ಗುರುವಾರ , ಅಕ್ಟೋಬರ್ 17, 2019
22 °C

ಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಅಣ್ಣಾ ಪ್ರಚಾರ ಇಲ್ಲ

Published:
Updated:
ಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಅಣ್ಣಾ ಪ್ರಚಾರ ಇಲ್ಲ

ಪುಣೆ (ಐಎಎನ್‌ಎಸ್): `ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾ ಹಜಾರೆ ಅವರು ಪ್ರಚಾರ ಅಭಿಯಾನ ನಡೆಸುವುದಿಲ್ಲ; ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರು ನೀಡಿರುವ ಸಲಹೆ ಆಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ~ ಎಂದು ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ ಗುರುವಾರ ಇಲ್ಲಿ ತಿಳಿಸಿದ್ದಾರೆ.ಈ ಮೂಲಕ, ಅನಾರೋಗ್ಯದ ಕಾರಣದಿಂದ ಅಣ್ಣಾ ಅವರ ಉದ್ದೇಶಿತ ಪ್ರಚಾರ ಅಭಿಯಾನದ ಬಗ್ಗೆ ಮೂಡಿದ್ದ ಅನಿಶ್ಚಿತತೆ ಕೊನೆಗೊಂಡಂತಾಗಿದೆ. ಪ್ರಬಲ ಲೋಕಪಾಲ ಮಸೂದೆ ಜಾರಿಗೆ ವಿಫಲವಾದ ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣಾ ಪ್ರಚಾರ ನಡೆಸುವುದಾಗಿ ಅಣ್ಣಾ ಈ ಹಿಂದೆ ಘೋಷಿಸಿದ್ದರು.`ಅಣ್ಣಾ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಆದರೆ, ತಕ್ಷಣಕ್ಕೆ ಪ್ರಯಾಣ ಮತ್ತು ಉಪವಾಸ ಮಾಡದೆ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನಮ್ಮ ಇಚ್ಛೆಯೂ ಅದೇ ಆಗಿದೆ~ ಎಂದು ಅಣ್ಣಾ ಅವರನ್ನು ಭೇಟಿ ಮಾಡಿ ಬಂದ ಬಳಿಕ ಬೇಡಿ ಸುದ್ದಿಗಾರರಿಗೆ ವಿವರಿಸಿದರು.`ಅಣ್ಣಾ ತಂಡದ ಉನ್ನತ ಸಮಿತಿ ಸಭೆ ಶನಿವಾರ ನಡೆಯಲಿದ್ದು, ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು~ ಎಂದ ಬೇಡಿ, ಅಣ್ಣಾ ಅವರ ಸಂದೇಶವನ್ನು ಈ ಸಂದರ್ಭದಲ್ಲಿ ತಾವು ಸಮಿತಿ ಸದಸ್ಯರ ಗಮನಕ್ಕೆ ತರುವುದಾಗಿ ತಿಳಿಸಿದರು.ಡಿಸೆಂಬರ್ 28ರಿಂದ ಮೂರು ದಿನಗಳ ಕಾಲ ಮುಂಬೈನಲ್ಲಿ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹವನ್ನು, ಆರೋಗ್ಯ ಕೈಕೊಟ್ಟಿದ್ದರಿಂದ ಅಣ್ಣಾ ಎರಡನೇ ದಿನಕ್ಕೇ ಮೊಟಕುಗೊಳಿಸಿದ್ದರು. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರಗಳಲ್ಲಿ ಜನವರಿ 28ರಿಂದ ಮಾರ್ಚ್ 3ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ.

 

Post Comments (+)