ಐತಿಹಾಸಿಕ ಸಮಾರಂಭಕ್ಕೆ ಅಬ್ಬೆತುಮಕೂರ ಸಜ್ಜು

7

ಐತಿಹಾಸಿಕ ಸಮಾರಂಭಕ್ಕೆ ಅಬ್ಬೆತುಮಕೂರ ಸಜ್ಜು

Published:
Updated:

ಯಾದಗಿರಿ: ಜಿಲ್ಲೆಯ ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ಧಸಂಸ್ಥಾನ ಮಠವು ಐತಿಹಾಸಿಕ ಸಮಾರಂಭಕ್ಕೆ ಸಜ್ಜುಗೊಳ್ಳುತ್ತಿದೆ.ಏ. 11ರಿಂದ 15 ರವರೆಗೆ ಶ್ರೀಮಠದಲ್ಲಿ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಸಂಕಲ್ಪ ಹಾಗೂ ಭಕ್ತರ ಇಚ್ಛೆಯಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗಿದೆ.ವಿಶ್ವಾರಾಧ್ಯರ ಮೂರ್ತಿ ಪುನರ್ ಬಿಂಬ ಪ್ರತಿಷ್ಠಾಪನೆ ಅಂಗವಾಗಿ ಮಹಾರುದ್ರಯಾಗ, 770 ಅಮರಗಣಂಗಳ ಸ್ಮರಣಾರ್ಥ 770 ಗುರು-ಜಂಗಮರ ಪಾದ ಪೂಜೆ, ರಜತ ಬಿಲ್ವಾರ್ಚನೆ, ಸಂತ ಸಮಾಗಮ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿವೆ.ಈಗಾಗಲೇ ಸಮಾರಂಭದ ನಿಮಿತ್ತ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. 770 ಮಂಟಪಗಳು ನಿರ್ಮಾಣವಾಗುತ್ತಿವೆ. ಧಾರ್ಮಿಕ ಸಭೆಗಾಗಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ. ಶ್ರೀಮಠಕ್ಕೆ ಬರುವ ಲಕ್ಷಾಂತರ ಭಕ್ತರಿಗಾಗಿ ಎರಡು ಕಡೆ ರಸ್ತೆಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ಕುಡಿಯವ ನೀರಿನ ಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ತಾತ್ಕಾಲಿಕ ಶೌಚಾಲಯ ಹಾಗೂ ಸ್ನಾನ ಗೃಹಗಳನ್ನು ನಿರ್ಮಿಸಲಾಗುತ್ತಿದೆ.ಭಕ್ತರಿಗೆ ನಿರಂತರ ದಾಸೋಹಕ್ಕಾಗಿ ಮಠಕ್ಕೆ ಭಕ್ತರಿಂದ ವಿವಿಧ ದವಸ ಧಾನ್ಯಗಳು ಹರಿದು ಬರುತ್ತಿವೆ. ಈಗಾಗಲೇ ಸಿಹಿ ತಿನಿಸುಗಳ ತಯಾರಿಯಲ್ಲಿ ಬಾಣಸಿಗರು ನಿರತರಾಗಿದ್ದಾರೆ. 770 ಜಂಗಮರಿಗಾಗಿ ನಗರದ ಬಾಲಾಜಿ ಕಲ್ಯಾಣ ಮಂಟಪ ಹಾಗೂ ಸುರಪುರ ರಂಗಂಪೇಟದ ಬಸವೇಶ್ವರ ಕಲ್ಯಾಣ ಮಂಟಪ ಮತ್ತು ಶಹಾಪುರದ ವೀರಶೈವ ಕಲ್ಯಾಣ ಮಂಟಪದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಕಾರ್ಯಕ್ರಮವು ದೇಶದ ಗಮನ ಸೆಳೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry