ಸೋಮವಾರ, ಅಕ್ಟೋಬರ್ 21, 2019
23 °C

ಐದು ರಾಜ್ಯಗಳ ಚುನಾವಣೆ: 3.92 ಲಕ್ಷ ಬಾಟಲ್ ಬೇಡಿಕೆ

Published:
Updated:

ಮೈಸೂರು: ದೇಶದಲ್ಲಿ ತೀವ್ರ ಕೂತುಹಲ ಕೆರಳಿಸಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಲ್ಲಿನ ಬಣ್ಣ ಮತ್ತು ಅರಗು ಕಾರ್ಖಾನೆ (ಎಂಪಿವಿಎಲ್)ಯಿಂದ ಒಟ್ಟು 3.92 ಲಕ್ಷ ಬಾಟಲ್  ~ಶಾಯಿ~ ಪೂರೈಕೆಯಾಗುತ್ತಿದೆ, ಈ ಪೈಕಿ 84 ಸಾವಿರ ಬಾಟಲ್ ಈಗಾಗಲೇ ರವಾನೆಯಾಗಿದೆ.ಮತದಾನದಲ್ಲಿ ನಡೆಯುವ ಅಕ್ರಮ ತಡೆಯಲು ಚುನಾವಣಾ ಆಯೋಗ ಐದು ದಶಕಗಳ ಹಿಂದೆಯೇ ಮತದಾರನ ಬೆರಳಿಗೆ ಕಪ್ಪು ಶಾಯಿ (ಮಸಿ) ಹಾಕುವ ವಿಧಾನ ಕಂಡುಕೊಂಡಿದೆ. ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆದರೂ ಮೈಸೂರಿನಿಂದಲೇ ಶಾಯಿ ಸರಬರಾಜು ಆಗುತ್ತದೆ. 1962ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಇದರ ಪ್ರಯೋಗ ನಡೆದು, ಯಶಸ್ವಿಯೂ ಆಯಿತು.ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಗೆ ಮೊದಲ ಹಂತವಾಗಿ ಜ. 5ರಂದು ಶಾಯಿ ರವಾನಿಸಲಾಗಿದೆ. ಉತ್ತರಪ್ರದೇಶಕ್ಕೆ ಜ.13ರಂದು ಕಳುಹಿಸುವ ಗುರಿ ಹೊಂದಲಾಗಿದೆ.ಚುನಾವಣೆ ನಡೆಯುವ ಪ್ರತಿ ಹಂತದಲ್ಲೂ ಅವಶ್ಯಕತೆಗೆ ತಕ್ಕಂತೆ ಶಾಯಿ ರವಾನೆ ಆಗಲಿದೆ. ಜ.13ರಂದು ಒಂದು ಲಕ್ಷ ಬಾಟಲ್‌ಗಳನ್ನು ಕಳುಹಿಸಲು ಕಾರ್ಖಾನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. 10 ಎಂಎಲ್‌ನ ಒಂದು ಬಾಟಲ್‌ಗೆ ಎಂಪಿವಿಎಲ್ ರೂ. 65. 50 ನಿಗದಿ ಮಾಡಿದೆ. ಒಂದು ಬಾಟಲ್ ಶಾಯಿಯನ್ನು ಸುಮಾರು 750 ಮತದಾರರ ಬೆರಳಿಗೆ ಗುರುತು ಹಾಕಲು ಬಳಸಬಹುದು.ಈ ಮಸಿ ಕನಿಷ್ಠ 48 ಗಂಟೆಗಳಿಂದ 30 ದಿನಗಳ ವರೆಗೆ ಅಚ್ಚಳಿಯದೇ ಉಳಿಯುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ರಾಷ್ಟ್ರೀಯ ಭೌತಿಕ ಪ್ರಯೋಗಾಲಯ (Na-tional Physical laboratory)  ದೃಢಪಡಿಸಿದೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಬೇಡಿಕೆಗೆ ತಕ್ಕಷ್ಟು ಶಾಯಿ ಒದಗಿಸಲು ಎಂಪಿವಿಎಲ್ ಆಡಳಿತ ಸಿದ್ಧವಾಗಿರುತ್ತದೆ. ಈ ಸಂಬಂಧ ಚುನಾವಣಾ ಆಯೋಗ ಬೇಡಿಕೆ ಪಟ್ಟಿ ಸಲ್ಲಿಸುತ್ತದೆ.ಸುವರ್ಣ ಸಂಭ್ರಮ:  ದೇಶದಲ್ಲೇ ಶಾಯಿ ಉತ್ಪಾದಿಸುವ ಏಕೈಕ ಕಾರ್ಖಾನೆ ಈ ವರ್ಷ 50 ವಸಂತಗಳನ್ನು ಪೂರೈಸಲಿದೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಕಾರ್ಖಾನೆ ಆರಂಭಕ್ಕೆ ಕಾರಣೀಕರ್ತರು. ಆರಂಭದ ದಿನಗಳಲ್ಲಿ ವೈವಿಧ್ಯಮಯ ಬಣ್ಣಗಳನ್ನು ಮಾತ್ರ ಉತ್ಪಾದಿಸಲಾಗುತ್ತಿತ್ತು. ದೇಶ ಸ್ವಾತಂತ್ರ್ಯಗೊಂಡ ನಂತರ ಇದು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿತು.ಆ ನಂತರ ದೇಶದಲ್ಲಿ ಚುನಾವಣಾ ಪರ್ವ ಶುರುವಾಯಿತು. 1951, 57ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದವು. ಇವುಗಳಲ್ಲಿ ಒಬ್ಬನೇ ಮತದಾನ ಹಲವು ಬಾರಿ ಮತ ಚಲಾವಣೆ ಮಾಡುತ್ತಾನೆ ಎಂಬುದು ಸೇರಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.ಈ ನಿರ್ಧಾರದಿಂದ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯ ಅದೃಷ್ಟದ ಬಾಗಿಲು ತೆರೆದಂತಾಯಿತು. 1962ರ ಚುನಾವಣೆಯಲ್ಲಿ ಮೊದಲು ಶಾಯಿ ಬಳಸಲಾಯಿತು.  `ಮೈಸೂರಿನಲ್ಲಿ ತಯಾರಾಗುವ ಶಾಯಿಗೆ ಈಚಿನ ದಿನಗಳಲ್ಲಿ ವಿದೇಶದಿಂದಲೂ ಬೇಡಿಕೆ ಬರುತ್ತಿದೆ. ದಕ್ಷಿಣ ಆಫ್ರಿಕಾ, ನೇಪಾಳ, ಟರ್ಕಿ, ಭೂತಾನ್ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳು ತಮ್ಮ ಚುನಾವಣೆ ಸಮಯಗಳಲ್ಲಿ ಇಲ್ಲಿನ ಶಾಯಿ ಬಳಸುತ್ತಿವೆ.ದೇಶದ ಆಂತರಿಕ ಅಗತ್ಯ ಪೂರೈಸಲು ಕಾರ್ಖಾನೆ ಈಗ ಶಕ್ತವಾಗಿದೆ. ಆ ನಂತರ ರಫ್ತು ಮಾಡಲು ಆದ್ಯತೆ ನೀಡಲಾಗುತ್ತದೆ~ ಎನ್ನುತ್ತಾರೆ ಎಂಪಿವಿಎಲ್ ಪ್ರಧಾನ ವ್ಯವಸ್ಥಾಪಕ (ಆಡಳಿತ) ಸಿ.ಹರಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

Post Comments (+)