ಭಾನುವಾರ, ಜನವರಿ 26, 2020
27 °C

ಐತಿಹಾಸಿಕ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯಕ್ಕೆ ಹಲವು ಆಯಾಮಗಳಿವೆ. ಭಾರತದಲ್ಲಿ ಜನ್ಮ ತಳೆದ ಬೌದ್ಧ ಧರ್ಮ ಜಪಾನ್ ಮೇಲೆ ಬೀರಿದ ಪ್ರಭಾವ ಗಾಢವಾದುದು. ಹೀಗಾಗಿ ನಮ್ಮದು ಬರೀ ವ್ಯಾವಹಾರಿಕ, ವಾಣಿಜ್ಯ ಉದ್ದೇಶದ ಬಾಂಧವ್ಯವಲ್ಲ. ಅದನ್ನೂ ಮೀರಿದ್ದು. ಕಲೆ, ಸಂಸ್ಕೃತಿಯ ಜತೆಜತೆಗೆ ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಕೂಡ ಎರಡೂ ದೇಶಗಳ ನಡುವಿನ ಸಹಕಾರ ಬಲಗೊಳ್ಳುತ್ತಲೇ ಇದೆ.ಇಂಥ ಸಮಯದಲ್ಲಿಯೇ ಜಪಾನ್‌ನ ದೊರೆ ಅಕಿಹಿಟೊ ಮತ್ತು ರಾಣಿ ಮಿಷಿಕೊ ಆರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಇದು ಅನೇಕ ದೃಷ್ಟಿಯಿಂದ ಮಹತ್ವಪೂರ್ಣ.  ಅಕಿಹಿಟೊ ೫೩ ವರ್ಷಗಳ ಹಿಂದೆ ಯುವರಾಜನಾಗಿದ್ದಾಗ ಭಾರತಕ್ಕೆ ಬಂದಿದ್ದರು. ಅದರ ನಂತರ ದಕ್ಷಿಣ ಏಷ್ಯಾದ ದೇಶವೊಂದಕ್ಕೆ ಅವರ ಭೇಟಿ ಇದೇ ಮೊದಲು.

ಇದು ಭಾರತದ ಬಗ್ಗೆ ಜಪಾನ್‌ನ ಆದ್ಯತೆಗೊಂದು ನಿದರ್ಶನ. ಭಾರತದಲ್ಲಿ ಪ್ರವಾಸ ಕೈಗೊಳ್ಳುವಂತೆ ಈಗ ಜಪಾನ್‌ನಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಶಿಂಜೊ ಅಬೆ ಸರ್ಕಾರ ದೊರೆಗೆ ಸಲಹೆ ಮಾಡಿತ್ತು. ಇದೂ ಗಮನಾರ್ಹ ಬೆಳವಣಿಗೆ. ಜಪಾನ್ ಸಂವಿಧಾನದ ಪ್ರಕಾರ ದೊರೆ ಸ್ಥಾನ ಕೇವಲ ಆಲಂಕಾರಿಕ. ಆದರೂ ಈ ಭೇಟಿಗೆ ಭಾರತ ಸರ್ಕಾರ ಬಹಳ ಮಹತ್ವ ನೀಡಿದೆ.

ಹೀಗಾಗಿಯೇ ಶಿಷ್ಟಾಚಾರ ಬದಿಗಿಟ್ಟು ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ ದಂಪತಿಯನ್ನು  ಬರಮಾಡಿಕೊಳ್ಳಲು ಸ್ವತಃ ವಿಮಾನ ನಿಲ್ದಾಣದಲ್ಲಿದ್ದರು. ದೊರೆ ಅಕಿಹಿಟೊ ೧೯೯೨ರಲ್ಲಿ ಚೀನಾಕ್ಕೆ ಭೇಟಿ ನೀಡಿದ ನಂತರ ಆ ಎರಡೂ ದೇಶಗಳ ಸಂಬಂಧ ಸುಧಾರಣೆ ಪ್ರಕ್ರಿಯೆಗೆ ಹೆಚ್ಚಿನ ಚಾಲನೆ ಸಿಕ್ಕಿತ್ತು. ದೊರೆಯ ಭಾರತ ಭೇಟಿಯನ್ನು ಕೂಡ ಇದೇ ಹಿನ್ನೆಲೆಯಲ್ಲಿ ನೋಡಬೇಕು.

 

ಎರಡೂ ದೇಶಗಳಲ್ಲಿ ಇರುವುದು ಜನತಂತ್ರ ವ್ಯವಸ್ಥೆ. ಆರ್ಥಿಕ ಕ್ಷೇತ್ರದಲ್ಲಿ ಕೂಡ ಎರಡೂ ದೇಶಗಳು ಪರಸ್ಪರ ಎದುರಾಳಿಗಳಲ್ಲ. ಹೀಗಾಗಿಯೇ ಭಾರತಕ್ಕೆ ಅತಿ ಹೆಚ್ಚು ಆರ್ಥಿಕ ನೆರವು ಜಪಾನ್‌ನಿಂದ ಹರಿದುಬರುತ್ತಿದೆ. ಅಲ್ಲದೆ ಚೀನಾದ ಆಕ್ರಮಣಕಾರಿ ಧೋರಣೆ ಎರಡೂ ದೇಶಗಳನ್ನು ಸಮಾನವಾಗಿ ಬಾಧಿಸುತ್ತಿದೆ.

ಅದು ನಮ್ಮಿಬ್ಬರನ್ನೂ ಮತ್ತಷ್ಟು ಹತ್ತಿರಕ್ಕೆ ತಂದಿದೆ.  ಆದರೆ ‘ದೊರೆಯ ಭಾರತ ಭೇಟಿ, ಚೀನಾದ ವಿರುದ್ಧ ಒಂದಾಗುವ ಪ್ರಯತ್ನವಲ್ಲ’ ಎಂದು ಜಪಾನ್ ಸ್ಪಷ್ಟಪಡಿಸಿದೆ. ಈ  ಭೇಟಿಯನ್ನು ಚೀನಾದ ವಿರುದ್ಧ ಕತ್ತಿ ಮಸೆಯಲು ಬಳಸಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕಿಲ್ಲ. ಭಾರತ–- ಜಪಾನ್ ಮಾತ್ರವಲ್ಲದೆ ಚೀನಾ ಕೂಡ ಪರಸ್ಪರ ಸಹಕಾರದಿಂದ ಕೆಲಸ ಮಾಡುವ ಅನೇಕ ಕ್ಷೇತ್ರಗಳಿವೆ.

ಅವುಗಳಲ್ಲಿ ಪ್ರಮುಖವಾದದ್ದು ಹಿಂದೂ ಮಹಾಸಾಗರದ ಕಡಲು ಮಾರ್ಗಗಳ ಸುರಕ್ಷತೆ. ಏಕೆಂದರೆ ಈ ಮೂರೂ ದೇಶಗಳ ಅರ್ಥವ್ಯವಸ್ಥೆಯ ಜೀವಾಳವಾದ ಪೆಟ್ರೋಲಿಯಂ ಸಾಗಣೆ ಹಡಗುಗಳು ಸಂಚರಿಸುವುದು ಇದೇ ಮಾರ್ಗದಲ್ಲಿ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ವಿಸ್ತೃತ ಸಹಕಾರಕ್ಕೆ ಈ ಭೇಟಿ ದಾರಿ ಮಾಡಿಕೊಟ್ಟರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ.

ಪ್ರತಿಕ್ರಿಯಿಸಿ (+)