ಐತಿಹಾಸಿಕ ಸ್ಮಾರಕಗಳು ಮತ್ತು ವಿಕೃತ ಮನಸ್ಸು

7

ಐತಿಹಾಸಿಕ ಸ್ಮಾರಕಗಳು ಮತ್ತು ವಿಕೃತ ಮನಸ್ಸು

Published:
Updated:

ವಿಜಾಪುರ ಸಂಸದ ರಮೇಶ ಜಿಗಜಿಣಗಿ  ಪತ್ರಿಕಾಗೋಷ್ಠಿ ಕರೆದಿದ್ದರು. ‘ವಿಜಾಪುರದ ಐತಿಹಾಸಿಕ ಸ್ಮಾರಕಗಳನ್ನು ವಿಶ್ವ ಪರಂಪರೆ ಪಟ್ಟಿ ಯಲ್ಲಿ ಸೇರಿಸುವ ಪ್ರಯತ್ನ ನಡೆದಿದೆ...’ ಎಂದೆಲ್ಲ ಹೇಳಿಕೊಂಡರು. ‘ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಾದರೆ ಸ್ಮಾರಕಗಳ ಅತಿಕ್ರಮಣ ತೆರವುಗೊಳಿಸಬೇಕು ಎಂಬುದು ‘ಯುನೆಸ್ಕೊ’ದ ಷರತ್ತುಗಳಲ್ಲಿ ಒಂದು. ನಿಮ್ಮ ಕಚೇರಿ ಇರುವ ಆನಂದ ಮಹಲ್‌ ಸಹ ಸಂರಕ್ಷಿತ ಸ್ಮಾರಕ. ನೀವೂ ಸ್ಮಾರಕ ಅತಿಕ್ರಮಿಸಿದಂತೆ ಅಲ್ಲವೇ’ ಎಂಬ ಪ್ರಶ್ನೆಗೆ ಸಂಸದರು ನೀಡಿದ ಉತ್ತರ,  ‘ಸರ್ಕಾರವೇ ಈ  ಕಟ್ಟಡದಲ್ಲಿ ನನಗೆ ಕಚೇರಿ ಮಾಡಿಕೊಟ್ಟಿದೆ. ಸರ್ಕಾರ ಬೇಡ ಎಂದು ಪರ್ಯಾಯ ಸ್ಥಳಕ್ಕೆ ಕಚೇರಿ ಸ್ಥಳಾಂತರಿಸಿದರೆ ಅಲ್ಲಿಗೆ ಹೋಗುತ್ತೇನೆ’ ಎಂಬುದು!ಸ್ಮಾರಕಗಳ ರಕ್ಷಣೆಯ ವಿಷಯದಲ್ಲಿ ನಮ್ಮ ಸರ್ಕಾರ ಮತ್ತು ಜನತೆಯ ಮನಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ.  ನಮ್ಮ ರಾಜ್ಯದಲ್ಲಿ ಅಂದಾಜು 530 ಸಂರಕ್ಷಿತ ಸ್ಮಾರಕಗಳಿವೆ. ವಿಜಾಪುರ ಜಿಲ್ಲೆಯಲ್ಲಿ ರುವ 80 ಸಂರಕ್ಷಿತ ಸ್ಮಾರಕಗಳ ಪೈಕಿ 65 ಸಂರಕ್ಷಿತ ಸ್ಮಾರಕಗಳು ಇರುವುದು ವಿಜಾಪುರ ನಗರದಲ್ಲಿಯೇ. ಈ ನಗರದಲ್ಲಿ ಇರುವಷ್ಟು ಸಂಖ್ಯೆಯ ಸಂರಕ್ಷಿತ ಸ್ಮಾರಕಗಳು ಬಹುಶಃ ದೇಶದ ಯಾವ ನಗರದಲ್ಲಿಯೂ ಇರಲಿಕ್ಕಿಲ್ಲ. ಎತ್ತ ಹೋದರೂ ಸ್ಮಾರಕಗಳ ದರ್ಶನವಾ ಗುತ್ತದೆ. ಸಂರಕ್ಷಣೆ ಇಲ್ಲದಿರುವುದಕ್ಕೆ ಈ ಅಧಿಕ ಸಂಖ್ಯೆಯೂ ಕಾರಣ ಇರಬಹುದು.ಐತಿಹಾಸಿಕ ಸ್ಮಾರಕಗಳನ್ನು ಅತಿಕ್ರಮಿಸಿ, ಅವು ಗಳ ಮೇಲೆ ಹಕ್ಕು ಪ್ರತಿಪಾದಿಸುವುದಕ್ಕೆ ಇನ್ನೂ ಪೂರ್ಣ ವಿರಾಮ ಬಿದ್ದಿಲ್ಲ. ಅತಿಕ್ರಮಣದ ಬಾಧೆ ವಿಶ್ವವಿಖ್ಯಾತ ಗೋಲಗುಮ್ಮಟವನ್ನೂ ಬಿಟ್ಟಿಲ್ಲ. ಬಡವ–ಬಲ್ಲಿದ ಅಷ್ಟೇ ಅಲ್ಲ; ಸರ್ಕಾರವೂ ಈ ಅತಿಕ್ರಮಣದ ಫಲಾನುಭವಿ. ಜಿಲ್ಲಾಧಿಕಾರಿಗಳ ಕಚೇರಿ ಮತ್ತು ನಿವಾಸ ಇರುವುದು ಸಂರಕ್ಷಿತ ಸ್ಮಾರಕಗಳಲ್ಲಿಯೇ ಎಂಬುದು ಮತ್ತೊಂದು ಸೋಜಿಗ. ಇನ್ನು ಊರಾಚೆ ಇರುವ ‘ದಿಕ್ಕಿಲ್ಲದ ಸ್ಮಾರಕ’ಗಳನ್ನು ರಾತ್ರೋರಾತ್ರಿ ನೆಲಸಮಗೊಳಿಸಿ ನಿವೇಶನ ಅಭಿವೃದ್ಧಿ ಪಡಿಸುವವರ ಹಾವಳಿಯಂತೂ ವಿಪರೀತ.ಅಪರೂಪದ ಐತಿಹಾಸಿಕ ಸ್ಮಾರಕಗಳನ್ನು ನಮ್ಮ ಸರ್ಕಾರಗಳು ಮತ್ತು ನಾವು ಹೇಗೆ ಸಂರಕ್ಷಿಸುತ್ತಿದ್ದೇವೆ ಎಂಬುದನ್ನು ನೋಡಬೇಕಾ ದರೆ ಗೋಲಗುಮ್ಮಟಕ್ಕೆ ಹೋಗಬೇಕು. ಒಮ್ಮೆ ಕೂಗಿದರೆ ಏಳೇಳು ಬಾರಿ ಪ್ರತಿಧ್ವನಿಸಿ ವಿಸ್ಮಯ ಮೂಡಿಸುವುದು ಈ ಕಟ್ಟಡದ ವೈಶಿಷ್ಟ್ಯ. ಹಜಾರದ ಒಂದು ಬದಿಗೆ ನಿಂತು ಕಡ್ಡಿ ಗೀರಿದರೆ ಅಥವಾ ಪೇಪರ್‌ನ ಒಂದು ತುಂಡು ಹರಿದರೆ ಅದರ ಶಬ್ದ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳುವುದು ಈ ಪಿಸುಗುಟ್ಟುವ ಗ್ಯಾಲರಿಯ ಮ್ಯಾಜಿಕ್‌. ಆದರೂ, ಈ ಸ್ಮಾರಕ ಪ್ರಪಂಚದ ಅಚ್ಚರಿಗಳ ಪಟ್ಟಿಯಲ್ಲಿ ಸೇರಿಲ್ಲ.

ಆಸೆಪಟ್ಟು, ಕಷ್ಟಪಟ್ಟು ಮೆಟ್ಟಿಲು ಏರಿ ಗೋಲಗುಮ್ಮಟದ ಪಿಸುಗುಟ್ಟುವ ಗ್ಯಾಲರಿಗೆ ಕಾಲಿಟ್ಟರೆ ಮನಸ್ಸು ಉಲ್ಲಸಿತಗೊಳ್ಳುವ ಬದಲು ಹೊಟ್ಟೆ ಉರಿ ಆರಂಭವಾಗುತ್ತದೆ. ತಾವು ಒಮ್ಮೆ ಕೇಕೆ ಹಾಕಿದರೆ ಅದು ಏಳೇಳು ಬಾರಿ ಕೇಕೆ ಹಾಕುತ್ತದೆ ಎಂದು ಅಲ್ಲಿಗೆ ಬಂದವರೆಲ್ಲ ಗಂಟಲು ಹರಿಯುವಂತೆ ಅರಚುತ್ತಿರುತ್ತಾರೆ, ಚಪ್ಪಾಳೆ ತಟ್ಟುತ್ತ, ಶಿಳ್ಳೆ ಹೊಡೆಯುತ್ತಾರೆ. ಇನ್ನು ವಿಕೃತ ಮನಸ್ಸಿನ ಕೆಲ ಕಿಡಿಗೇಡಿಗಳು ತಮ್ಮ ಹೆಸರೂ ಅಜರಾಮರವಾಗಿ ಉಳಿಯಲಿ ಎಂದು ಗೋಡೆಯ ಮೇಲೆ ಗೀಚುತ್ತಾರೆ.ತಮ್ಮ ಹೆಸರಿ ನೊಂದಿಗೆ ಹುಡುಗಿಯರ ಹೆಸರನ್ನೂ ಸೇರಿಸು ತ್ತಾರೆ. ಗುಮ್ಮಟದ ಹಜಾರದಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಆಸ್ವಾದಿಸಲು ಸಾಧ್ಯವೇ ಆಗುವುದಿಲ್ಲ. ಅಷ್ಟೊಂದು ಗದ್ದಲ ಅಲ್ಲಿರುತ್ತದೆ. ಇನ್ನು  ಕಾವಲುಗಾರರು ಜೋರಾಗಿ ಸೀಟಿ ಊದುತ್ತಿರುತ್ತಾರೆ. ನಾವು ಗೋಲಗುಮ್ಮಟದ ಹಜಾರದಲ್ಲಿದ್ದೇವೆಯೋ? ಸಂತೆಯಲ್ಲಿದ್ದೇವೆಯೋ ಎಂಬುದು ಗೊತ್ತೇ ಆಗುವುದಿಲ್ಲ. ಹಾಗಿರುತ್ತದೆ ಅಲ್ಲಿಯ ಗದ್ದಲ–ಗೋಜಲು.ಶಬ್ದ ಮಾಲಿನ್ಯದಿಂದ ಈ ಪಿಸುಗುಟ್ಟುವ ಗ್ಯಾಲರಿ ತನ್ನತನವನ್ನು ಕಳೆದುಕೊಳ್ಳುತ್ತಿದೆ. ಪ್ರತಿ ಧ್ವನಿ ಕ್ಷೀಣಿಸುತ್ತಿದೆ. ಇದೇ ರೀತಿ ‘ದಾಳಿ’ ಮುಂದು ವರೆದರೆ ಮುಂದೊಂದು ದಿನ ಪ್ರತಿಧ್ವನಿಯ ಶಕ್ತಿಯೇ ಇಲ್ಲವಾಗಬಹುದು. ಇಡೀ ದಿನ ಬರುವ ಸಾವಿರಾರು ಜನರು ತಮ್ಮ ಗಂಟಲು ಹರಿಯುವ ಹಾಗೆ ಅರಚುತ್ತಿದ್ದರೆ ಪಾಪ ಈ ಸ್ಮಾರಕ ಎಷ್ಟು ದಿನ ತಡೆದುಕೊಳ್ಳಲು ಸಾಧ್ಯ? ಹಿಂದಿನವರು ಬಿಟ್ಟುಹೋದ ಇಂತಹ ಅಪರೂಪಗಳನ್ನು ನಮ್ಮ ಮುಂದಿನ ಪೀಳಿಗೆಗಾಗಿ ಜತನದಿಂದ ಕಾಪಾಡುವುದು ನಮ್ಮ ಹೊಣೆ ಅಲ್ಲವೇ?ದೇಶದಲ್ಲಿರುವ ಇಂತಹ ಸಂರಕ್ಷಿತ ಸ್ಮಾರಕಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ  ‘ಪ್ರಾಚೀನ ಸ್ಮಾರಕ ಗಳು ಮತ್ತು ಅವಶೇಷಗಳ (ತಿದ್ದುಪಡಿ–ಮಾನ್ಯೀಕರಣ) ಕಾಯ್ದೆ–2010 ಜಾರಿಗೆ ತಂದಿದೆ. ಸಂರಕ್ಷಿತ ಸ್ಮಾರಕಗಳ ರಕ್ಷಣೆಗಾಗಿ ಬ್ರಿಟಿ ಷರು 1914ರಲ್ಲಿಯೇ ಕಾನೂನು ರೂಪಿಸಿದ್ದರು. 1958ರಲ್ಲಿ ನಮ್ಮ ಸರ್ಕಾರ ಪರಿಷ್ಕೃತ ಕಾನೂನು ಜಾರಿಗೆ ತಂದಿತ್ತು.ಸ್ಮಾರಕಗಳ ಸೌಂದರ್ಯಕ್ಕೆ ಧಕ್ಕೆಯಾಗುವು ದನ್ನು ತಡೆಯಲು ಮತ್ತು ಅವುಗಳ ಅತಿಕ್ರಮಣ ನಿಯಂತ್ರಿಸಲು ಜಾರಿಗೆ ತಂದಿರುವ ಹೊಸ ಕಾನೂನು ಕಠಿಣವೂ ಆಗಿದೆ. ಸಂರಕ್ಷಿತ ಸ್ಮಾರಕದ 100 ಮೀಟರ್‌ ವ್ಯಾಪ್ತಿಯಲ್ಲಿ ಬರುವ ಕಟ್ಟಡ ಗಳನ್ನು ರಿಪೇರಿ ಮಾಡಲು, ಆ ಪ್ರದೇಶದ ನಿವೇಶ ನಗಳಲ್ಲಿ  ಹೊಸ ಕಟ್ಟಡ ಕಟ್ಟಲು ಅವಕಾಶ ಇಲ್ಲ. ಸ್ಮಾರಕದ 100 ಮೀಟರ್‌ನಿಂದ 200 ಮೀಟರ್‌ ಪರಿಧಿಯಲ್ಲಿಯ ಕಟ್ಟಡಗಳ ರಿಪೇರಿ, ವಿಸ್ತರಣೆ, ಹೊಸ ಕಟ್ಟಡ ನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರ ದಿಂದ ಪೂರ್ವಾ­ನುಮತಿ ಪಡೆಯುವುದು ಕಡ್ಡಾಯ ಎಂದು ಈ ಕಾಯ್ದೆ ಹೇಳುತ್ತದೆ.ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿ ಸಿದರೆ ವಿಜಾಪುರ ನಗರದ (ಕೋಟೆ ಒಳಗಿನ) ಶೇಕಡಾ 90ರಷ್ಟು ಮನೆಗಳನ್ನು ಸ್ಥಳಾಂತರಿಸ ಬೇಕಾಗುತ್ತದೆ. ಅದು ಸಾಧ್ಯವೇ? ಹಾಗಿದ್ದರೆ ಈ ಕಾಯ್ದೆಗೆ ಏನು ಅರ್ಥ? ಆದಿಲ್‌ ಶಾಹಿ ಅರಸರು ನಿರ್ಮಿಸಿದ್ದ 11.5 ಕಿ.ಮೀ. ಉದ್ದದ ಹೊರ ಕೋಟೆಯ ಶೇ 80ರಷ್ಟು ಭಾಗ ಬಿದ್ದು ಹೋಗಿ ದ್ದರೂ ಅದು ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿದೆ. ಅದರಿಂದ ಏನು ಪ್ರಯೋಜನ?  ಪ್ರಮುಖ ಸ್ಮಾರಕಗಳಿಗೆ ಮಾತ್ರ ಈ ಕಾಯ್ದೆ ಅನ್ವಯವಾಗು ವಂತೆ ಮಾಡಬೇಕು. ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಹತ್ತಾರು ಪ್ರಮುಖ ಸ್ಮಾರಕ ಗಳನ್ನು ಉಳಿಸಿಕೊಂಡು ಅವುಗಳ ಅತಿಕ್ರಮಣ ತೆರವುಗೊಳಿಸಿ ಅಭಿವೃದ್ಧಿಪಡಿಸ ಬೇಕು. ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳುತ್ತ ಏನೂ ಮಾಡದಿರುವುದಕ್ಕಿಂತ ಇದು ಉತ್ತಮ.ಅತಿಕ್ರಮಣ ತೆರವುಗೊಳಿಸುವುದಿರಲಿ, ಸ್ಮಾರಕ ಗಳನ್ನು ಶುಚಿಯಾಗಿಟ್ಟುಕೊಳ್ಳಲು ಮತ್ತು ವಿರೂ ಪಗೊಳಿಸುವುದನ್ನು ತಡೆಯಲೂ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಅಲ್ಲಿಯ ಸಿಬ್ಬಂದಿ ಕೊರತೆ ನೀಗುತ್ತಿಲ್ಲ. ಉಳಿದ ಇಲಾಖೆಯವರೂ ಸಹಕಾರ ನೀಡುತ್ತಿಲ್ಲ. ಆಡಳಿ ತದ ಉಸ್ತುವಾರಿ ನೋಡಿಕೊಳ್ಳಬೇಕಾದ ಈ ಇಲಾ­ಖೆಯ ವಲಯ ಕಚೇರಿ ಇರುವುದು ಧಾರ ವಾಡದಲ್ಲಿ. ಆ ಕಚೇರಿಯನ್ನು ವಿಜಾಪುರಕ್ಕೆ ಸ್ಥಳಾಂತರಿಸಬೇಕು. ಇಲ್ಲವೇ ವಿಜಾಪುರಕ್ಕೇ ಪ್ರತ್ಯೇಕ ವಲಯ ಕಚೇರಿ ಸ್ಥಾಪಿಸಬೇಕು. ಹಾಗಾ ದರೆ ಇಲಾಖೆಯ ಚಟುವಟಿಕೆಗೆ ಸ್ವಲ್ಪ ಚುರುಕು ಬರಬಹುದು. ನಮ್ಮ ಪರಂಪರೆಯ ಸಂಕೇತವಾಗಿ ರುವ ಸ್ಮಾರಕಗಳ ರಕ್ಷಣೆಗೆ ಕಾನೂನು–ಕಚೇರಿ ಬೇಕೇ? ಅಥವಾ ವಿಕೃತ ಮನಸ್ಥಿತಿ ಬದಲಾಗಬೇಕೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry