ಐ.ಟಿ ವಿನಾಯ್ತಿ ಮಿತಿ 5 ಲಕ್ಷಕ್ಕೆ?

7

ಐ.ಟಿ ವಿನಾಯ್ತಿ ಮಿತಿ 5 ಲಕ್ಷಕ್ಕೆ?

Published:
Updated:

ನವದೆಹಲಿ (ಪಿಟಿಐ): ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ ಗರಿಷ್ಠ 5 ಲಕ್ಷದವರೆಗೆ ಹೆಚ್ಚಿಸಬೇಕು ಎಂದು `ಆದಾಯ ತೆರಿಗೆ ನೀತಿ ಸಂಹಿತೆ~ಯ (ಡಿಟಿಸಿ) ಪ್ರಸ್ತಾವಗಳನ್ನು ಪರಿಶೀಲಿಸುತ್ತಿರುವ  ಹಣಕಾಸು ಸ್ಥಾಯಿ ಸಮಿತಿಯ ಕೆಲ ಸದಸ್ಯರು ಒತ್ತಾಯಿಸಿದ್ದಾರೆ.ಶುಕ್ರವಾರ ಇಲ್ಲಿ ಸಭೆ ಸೇರಿದ್ದ ಸ್ಥಾಯಿ ಸಮಿತಿ ಸಭೆಯಲ್ಲಿ ಕೆಲ ಸಂಸದರು, ವಾರ್ಷಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು  ಸದ್ಯದ ರೂ 1.80 ಲಕ್ಷದಿಂದ  ರೂ 5 ಲಕ್ಷಗಳವರೆಗೆ ಹೆಚ್ಚಿಸಲು  ಒತ್ತಾಯ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಬಿಜೆಪಿ ಮುಖಂಡ ಯಶವಂತ ಸಿನ್ಹಾ ನೇತೃತ್ವದಲ್ಲಿ ನಡೆದ ಸಭೆಯು, ಇದೇ 24ರಂದು ಸಭೆ ಸೇರಿ ಈ ಬಗ್ಗೆ ವಿವರವಾಗಿ ಚರ್ಚಿಸಲಿದೆ. ಮಾರ್ಚ್ 2ರಂದು ತನ್ನ ವರದಿ ಅಂತಿಮಗೊಳಿಸಲಿದೆ. ಇದರಿಂದ  ನೇರ ತೆರಿಗೆಗೆ ಸಂಬಂಧಿಸಿದ ಮಹತ್ವಾಕಾಂಕ್ಷೆಯ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಸಂಸತ್ತಿನ ಮಾರ್ಗ ಸುಗಮಗೊಳ್ಳಲಿದೆ.ಮುಂದಿನ ಹಣಕಾಸು ವರ್ಷದಿಂದ `ಡಿಟಿಸಿ~ ಮಸೂದೆ ಜಾರಿಗೆ ತರಲು ಸಂಸತ್ತು ಅನುಮೋದನೆ ನೀಡಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ. 2012-13ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ `ಡಿಟಿಸಿ~ಯ ಕೆಲ ಪ್ರಸ್ತಾವಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ.

 

ಸ್ಥಾಯಿ ಸಮಿತಿಯ ಕರಡು ವರದಿಯಲ್ಲಿ, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸದ್ಯದ ರೂ 1.80 ಲಕ್ಷದಿಂದ ರೂ 3 ಲಕ್ಷದವರೆಗೆ ಹೆಚ್ಚಿಸಲು ಶಿಫಾರಸು ಮಾಡಿಲಾಗಿದೆ. ಹಣದುಬ್ಬರ ಮತ್ತು ರೂಪಾಯಿ ಖರೀದಿ ಸಾಮರ್ಥ್ಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಗರಿಷ್ಠ ಮಿತಿಯನ್ನು ರೂ 5 ಲಕ್ಷದವರೆಗೆ ಹೆಚ್ಚಿಸಬೇಕು ಎನ್ನುವುದು ಸಮಿತಿಯ ಕೆಲ ಸಂಸದರ ನಿಲುವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry