ಐದು ವರ್ಷದಲ್ಲಿ 13,847 ಪ್ರಕರಣ ಇತ್ಯರ್ಥ

7

ಐದು ವರ್ಷದಲ್ಲಿ 13,847 ಪ್ರಕರಣ ಇತ್ಯರ್ಥ

Published:
Updated:

ದಾವಣಗೆರೆ: ಬೆಂಗಳೂರು ಮಧ್ಯಸ್ಥಿಕೆದಾರರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಮತ್ತು ವಕೀಲರ ಸಂಘದ ವತಿಯಿಂದ ಅ. 16ರಂದು ಬೆಳಿಗ್ಗೆ 9.30ಕ್ಕೆ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರಿಗೆ ಮಧ್ಯಸ್ಥಿಕೆ ತರಬೇತಿ, ಮಧ್ಯಸ್ಥಿಕೆದಾರರಿಗೆ ಕಾರ್ಯಾಗಾರ ನಡೆಯಲಿದೆ.ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ವಿ. ತಿಮ್ಮೆಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೌಟುಂಬಿಕ ನ್ಯಾಯಾಲಯದ ನ್ಯಾಯಾದೀಶ ಸಿ. ಚಂದ್ರಮಲ್ಲೇಗೌಡ, ತರಬೇತಿ ದಾರರಾದ ಬೀನಾ ದೇವರಾಜ್ ಭಾಗವಹಿಸಲಿದ್ದಾರೆ ಎಂದು  ಮುಖ್ಯ ಮಧ್ಯಸ್ಥಿಕೆ ತರಬೇತಿದಾರ ಪ್ರಸಾದ್ ಸುಬ್ಬಣ್ಣ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮಧ್ಯಸ್ಥಿಕೆ ಪ್ರಕ್ರಿಯೆ:  ಸಿವಿಲ್ ವ್ಯಾಜ್ಯಗಳನ್ನು ಉಭಯ ಕಕ್ಷಿದಾರರ ನಡುವೆ ಪರಸ್ಪರ ಮಾತುಕತೆ ಮೂಲಕ ಬಗೆಹರಿಸುವುದು ಮಧ್ಯಸ್ಥಿಕೆ ಪ್ರಕ್ರಿಯೆ. ಉಭಯ ಪಕ್ಷದವರು ತಮ್ಮ ಪ್ರಕರಣಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವಕೀಲರು ನೆರವಾಗುತ್ತಾರೆ. ತೀರಾ ದೀರ್ಘಕಾಲ ತೆಗೆದುಕೊಳ್ಳಬಹುದಾದ ಪ್ರಕರಣ ಗಳನ್ನು 60 ದಿನಗಳಲ್ಲಿ ಬಗೆಹರಿಸಿಕೊಳ್ಳಬಹುದು.

ಕೇಂದ್ರ ಸರ್ಕಾರದ ಪಂಚವಾರ್ಷಿಕ ಯೋಜನೆಯಲ್ಲಿ ಮಧ್ಯಸ್ಥಿಕೆ ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗಿದೆ. ಅದರಂತೆ ಪ್ರತಿವರ್ಷ ಪ್ರತಿ ಜಿಲ್ಲೆಯಲ್ಲಿ 20 ತರಬೇತಿ ಹೊಂದಿದ ಮಧ್ಯಸ್ಥಿಕೆದಾರರು ರೂಪುಗೊಳ್ಳಬೇಕು. 5 ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲಿ 100 ಮಧ್ಯಸ್ಥಿಕೆದಾರರು ಇರುತ್ತಾರೆ ಎಂದು ಹೇಳಿದರು.2007ರಲ್ಲಿ ಬೆಂಗಳೂರಿನಲ್ಲಿ ದೇಶದ ಮೊದಲ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆಗೊಂಡಿತು. ಅಮೆರಿಕದ ವಕೀಲರ ಮೂಲಕ ಇಲ್ಲಿನ ವಕೀಲರಿಗೆ ತರಬೇತಿ ನೀಡಲಾಯಿತು. ಬೆಂಗಳೂರಿನಲ್ಲಿ 2007 ಜನವರಿಯಿಂದ ಕಳೆದ ಅ. 12ರವರೆಗೆ 27,545 ಪ್ರಕರಣಗಳು ಮಧ್ಯಸ್ಥಿಕೆ ಕೇಂದ್ರಕ್ಕೆ ಬಂದಿವೆ. ಅದರಲ್ಲಿ 21,610 ಪ್ರಕರಣಗಳು ವಿವಿಧ ಹಂತಗಳಲ್ಲಿವೆ.

13,847 ಪ್ರಕರಣಗಳು ಬಗೆಹರಿದಿವೆ. ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಶೇ 64 ಪ್ರಕರಣಗಳು ಬಗೆಹರಿದು ಯಶಸ್ವಿಯಾಗಿದೆ. ಈ ಪ್ರಕರಣಗಳ ಪೈಕಿ 11,277 ವಿವಾಹ ವಿಚ್ಛೇದನ ಪ್ರಕರಣಗಳೇ ಇವೆ. ಅದರಲ್ಲಿ 8393 ಇತ್ಯರ್ಥಗೊಂಡಿವೆ. ವೈವಾಹಿಕ ಪ್ರಕರಣಗಳ ಸಂಖ್ಯೆಹೆಚ್ಚುತ್ತಿರುವುದು ಕಳವಳಕಾರಿ ಎಂದರು.ಬಗೆಹರಿದಲ್ಲ ಶುಲ್ಕ ವಾಪಸ್: ಕನಿಷ್ಠ 15 ವರ್ಷ ವಕೀಲರಾಗಿದ್ದವರು ಮಧ್ಯಸ್ಥಿಕೆದಾರ ರಾಗಬಹುದು. ಇದರಲ್ಲಿ ಕಕ್ಷಿದಾರರು ಯಾವುದೆ ಶುಲ್ಕ ಪಾವತಿಸಬೇಕಾಗಿಲ್ಲ. ಪ್ರಕರಣ ಬಗೆಹರಿದಲ್ಲಿ ಕೋರ್ಟ್‌ಗೆ ಪಾವತಿಸಿದ ಶುಲ್ಕವನ್ನೂ ವಾಪಸ್ ಮಾಡಲಾಗುತ್ತದೆ. ಇಲ್ಲಿನ ತೀರ್ಮಾನಕ್ಕೆ ಮೇಲ್ಮನವಿ ಸಲ್ಲಿಸುವಂತಿಲ್ಲ. ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಇಲ್ಲಿನ ಚರ್ಚೆಯನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸುವಂತಿಲ್ಲ.

ಮುಂದೆ ಕೇಂದ್ರ ಸರ್ಕಾರವು ಭಾರತೀಯ ಮಧ್ಯಸ್ಥಿಕೆ ಮಂಡಳಿ ಸ್ಥಾಪಿಸುವ ಚಿಂತನೆ ಹೊಂದಿದೆ ಎಂದು ತಿಳಿಸಿದರು. ವಕೀಲ ಹಾಗೂ ತರಬೇತುದಾರ ಲಕ್ಷ್ಮೀಶ ರಾವ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry