ಶುಕ್ರವಾರ, ಮಾರ್ಚ್ 5, 2021
27 °C
ಸಿಂಧನೂರು: ಕಾಟಾಚಾರದ ವೀಕ್ಷಣೆ– ಕೇಂದ್ರ ತಂಡದ ವಿರುದ್ಧ ರೈತರ ಆಕ್ರೋಶ

ಐದು ತಾಲ್ಲೂಕಿನಲ್ಲಿ ಭತ್ತ ಬೆಳೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐದು ತಾಲ್ಲೂಕಿನಲ್ಲಿ ಭತ್ತ ಬೆಳೆಗೆ ಹಾನಿ

ರಾಯಚೂರು: ಏಪ್ರಿಲ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಆಗಿರುವ ಹಾನಿಯ ಜಿಲ್ಲಾವಾರು ಮಾಹಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ನೀಡ ಲಾಯಿತು.ರಾಯಚೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾಹಿತಿ ನೀಡಿ, ಏ. 9ರಿಂದ 13ರವರೆಗೆ ಮತ್ತು 23 ಹಾಗೂ 24ರಂದು ಸುರಿದ ಮಳೆಯಿಂದಾಗಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ 42,624 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆಗೆ ಹಾನಿಯಾಗಿದೆ ಎಂದು ಚಿತ್ರ ಸಹಿತ ಮಾಹಿತಿ ನೀಡಿದರು.ರಾಯಚೂರು ತಾಲ್ಲೂಕಿನಲ್ಲಿ 106 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿ ಆಗಿದ್ದು, ₹11.90 ಲಕ್ಷ ನಷ್ಟವಾಗಿದೆ. ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. 10 ಜಾನುವಾರುಗಳು ಸತ್ತಿದ್ದು, 292 ಮನೆಗಳು ಹಾಳಾಗಿವೆ ಎಂದರು. ಪ್ರತಿ ಹೆಕ್ಟೇರ್‌ ಬೆಳೆ ಹಾನಿಗೆ ಕೇಂದ್ರ ಸರ್ಕಾರ ನೀಡಿದ್ದ ₹13,500 ಸೇರಿದಂತೆ ಒಟ್ಟು ₹25 ಸಾವಿರ ಪರಿಹಾರ ನೀಡಲು ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಫಲಾನುಭವಿಗಳ ಬ್ಯಾಂಕ್‌ ಉಳಿತಾಯ ಖಾತೆಗೆ ನೇರವಾಗಿ ಪರಿಹಾರದ ಮೊತ್ತವನ್ನು ಜಮೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.ಬಳ್ಳಾರಿ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮಳೆಯಿಂದ 15,401 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಸಜ್ಜೆ, ಕಬ್ಬು, ಹತ್ತಿ, ಈರುಳ್ಳಿ ಟೊಮೆಟೊ, ಬಾಳೆ, ಮೆಣಸಿನಕಾಯಿ, ಪಪ್ಪಾಯಿ ಬೆಳೆಗಳಿಗೆ ಹಾನಿಯಾಗಿದ್ದು, ₹7.70 ಕೋಟಿಯಷ್ಟು ಹಾನಿಯಾಗಿದೆ ಎಂದರು.ಕೊಪ್ಪಳ ಜಿಲ್ಲಾಧಿಕಾರಿ ಆರ್‌.ಆರ್‌.ಜನ್ನು ಮಾಹಿತಿ ನೀಡಿ, ಜಿಲ್ಲೆಯಲ್ಲಿ 28,732 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಬಾಳೆ, ಮಾವು, ಪಪ್ಪಾಯಿ, ದ್ರಾಕ್ಷಿ ಬೆಳೆಗಳಿಗೆ ಹಾನಿಯಾಗಿದೆ ಎಂದರು.ಮೂರು ಜಿಲ್ಲೆಗಳ ಬೆಳೆ ಹಾನಿ ಪ್ರದೇಶಗಳ ಸಚಿತ್ರ ವಿವರಣೆಯನ್ನು ಅಂತರ ಸಚಿವಾಲಯಗಳ ಕೇಂದ್ರ ಅಧ್ಯಯನ ತಂಡದ (ಐಎಂಸಿಟಿ) ನೇತೃತ್ವದ ವಹಿಸಿದ್ದ ಆರ್‌.ಬಿ.ಸಿನ್ಹಾ, ಕೇಂದ್ರದ ಕೃಷಿ ಮತ್ತು ಸಹಕಾರ ಇಲಾಖೆಯ ಇಲಾಖೆಯ ಹಿರಿಯ ಅಧಿಕಾರಿ ಅನಿಲ್‌ ಪ್ರತಾಪ್‌ ಸಿಂಗ್‌ ಮತ್ತು ಇಂಧನ ಸಚಿವಾಲಯದ ಉಪನಿರ್ದೇಶಕ ಎಸ್‌.ಕೆ.ರಾಜೇಂದ್ರ ವೀಕ್ಷಿಸಿದರು.ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಖತ್ರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಜೋತ್ಸ್ನಾ, ಉಪವಿಭಾಗಾಧಿಕಾರಿಗಳಾದ ಮಾರುತಿ,  ಕಾಂತರಾಜ್, ಮೂರು ಜಿಲ್ಲೆಗಳ ಕೃಷಿ ಜಂಟಿನಿರ್ದೇಶಕರು, ತೋಟಗಾರಿಕೆ ಉಪನಿರ್ದೇಶಕರು  ಸಭೆಯಲ್ಲಿ ಭಾಗವಹಿಸಿದ್ದರು.ಸಿಂಧನೂರು ವರದಿ: ಈಚೆಗೆ ಅಕಾಲಿಕ ಮಳೆಗೆ ಹಾನಿಯಾದ ಭತ್ತದ ಹೊಲಗಳಿಗೆ ಮಂಗಳವಾರ ಭೇಟಿ ನೀಡಿದ ಕೇಂದ್ರದ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಆರ್.ಬಿ.ಸಿನ್ಹಾ ನೇತೃತ್ವದ ತಂಡವು ಕಾಟಾಚಾರಕ್ಕೆ ಎಂಬಂತೆ ಬೆಳೆ ಹಾನಿ ಪರಿಶೀಲನೆ ನಡೆಸಿದೆ ಎಂದು ಮಂಗಳವಾರ ರೈತರು ಅಸಮಾಧಾನ ವ್ಯಕ್ತಪಸಿದ ಘಟನೆ ನಡೆಯಿತು.ಏಪ್ರಿಲ್ 13 ಮತ್ತು 23 ರಂದು ಬಿರುಗಾಳಿ ಮಳೆಗೆ ಸಿಂಧನೂರು ತಾಲ್ಲೂಕು ವ್ಯಾಪ್ತಿಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತಕ್ಕೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿತ್ತು. ತಾಲ್ಲೂಕಿನ ಗೊರೇಬಾಳ ಕ್ಯಾಂಪ್‌ನ ಜಮೀನಿಗೆ ಭೇಟಿ ನೀಡಿದ ಕೇಂದ್ರ ತಂಡವು ರೈತರೊಂದಿಗೆ ಆಂಗ್ಲ ಭಾಷೆಯಲ್ಲಿ ಚರ್ಚಿಸಲು ಮುಂದಾಗುತ್ತಿದ್ದಂತೆ ರೈತರು ಇರುಸು-–ಮುರುಸುಗೊಂಡರು. ಭಾಷೆ  ತಿಳಿಯದ ಕಾರಣ ಕೇಂದ್ರದ ತಂಡದ ಪ್ರಶ್ನೆಗಳು ರೈತರಿಗೆ ಅರ್ಥವಾಗಲಿಲ್ಲ, ರೈತರ ವಿವರಣೆ  ಅಧಿಕಾರಿಗಳಿಗೆ ತಿಳಿಯಲಿಲ್ಲ. ತರಾತುರಿಯಲ್ಲಿ ಪರಿಶೀಲನೆ ನಡೆಸಿ ತೆರಳಿದ ಕಾರಣ ರೈತರು ಕೇಂದ್ರ ತಂಡದ ವಿರುದ್ಧ ಬೇಸರ  ವ್ಯಕ್ತಪಡಿಸಿದರು.ಅಕಾಲಿಕ ಮಳೆಯಾದ ಸಂದರ್ಭದಲ್ಲಿ ಚಿತ್ರೀಕರಿಸಿದ ವಿಡಿಯೋಗಳನ್ನು ಕೇಂದ್ರ ತಂಡಕ್ಕೆ ತೋರಿಸಿ ಸ್ಪಷ್ಟ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್‌ ಹೇಳಿದರು. ರೈತರಿಗೆ ಸಕಾಲದಲ್ಲಿ ಬೆಳೆ ಪರಹಾರದ ಮೊತ್ತವನ್ನು ಬೆಳೆ ಹಾನಿಗೊಳಗಾದ ರೈತರಿಗೆ ನೀಡಲಾಗುವುದು.  ರೈತರು ಯಾವುದೇ ರೀತಿ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ  ಸಮಾಧಾನ ಪಡಿಸಿದರು. ಕೇಂದ್ರ ತಂಡದ ಅನಿಲ್ ಪ್ರತಾಪ್‌ ಸಿಂಗ್, ರಾಜೇಂದ್ರ, ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿ, ಬಳ್ಳಾರಿ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು  ಸೇರಿದಂತೆ ವಿವಿಧ ಇಲಾಖೆ  ಅಧಿಕಾರಿ ಗಳು ಅಧ್ಯಯನ ತಂಡದಲ್ಲಿ ಹಾಜರಿದ್ದರು.ಬೆಳೆ ಹಾನಿ: ಅಧ್ಯಯನ ವಿಳಂಬ ಆಗಿಲ್ಲ

ರಾಯಚೂರು ‘ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದ ಕಾರಣ ನಮ್ಮ ತಂಡ ಮಂಗಳವಾರ (ಜೂನ್‌ 9) ಭೇಟಿ ನೀಡಿದೆ ಹಾಗಾಗಿ ಅಧ್ಯಯನ ತಂಡ ಬಂದಿದ್ದು ವಿಳಂಬ ಎನ್ನುವುದರಲ್ಲಿ ಅರ್ಥವಿಲ್ಲ’ ಎಂದು ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆಯ ಜಂಟಿ ನಿರ್ದೇಶಕ ಆರ್‌.ಬಿ.ಸಿನ್ಹಾ ಹೇಳಿದರು.

ರಾಯಚೂರು ಹೊರವಲಯದ ಯರಮರಸ್‌ನಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಸುರಿದ ಅಕಾಲಿಕ ಮಳೆಯಿಂದ ಆಗಿರುವ ಬೆಳೆ ನಷ್ಟದ ಬಗ್ಗೆ ರಾಜ್ಯ ಸರ್ಕಾರ ಕಳುಹಿಸಿದ್ದ ನೆರವಿನ ಕೋರಿಕೆಯಲ್ಲಿ ಪದೇ ಪದೇ ಬದಲಾವಣೆ ಆಗುತ್ತಿತ್ತು. ರಾಜ್ಯ ಸರ್ಕಾರದಿಂದ ಅಂತಿಮ ಮನವಿ ಸಲ್ಲಿಕೆ ಆಗಿದ್ದೇ ಮೇ ತಿಂಗಳ ಕಡೆಯ ವಾರದಲ್ಲಿ. ನಾವು ಅಧ್ಯಯನಕ್ಕೆ ಬೇಗ ಬರಬೇಕು ಎಂದುಕೊಂಡರು ಚುನಾವಣೆ ಕಾರಣ ಆಗಲಿಲ್ಲ’ ಎಂದರು.‘ಬೆಳೆ ಹಾನಿ ಪರಿಹಾರ ಕುರಿತಂತೆ ರಾಜ್ಯ ಸರ್ಕಾರಗಳಿಂದ ಬರುವ ಬೇಡಿಕೆಗಳು ಕೆಲವು ಸಾರಿ ಮಾರ್ಗದರ್ಶಿ ಸೂತ್ರಕ್ಕೆ ಒಳಪಡುವುದಿಲ್ಲ. ಅಂತಹ ಸಮಯದಲ್ಲಿ ಪರಿಹಾರಕ್ಕೆ ಶಿಫಾರಸು ಮಾಡಲು ಆಗುವುದಿಲ್ಲ. ಆದರೆ, ಯಾವ ಬೇಡಿಕೆಗಳು ಮಾರ್ಗದರ್ಶಿ ಸೂತ್ರಕ್ಕೆ ಅನುಗುಣವಾಗಿರುತ್ತವೆಯೋ ಅಂತಹದ್ದನ್ನು ಅವಶ್ಯವಾಗಿ ಶಿಫಾರಸು ಮಾಡುತ್ತೇವೆ’ ಎಂದರು.‘ಈ ವರದಿ ಸಲ್ಲಿಸಿದ ನಂತರ ಎರಡು ಸಭೆಗಳು ನಡೆಯುತ್ತವೆ. ಮೊದಲ ಹಂತದ ಸಭೆಯು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಮಟ್ಟದಾಗಿರುತ್ತದೆ. ಎರಡನೇ ಹಂತದ ಸಭೆಯು ಕೃಷಿ ಸಚಿವರ ನೇತೃತ್ವದ ಉನ್ನತ ಮಟ್ಟದ ಸಮಿತಿಯದ್ದಾಗಿರುತ್ತದೆ. ಅಲ್ಲಿ ಪರಿಹಾರದ ಮೊತ್ತ  ಹೆಚ್ಚುವ ಬಗ್ಗೆ ಅಂತಿಮ ತೀರ್ಮಾನ ಆಗಬೇಕು’ ಎಂದರು.‘ಪ್ರತಿ ಹೆಕ್ಟೇರ್‌ಗೆ ಕೇಂದ್ರದ ನೆರವು ₹13,500 ಸೇರಿದಂತೆ ಒಟ್ಟು ₹25 ಸಾವಿರ ಪರಿಹಾರ ನೀಡಲಾಗಿದೆ. ಈ ಮೊದಲು, ಒಟ್ಟು ಪ್ರದೇಶದಲ್ಲಿ ಶೇ 50ರಷ್ಟು ಬೆಳೆ ಹಾನಿಯಾಗಿದ್ದರೆ ಮಾತ್ರ ರೈತರು ಪರಿಹಾರ ಪಡೆಯಲು ಅರ್ಹರಾಗುತ್ತಿದ್ದರು. ಈಗ ಈ ಮಾನದಂಡವನ್ನು ಶೇ 35ಕ್ಕೆ ಇಳಿಸಲಾಗಿದೆ ಮತ್ತು ಕೇಂದ್ರ ಸರ್ಕಾರ ಕೂಡ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಿದೆ’ ಎಂದರು.ಮುಖ್ಯಾಂಶಗಳು

* ಹಾನಿ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ

* ಭಾಷಾ ಕೊರತೆ: ಅಳಲು ತಿಳಿಯದ ಅಧಿಕಾರಿಗಳು

* ಕೇಂದ್ರ ತಂಡಕ್ಕೆ  ವಿಡಿಯೋ ಚಿತ್ರಿಕರಣದ ಮೂಲಕ ಮಾಹಿತಿಅಕಾಲಿಕ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಕುರಿತು ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಹಂಪನಗೌಡ ಬಾದರ್ಲಿ,ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.