ಐದು ದಿನಕ್ಕೊಮ್ಮೆ ನೀರು

7

ಐದು ದಿನಕ್ಕೊಮ್ಮೆ ನೀರು

Published:
Updated:

ಹುಬ್ಬಳ್ಳಿ: ಅವಳಿ ನಗರದಲ್ಲಿ ಇನ್ನು ಮುಂದೆ ಐದು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುವುದು.ಸೋಮವಾರ ಜರುಗಿದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜಲ ಮಂಡಳಿ ಅಧಿಕೃತವಾಗಿ ನೀಡಿದ ಹೇಳಿಕೆ ಇದು.ಶೂನ್ಯ ವೇಳೆಯಲ್ಲಿ ನೀರಿನ ಸಮಸ್ಯೆ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ, ‘ಜಲ ಮಂಡಳಿಯವರು ಈಗ 8-10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ. ಮೂರು ದಿನಕ್ಕೊಮ್ಮೆ ನೀರು ಬಿಡಬೇಕೆಂದು ಈ ಹಿಂದೆ ಮೇಯರ್ ನೀಡಿದ ಆದೇಶ ಏಕೆ ಪಾಲನೆಯಾಗುತ್ತಿಲ್ಲ? ಸಾಕಷ್ಟು ನೀರು ಲಭ್ಯವಿದ್ದರೂ ಸರಿಯಾಗಿ ಏಕೆ ಪೂರೈಕೆ ಮಾಡುತ್ತಿಲ್ಲ?’ ಎಂದು ಪ್ರಶ್ನಿಸಿದರು.ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಧರಣಿಗೆ ಕುಳಿತಾಗ, ಈ ಗಂಭೀರ ಸಮಸ್ಯೆಯ ಬಗೆಗೆ ಚರ್ಚೆ ಮಾಡೋಣ ಎಂದು ಆಡಳಿತ ಪಕ್ಷದ ಸದಸ್ಯರು ಮನವೊಲಿಸಿದರು.ನೀರಸಾಗರ ಯೋಜನೆಯಲ್ಲಿ ಹೊಸ ಪೈಪ್‌ಲೈನ್, ಪಂಪ್‌ಸೆಟ್ ಅಳವಡಿಸುವ ಕಾರ್ಯ ಹಾಗೂ ನಗರದಲ್ಲಿ ಮುಖ್ಯ ಪೈಪ್‌ಲೈನ್ ಅಳವಡಿಸುವ ಕೆಲಸ ನಡೆದಿದ್ದರಿಂದ ಕೆಲ ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು ಎಂದು ಜಲ ಮಂಡಳಿ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯರಾಮ್ ಹೇಳಿದರು.ಸದ್ಯ ಅವಳಿ ನಗರದಲ್ಲಿ ಪ್ರತಿ ದಿನ 95 ಎಂ.ಎಲ್.ಡಿ. ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಮೂರನೇ ಹಂತದ ಮಲಪ್ರಭಾ ಯೋಜನೆಯು ಪೂರ್ಣಗೊಳ್ಳುವವರೆಗೂ ಐದು ದಿನಕ್ಕೊಮ್ಮೆ ನೀರು ಬಿಡುಗಡೆ ಮಾಡುತ್ತೇವೆ ಎಂದೂ ಅವರು ಹೇಳಿದರು.ಮೂರನೇ ಹಂತದ ಮಲಪ್ರಭಾ ಯೋಜನೆ ಯಾವಾಗ ಮುಗಿಯುತ್ತದೆ? ಜಲ ಮಂಡಳಿಯ ಮುಖ್ಯ ಎಂಜಿನಿಯರ್ ಅವರು ಪಾಲಿಕೆ ಸಭೆಗೆ ಬಂದು ವಿವರಣೆಯನ್ನು ಏಕೆ ಕೊಡುತ್ತಿಲ್ಲ? ಯೋಜನೆ ರೂಪಿಸಲು 210 ಕೋಟಿ ರೂಪಾಯಿ ತಂದುಕೊಟ್ಟರೂ ಏಕೆ ಕೆಲಸ ಮಾಡಿಲ್ಲ ಎಂದು ಬಿಜೆಪಿಯ ವೀರಣ್ಣ ಸವಡಿ ತರಾಟೆಗೆ ತೆಗೆದುಕೊಂಡರು.ವಾಲ್‌ಮನ್‌ಗಳನ್ನು ಜಲ ಮಂಡಳಿ ವರ್ಗಾವಣೆ ಮಾಡಿದ್ದು, ಇದರಲ್ಲಿ ತಾರತಮ್ಯ ಎಸಗಲಾಗಿದೆ. ವರ್ಗಾವಣೆಯಾದವರಲ್ಲಿ ಪಾಲಿಕೆಯಿಂದ ಹೋಗಿರುವ ವಾಲ್‌ಮನ್ಗಳು ಮಾತ್ರ ಸೇರಿದ್ದಾರೆ ಎಂದು ಬಿಜೆಪಿಯ ಅಶೋಕ ಜಾಧವ ಆರೋಪಿಸಿದರು.ಇದಕ್ಕೆ ಉತ್ತರಿಸಿದ ಜಯರಾಮ್, ‘ವರ್ಗಾವಣೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಐದು ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆ ಮಾಡಲು ಸಾಧ್ಯ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry