ಐಟಿ ಬಲೆಗೆ ಬಿದ್ದ ದಂಪತಿಗೆ ಇ.ಡಿ ನೋಟಿಸ್

7

ಐಟಿ ಬಲೆಗೆ ಬಿದ್ದ ದಂಪತಿಗೆ ಇ.ಡಿ ನೋಟಿಸ್

Published:
Updated:

ಭೋಪಾಲ್ (ಪಿಟಿಐ): ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ)ಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಆದಾಯ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ಅಮಾನತುಗೊಂಡಿರುವ ಐಎಎಸ್ ದಂಪತಿ ಅರವಿಂದ್ ಜೋಷಿ ಮತ್ತು ಟಿನು ಜೋಷಿ ಅವರಿಗೆ ಗುರುವಾರ ನೋಟಿಸ್ ನೀಡಿದೆ.

ಅರವಿಂದ್ ಜೋಷಿ ಅವರ ಅನಿವಾಸಿ ಭಾರತೀಯ ಸಹೋದರಿಯರಾದ ವಿಭಾ ಮತ್ತು ಅಭಾ ಎಂಬುವವರು ಎಫ್‌ಇಎಂಎಯನ್ನುಉಲ್ಲಂಘಿಸಿ ಕೃಷಿ ಜಮೀನು ಖರೀದಿಸಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ. ಅಲ್ಲದೆ ಕಾಯ್ದೆ ಉಲ್ಲಂಘಿಸಿ ಹಲವಾರು ಕಡೆ ಬಂಡವಾಳ ಹೂಡಿಕೆ ಮಾಡಿರುವದಕ್ಕೆ ವಿವರಣೆ ನೀಡುವಂತೆಯೂ ಅದು ಸೂಚಿಸಿದೆ.

ಅರವಿಂದ್ ಜೋಷಿ ಎಫ್‌ಇಎಂಎಯನ್ನು ಉಲ್ಲಂಘನೆ ಮಾಡಿ ಮಧ್ಯಪ್ರದೇಶದ ಹಲವೆಡೆ ಸುಮಾರು 100 ಎಕರೆಗೂ ಅಧಿಕ ಕೃಷಿ ಭೂಮಿ ಖರೀದಿಸಿರುವುದು ಐಟಿ ಇಲಾಖೆ ವಶಪಡಿಸಿಕೊಂಡ ದಾಖಲೆಗಳಿಂದ ಸಾಬೀತಾಗಿದೆ. ಅನಿವಾಸಿ ಭಾರತೀಯರು ದೇಶದಲ್ಲಿ ಕೃಷಿ ಭೂಮಿ, ಫಾರ್ಮ್‌ಹೌಸ್, ತೋಟಗಳನ್ನು ಕೊಳ್ಳುವುದಕ್ಕೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಅರವಿಂದ್ ಜೋಷಿ ಅವರ ಸಹೋದರಿಯರ ಹೆಸರಿನಲ್ಲಿ ಭೂಮಿ ಖರೀದಿಸಿರುವುದು ಮತ್ತು ಅವರ ಮನೆಯಲ್ಲಿ ವಿದೇಶಿ ಕರೆನ್ಸಿ ಲಭ್ಯವಾದ ಬಗ್ಗೆ ಇ.ಡಿಗೆ ಮಾಹಿತಿ ನೀಡಿರುವುದಾಗಿ ಐಟಿ ಇಲಾಖೆ ಮೂಲಗಳು ತಿಳಿಸಿವೆ.

ಈ ಮಧ್ಯೆ ಐಟಿ ಬಲೆಗೆ ಬಿದ್ದ ದಂಪತಿಯನ್ನು ಸೇವೆಯಿಂದ ತೆಗೆದುಹಾಕುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ‘ಇದುವರೆಗೂ ಇಬ್ಬರನ್ನೂ ಸೇವೆಯಿಂದ ತೆಗೆದುಹಾಕದಿರುವುದು ಅಚ್ಚರಿ ಉಂಟುಮಾಡಿದೆ’ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಕೆ.ಕೆ.ಮಿಶ್ರಾ ಹೇಳಿದ್ದಾರೆ.

ಕಳೆದ ವರ್ಷದ ಫೆಬ್ರುವರಿಯಲ್ಲಿ ಈ ದಂಪತಿ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಮೂರು ಕೋಟಿ ರೂ ಅಕ್ರಮ ಹಣ ಪತ್ತೆಹಚ್ಚಿದ್ದರು. ಈ ದಾಳಿ ಬಳಿಕ ಇಬ್ಬರನ್ನೂ ಸೇವೆಯಿಂದ ಅಮಾನತ್ತಿನಲ್ಲಿರಿಸಲಾಗಿತ್ತು. ಐಟಿ ಅಧಿಕಾರಿಗಳು ಬುಧವಾರ ಪುನಃ ದಂಪತಿ ನಿವಾಸದ ಮೇಲೆ ದಾಳಿ ನಡೆಸಿ 360 ಕೋಟಿ ರೂಪಾಯಿಯ ಅಕ್ರಮ ಸಂಪತ್ತನ್ನು ಪತ್ತೆಹಚ್ಚಿದ್ದರು. ಈ ಅಕ್ರಮ ಸಂಪತ್ತಿನ ಬಗ್ಗೆ ಐಟಿ ಮಧ್ಯಪ್ರದೇಶದ ಪ್ರಧಾನ ಕಾರ್ಯದರ್ಶಿ ಅವ್ನಿ ವೈಶ್ ಮತ್ತು ಲೋಕಾಯುಕ್ತ ಪಿ.ವಿ.ನವಲೇಕರ್ ಅವರಿಗೆ ಏಳು ಸಾವಿರ ಪುಟಗಳ ವರದಿ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry