ಬುಧವಾರ, ಅಕ್ಟೋಬರ್ 23, 2019
27 °C

ಐದು ನದಿಗಳ ನಾಡಲ್ಲಿ ವಾಹನ ಕಾರುಬಾರು

Published:
Updated:

ಚಂಡೀಗಡ (ಪಿಟಿಐ): ಪಂಚ ನದಿಗಳ ಬೀಡು ಪಂಜಾಬ್‌ನಿಂದ ಜ.30ರಂದು ನಡೆಯಲಿರುವ ಚುನಾವಣೆಯಲ್ಲಿ ಜನಸೇವೆಯ ಅವಕಾಶ ಬಯಸಿರುವ ಸ್ಫರ್ಧಿಗಳಿಗೆ ಐಷಾರಾಮಿ ವಾಹನಗಳೆಂದರೆ ಬಲು ಪ್ರೀತಿ...ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಆಸ್ತಿಪಾಸ್ತಿ ಘೋಷಣೆಯಿಂದ ಇದು ಸ್ಪಷ್ಟವಾಗಿ ವೇದ್ಯ. ಮತಭಿಕ್ಷೆಗೆ ಸಿದ್ಧವಾಗಿರುವ ಹಲವಾರು ಅಭ್ಯರ್ಥಿಗಳು 10 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ವಿವಿಧ ವಾಹನಗಳ ಒಡೆಯರಾಗಿದ್ದಾರೆ.ಇದರಲ್ಲಿ ಮುಂಚೂಣಿಯಲ್ಲಿರುವುದು ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ (ಪಿಪಿಪಿ) ಮುಖ್ಯಸ್ಥ ಮನ್‌ಪ್ರೀತ್ ಸಿಂಗ್ ಬಾದಲ್. ಅವರ ಬಳಿ ಒಂದಕ್ಕಿಂತ ಒಂದು ಸೊಗಸಾದ 11 ವಾಹನಗಳಿವೆ.ಹೊಂಡಾ ಸಿಆರ್‌ವಿ, ಟೊಯೊಟ ಫಾರ್ಚೂನರ್, ನಿಸ್ಸಾನ್‌ಜೊಂಗ, ವಿಲ್ಲೆಸ್ ಜೀಪ್, ಫೋರ್ಡ್ ಜೀಪ್, ಮಹೀಂದ್ರ ಜೀಪ್, ಮಿನಿ ಟ್ರಕ್, ಎರಡು ಟ್ರ್ಯಾಕ್ಟರುಗಳು ಮತ್ತು ಎರಡು ಬೈಕ್‌ಅವರ ಗ್ಯಾರೇಜ್‌ನಲ್ಲಿವೆ. ಫಿರೋಜ್‌ಪುರದಿಂದ ಕಣಕ್ಕಿಳಿದಿರುವ ಪರ್‌ಮಿಂದರ್ ಸಿಂಗ್-ಹ್ಯುಂಡೈ ಟೆರ‌್ರಕ್ಯಾನ್, ಹ್ಯುಂಡೈ ಎಲಾಂಟ್ರ, ಟೊಯೊಟ ಕ್ವಾಲಿಸ್, ಟೊಯೊಟ ಪ್ರ್ಯಾಡೊ ಹಾಗೂ ನಾಲ್ಕು ಟ್ರಕ್‌ಗಳ ಮಾಲೀಕರು.  ರೂ 68 ಕೋಟಿ ಒಡೆಯ ರಾಣಾ ಗುರುಜಿತ್ ಸಿಂಗ್ ಬಳಿ ಟೊಯೊಟ ಫಾರ್ಚೂನರ್, ಹೊಂಡಾ ಸಿಟಿ ಮತ್ತು ಒಂದು ಮಾರುತಿ-800 ಇದೆ.ಸರಬ್‌ಜೀತ್ ಸಿಂಗ್ ಮಕ್ಕರ್ ಬಳಿ ಟೊಯೊಟ ಇನ್ನೊವ, ಬಿಎಂಡಬ್ಲು, ಟೊಯೊಟ ಫಾರ್ಚೂನರ್ ಮತ್ತು ಟ್ರಕ್‌ಗಳು ಇವೆ. ಆದರೆ ತಮ್ಮ ಬಳಿ ಎಷ್ಟು ಟ್ರಕ್‌ಗಳಿವೆ ಎಂಬುದನ್ನು ಅವರು ನಮೂದಿಸಿಲ್ಲ.ಅಮೃತಸರ ಪೂರ್ವ ಕ್ಷೇತ್ರದಿಂದ ಬಿಜೆಪಿ ಸ್ಫರ್ಧಿಯಾಗಿ ಅಖಾಡಕ್ಕೆ ಧುಮುಕಿರುವ ಮಾಜಿ ಕ್ರಿಕೆಟಿಗ ಸಿಧು ಪತ್ನಿ ನವ್‌ಜೋತ್ ಕೌರ್ ನಾಮಪತ್ರ ಸಲ್ಲಿಕೆ ವೇಳೆ ಸೈಕಲ್ ಮೇಲೆಯೇ ತೆರಳಿ ಗಮನ ಸೆಳೆದಿದ್ದರು. ಹಾಗಂತ ಅವರಿಗೆ ವಾಹನಗಳ ಮೇಲಿನ ಪ್ರೀತಿ ಕಡಿಮೆ ಅಂದುಕೊಳ್ಳಬೇಕಿಲ್ಲ. ಟೊಯೊಟ ಲ್ಯಾಂಡ್ ಕ್ರೂಯಿಸರ್, ಬಿಎಂಡಬ್ಲು-7, ಬಿಎಂಡಬ್ಲು ಎಕ್ಸ್-6, ಟೊಯೊಟ ಫಾರ್ಚೂನರ್, ಟೊಯೊಟ ಕರೋಲ್ಲ ಹಾಗೂ ಒಂದು ಅಂಬಾಸಿಡರ್ ಹೊಂದಿದ್ದಾರೆ.ಗುರು ಹರ್ ಸಹಾಯ್ ಕ್ಷೇತ್ರದಿಂದ ಶಾಸಕತ್ವ ನಿರೀಕ್ಷಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಣಾ ಗುರ್‌ಮೀತ್ ಸೋಧಿ ಒಂದು ಹೊಂಡಾ ಅಕಾರ್ಡ್, ಟೊಯೊಟ ಇನ್ನೊವ ಮತ್ತು ಟೊಯೊಟ ಕ್ವಾಲಿಸ್‌ಗಳಿಗೆ ಮಾಲೀಕರಾಗಿದ್ದಾರೆ.ಅಕಾಲಿ ಪಕ್ಷದ ಸ್ಪರ್ಧಿಯಾಗಿ ಮೋಗ ಕ್ಷೇತ್ರದಿಂದ ರಂಗಕ್ಕೆ ಇಳಿದಿರುವ ಮಾಜಿ ಡಿಜಿಪಿ ಪಿ.ಎಸ್.ಗಿಲ್ ಜರ್ಮನಿ ಮೂಲಕ ಮರ್ಸಿಡೆಸ್ ಬೆಂಜ್‌ನ ಒಡೆತನ ಹೊಂದಿದ್ದಾರೆ.ಕೇಂದ್ರದ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವೆ ಪ್ರಣೀತ್‌ಕೌರ್ ಹೆಸರಿನಲ್ಲಿ ಫೋರ್ಡ್ ಎಂಡಿವರ್ ಮತ್ತು ಟೊಯೊಟ ಇನ್ನೊವ ಇದೆ. ಇವರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ಪತ್ನಿಯೂ ಹೌದು.ಪಂಜಾಬ್ ಜನಕ್ಕೆ ವಿದೇಶ, ಎಲೆಕ್ಟ್ರಾನಿಕ್ ಉಪಕರಣಗಳು, ಐಟಿ ಸಾಧನ ಸಲಕರಣೆಗಳು, ಐಷಾರಾಮಿ ವಾಹನಗಳೆಂದರೆ ಪಂಚಪ್ರಾಣ. ಈ ರಾಜ್ಯದಲ್ಲಿ ಪ್ರತಿ ತಿಂಗಳು 10 ಲಕ್ಷಕ್ಕಿಂತ ಹೆಚ್ಚು ಬೆಲೆಯ ಸರಾಸರಿ 500-600 ಐಷಾರಾಮಿ ವಾಹನಗಳು ಮಾರಾಟ ವಾಗುತ್ತವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)