿಸರದ ದೃಶ್ಯ ಕಾವ್ಯ !23 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್‌ನಲ್ಲಿ ಶೇ 20ರಷ್ಟು ಪ್ರದೇಶದಲ್ಲಿ ಮಾತ್ರ ಕಟ್ಟಡಗಳಿವೆ. ಉಳಿದೆಡೆ ಮರ, ಗಿಡ, ಉದ್ಯಾನ, ಚೆರ‌್ರಿಗಿಡಗಳ ಹಸಿರು ಚಪ್ಪರ, ನೀರಿನ ಕಾರಂಜಿ, ಕಿರು ಅರಣ್ಯ, ಪುಟ್ಟದಾದ ಮಳೆ ಕಾಡೂ ಇದೆ.ಕ್ಯಾಂಪಸ್ ಹೊರಗಷ್ಟೇ ಅಲ್ಲ, ಕಟ್ಟಡಗಳ ಒಳಗೂ `ಪರಿಸರ ಸ್ನೇಹಿ~ ವಾತಾವರಣ. ಮಲೆನಾಡಿನ ಚೌಕಿ ಮನೆಗಳಂತೆ ನಿರ್ಮಾಣವಾಗಿರುವ ಗಾಜಿನ ಕಟ್ಟಡಗಳಲ್ಲಿ ಭರ್ಜರಿ ಗಾಳಿ-ಬೆಳಕು. ಕಟ್ಟಡಕ್ಕೆ ಬಳಸಿರುವ ಪರಿಸರ ಸ್ನೇಹಿ ಗಾಜುಗಳು ಸೂರ್ಯನ ಶಾಖವನ್ನು ಹೀರಿಕೊಳ್ಳುತ್ತವೆ. ಹೀಗಾಗಿ ಬೇಸಿಗೆಯಲ್ಲೂ ಕಚೇರಿ ಒಳಗೆ ತಂಪಿನ ವಾತಾವರಣ.ಎ.ಸಿಗಳಿಗೆ ಕೆಲ ಕಾಲ ವಿಶ್ರಾಂತಿ. `ಕಟ್ಟಡಗಳನ್ನು ಆಧುನಿಕತೆಗೆ ತಕ್ಕಂತೆ ವಿನ್ಯಾಸಗೊಳಿಸಿದ್ದರೂ, ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಚಿಸಲಾಗಿದೆ~ ಎನ್ನುತ್ತಾರೆ ವ್ಯವಸ್ಥಾಪಕ ರತ್ನಂ ಬಾಲಸುಬ್ರಹ್ಮಣ್ಯ.ಸಿಬ್ಬಂದಿ ಕೆಲಸ ಮಾಡುವ ಪ್ರತಿ ಕ್ಯೂಬಿಕಲ್‌ಗಳ ಸುತ್ತ ಕುಂಡಗಳಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಕಟ್ಟಡದೊಳಗೆ ಸ್ವಾಭಾವಿಕ ಗಾಳಿ ಬೆಳಕು ಧಾರಾಳವಾಗಿರುವುದರಿಂದ ಗಿಡಗಳು ನಿತ್ಯ ಹರಿದ್ವರ್ಣವಾಗಿರುತ್ತವೆ.ಈ `ಹಸಿರು ಕೂಸುಗಳ~ ಆರೈಕೆಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. ಅವರು ಗಿಡಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತಾರೆ. ಕ್ಯುಬಿಕಲ್ ಒಳಗಿನ ಗಾಳಿಯ ಗುಣಮಟ್ಟವನ್ನು ಪ್ರತಿ ದಿನ ಪರೀಕ್ಷಿಸಲಾಗುತ್ತದೆ. ಕಟ್ಟಡದ ಒಳಗೆ ಇಂಥ ಆಹ್ಲಾದಕರ ವಾತಾವರಣ ಇರುವುದರಿಂದ ಕೆಲಸ ಮಾಡಲು ಶ್ರಮವೆನಿಸುವುದಿಲ್ಲ~ ಎಂದು ಸಿಬ್ಬಂದಿಗಳು ಖುಷಿಯಿಂದ ಹೇಳುತ್ತಾರೆ.ಪಕ್ಷಿ ಕಾಶಿ ಕ್ಯಾಂಪಸ್

ಕ್ಯಾಂಪಸ್‌ಗೆ ಭೇಟಿ ನೀಡಿದ ಖ್ಯಾತನಾಮರ ಹೆಸರಲ್ಲಿ ಸಾಲು ಸಾಲು ಗಿಡಗಳನ್ನು ನೆಡಲಾಗಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹವಾಗ್, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ಇನ್ಫೋಸಿಸ್‌ನ ನಾರಾಯಣ ಮೂರ್ತಿ... ಹೀಗೆ ಹಲವಾರು ಗಣ್ಯರು ತಮ್ಮ ಭೇಟಿಯ ನೆನಪಿಗಾಗಿ ಗಿಡಗಳನ್ನು ನೆಟ್ಟಿದ್ದಾರೆ.

ಗಿಡ-ಮರಗಳು, ತರು-ಲತೆಗಳ ವೈವಿಧ್ಯದ ಜೊತೆಗೆ ಕ್ಯಾಂಪಸ್‌ನ ತುಂಬಾ ಹಕ್ಕಿಗಳ ಕಲರವ. ಸುಮಾರು 50 ಬಗೆಯ ಪಕ್ಷಿಗಳು ಈ ಕ್ಯಾಂಪಸ್‌ನ ಒಳಗೆ, ಹೊರಗೂ ಹಾರಾಡುತ್ತವೆ.

 

ಗಿಡ, ಮರ, ಹಸಿರು ಹುಲ್ಲಿನ ಮೇಲೆ ಕುಳಿತು, ಹುಳು ಹುಪ್ಪಟೆ ತಿನ್ನುತ್ತಾ, ಸ್ವಚ್ಛಂದವಾಗಿ ವಿಹರಿಸುತ್ತವೆ. ಕ್ಯಾಂಪಸ್‌ನಲ್ಲಿ ಪಕ್ಷಿ ಸ್ನೇಹಿ ವಾತಾವರಣ ನಿರ್ಮಿಸುವುದಕ್ಕಾಗಿಯೇ ಕಂಪೆನಿ ಡಾ. ಕೃಷ್ಣ ಎಂಬ ಖ್ಯಾತ ಪಕ್ಷಿ ತಜ್ಞರೊಬ್ಬರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ. ಜೊತೆಗೆ ಪಕ್ಷಿ ವೀಕ್ಷಣೆಯ ಹವ್ಯಾಸವಿರುವ ಇಬ್ಬರು ಉದ್ಯೋಗಿಗಳು ಕಂಪೆನಿಯಲ್ಲಿದ್ದಾರೆ.ಇವರೆಲ್ಲರ ನೆರವಿನಿಂದ ಕ್ಯಾಂಪಸ್‌ನಲ್ಲಿ ಹಾರಾಡುವ ಹಕ್ಕಿಗಳನ್ನು ಗುರುತಿಸಿ, ಕ್ಯಾಮೆರಾದಲ್ಲಿ ಸೆರೆಹಿಡಿದು, `ಎಕ್ಸ್‌ಪೀರಿಯನ್ಸ್ ದಿ ವಂಡರ್ಸ್‌ ಆಫ್ ನೇಚರ್~ ಎಂಬ ವರ್ಣರಂಚಿತ ಪುಸ್ತಕವನ್ನು ಸಂಸ್ಥೆ ಹೊರತಂದಿದೆ.ಒಂದೂವರೆ ಎರಡು ವರ್ಷದ ಹಿಂದೆ ಕ್ಯಾಂಪಸ್ ಅಂಗಳದಲ್ಲಿ ಬೆಳೆಸಿದ ಹುಲ್ಲು ಹಾಸನ್ನು (ಲಾನ್) ಸಮತಟ್ಟಾಗಿ ಕತ್ತರಿಸಿ ಒಪ್ಪ ಓರಣ ಮಾಡಲಾಗುತ್ತಿತ್ತು. ಆದರೆ ಈಗ ಡಾ.ಕೃಷ್ಣ ಅವರ ಸಲಹೆ ಮೇರೆಗೆ ಹುಲ್ಲನ್ನು ಎತ್ತರವಾಗಿ ಬೆಳೆಸುತ್ತಿದ್ದಾರೆ.

 

ಇದರಿಂದ ಮಳೆ ನೀರು ಭೂಮಿಗೆ ಇಂಗುತ್ತಿದೆ. ಹುಲ್ಲಿನ ಅಡಿಯಲ್ಲಿ ತೇವಾಂಶ ನಿರಂತರವಾಗಿದೆ. ಕ್ರಿಮಿ ಕೀಟಗಳು ಜೀವಿಸುತ್ತಿವೆ. ಇವುಗಳನ್ನು ಹೆಕ್ಕಿ ತಿನ್ನಲು ಪಕ್ಷಿಗಳು ಬರುತ್ತಿವೆ. ಪ್ರಕೃತಿಯೊಳಗಿನ `ಆಹಾರ ಸರಪಳಿ~ಯೊಂದು ಕ್ಯಾಂಪಸ್‌ನಲ್ಲಿ ಅನಾವರಣಗೊಂಡಿದೆ.ಈ ಕ್ಯಾಂಪಸ್‌ನಲ್ಲಿ ಹಕ್ಕಿಗಳನ್ನು ಸಾಕುತ್ತಿಲ್ಲ. ಹಕ್ಕಿ ಆಕರ್ಷಿಸುವ ಪರಿಸರವನ್ನು ನಿರ್ಮಿಸಲಾಗಿದೆ. ಅವುಗಳಿಗೆ ವರ್ಷವಿಡೀ ಕುಡಿಯಲು ನೀರು ಲಭ್ಯವಿದೆ. ಕುಳಿತುಕೊಳ್ಳಲು, ಸಂಗಾತಿಗಳ ಜೊತೆ ವಿಹರಿಸಲು ಮರ-ಗಿಡಗಳಿವೆ. ಗೂಡು ಕಟ್ಟಿ ಮರಿ ಮಾಡಲು ಪೊದೆಗಳಿವೆ. `ನೀವು ನಂಬೋದಿಲ್ಲ. ನಮ್ಮ ಕಂಪೆನಿಯ ಉದ್ಯೋಗಿಗಳಷ್ಟೇ ಸ್ವಚ್ಛಂದವಾಗಿ ಹಕ್ಕಿಗಳು ಕ್ಯಾಂಪಸ್‌ನಲ್ಲಿ ಹಾರಾಡುತ್ತವೆ~ ಎನ್ನುತ್ತಾರೆ ಫೆಸಿಲಿಟಿ ಮುಖ್ಯಸ್ಥ ಲಕ್ಷ್ಮಣ್.ಸಾವಯವ ತೋಟ

ಸ್ಯಾಪ್‌ಲ್ಯಾಬ್‌ನಲ್ಲಿ 6500 - 7000 ಸಿಬ್ಬಂದಿ ಇದ್ದಾರೆ. ಇವರಿಗೆಲ್ಲ ಕ್ಯಾಂಟಿನ್ ಸೌಲಭ್ಯವಿದೆ. ಒಟ್ಟು ಏಳು ರೆಸ್ಟೊರೆಂಟ್‌ಗಳಿವೆ. ದಿನಕ್ಕೆ ಕನಿಷ್ಠ 400 ಕಿಲೊದಷ್ಟು ಆಹಾರ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆಹಾರ ತ್ಯಾಜ್ಯ, ಕೈತೋಟದ ತ್ಯಾಜ್ಯ ಎರಡನ್ನೂ ಸೇರಿಸಿ ಸಾವಯವ ಕಾಂಪೋಸ್ಟ್ ತಯಾರಿಸುತ್ತಾರೆ.ಸರಾಸರಿ ಲೆಕ್ಕದಲ್ಲಿ ನಿತ್ಯ 70-80 ಕಿಲೊ ಉತ್ಕೃಷ್ಟ ಸಾವಯವ ಗೊಬ್ಬರ ತಯಾರಾಗುತ್ತದೆ. ಇದೇ ಗೊಬ್ಬರವನ್ನು ಕ್ಯಾಂಪಸ್‌ನ ತೋಟಕ್ಕೆ ಬಳಸುತ್ತಾರೆ.ಉಳಿದದ್ದನ್ನು ಉಚಿತವಾಗಿ ಕಂಪೆನಿಯ ನೌಕರರಿಗೆ ಹಂಚುತ್ತಾರೆ. ಆ ಮೂಲಕ ಮನೆ ಮನೆಯಲ್ಲೂ ಸಾವಯವ ಕೈತೋಟ ನಿರ್ಮಾಣಕ್ಕೆ ಕಂಪೆನಿ ನೆರವಾಗುತ್ತಿದೆ. ಕ್ಯಾಂಪಸ್‌ನಲ್ಲಿ ಸಾವಯವ ಗೊಬ್ಬರ ಬಳಸುತ್ತಿರುವುದರಿಂದ ಗಿಡಗಳ ಬೆಳವಣಿಗೆ ಸಮೃದ್ಧವಾಗಿದೆ.ಪರಿಮಳ ಸೂಸುವ ಹೂವುಗಳು ಜೇನು ಹುಳುಗಳನ್ನು ಆಕರ್ಷಿಸುತ್ತಿವೆ. `ಸಾಮಾನ್ಯವಾಗಿ ಕೀಟನಾಶಕ ಸಿಂಪಡಿಸಿದ ಗಿಡಗಳ ಬಳಿ ಜೇನ್ನೊಣಗಳು ಸುಳಿಯುವುದಿಲ್ಲ. ಹಾಗೊಮ್ಮೆ ಹಾದಿ ತಪ್ಪಿ ಬಂದರೂ, ಅವುಗಳು ಬದುಕುವುದಿಲ್ಲ~ ಎನ್ನುವುದು ತಜ್ಞರ ಅಭಿಪ್ರಾಯ. ಇಂಥ ಯಾವ ಲಕ್ಷಣಗಳು ಕ್ಯಾಂಪಸ್‌ನಲ್ಲಿ ಇಲ್ಲ. ಗೆಲಾರ್ಟಿಯಾ ಹೂವಿನ ಮಕರಂದ ಹೀರಲು ಬರುವ ಜೇನ್ನೊಣಗಳು ಹಿಂಡು ಹಿಂಡಾಗಿ ಹೂವಿನ ಗಿಡಗಳ ಮೇಲೆ ದಾಳಿ ಮಾಡುತ್ತಿರುತ್ತವೆ.

ಪ್ರತಿ ಹೆಜ್ಜೆಯೂ ಪರಿಸರ ಸ್ನೇಹಿ


ಕ್ಯಾಂಪಸ್‌ನಲ್ಲಿ ಅನುಸರಿಸುವ ಪ್ರತಿ ಹೆಜ್ಜೆಯೂ ಪರಿಸರ ಸ್ನೇಹಿಯಾಗಿರಬೇಕೆಂಬುದು ಸ್ಯಾಪ್ ಆಶಯ. ಅದಕ್ಕಾಗಿಯೇ ಆಹಾರ ಪದ್ಧತಿಯಲ್ಲೂ ದೇಸಿ ಹಣ್ಣು, ತರಕಾರಿ, ಎಳನೀರಿನಂತಹ ಪೇಯಗಳನ್ನು ಸಿಬ್ಬಂದಿಗೆ ಪೂರೈಸಲಾಗುತ್ತಿದೆ.`ವಿದ್ಯುತ್ ಕಾರು ಬಳಸಿ ವಾಯು ಮಾಲಿನ್ಯ ನಿಯಂತ್ರಿಸಿ~ ಎಂದು ಹೇಳುವ ಕಂಪೆನಿ, ವಿದ್ಯುತ್ ಕಾರು ಖರೀದಿಸುವವರಿಗೆ ಮುಕ್ಕಾಲು ಭಾಗ ಹಣ ನೀಡುತ್ತದೆ. ಕಾರುಗಳನ್ನು ಉಚಿತವಾಗಿ ಚಾರ್ಜ್ ಮಾಡಿಕೊಳ್ಳಲು ತನ್ನ ಅಂಗಳದಲ್ಲಿ `ಚಾರ್ಜ್‌ರ್ ಕೇಂದ್ರಗಳನ್ನು~ ತೆರೆದಿದೆ. 40ಕ್ಕೂ ಹೆಚ್ಚು ಉದ್ಯೋಗಿಗಳು ಈಗ ವಿದ್ಯುತ್ ಕಾರುಗಳನ್ನು ಬಳಸುತ್ತಿದ್ದಾರೆ.

 

ಇದರಿಂದ ಪರಿಸರ ಮಾಲಿನ್ಯ ತಪ್ಪುತ್ತಿದೆ. ಪೆಟ್ರೋಲ್‌ಗೆ ಸುರಿಯುವ ಹಣ ಉಳಿತಾಯವಾಗುತ್ತಿದೆ ಎಂದು ಕಾರ್ ಬಳಕೆದಾರ ಸಿಬ್ಬಂದಿ ಸಂತಸ ವ್ಯಕ್ತಪಡಿಸುತ್ತಾರೆ

ಕ್ಯಾಂಪಸ್‌ನಲ್ಲಿ ಹಕ್ಕಿಗಳಿಗೆ `ರೋಟಿ, ಕಪಡಾ ಔರ್ ಮಕಾನ್~, ಜೇನ್ನೊಣಗಳಿಗೆ ಮಕರಂದದ ಸಿಹಿಯೂಟ, ಸಿಬ್ಬಂದಿಗೆ ವಿದ್ಯುತ್ ಕಾರ್‌ನಲ್ಲಿ ಓಡಾಡುವ ಭಾಗ್ಯ, ಗಿಡ-ಮರಗಳಿಗೆ ವಿಷ ರಹಿತ ಆಹಾರ... ಈ ಎಲ್ಲ ಪರಿಸರ ಸ್ನೇಹಿ ಸೌಲಭ್ಯಗಳೊಂದಿಗೆ ಕೆಲಸ ಮಾಡುತ್ತಿರುವ ಸಿಬ್ಬಂದಿ ನಿಜಕ್ಕೂ `ಧನ್ಯೋಸ್ಮಿ~!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry