ಐತಿಹಾಸಿಕ ಸಂದೇಶ ವಾಹಕ ಸೇವೆ ಇನ್ನಿಲ್ಲ

ಶನಿವಾರ, ಜೂಲೈ 20, 2019
22 °C
ಇತಿಹಾಸದ ಪುಟ ಸೇರಲಿದೆ ಟೆಲಿಗ್ರಾಂ ಸೇವೆ

ಐತಿಹಾಸಿಕ ಸಂದೇಶ ವಾಹಕ ಸೇವೆ ಇನ್ನಿಲ್ಲ

Published:
Updated:

ಬೆಂಗಳೂರು: ದೂರವಾಣಿ, ಮೊಬೈಲ್, ಇಮೇಲ್ ಸೌಲಭ್ಯವಿಲ್ಲದ ಹಾಗೂ ಆಧುನಿಕತೆಯ ಸೋಂಕೂ ಇಲ್ಲದ ದಿನಗಳಲ್ಲಿ ಸಂಪರ್ಕ ಮಾಧ್ಯಮವಾಗಿ ಜನರು ಅವಲಂಬಿಸಿದ್ದ ಟೆಲಿಗ್ರಾಂ ಸೇವೆ ಭಾನುವಾರ ಮಧ್ಯರಾತ್ರಿಯಿಂದ ಸ್ಥಗಿತಗೊಳ್ಳಲಿದೆ.ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆಯಾದ ನಂತರ ಒಂದು ದಶಕದಿಂದ ಟೆಲಿಗ್ರಾಂ ಸೇವೆಗೆ ಬೇಡಿಕೆ ಕಡಿಮೆಯಾಗಿದ್ದು, ಈ ಸೇವೆಯನ್ನು ಸ್ಥಗಿತಗೊಳಿಸಲು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ. ಹೀಗಾಗಿ ಜುಲೈ 15ರಿಂದ ದೇಶದಲ್ಲಿ ಟೆಲಿಗ್ರಾಂ ಸೇವೆ ಇತಿಹಾಸದ ಪುಟಗಳನ್ನು ಸೇರಲಿದೆ.

`ಟೆಲಿಗ್ರಾಂ ಸಂದೇಶ ಸೇವೆ ಒಂದು ರೀತಿಯ ವಿಶೇಷ ಕೆಲಸವಾಗಿತ್ತು. ಸಂದೇಶಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ತಲುಪಿಸುವ ವಿಶಿಷ್ಟ ಸೇವೆ ಟೆಲಿಗ್ರಾಂ. ಅನಾರೋಗ್ಯ, ಸಾವಿನ ಸಂದೇಶಗಳನ್ನೆ ಮುದ್ರಿಸುತ್ತಿದ್ದ ಟೆಲಿಗ್ರಾಫ್ ಯಂತ್ರಗಳು ಮದುವೆ, ನಾಮಕರಣ, ಕೆಲಸ ಸಿಕ್ಕಿದ ಸಂದೇಶಗಳನ್ನು ಮುದ್ರಿಸಿದಾಗ ನಮಗೂ ಖುಷಿಯಾಗುತ್ತಿತ್ತು.

ಒಂದೂವರೆ ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಈ ಸೇವೆ ನಿಂತು ಹೋಗುತ್ತಿರುವುದರಿಂದ ಏನೋ ಕಳೆದುಕೊಳ್ಳುವ ಭಾವ ಮನದಲ್ಲಿ ಮನೆ ಮಾಡಿದೆ' ಎಂದು ಬಿಎಸ್‌ಎನ್‌ಎಲ್‌ನ ನಗರ ಟೆಲಿಗ್ರಾಂ ವಿಭಾಗದಲ್ಲಿ ಸುಮಾರು 20 ವರ್ಷ ಕಾರ್ಯನಿರ್ವಹಿಸಿರುವ ಹಿರಿಯ ವಿಭಾಗೀಯ ಮೇಲ್ವಿಚಾರಕ ಶ್ರಿರಾಮ್ ಭಾವುಕರಾದರು.`ಕಳೆದ ಒಂದು ದಶಕದಲ್ಲಿ ದೂರ ಸಂಪರ್ಕ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಯಾಗಿದೆ. ಸಂಪರ್ಕ ಕ್ರಾಂತಿಯಿಂದಾಗಿ ಜಗತ್ತು ಒಂದು ಗ್ರಾಮವಾಗಿ ಮಾರ್ಪಟ್ಟಿದೆ. ದೂರವಾಣಿ, ಮೊಬೈಲ್‌ಗಳು ಹಳ್ಳಿ ಹಳ್ಳಿಗಳನ್ನೂ ಆವರಿಸಿಕೊಂಡಿವೆ. ಇಮೇಲ್ ಬಳಕೆ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿ ಟೆಲಿಗ್ರಾಂಗೆ ಸಹಜವಾಗಿಯೇ ಬೇಡಿಕೆ ಕಡಿಮೆಯಾಗಿದೆ.

ಹೀಗಾಗಿ ಈ ಸೇವೆ ನಿಲ್ಲಿಸುವ ನಿರ್ಧಾರವನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದೆ. ಟೆಲಿಗ್ರಾಂ ವಿಭಾಗದ ನಮ್ಮನ್ನು ಬೇರೆ ವಿಭಾಗಗಳಿಗೆ ವರ್ಗಾಯಿಸಬಹುದು. ಆದರೆ, ಈ ವಿಭಾಗದಲ್ಲಿ ಕೆಲಸ ಮಾಡಿದ ನೆನಪು ಮಾತ್ರ ಮಾಸುವುದಿಲ್ಲ' ಎನ್ನುತ್ತಾರೆ ಅವರು.`ಟೆಲಿಗ್ರಾಂ ಬಂತೆಂದರೆ ಸಾಮಾನ್ಯವಾಗಿ ಮೊದಲಿಗೆ ಭಯವೇ ಆವರಿಸಿಕೊಳ್ಳುತ್ತಿತ್ತು. ತಂದೆ, ತಾಯಿ ಅಥವಾ ಕುಟುಂಬ ಸದಸ್ಯರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸಂದೇಶಗಳೇ ಹೆಚ್ಚಾಗಿ ಟೆಲಿಗ್ರಾಂ ಮೂಲಕ ಬರುತ್ತಿದ್ದವು. ಬರುತ್ತಿದ್ದ ಸಂದೇಶಗಳು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದಿದ್ದರೂ ಅವು ಸಾವಿನ ಸುದ್ದಿಗಳೇ ಆಗುತ್ತಿದ್ದವು.

40 ವರ್ಷಗಳ ಹಿಂದೆ ಮುಂಬೈಗೆ ನಾನು ಮೊದಲ ಬಾರಿಗೆ ಟೆಲಿಗ್ರಾಂ ಕಳಿಸಿದ್ದು. ತಂದೆಯ ಆರೋಗ್ಯ ಗಂಭೀರವಾಗಿದೆ ಎಂದು ಮುಂಬೈನಲ್ಲಿದ್ದ ಸಂಬಂಧಿಕರಿಗೆ ಕಳಿಸಿದ್ದ ಸಂದೇಶವದು' ಎಂದು ಟೆಲಿಗ್ರಾಂ ಜತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟರು ರಾಜಾಜಿನಗರ ನಿವಾಸಿ ಗೌರಮ್ಮ.`ಮಗಳ ಮದುವೆಯ ಸಂದರ್ಭದಲ್ಲಿ ದೆಹಲಿ ಹಾಗೂ ಕೋಲ್ಕತ್ತದಲ್ಲಿದ್ದ ಸಂಬಂಧಿಕರಿಗೆ ಮದುವೆಯ ಆಮಂತ್ರಣ ಕಳಿಸಿದ್ದೂ ಟೆಲಿಗ್ರಾಂ ಮೂಲಕವೇ. ಹೀಗಾಗಿ ಟೆಲಿಗ್ರಾಂ ನನ್ನ ಮಟ್ಟಿಗೆ ಕೇವಲ ಅಶುಭ ಸಂದೇಶಗಳನ್ನು ಕಳಿಸುವ ಮಾಧ್ಯಮವಾಗದೇ ಶುಭ ಸುದ್ದಿಗಳನ್ನೂ ಕಳಿಸಲು ಸಹಾಯಕವಾಗಿತ್ತು. ಈಗಿನಂತೆ ದೂರವಾಣಿ, ಮೊಬೈಲ್ ಇಲ್ಲದ ದಿನಗಳಲ್ಲಿ ಟೆಲಿಗ್ರಾಂನ ಪಾತ್ರ ಮುಖ್ಯವಾಗಿತ್ತು. ಈಗ ಟೆಲಿಗ್ರಾಂ ಸೇವೆ ನಿಲ್ಲುತ್ತದೆ ಎಂಬ ಸುದ್ದಿ ಕೇಳಿ ಮನಸ್ಸು ಏನೋ ಕಳೆದುಕೊಳ್ಳುವಂತೆ ಚಡಪಡಿಸುತ್ತಿದೆ' ಎಂದು ಅವರು ಭಾವುಕರಾದರು.`ಸಾಮಾನ್ಯವಾಗಿ ಕುಟುಂಬದ ಹಿರಿಯರ ಆರೋಗ್ಯ ಸ್ಥಿತಿ ವಿಷಮವಾದಾಗ ಸಂಬಂಧಿಕರಿಗೆ ವಿಷಯ ಮುಟ್ಟಿಸಲು ಟೆಲಿಗ್ರಾಂ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ, ಅನೇಕ ಬಾರಿ ದೂರದ ಸ್ನೇಹಿತರಿಗೆ ಶುಭಾಶಯ ತಿಳಿಸಲು, ಮದುವೆ, ಗೃಹ ಪ್ರವೇಶದಂಥ ಶುಭ ಸಮಾರಂಭಗಳಿಗೆ ಗೆಳೆಯರು ಹಾಗೂ ಬಂಧುಗಳನ್ನು ಆಹ್ವಾನಿಸಲು ಟೆಲಿಗ್ರಾಂ ಸಹಕಾರಿಯಾಗುತ್ತಿತ್ತು.

ದೂರವಾಣಿ ಸೇವೆ ಹೆಚ್ಚು ಪ್ರಚಾರಕ್ಕೆ ಬರುವವರೆಗೂ ಟೆಲಿಗ್ರಾಂ ಬಳಸುತ್ತಿದ್ದೆ. ಆ ನಂತರ ಪತ್ರ ವ್ಯವಹಾರ ಹಾಗೂ ದೂರವಾಣಿ ಮುನ್ನೆಲೆಗೆ ಬಂದು ಟೆಲಿಗ್ರಾಂ ಸೇವೆ ಮರೆಗೆ ಸರಿಯಿತು' ಎಂದು ನಂದಿನಿ ಬಡಾವಣೆಯ ಕಾಳಯ್ಯ ಹೇಳಿದರು. `ಬೇಡಿಕೆ ಇಲ್ಲ ಎಂದ ಮೇಲೆ ಟೆಲಿಗ್ರಾಂ ಸೇವೆಯನ್ನು ನಿಲ್ಲಿಸಬೇಕಾಗುತ್ತದೆ.

ಅದರೊಂದಿಗೆ ಸಂದೇಶ ರವಾನಿಸುವ ಮಾಧ್ಯಮವೊಂದು ಕೊನೆಯಾಗುತ್ತಿದೆ. ಆದರೆ, ಟೆಲಿಗ್ರಾಂ ಜತೆಗಿದ್ದ ಭಯ, ದುಗುಡ, ವಿಚಿತ್ರ ಸಂತೋಷ ಹಾಗೂ ಸಂಬಂಧ ಮಾತ್ರ ಎಂದಿಗೂ ಮನಸ್ಸಿನಿಂದ ಮರೆಯಾಗುವುದಿಲ್ಲ' ಎನ್ನುತ್ತಾರೆ ಅವರು. ಬಿಎಸ್‌ಎನ್‌ಎಲ್ ತೆಕ್ಕೆಗೆ ಟೆಲಿಗ್ರಾಂ ಸೇವೆ: ಮೊದಲು ಟೆಲಿಗ್ರಾಂ ಸೇವೆ ಅಂಚೆ ಮತ್ತು ತಂತಿ ಇಲಾಖೆಯ ಅಧೀನದಲ್ಲಿತ್ತು.

2000ರಲ್ಲಿ ಅಂಚೆ ಇಲಾಖೆಯಿಂದ ದೂರವಾಣಿ ಸೇವೆಯು ಬೇರ್ಪಟ್ಟ ನಂತರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್) ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಟೆಲಿಗ್ರಾಂ ಸೇವೆ ನಡೆಯುತ್ತಿದೆ. 80ರ ದಶಕದಿಂದ ಮೋರ್ಸ್ ಯಂತ್ರದ ಬಳಕೆ ಕಡಿಮೆಯಾಗಿ ಎಲೆಕ್ಟ್ರಾನಿಕ್ ಟೆಲಿಗ್ರಾಂ ಯಂತ್ರಗಳ ಬಳಕೆ ಆರಂಭವಾಯಿತು. ಸದ್ಯ ಈ ಯಂತ್ರಗಳೂ ಮೂಲೆ ಸೇರಿವೆ. 2010ರಿಂದ ಇಂಟರ್‌ನೆಟ್ ಮೂಲಕವೇ ಟೆಲಿಗ್ರಾಂ ಸಂದೇಶ ಸ್ವೀಕಾರ ಹಾಗೂ ರವಾನೆ ಕಾರ್ಯ ನಡೆಯುತ್ತಿದೆ.`2002ಕ್ಕೂ ಮುನ್ನಾ ದಿನಗಳಲ್ಲಿ ಸ್ವೀಕರಿಸಿದ ಸಂದೇಶಗಳನ್ನು ಸಂಬಂಧಪಟ್ಟವರಿಗೆ ತಲುಪಿಸಲು ಸಂದೇಶ ರವಾನಕರನ್ನು (ಮೆಸೆಂಜರ್) ನೇಮಿಸಿಕೊಳ್ಳಲಾಗುತ್ತಿತ್ತು. ಆನಂತರ ಈ ಮೆಸೆಂಜರ್‌ಗಳ ಸೇವೆಯನ್ನು ನಿಲ್ಲಿಸಿ ಟೆಲಿಗ್ರಾಂ ಸಂದೇಶವನ್ನು ಸಂಬಂಧಪಟ್ಟವರಿಗೆ ತಲುಪಿಸುವ ಸೇವೆಯನ್ನು ಖಾಸಗಿ ಸೇವಾ ಕಂಪೆನಿಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿತ್ತು.

ಕಳೆದ ಐದು ವರ್ಷಗಳಿಂದ ಸ್ವೀಕರಿಸಿದ ಟೆಲಿಗ್ರಾಂ ಸಂದೇಶವನ್ನು ಸಂಬಂಧಪಟ್ಟವರ ವಿಳಾಸಕ್ಕೆ ಅಂಚೆ ಮೂಲಕ ಕಳಿಸಲಾಗುತ್ತಿದೆ' ಎಂದು ನಗರ ಟೆಲಿಗ್ರಾಂ ವಿಭಾಗದ ಶ್ರೀರಾಮ್ ಮಾಹಿತಿ ನೀಡಿದರು. `ನಗರದಲ್ಲಿ ಒಂದು ಟೆಲಿಗ್ರಾಂ ಕಚೇರಿ ಹಾಗೂ 24 ಗ್ರಾಹಕರ ಸೇವಾ ಕೇಂದ್ರಗಳ ಮೂಲಕ ಟೆಲಿಗ್ರಾಂ ಸೇವೆ ಒದಗಿಸಲಾಗುತ್ತಿದೆ.

ಬೆಂಗಳೂರಿನ ಟೆಲಿಗ್ರಾಂ ಕಚೇರಿಯನ್ನು ಬಿಟ್ಟರೆ ರಾಜ್ಯದಲ್ಲಿ ಟೆಲಿಗ್ರಾಂ ಸೇವೆಗೆಂದೇ ಪ್ರತ್ಯೇಕ ಕಚೇರಿಗಳಿಲ್ಲ. ನಗರದಲ್ಲಿ ದಿನಕ್ಕೆ ಸುಮಾರು 120 ಟೆಲಿಗ್ರಾಂಗಳು ಸ್ವೀಕೃತಿ ಹಾಗೂ ರವಾನೆಗೆ ಬರುತ್ತವೆ. 30 ಪದಗಳ ಮಿತಿಯ ಟೆಲಿಗ್ರಾಂಗೆ ಈವರೆಗೆ  ್ಙ30 ಹಾಗೂ ನಂತರದ ಪ್ರತಿ ಪದಕ್ಕೆ ರೂ 2.20 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿತ್ತು' ಎಂದು ಅವರು ವಿವರಿಸಿದರು.`ಬೆಂಗಳೂರು ನಗರದ ಟೆಲಿಗ್ರಾಂ ವಿಭಾಗದಲ್ಲಿ ಒಟ್ಟು 21 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದೇವೆ. ಸೇವೆ ನಿಲ್ಲಿಸುವ ತೀರ್ಮಾನದ ಕಾರಣದಿಂದ ನಮ್ಮನ್ನು ಇತರೆ ವಿಭಾಗಗಳಿಗೆ ವರ್ಗಾಯಿಸಲು ಸಿದ್ಧತೆ ನಡೆದಿದೆ. ಇತರೆ ಗ್ರಾಹಕರ ಸೇವಾ ಕೇಂದ್ರಗಳಲ್ಲಿ ಟೆಲಿಗ್ರಾಂ ಸೇವೆಗೆಂದು ಪ್ರತ್ಯೇಕ ಸಿಬ್ಬಂದಿ ಇಲ್ಲ. ಕೇಂದ್ರದ ಒಬ್ಬ ಸಿಬ್ಬಂದಿಗೆ ಟೆಲಿಗ್ರಾಂನ ಉಸ್ತುವಾರಿ ವಹಿಸಲಾಗಿದೆ. ಹೀಗಾಗಿ ಟೆಲಿಗ್ರಾಂ ಸೇವೆ ಸ್ಥಗಿತಗೊಂಡರೆ ಸಿಬ್ಬಂದಿಗೇನೂ ತೊಂದರೆಯಿಲ್ಲ' ಎಂದು ಅವರು ಹೇಳಿದರು.

ಟೆಲಿಗ್ರಾಂ ತೆರೆಮರೆಗೆ

ಅಮೆರಿಕದ ಸ್ಯಾಮುವಲ್ ಮೋರ್ಸ್ 1844ರಲ್ಲಿ ಟೆಲಿಗ್ರಾಂ ಆವಿಷ್ಕರಿಸಿದ. ಭಾರತದಲ್ಲಿ 1850ರಲ್ಲಿ ಕೋಲ್ಕತ್ತದಲ್ಲಿ ಆರಂಭವಾದ ಟೆಲಿಗ್ರಾಂ ಸೇವೆ ಆನಂತರ ದೇಶದಲ್ಲಿ ಸಂದೇಶ ರವಾನೆಯ ಮಾಧ್ಯಮವಾಗಿ ಹೆಚ್ಚು ಪ್ರಚಾರಕ್ಕೆ ಬಂದಿತು. ಜುಲೈ 15ರಿಂದ ಈ ಸೇವೆ ದೇಶದಲ್ಲಿ ತೆರೆಮರೆಗೆ ಸರಿಯಲಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯಪಾತ್ರ

ಟೆಲಿಗ್ರಾಂ ಸೇವೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯವಾದ ಪಾತ್ರ ವಹಿಸಿತ್ತು. ಗಾಂಧೀಜಿ ಅನೇಕ ಬಾರಿ ಟೆಲಿಗ್ರಾಂ ಮೂಲಕವೇ ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದೇಶ ಕಳಿಸಿ ಚಳವಳಿಗೆ ಕರೆ ನೀಡುತ್ತಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ನಡುವಿನ ವಿಚಾರ ವಿನಿಮಯಕ್ಕೂ ಟೆಲಿಗ್ರಾಂ ಉತ್ತಮ ಸಂದೇಶ ವಾಹಕವಾಗಿತ್ತು. ಸ್ವಾತಂತ್ರ್ಯ ಹೋರಾಟ ಕಾವು ಪಡೆದುಕೊಂಡಿದ್ದ ಸಂದರ್ಭದಲ್ಲಿ ಟೆಲಿಗ್ರಾಂ ಸೇವೆಯನ್ನು ಶಕ್ತಿಯುತವಾಗಿ ಬಳಸಿಕೊಳ್ಳಲಾಗುತ್ತಿತ್ತು.

-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ .ಭಯ ಆತಂಕಗಳೂ ಅಂತ್ಯ


ಕೃಷಿ ವಿಶ್ವವಿದ್ಯಾಲಯದಲ್ಲಿ ನನಗೆ ಸೀಟು ಸಿಕ್ಕಿದ ವಿಷಯ ಟೆಲಿಗ್ರಾಂ ಮೂಲಕ ತಿಳಿಯಿತು. ಅದು ನಾನು ಮೊದಲು ಸ್ವೀಕರಿಸಿದ ಟೆಲಿಗ್ರಾಂ ಸಂದೇಶ. ನಂತರ ಕಚೇರಿಯ ಕೆಲಸಗಳಿಗೆ ಹಲವು ಬಾರಿ ಟೆಲಿಗ್ರಾಂ ಸೇವೆಯನ್ನು ಬಳಸಿಕೊಂಡಿದ್ದೇನೆ. ಈಗ ಟೆಲಿಗ್ರಾಂ ಜತೆಗಿದ್ದ ಭಯ, ಆತಂಕಗಳು ಅದರೊಂದಿಗೇ ಕೊನೆಯಾಗುತ್ತಿವೆ.

-ಕೆ.ಎನ್.ಜಗದೀಶ್, ವಿಷಯ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಹಿರೇಹಳ್ಳಿ .ಭಾವನಾತ್ಮಕ ನಂಟು


ಹಿಂದೆ ಯಾವುದೇ ಸಂದೇಶಗಳನ್ನು ತುರ್ತಾಗಿ ಕಳಿಸಬೇಕಾದರೆ ಟೆಲಿಗ್ರಾಂ ನೆನಪಾಗುತ್ತಿತ್ತು. ಹೆಚ್ಚಾಗಿ ಅಶುಭ ಸಂದೇಶಗಳನ್ನೇ ತರುತ್ತಿದ್ದ ಟೆಲಿಗ್ರಾಂ ಅಚ್ಚರಿಯೆಂಬಂತೆ ಕೆಲವೊಮ್ಮೆ ಸಿಹಿ ಸುದ್ದಿಗಳನ್ನೂ ತರುತ್ತಿತ್ತು.

ಪದವಿಯಲ್ಲಿ ಹೆಚ್ಚು ಅಂಕಗಳಿಸಿದ, ಗೆಳೆಯರಿಗೆ ಕೆಲಸ ಸಿಕ್ಕಿದ ಸುದ್ದಿಗಳು ಟೆಲಿಗ್ರಾಂ ಮೂಲಕವೇ ತಿಳಿದಿದ್ದು. ಟೆಲಿಗ್ರಾಂ ಜತೆಗೆ ಅದೊಂದು ರೀತಿಯ ಭಾವನಾತ್ಮಕವಾದ ಸಂಬಂಧವೂ ಇತ್ತು.

-ನಿತಾ ಖಂಡೇಕರ್,ಹೆಸರಘಟ್ಟ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry