ಐತಲಕಡಿ ರಚನಾ

7

ಐತಲಕಡಿ ರಚನಾ

Published:
Updated:

ಮೊದಲ ಸಂಗೀತ ಕಛೇರಿ ನಡೆಸಿಕೊಟ್ಟಿದ್ದು ಒಂದನೇ ತರಗತಿಯಲ್ಲಿದ್ದಾಗ. ಬಾಲ್ಯದಿಂದಲೂ ಸಂಗೀತವೆಂದರೆ ಇಷ್ಟ. ನಾಲ್ಕರಿಂದ ಏಳನೇ ತರಗತಿ ಅವಧಿಯಲ್ಲಿ ಕ್ಲಾಸ್‌ರೂಮ್‌ನಲ್ಲಿ ಕುಳಿತದ್ದೇ ಕಡಿಮೆ.

 

ಗಾಯನ ಕಛೇರಿಗಳಲ್ಲೇ ಹೆಚ್ಚು ದಿನಗಳು ಕಳೆದು ಹೋಗುತ್ತಿದ್ದವು. ಅಲ್ಲೂ ತುಂಬಾ ಮಾತನಾಡುತ್ತಿದ್ದೆ. ತುಂಟ ಮಕ್ಕಳನ್ನು ಕೆಂಪು ಹಾಸಿನ ಮೇಲೆ ಕೂರಿಸುತ್ತಿದ್ದರು. ನಾನು ಬೆಂಚ್‌ಗಿಂತ ಅಲ್ಲಿ ಕುಳಿತದ್ದೇ ಹೆಚ್ಚು. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೇ ಪ್ರಥಮ ರ‌್ಯಾಂಕ್ ಪಡೆದೆ. ಪಿಯುಸಿಯಲ್ಲಿ ದ್ವಿತೀಯ ರ‌್ಯಾಂಕ್.ಬಳಿಕ ಜೈನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಸಾಂಸ್ಕೃತಿಕ ವಿಭಾಗದ ಜವಾಬ್ದಾರಿಯನ್ನು ನನಗೇ ಕೊಟ್ಟಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ವೇದಿಕೆ ಬಳಸಿಕೊಂಡು ಹಾಡುವ ಹವ್ಯಾಸ ಜತೆಗೇ ಬಂದಿತ್ತು.ಹೀಗೆ ಎಲ್ಲಾ ಸ್ಪರ್ಧೆಗಳಲ್ಲೂ ಮುಂದಿದ್ದ ನನಗೆ ಹತ್ತನೇ ತರಗತಿ ಮುಗಿಯುತ್ತಲೇ ಖಾಸಗಿ ಚಾನೆಲ್‌ಗಳಿಂದ ನಿರೂಪಕಿಯಾಗಲು ಅವಕಾಶ ಬಂದಿತ್ತು. ಪಿಯುಸಿ ಓದುತ್ತಿದ್ದಾಗ `ಸ್ನೇಹಕ್ಕಾಗಿ~, `ತಾರೆಗಳ ತೋಟ~, `ಪರಿಪೂರ್ಣ ಮಹಿಳೆ~ ಮೊದಲಾದ ನೇರಪ್ರಸಾರ ಕಾರ್ಯಕ್ರಮಗಳನ್ನು ನಡೆಸಿಕೊಡಲಾರಂಭಿಸಿದೆ.ಅಲ್ಲಿ ಅವಕಾಶಗಳು ಸಿಕ್ಕರೂ ಏನೋ ಕೊರತೆ ಎನಿಸುತ್ತಿತ್ತು. ಅದೇ ಕಾರಣಕ್ಕೆ ಟೀವಿ ಬಿಟ್ಟು ರೇಡಿಯೊ ವಲಯಕ್ಕೆ ಕಾಲಿಟ್ಟೆ.ಟೀವಿಗಿಂತ ರೇಡಿಯೊ ಹೆಚ್ಚು ಆಪ್ತವಾಗುತ್ತದೆ. ಕಾಣದ ಮುಖಕ್ಕೆ ಅಲ್ಲಿ ಕೇಳುಗರಿಂದ ಪ್ರೀತಿ ಸಿಗುತ್ತದೆ. ಅವರು ತೋರುವ ಕಾಳಜಿ ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ. ನಮ್ಮ ಮುಖ ಹೇಗಿದೆ ಎಂಬ ಅರಿವೂ ಇಲ್ಲದೆ ಅಷ್ಟೊಂದು ಭಾವುಕತೆ ಇಟ್ಟುಕೊಂಡಿರುತ್ತಾರಲ್ಲಾ, ನಿಜವಾದ ಅಭಿಮಾನಿ ದೇವರುಗಳು ಅವರೇ.ಮೇಕಪ್ ಇಲ್ಲದ, ಯಾವುದೇ ನಟನೆಯನ್ನು ಬೇಡದ ಮಾಧ್ಯಮ ಇದು. ಶಾರ್ಟ್ಸ್ ಹಾಕಿಕೊಂಡಾದರೂ ಕಾರ್ಯಕ್ರಮ ನಡೆಸಿಕೊಡಬಹುದು, ಅಂದರೆ ಇಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಮಾತಿನ ಸೊಗಸು, ಪ್ರಾವೀಣ್ಯ, ಭಾಷೆಯ ಮೇಲಿನ ಹಿಡಿತವೇ ಮುಖ್ಯ. ಟೀವಿಯಲ್ಲಿ ಕೆಲಸ ಮಾಡಿದ್ದರೂ ಮತ್ತೆ ಅದೇ ಕ್ಷೇತ್ರಕ್ಕೆ ಹಿಂದಿರುಗಲು ನನಗಿಷ್ಟವಿಲ್ಲ, ರೇಡಿಯೊ ನನ್ನದೇ ಮನೆ, ನನ್ನದೇ ಕುಟುಂಬ. ಇಲ್ಲೇ ಬದುಕಬೇಕು ಎನಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮನರಂಜನೆ ಎಫ್‌ಎಂಗಳ ಏಕಮಾತ್ರ ಗುರಿಯಾಗುತ್ತಿದೆ.ಅದು ತಪ್ಪು. ನಮ್ಮ ಕೇಳುಗರಲ್ಲಿ ಬಹುತೇಕರು ಯುವಕರು. ಇದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಉಪಯೋಗವಾಗುವ ಮಾಹಿತಿಗಳನ್ನು, ಸ್ವಾರಸ್ಯಕರ ಸಂಗತಿಗಳನ್ನು ಹಾಡು-ಮಾತಿನ ಜತೆಗೆ ಉಪ್ಪಿನಕಾಯಿಯಂತೆ ಸೇರಿಸಿದಾಗ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗುತ್ತದೆ. ಆರ್‌ಜೆಗಳ ಮಾತಿಗೂ ಒಂದು ತೂಕ ಬರುತ್ತದೆ. ಮಾಹಿತಿಯನ್ನು ಪ್ಯಾಕೇಜ್ ರೂಪದಲ್ಲಿ ಕೇಳುಗರಿಗೆ ತಲುಪಿಸುವುದು ನನ್ನಿಷ್ಟದ ಸಂಗತಿ.ಮೈಕ್ ಮುಂದೆ ಕುಳಿತು ಭಾಷೆ ತಿರುಚಿಕೊಂಡು, ವಟವಟ ಮಾತನಾಡುವವಳು ನಾನಲ್ಲ. ಮನೆಯಲ್ಲಿ, ಗೆಳತಿಯರೊಂದಿಗೆ ಇದೇ ರೀತಿ ಮಾತನಾಡುತ್ತೇನೆ, ಮಾತನಾಡುತ್ತಲೇ ಇರುತ್ತೇನೆ. ಒಂದು ದಿನ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲವೇನೋ? ಇದರ ಹೊರತಾಗಿ ಪ್ರವಾಸ ನನ್ನ ನೆಚ್ಚಿನ ಹವ್ಯಾಸ. ಚೀನಾ, ಆಫ್ರಿಕಾ, ಹಾಂಕಾಂಗ್ ದೇಶಗಳನ್ನು ಸುತ್ತಿದ್ದೇನೆ, ಸಿಂಗಪುರ್ ರೇಡಿಯೊ ಚಾನೆಲ್‌ನಲ್ಲಿ ಕಾರ್ಯಕ್ರಮವನ್ನೂ ಕೊಟ್ಟಿದ್ದೇನೆ.ನಮ್ಮ ದೇಶದಲ್ಲೇ ಹಲವಾರು ರಾಜ್ಯಗಳಲ್ಲಿ ಚಾರಣಕ್ಕೆ ಹೋಗಿದ್ದೇನೆ. ಹೊಸ ಜಾಗ ನೋಡುವುದು, ಅಲ್ಲಿನ ಸಂಸ್ಕೃತಿ-ಪದ್ಧತಿ ಬಗ್ಗೆ ತಿಳಿದುಕೊಳ್ಳುವುದು ನನಗಿಷ್ಟ. ರೇಡಿಯೊದಲ್ಲಿ ಕಾರ್ಯಕ್ರಮ ನಡೆಸಿಕೊಡುವಾಗಲೂ ಅಷ್ಟೇ, ಅಲ್ಲಿ ಕಂಡ-ಕಲಿತ ಸಂಗತಿಗಳನ್ನು ವಿವರಿಸುತ್ತೇನೆ.ಮಾತಿನ ಮಹತ್ವ ಪದಗಳಿಗೆ ಸಿಗದು, ಅದು ಹೃದಯಕ್ಕೆ ಸಂಬಂಧಿಸಿದ್ದು. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಸಿದ್ಧಾಂತ ಒಪ್ಪಿಕೊಳ್ಳುವುದಿಲ್ಲ. ಕಡಿಮೆ ಮಾತು ಬಂಗಾರವಾಗಲು ಹೇಗೆ ಸಾಧ್ಯ? ಗಂಭೀರ ಮಾತಿಗೆ ತೂಕವಿರುತ್ತದೆ. ಅದನ್ನು ಹೇಗೆ ಬಳಸಬೇಕೆಂಬುದು ತಿಳಿದಿರಬೇಕಷ್ಟೆ.ನನಗಂತೂ ಮಾತೇ ಬಂಡವಾಳ, ಅನ್ನ ನೀಡುವ ದೇವರು. ಪ್ರತಿನಿತ್ಯ ಕಾರ್ಯಕ್ರಮ ಮುಗಿಸುವ ವೇಳೆಗೆ ಬರುವ ಮೇಲ್‌ಗಳು, ಫೇಸ್‌ಬುಕ್ ಕಾಮೆಂಟ್‌ಗಳು ಮತ್ತೊಂದು ದಿನದ ಕಾರ್ಯಕ್ರಮದ ತಯಾರಿಗೆ ನಮ್ಮನ್ನು ಪ್ರೇರೇಪಿಸುತ್ತವೆ. ಆ ಪ್ರತಿಕ್ರಿಯೆಗಳೇ ನಮ್ಮನ್ನಿಷ್ಟು ಜೀವಂತ ಹಾಗೂ ಕ್ರೀಯಾಶೀಲರನ್ನಾಗಿ ಇಟ್ಟಿರುವುದು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry