ಶುಕ್ರವಾರ, ಮೇ 7, 2021
27 °C

ಐ.ಟಿ ರಿಟರ್ನ್ಸ್: ವಿದೇಶದ ಆಸ್ತಿ ವಿವರ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಭಾರತೀಯರು ವಿದೇಶಿ ಬ್ಯಾಂಕ್‌ಗಳಲ್ಲಿ ಇರಿಸಿರುವ ಕಪ್ಪು ಹಣಕ್ಕೆ ಕಡಿವಾಣ ವಿಧಿಸಲು, ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಸುವ ಅರ್ಜಿ ನಮೂನೆಯಲ್ಲಿ (ಐ.ಟಿ ರಿಟರ್ನ್ಸ್) ವಿದೇಶಗಳಲ್ಲಿನ ಆಸ್ತಿ ವಿವರ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.2012-13ನೇ ಅಂದಾಜು ವರ್ಷದ  ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವ (ಐಟಿಆರ್) ಅರ್ಜಿಯಲ್ಲಿ ಪ್ರತ್ಯೇಕವಾಗಿ ಈ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ ಮತ್ತು ಆಸ್ತಿ ಖರೀದಿಸಿದ ಆದಾಯ ತೆರಿಗೆ ಪಾವತಿದಾರರು, ಇನ್ನು ಮುಂದೆ ವಿದೇಶಗಳಲ್ಲಿನ ತಮ್ಮ ಸಂಪತ್ತಿನ ಸಮಗ್ರ ವಿವರಗಳನ್ನೆಲ್ಲ ನೀಡಬೇಕಾಗುತ್ತದೆ. ದೇಶದ ಹೆಸರು, ಬ್ಯಾಂಕ್ ವಿಳಾಸ, ಖಾತೆಯಲ್ಲಿ ನಮೂದಾಗಿರುವ ಹೆಸರು, ಒಂದು ವರ್ಷದ ಅವಧಿಯಲ್ಲಿ ಖಾತೆಯಲ್ಲಿ ಇದ್ದ ಗರಿಷ್ಠ ಮೊತ್ತ ಮತ್ತಿತರ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಲಿರುವ ಹೊಸ `ಐಟಿಆರ್~ನಲ್ಲಿ, ತೆರಿಗೆದಾರರು ವಿದೇಶಗಳಲ್ಲಿನ ತಮ್ಮ ಹೆಸರಿನಲ್ಲಿನ ಚರಾಸ್ತಿಯ ವಿವರಗಳನ್ನೂ ಸಲ್ಲಿಸಬೇಕಾಗುತ್ತದೆ. `ಐಟಿಆರ್~ನ ಇತರ  6 ಮಾದರಿಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಆಸ್ತಿ ಪಾಸ್ತಿ ವಿವರಗಳನ್ನು ಕಡ್ಡಾಯವಾಗಿ ಬಹಿರಂಗಗೊಳಿಸುವ ಬಗ್ಗೆ ಹೊಸ ಕ್ರಮಗಳನ್ನು ಕೈಗೊಳ್ಳುವುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ 2012-13ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.