ಬುಧವಾರ, ನವೆಂಬರ್ 13, 2019
22 °C

ಐದು ರೋಗ ತಡೆಗಟ್ಟುವ ಲಸಿಕೆ ಬಿಡುಗಡೆ

Published:
Updated:

ಹುಬ್ಬಳ್ಳಿ: `ಐದು ಮಾರಕ ರೋಗಗಳನ್ನು ತಡೆಗಟ್ಟುವ ಪೆಂಟಾವ್ಯಾಲೆಂಟ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಕಾರ್ಯಕ್ರಮ ಆರಂಭಿಸಲಾಗಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಕಿಮ್ಸ ನಿರ್ದೇಶಕಿ ಡಾ. ವಸಂತ ಕಾಮತ್ ಹೇಳಿದರು.ಕಿಮ್ಸನ ಹೊರರೋಗಿ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಪೆಂಟಾವ್ಯಾಲೆಂಟ್ ಲಸಿಕೆ ನೀಡಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ಸರ್ಕಾರವು ಚಿಕ್ಕಮಕ್ಕಳ ಆರೋಗ್ಯ ರಕ್ಷಣೆಗಾಗಿ ಹೊಸ ಹೊಸ ಲಸಿಕೆ ಹಾಗೂ ಚುಚ್ಚುಮದ್ದುಗಳನ್ನು ಜಾರಿಗೆ ತರುತ್ತಿದ್ದು,  ಸಾರ್ವಜನಿಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಸಲಹೆ ನೀಡಿದರು.ಕಿಮ್ಸನ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಟಿ.ಎ. ಶೇಪೂರ, ಹೊಸ ಲಸಿಕೆಯ ಸಾಧಕ-ಬಾಧಕ ಮತ್ತು ಅದು ತಡೆಗಟ್ಟುವ ರೋಗಗಳ ಕುರಿತು ವಿವರಿಸಿದರು. ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಡಿ. ಬಂಟ್, ಲಸಿಕೆಯ ಗುಣಮಟ್ಟ ಕಾಯ್ದುಕೊಳ್ಳಲು ವಹಿಸಬೇಕಾದ ಮುಂಜಾಗ್ರತೆ ಕುರಿತು ಮಾಹಿತಿ ನೀಡಿದರು.ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ. ಸುನಿಲ್ ಗರಗ, ಡಾ. ಪ್ರಮೀಳಾ, ಕಿಮ್ಸನ ಸ್ಥಳೀಯ ವೈದ್ಯಾಧಿಕಾರಿ ಡಾ. ಶರಣಮ್ಮ, ಡಾ. ಅನ್ನಪೂರ್ಣ ಸಾಲಿ,  ಡಾ. ಜೋಗಣ್ಣ ಮತ್ತಿತರರಿದ್ದರು. ಡಾ. ರಮ್ಯ ಪ್ರಾರ್ಥಿಸಿದರು. ಡಾ. ಸುಪ್ರಿಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ. ಹಂಸ ವಂದಿಸಿದರು.ಪೆಂಟಾವ್ಯಾಲೆಂಟ್ ಲಸಿಕೆ ಕೆಲಸವೇನು?

ಒಂದೇ ಚುಚ್ಚುಮದ್ದಿನಲ್ಲಿ ಐದು ಮಾರಕ ರೋಗಗಳಿಗೆ ಕೊಡುವ ಲಸಿಕೆ ಇದು. ಗಂಟಲು ಮಾರಿ, ಧನುರ್ವಾಯು, ನಾಯಿಕೆಮ್ಮು, ಯಕೃತ್ತಿನ ಉರಿಯೂತ, ನ್ಯೂಮೋನಿಯಾ ಬರದಂತೆ ಈ ಲಸಿಕೆ ತಡೆಗಟ್ಟುತ್ತದೆ. ಈ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸುವುದರಿಂದ, ಪ್ರತಿವರ್ಷ ರಾಜ್ಯದಲ್ಲಿ ಒಂದು ವರ್ಷದೊಳಗಿನ 11.21 ಲಕ್ಷ ಮಕ್ಕಳಿಗೆ ಸುರಕ್ಷತೆ ನೀಡಿದಂತಾಗುತ್ತದೆ.ಲಸಿಕೆಯನ್ನು ಪ್ರತಿ ಮಗುವಿಗೆ ಹುಟ್ಟಿನಿಂದ 6 ವಾರ, 10 ವಾರ, 14 ವಾರದಲ್ಲಿ ಅಂದರೆ ಮೂರು ಬಾರಿ ನೀಡಲಾಗುತ್ತದೆ. ಇದರಿಂದ ಮಗುವನ್ನು ಹುಟ್ಟಿನಿಂದಲೇ 5 ಮಾರಕ ರೋಗಗಳಿಂದ ರಕ್ಷಿಸಲು ಸಾಧ್ಯ. ಈ ಲಸಿಕೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ನಿಯಮಿತವಾಗಿ ಹಾಗೂ ಉಚಿತವಾಗಿ   ನೀಡಲಾಗುವುದು.

ಪ್ರತಿಕ್ರಿಯಿಸಿ (+)