ಮಂಗಳವಾರ, ಜನವರಿ 28, 2020
24 °C

ಐದು ರಾಜ್ಯಗಳ ಚುನಾವಣೆ: ಸರ್ಕಾರದ ನೇಮಕಾತಿಗೆ ಆಯೋಗ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋವಾ

ಪಣಜಿ (ಪಿಟಿಐ):
ಮಾರ್ಚ್ 3ರಂದು ನಡೆಯಲಿರುವ ಚುನಾವಣೆಗಾಗಿ, ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಮತರಾರರನ್ನು ಓಲೈಸಲು ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ನಡೆಸಿದ ಗೋವಾ ಸರ್ಕಾರದ ಕ್ರಮವನ್ನು ಚುನಾವಣಾ ಆಯೋಗ ತಡೆಹಿಡಿದಿದೆ.ರಾಜ್ಯ ಸರ್ಕಾರದ ಸುಮಾರು 400ರಷ್ಟು ಹುದ್ದೆಗಳಿಗೆ ನಡೆದ ನೇಮಕಾತಿಯನ್ನು ತಡೆಹಿಡಿದಿರುವ ಮುಖ್ಯ ಚುನಾವಣಾಧಿಕಾರಿ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

`ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಡಿ. 24ರ ನಂತರವೇ ಸರ್ಕಾರದ ಆರು ಇಲಾಖೆಗಳಿಗೆ 416 ಅಭ್ಯರ್ಥಿಗಳ ನೇಮಕಾತಿ ನಡೆದಿದ್ದು, ಇದು ಅನೂರ್ಜಿತಗೊಳ್ಳಲಿದೆ~ ಎಂದು ಜಂಟಿ ಮುಖ್ಯ ಚುನಾವಣಾ ಅಧಿಕಾರಿ ನಾರಾಯಣ್ ನವತಿ ಸುದ್ದಿಗಾರರಿಗೆ ತಿಳಿಸಿದರು.ಮತದಾರರನ್ನು ಓಲೈಸುವ ಸಲುವಾಗಿ ಆಡಳಿತ ಪಕ್ಷ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಯನ್ನು ನಡೆಸಿದೆ ಎಂಬ ಬಿಜೆಪಿಯ ಆರೋಪವನ್ನು ದೇಶದ ಮುಖ್ಯ ಚುನಾವಣಾ ಅಧಿಕಾರಿ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.ಬಿಜೆಪಿ ಆರೋಪ: ಮತದಾರರನ್ನು ಒಲಿಸಿಕೊಳ್ಳಲೆಂದೇ ಕೊನೆಯ ಕ್ಷಣದಲ್ಲಿ ನೇಮಕಾತಿ ನಡೆಸಲಾಗಿದೆಯಲ್ಲದೆ, ನೇರವಾಗಿ ಅಭ್ಯರ್ಥಿಗಳ ಕೈಗೇ ನೇಮಕಾತಿ ಆದೇಶವನ್ನು ನೀಡಲಾಗಿದೆ. ಕೆಲವು ಆದೇಶಗಳಲ್ಲಿ ದಿನಾಂಕವನ್ನು ಬದಲಾಯಿಸುವ ಮೂಲಕ ಬುದ್ಧಿವಂತಿಕೆ ಪ್ರದರ್ಶಿಸಲಾಗಿದೆ ಎಂದು ಬಿಜೆಪಿ ಮುಖಂಡ ಮನೋಹರ್ ಪಾರಿಕ್ಕರ್ ಆರೋಪಿಸಿದ್ದಾರೆ.ಉತ್ತರ ಪ್ರದೇಶಸಮಾಜವಾದಿ ಪಕ್ಷದ ವಕ್ತಾರ ಉಚ್ಚಾಟನೆ

ಲಖನೌ (ಐಎಎನ್‌ಎಸ್):
ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿ ಡಿ.ಪಿ. ಯಾದವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಪುತ್ರ ಅಖಿಲೇಶ್ ಯಾದವ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಪಕ್ಷದ ವಕ್ತಾರ ಮೋಹನ್ ಸಿಂಗ್ ಅವರನ್ನು ಉಚ್ಚಾಟಿಸಲಾಗಿದೆ.ಸಿಂಗ್ ಅವರ ಸ್ಥಾನಕ್ಕೆ ತಮ್ಮ ಸೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ಹೆಸರನ್ನು ಮುಲಾಯಂ ಸಿಂಗ್ ಸೂಚಿಸಿದ್ದಾರೆ.`ಡಿ.ಪಿ.ಯಾದವ್ ಕುರಿತು ಪಕ್ಷದ ರಾಜ್ಯ ಕಾರ್ಯದರ್ಶಿ ಅಖಿಲೇಶ್ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಅಂತಿಮ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ~ ಎಂದು ಸಿಂಗ್ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಪಕ್ಷದ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಯಾದವ್ ಸೇರ್ಪಡೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ ಎಂದು ಅಖಿಲೇಶ್ ಹೇಳಿದ್ದರು.30 ಅಭ್ಯರ್ಥಿಗಳ ಸಿಪಿಐ ಎರಡನೇ ಪಟ್ಟಿ ಪ್ರಕಟ

ಲಖನೌ (ಪಿಟಿಐ):
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಾಗಿ 30 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಸಿಪಿಐ, ಇದೀಗ 15 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.`ಮೂರನೇ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುತ್ತದೆ. ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ~ ಎಂದು ಪಕ್ಷದ  ರಾಜ್ಯ ಕಾರ್ಯದರ್ಶಿ ಡಾ. ಗಿರೀಶ್ ತಿಳಿಸಿದ್ದಾರೆ.ಪಂಜಾಬ್ಚುನಾವಣಾ ಪ್ರಕ್ರಿಯೆಗೆ  ರಾಜ್ಯಪಾಲರ ಚಾಲನೆ

ಚಂಡೀಗಡ (ಪಿಟಿಐ):
ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್ ಅವರು ಅಧಿಕೃತ ನೋಟಿಸ್ ಜಾರಿ ಮಾಡುವುದರೊಂದಿಗೆ, ರಾಜ್ಯದ 117 ವಿಧಾನಸಭಾ ಕ್ಷೇತ್ರಗಳಿಗೆ ಇದೇ 30ರಂದು ನಡೆಯಲಿರುವ ಚುನಾವಣಾ ಪ್ರಕ್ರಿಯೆಗೆ ಗುರುವಾರ ಚಾಲನೆ ದೊರೆಯಿತು.   12ರಂದು ನಾಮಪತ್ರ ಸಲ್ಲಿಕೆ ಮುಕ್ತಾಯಗೊಳ್ಳಲಿದ್ದು 13ರಂದು ಅವುಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು 16ರಂದು ಕೊನೆಯ ದಿನವಾಗಿದೆ. ಈ ಬಾರಿ ಸುಮಾರು 1.74 ಕೋಟಿ ಮತದಾರರು 19,724 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ. ಮಾರ್ಚ್ 4ರಂದು ಮತ ಎಣಿಕೆ ನಡೆಯಲಿದೆ.ಮಣಿಪುರಕಾಂಗ್ರೆಸ್ ಶಾಸಕನ ಮನೆ ಮೇಲೆ ಗ್ರೆನೇಡ್ ದಾಳಿ

ಇಂಫಾಲ (ಪಿಟಿಐ):
ಇಲ್ಲಿನ ತೌಬಾಲ್ ಜಿಲ್ಲೆಯ ಕಾಂಗ್ರೆಸ್ ಶಾಸಕ ಎಂ. ಹೇಮಂತ್ ಅವರ ಮನೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುರುವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ. ಯಾರಿಗೂ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹೇಮಂತ್ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು.

ಪ್ರತಿಕ್ರಿಯಿಸಿ (+)