ಶನಿವಾರ, ಆಗಸ್ಟ್ 24, 2019
28 °C

ಐಟಿ: ಹೊಸ ಸರ್ಕಾರ, ಹಳೆ ಸಂವಾದ

Published:
Updated:

ಕರ್ನಾಟಕದಲ್ಲಿ ಇಲ್ಲಿಯ ತನಕ ಯಾವುದೇ ಮಾಹಿತಿ ತಂತ್ರಜ್ಞಾನ (ಐ.ಟಿ.)ಸಚಿವರು ಸುದ್ದಿಯಾದದ್ದಿಲ್ಲ. ಆ ಖಾತೆಗೊಬ್ಬ ಸಚಿವರಿರುವುದು ಗೊತ್ತೇ ಆಗದ ಹಾಗೆ ಐ.ಟಿ. ಉದ್ಯಮಕ್ಕೆ ಅಗತ್ಯವಿರುವ ಅನುಕೂಲಗಳನ್ನು ಮುಖ್ಯಮಂತ್ರಿಗಳೂ ಬೃಹತ್ ಕೈಗಾರಿಕಾ ಸಚಿವರೂ ಒದಗಿಸಿಕೊಡುತ್ತಿದ್ದರು. ಮಾಹಿತಿ ತಂತ್ರಜ್ಞಾನ ಖಾತೆ ಪಡೆದುಕೊಂಡ ಕಾರಣಕ್ಕಾಗಿ ರಾಷ್ಟ್ರವ್ಯಾಪಿಯಾಗಿ ಸುದ್ದಿಯಾದ ಹೆಗ್ಗಳಿಕೆ ಎಸ್.ಆರ್. ಪಾಟೀಲ್ ಅವರದ್ದು.ಆದರೆ ಈ ಸುದ್ದಿಯಾಗುವ ಕ್ರಿಯೆಯಲ್ಲಿ ಅವರ ಪಾಲೇನೂ ಇರಲಿಲ್ಲ. ಐ.ಟಿ. ಉದ್ಯಮದ ಪ್ರಮುಖರೊಬ್ಬರು ಎಸ್.ಆರ್. ಪಾಟೀಲರು ಸಚಿವರಾದುದಕ್ಕೆ ಪ್ರತಿಕ್ರಿಯಿಸಿದ `ಟ್ವೀಟ್' ದೊಡ್ಡ ಸುದ್ದಿಯಾಯಿತು. ಇದರ ಹಿಂದೆಯೇ ಬಿ.ಟಿ. ಉದ್ಯಮದ ಪ್ರಮುಖರೊಬ್ಬರು ನೀಡಿದ ಪ್ರತಿಕ್ರಿಯೆ ಈ ಸುದ್ದಿಯನ್ನು ಮತ್ತಷ್ಟು ದೊಡ್ಡದಾಗಿಸಿತು. ಇವರಿಬ್ಬರ ಮಾತುಗಳು ಭಾರತೀಯ ಮಧ್ಯಮ ವರ್ಗಕ್ಕೆ ಮೋಕ್ಷದ ಏಕೈಕ ದಾರಿಯೆಂಬಂತೆ ಕಾಣಿಸುವ ಉದ್ಯಮ ಸರ್ಕಾರದಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದನ್ನು ಸೂಚಿಸುತ್ತಿತ್ತು.ಇದರ ನಂತರ ಸೈಬರ್ ಜಗತ್ತಿನಲ್ಲಿ ನಡೆದ ಒಂದು ದಿನದ ಚರ್ಚೆ ಐ.ಟಿ.-ಬಿ.ಟಿ. ಉದ್ಯಮದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಿತ್ತು. ಸರ್ಕಾರ ಇದೇ ಮೊದಲ ಬಾರಿಗೆ  ಐ.ಟಿ.-ಬಿ.ಟಿ. ಉದ್ಯಮದ ಜೊತೆ ತನ್ನ ಭಾಷೆಯಲ್ಲಿ ಮಾತನಾಡಲು ಸಿದ್ಧವಾಗುತ್ತಿದೆ ಎಂದು ಎಲ್ಲರೂ ಭಾವಿಸಿದ್ದರು. ಮರುದಿನ `ಟ್ವೀಟ್' ಮಾಡಿದವರೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದವರೂ ಎಸ್.ಆರ್. ಪಾಟೀಲ್ ಅವರಲ್ಲಿ ಕ್ಷಮೆ ಯಾಚಿಸಿದರು. ಅದರೊಂದಿಗೆ ಎಲ್ಲವೂ ಮೊದಲ ಸ್ಥಿತಿಗೆ ಬಂದು ತಲುಪಿತು!ಅದಕ್ಕೆ ಸಾಕ್ಷಿ ಎಂಬಂತೆ ಈ ಪ್ರಕರಣ ನಡೆದ ಒಂದು ತಿಂಗಳ ನಂತರ ಎಸ್.ಆರ್. ಪಾಟೀಲ್ ಅವರು ಹಿಂದಿನ ಎಲ್ಲಾ ಮಂತ್ರಿಗಳಂತೆ ಲಕ್ಷ ಕೋಟಿ ರೂಪಾಯಿಗಳಲ್ಲಿ ರಫ್ತಿನ ಪ್ರಮಾಣವನ್ನೂ ಮತ್ತಷ್ಟು ಲಕ್ಷಗಳಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ಮಾತನ್ನಾಡಿದರು. ಬಹುಶಃ ಇಂಥದ್ದೊಂದು ಅದೃಷ್ಟ ಭಾರತದ ಯಾವ ಉದ್ಯಮಕ್ಕೂ ಇಲ್ಲವೇನೋ?

ಕರ್ನಾಟಕದ ಐ.ಟಿ. ಯಶಸ್ಸಿನ ಕಥೆಗೆ ಸುಮಾರು ಇಪ್ಪತ್ತು ವರ್ಷಗಳ ಇತಿಹಾಸವಿದೆ (1993ರಲ್ಲಿ ಐಟಿಪಿಎಲ್-ಬೆಂಗಳೂರು ಸ್ಥಾಪನೆಗೆ ಒಪ್ಪಿಗೆ ನೀಡಿದ ಕ್ರಿಯೆಯನ್ನು ಆರಂಭ ಎಂದುಕೊಂಡರೆ).ಐ.ಟಿ. ಉದ್ಯಮ ಈ ಯಶಸ್ಸಿನ ಕಥೆಯನ್ನು ಹೇಳಿಕೊಳ್ಳುವಾಗಲೆಲ್ಲಾ ಯಾವುದೇ ಪ್ರೋತ್ಸಾಹ ಮತ್ತು ನೆರವುಗಳಿಲ್ಲದೆ ಮಾಡಿದ ಸಾಧನೆ ಇದು ಎನ್ನುತ್ತದೆ. ಬೆಂಗಳೂರಿನ ಇತಿಹಾಸದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಈ ಉದ್ಯಮಕ್ಕೆ ದೊರೆತ ನೆರವು ಎಷ್ಟು ದೊಡ್ಡದು ಮತ್ತು ಅದು ಎಂಥದ್ದು ಎಂಬುದು ಅರಿವಾಗುತ್ತದೆ. ಮೊದಲ ಪ್ರಧಾನಿ ಜವಹರಲಾಲ್ ನೆಹರು ಬೆಂಗಳೂರನ್ನು ಭಾರತದ ಬೌದ್ಧಿಕತೆಯ ರಾಜಧಾನಿಯನ್ನಾಗಿಸಲು ಹೊರಟಿದ್ದರು. ಅದರ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಹಲವು ಉದ್ಯಮಗಳ ಜೊತೆಗೆ ಜ್ಞಾನಾಧಾರಿತ ಉದ್ದಿಮೆ ಎನ್ನಬಹುದಾದ ಎಚ್‌ಎಎಲ್ ಮತ್ತು ಎನ್‌ಎಎಲ್‌ಗಳು ಬೆಂಗಳೂರಿಗೆ ಬಂದವು. ಮುಂದಿನ ಹಂತ ರಾಜ್ಯ ಸರ್ಕಾರದ ಸ್ವಾಮ್ಯದ ಉದ್ದಿಮೆಗಳ ಕಾಲಘಟ್ಟ. ಹೆಚ್ಚು ಕಡಿಮೆ ಈ ಅವಧಿಯಲ್ಲಿಯೇ ಹಲವು ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೂ ಬೆಂಗಳೂರು ನೆಲೆಯಾಯಿತು.ಈ ಎಲ್ಲಾ ಉದ್ದಿಮೆಗಳು ಮತ್ತು ಸಂಸ್ಥೆಗಳು ತಮ್ಮದೇ ಆದ ಮೂಲ ಸೌಕರ್ಯವನ್ನೂ ನಿರ್ಮಿಸಿಕೊಂಡು ಬೆಂಗಳೂರಿನಲ್ಲಿ ನೆಲೆಗೊಂಡವು. ಇವು ತಮ್ಮ ಉದ್ಯೋಗಿಗಳಿಗೆ ಅಗತ್ಯವಿದ್ದ ವಸತಿ, ಶಾಲೆ ಎಲ್ಲವನ್ನೂ ನಿರ್ಮಿಸಿಕೊಳ್ಳುವ ಮೂಲಕ ಬೆಂಗಳೂರಿನ ಮೂಲ ಸೌಕರ್ಯವನ್ನು ಹೆಚ್ಚಿಸಿದವು.ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ರೂಪುಗೊಂಡ ಎಪ್ಪತ್ತರ ದಶಕದ ಪೂರ್ವಾರ್ಧದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉದ್ದಿಮೆ ಅದರ ಶೈಶವಾವಸ್ಥೆಯಲ್ಲಿಯೂ ಇರಲಿಲ್ಲ. ಈ ಉದ್ಯಮಕ್ಕೆ ಚಾಲನೆ ದೊರೆತದ್ದೇ ತೊಂಬತ್ತರ ದಶಕದ ಆರಂಭದಲ್ಲಿ. ಆದರೆ 1990ಕ್ಕಿಂತ ಹಿಂದಿನ ನಲವತ್ತು ವರ್ಷಗಳ ಅವಧಿಯಲ್ಲಿ ನಡೆದ ಬೆಳವಣಿಗೆಗಳಲ್ಲಿ ಐ.ಟಿ. ಉದ್ಯಮ ನೆಲೆಗೊಳ್ಳಲು ಬೇಕಿದ್ದ ಭೂಮಿಕೆ ಸಿದ್ಧವಾಗಿತ್ತು.ಒಂದರ್ಥದಲ್ಲಿ ಐ.ಟಿ. ಉದ್ಯಮದ ಮಟ್ಟಿಗೆ ಇಡೀ ಬೆಂಗಳೂರಿಗೆ ಬೆಂಗಳೂರೇ ಒಂದು ಪ್ಲಗ್ ಪ್ಲೇ ಟೆಕ್ನಾಲಜಿ ಪಾರ್ಕ್ ಆಗಿತ್ತು. ಅದು ಇಲ್ಲಿಯ ತನಕ ಬೆಂಗಳೂರನ್ನು ಬಳಸಿಕೊಂಡದ್ದೇ ಆ ಮಾದರಿಯಲ್ಲಿ. ಇನ್ನೂ ಮುಂದೆಯೂ ಅದು ಹಾಗೆಯೇ ಇರಬೇಕೆಂಬ ಬಯಕೆ ಈ ಉದ್ಯಮದ್ದು. ಆದರೆ ಆ ವಾತಾವರಣ ನಿರ್ಮಿಸುವುದಕ್ಕೆ ತಾನು ಯಾವುದೇ ರೀತಿಯ ಸಾಮಾಜಿಕ ಹೂಡಿಕೆಗೆ ಮಾತ್ರ ಅದು ಸಿದ್ಧವಿಲ್ಲ.ಸರ್ಕಾರಿ ಅಂಕಿ-ಅಂಶಗಳಂತೆ ಐ.ಟಿ. ಉದ್ಯಮ ಒದಗಿಸಿರುವ ಉದ್ಯೋಗಗಳ ಪ್ರಮಾಣ ಎಂಟು ಲಕ್ಷ. ಇದರಲ್ಲಿ ಶೇಕಡಾ ತೊಂಬತ್ತು ಭಾಗ ಇರುವುದು ಬೆಂಗಳೂರಿನಲ್ಲಿ ಅಂದರೆ. ಎಂಟು ಲಕ್ಷ ಮಂದಿಗೆ ಉದ್ಯೋಗ ಒದಗಿಸಿರುವ ಉದ್ದಿಮೆ ತನ್ನ ತಥಾಕಥಿತ `ಉತ್ಪಾದನಾ ಘಟಕ'ಗಳ ಹೊರತಾದ ಏನನ್ನು ಸ್ವಂತವಾಗಿ ಹೊಂದಿದೆ? ಐಟಿ ಉದ್ಯಮದ ಅತಿ ದೊಡ್ಡ ಬಂಡವಾಳ ಅದರ ಉದ್ಯೋಗಿಗಳು. ಅವರು ಬದುಕಲು ಬೇಕಿರುವ ಮೂಲ ಸೌಕರ್ಯವನ್ನು ಈ ಉದ್ಯಮ ಯಾಕೆ ನಿರ್ಮಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಯನ್ನು ಇಲ್ಲಿಯ ತನಕ ಕರ್ನಾಟಕದ ಯಾವ  ಮಂತ್ರಿಗಳೂ ಕೇಳಿಲ್ಲ. ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳನ್ನು ತೋರಿಸಿ `ನಾವು ಬೆಂಗಳೂರಿನಿಂದ ಹೋಗಿಬಿಡುತ್ತೇವೆ' ಎಂದು ಬೆದರಿಕೆ ಹಾಕುವ ಯಾವ ಐಟಿ ಉದ್ಯಮಿಗೂ ಈ ರಸ್ತೆಗಳು ಹೀಗಾಗಲೂ ತಾವೂ ಕಾರಣ ಅನ್ನಿಸಿಲ್ಲ.ಉತ್ಪಾದನಾ ಕ್ಷೇತ್ರದಲ್ಲಿರುವ ಉದ್ಯಮಗಳಂತೆ ಸೇವಾ ಕ್ಷೇತ್ರದ ಉದ್ಯಮ ಹೆಚ್ಚು ಭೂಮಿ, ನೀರು ಇತ್ಯಾದಿಗಳನ್ನು ಬಳಸಿಕೊಳ್ಳುವುದಿಲ್ಲ ಎಂಬ ವಾದವನ್ನು ಮುಂದಿಡಬಹುದು. ಅದೇ ಕಾರಣಕ್ಕೆ ಐ.ಟಿ. ಕಂಪೆನಿಗಳು ತಮ್ಮ ವಸತಿ ಬಡಾವಣೆಗಳನ್ನು ನಿರ್ಮಿಸಿಲ್ಲ ಎಂಬ ತರ್ಕವನ್ನು ಮುಂದಿಡಬಹುದು. ಆದರೆ ಲಭ್ಯವಿರುವ ಸರ್ಕಾರಿ ಅಂಕಿ ಅಂಶಗಳು ಬೇರೆಯೇ ಚಿತ್ರಣ ನೀಡುತ್ತವೆ. ವಿಶ್ವವಿಖ್ಯಾತವಾಗಿರುವ ಕರ್ನಾಟಕ ಮೂಲದ ಐಟಿ ಕಂಪೆನಿಯೊಂದು ಭಾರತಾದ್ಯಂತ ಸಾವಿರಾರು ಎಕರೆ ಜಮೀನನನ್ನು ಹೊಂದಿದೆ. ಇದರಲ್ಲಿ ಸುಮಾರು 350 ಎಕರೆಯಷ್ಟು ಬೆಂಗಳೂರಿನಲ್ಲಿಯೇ ಇದೆ. ಇದರ ಜೊತೆಗೆ ಇನ್ನಷ್ಟು ಜಮೀನು ಬೇಕೆಂಬ ಅದರ ಬೇಡಿಕೆ ಸರ್ಕಾರದ ಮುಂದೆ ಇದೆ. ಹಾಗೆಂದು ಈ ಕಂಪೆನಿ ತನ್ನ ಉದ್ಯೋಗಿಗಳ ವಸತಿ ಗೃಹ ಇತ್ಯಾದಿಗಳನ್ನು ನಿರ್ಮಿಸಿದೆಯೇ ಎಂಬ ಪ್ರಶ್ನೆ ಕೇಳಿದರೆ ಭವಿಷ್ಯದಲ್ಲಿ ಅಂಥ ಯೋಜನೆಯಿದೆ ಎಂಬ ಉತ್ತರವನ್ನು ಒಂದು ದಶಕದಿಂದಲೂ ನೀಡುತ್ತಿದೆ.ಈ ಒಂದು ದಶಕದಲ್ಲಿ ಬೆಂಗಳೂರಿನ ಕೆಳ ಮಧ್ಯಮ ವರ್ಗದ ಕುಟುಂಬಗಳು ದುಡಿಮೆಯ ದೊಡ್ಡಪಾಲನ್ನು ಬಾಡಿಗೆಗೆ ನೀಡುವಂಥ ಸ್ಥಿತಿಗೆ ಐ.ಟಿ. ಉದ್ಯಮಗಳು ತಮ್ಮದೇ ಆದ ವಸತಿ ಪ್ರದೇಶಗಳನ್ನು ರೂಪಿಸದ್ದು ಕಾರಣ ಎಂಬುದನ್ನು ಆ ಉದ್ಯಮಕ್ಕೆ ತೆರಿಗೆ ರಜೆಯನ್ನೂ ಕಡಿಮೆ ಬೆಲೆಗೆ ಭೂಮಿಯನ್ನು ನೀಡಿರುವ ಸರ್ಕಾರ ಹೇಳಲೇ ಇಲ್ಲ. ವಿರೋಧ ಪಕ್ಷದಲ್ಲಿರುವವರು ಆಡಳಿತಾರೂಢರಿಗೆ ಇದನ್ನು ನೆನಪಿಸಲೂ ಇಲ್ಲ!ಕರ್ನಾಟಕದ ವಿಧಾನ ಸಭೆಯಲ್ಲಿ ಬೇರೆ ಬೇರೆ ಕೈಗಾರಿಕೆಗಳಿಗೆ, ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗಿರುವ ಜಮೀನಿನ ಬಗ್ಗೆ ಬಹಳ ಚರ್ಚೆಗಳು ನಡೆದಿವೆ. ಡಿನೋಟಿಫಿಕೇಶನ್‌ಗೆ ಸಂಬಂಧಿಸಿದ ದೊಡ್ಡ ಹಗರಣಗಳ ಕುರಿತಂತೆ ರೈತ ಪರ ಪಕ್ಷಗಳು, ಬಡವರ ಪರ ಪಕ್ಷಗಳು ಮಾತನಾಡಿವೆ. ಆದರೆ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳಿಗೆ ನಿಜವಾಗಿಯೂ ಬೇಕಿರುವ ಜಮೀನೆಷ್ಟು ಎಂಬ ವಿಷಯ ಈ ತನಕ ವಿಧಾನ ಮಂಡಲದಲ್ಲಿ ಚರ್ಚೆಯೊಂದಕ್ಕೆ ಕಾರಣವಾಗಿಲ್ಲ.ಇದೇ ವರ್ಷದ ಫೆಬ್ರವರಿಯಲ್ಲಿ ಹೊರಬಂದ ಮಹಾ ಲೇಖಪಾಲರ ವರದಿಯಲ್ಲಿ ಹೆಬ್ಬಾಳದ ಸಮೀಪ ಟೆಕ್ ಪಾರ್ಕ್ ಒಂದನ್ನು ನಿರ್ಮಿಸಿರುವ ಸಂಸ್ಥೆ ಎಂಟು ಎಕರೆ ಜಮೀನನ್ನಷ್ಟೇ ಕೇಳಿ ಅದನ್ನು ಹೇಗೆ ಮುನ್ನೂರು ಎಕರೆಗೆ ವಿಸ್ತರಿಸಿಕೊಂಡಿತು ಎಂಬುದರ ವಿವರಗಳಿವೆ. ಆ ವಿಸ್ತರಿಸಿಕೊಂಡ ವಿವರಗಳನ್ನು ಬಿಡಿ. ಈ ಟೆಕ್ ಪಾರ್ಕ್‌ನಲ್ಲಿ ಇರುವ ಟೆಕ್ನಾಲಜಿ ಎಷ್ಟು ಎಂಬ ತನಿಖೆಯನ್ನು ಸರ್ಕಾರ ನಡೆಸಬಹುದೆಂಬ ನಿರೀಕ್ಷೆಯನ್ನೂ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇದು ಐ.ಟಿ. ವಿಚಾರ!ಕೆಲವರ್ಷಗಳ ಹಿಂದೆ ಎಚ್.ಡಿ.ದೇವೇಗೌಡರು ರಸ್ತೆಯೊಂದಕ್ಕೆ ಸರ್ಕಾರ ಒದಗಿಸುತ್ತಿರುವ ಭೂಮಿಯ ವಿರುದ್ಧ ಮಾತನಾಡುತ್ತಿದ್ದ ಅದೇ ರಭಸದಲ್ಲಿ ಐ.ಟಿ. ಕಂಪೆನಿಯೊಂದಕ್ಕೆ ನೀಡಿರುವ ಭೂಮಿಯ ಪ್ರಮಾಣದ ಬಗ್ಗೆಯೂ ಮಾತನಾಡಿದರು. ಇದರ ಹಿಂದಿನ ರಾಜಕೀಯ ಉದ್ದೇಶಗಳೇನೇ ಇದ್ದರೂ ಅತ್ಯಂತ ಅಗತ್ಯವಾಗಿರುವ ಚರ್ಚೆಯೊಂದು ಆರಂಭವಾಯಿತೆಂದು ಭಾವಿಸುವಷ್ಟರಲ್ಲಿ ಅವರೂ ಸುಮ್ಮನಾಗಿಬಿಟ್ಟರು.ಮತ್ತೆ ಮುಂದಿನ ದೃಶ್ಯ ಅನಾವರಣಗೊಂಡದ್ದು ಬೆಂಗಳೂರಿನಲ್ಲಿ ಐಟಿಪಿಎಲ್ ಸ್ಥಾಪನೆಯಾಗುವಲ್ಲಿ ತಾನೆಷ್ಟು ಮುಖ್ಯಪಾತ್ರವಹಿಸಿದ್ದೆ ಎಂದು ದೇವೇಗೌಡರು ಹೇಳಿಕೊಂಡದ್ದರಲ್ಲಿ. ಇದೂ ಒಂದು ವಿವಾದಕ್ಕೆ ಕಾರಣವಾಗಿ ಬಿಜೆಪಿಯವರು ಈ ಸಾಧನೆ ವಾಜಪೇಯಿ ಅವರದ್ದು ಎಂದರು. ಕಾಂಗ್ರೆಸ್ಸಿನವರು ಈ ಸಾಧನೆಯನ್ನು ವೀರಪ್ಪ ಮೊಯಿಲಿ ಮತ್ತು ನರಸಿಂಹರಾವ್ ಅವರ ಸಾಧನೆ ಎಂದು ವಾದಿಸಿದರು.ಎಸ್.ಎಂ.ಕೃಷ್ಣ ಅವರಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸರ್ಕಾರಿ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಐ.ಟಿ. ದೊರೆಗಳ ಸಹಾಯ ಪಡೆಯಲು ಹೊರಟು ಹಲವು ಟಾಸ್ಕ್ ಫೋರ್ಸ್‌ಗಳಿಗೆ ಕಾರಣರಾದರು. ಎಲ್ಲ ರಾಜಕಾರಣಿಗಳಿಗೂ ಬೆಂಗಳೂರಿನ ಐಟಿ ಯಶಸ್ಸಿನ ಕಥನದಲ್ಲಿ ತಮ್ಮದೂ ಪಾಲಿದೆಯೆಂಬುದನ್ನು ತೋರಿಸಿಕೊಳ್ಳುವ ಉತ್ಸಾಹವಿದೆಯೇ ಹೊರತು ಜನಪ್ರತಿನಿಧಿಯಾಗಿ ತಾನೇನನ್ನು ಖಾತರಿ ಪಡಿಸಿಕೊಳ್ಳಬೇಕು ಎಂಬುದರ ಅರಿವಿರುವಂತೆ ಕಾಣಿಸುತ್ತಿಲ್ಲ.ಎರಡು ದಶಕಗಳ ಅವಧಿಯ ಈ ಎಲ್ಲಾ ಬೆಳವಣಿಗೆಗಳ ಫಲಿತಾಂಶವೆಂಬಂತೆ ಈಗ ಸರ್ಕಾರ ಕೂಡಾ ಐ.ಟಿ. ಉದ್ಯಮದ ವಿಷಯ ಪ್ರಸ್ತಾಪವಾದ ತಕ್ಷಣ ರಫ್ತಿನ ಅಂಕಿ ಅಂಶಗಳಲ್ಲಿಯೇ ಮಾತನಾಡುತ್ತದೆ. ಈ ಅಂಕಿ-ಅಂಶಗಳ ಜೇಡರ ಬಲೆಯೊಳಗೆ ಸರ್ಕಾರ ಉದ್ಯಮವೊಂದರ ಜೊತೆ ಮಾತನಾಡಬೇಕಾಗಿದ್ದ ಭಾಷೆ ಕಳೆದು ಹೋಗಿದೆ.ಐ.ಟಿ.ಯನ್ನು ಬೆಂಗಳೂರಿನಿಂದ ವಿಕೇಂದ್ರೀಕರಿಸುವ ಮಾತುಗಳನ್ನು ಔಪಚಾರಿಕ ಅಗತ್ಯವೆಂಬಂತೆ ಸರ್ಕಾರ ಹೇಳುತ್ತದೆ. ಬೆಂಗಳೂರಿನಲ್ಲಿ ಪಾದಚಾರಿಗಳು ದಾಟಲು ಸ್ಥಳವೇ ಇಲ್ಲದ ಸಿಗ್ನಲ್ ಫ್ರೀ ರಸ್ತೆಗಳನ್ನು ನಿರ್ಮಿಸುವ ಯೋಜನೆಗಳನ್ನು ಸರ್ಕಾರ ಪ್ರಕಟಿಸುತ್ತಲೇ ಇದೆ. ಈ ರಸ್ತೆಗಳು ಎಲ್ಲಿರಬೇಕೆಂಬುದನ್ನು ಐ.ಟಿ. ದೊರೆಗಳು ಸೂಚಿಸುತ್ತಲೂ ಇದ್ದಾರೆ. ಈ ರಸ್ತೆಯಲ್ಲಿ ನಡೆಯುವ ಅಪಘಾತದಲ್ಲಿ ಸಾಯುವವರು ಟೆಕ್ಕಿಗಳಷ್ಟೇ ಅಲ್ಲ ಮನುಷ್ಯರೂ ಹೌದು ಎಂಬುದು ಬೆಂಗಳೂರಿಗೂ ಮರೆತು ಹೋಗುತ್ತಿದೆ.  ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

Post Comments (+)