ಬುಧವಾರ, ನವೆಂಬರ್ 20, 2019
22 °C
ಹಿಂದುಳಿದ ಜಿಲ್ಲೆಯ ಮುಂದುವರೆದ `ಜನಪ್ರತಿನಿಧಿಗಳು'

ಐದೇ ವರ್ಷದಲ್ಲಿ ಕೋಟಿ-ಕೋಟಿ ದುಡಿದ ಶಾಸಕರು

Published:
Updated:

ತುಮಕೂರು: ಊಹಿಸಲು ಸ್ವಲ್ಪ ಕಷ್ಟ. ಆದರೂ ಜಿಲ್ಲೆಯಿಂದ 2008ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರು ಐದೇ ವರ್ಷದಲ್ಲಿ ಕೋಟಿ- ಕೋಟಿ ಸಂಪತ್ತಿನ ಒಡೆಯರಾಗಿರುವುದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಬಹಿರಂಗಗೊಂಡಿದೆ.ಶಾಸಕರು ಆದಾಯದ ಮೂಲ ತಿಳಿಸಿಲ್ಲ. ಬದಲಿಗೆ ಆಸ್ತಿ ಹಾಗೂ ಆಸ್ತಿ ಮೌಲ್ಯದ ವಿವರ ನೀಡಿದ್ದಾರೆ.ಐದು ವರ್ಷಗಳಲ್ಲಿ ಮೂರು ವರ್ಷ ಜಿಲ್ಲೆ ಭೀಕರ ಬರಕ್ಕೆ ತುತ್ತಾಗಿದೆ. ಇನ್ನೂ ಎರಡು ವರ್ಷ ಸಾಧಾರಣ ಮಳೆಯಾಗಿದೆ. ಕೃಷಿ ಅಭಿವೃದ್ಧಿ ದರ ಶೇ 2ನ್ನೂ ದಾಟಿಲ್ಲ. ಕೈಗಾರಿಕೆ, ಸೇವಾ ವಲಯದ ಪ್ರಗತಿ ಕೂಡ ಶೇ 19 ಮೀರಿಲ್ಲ ಎಂಬುದನ್ನು ಅಂಕಿ ಅಂಶಗಳು ಬೆಳಕು ಚೆಲ್ಲುತ್ತವೆ. ಆದರೂ ಜಿಲ್ಲೆಯ ಶಾಸಕರ ಆದಾಯ ಒಂದೂವರೆಯಿಂದ ಹಿಡಿದು ಮೂರು ಪಟ್ಟು ಹೆಚ್ಚಿದೆ.ಜಿಲ್ಲೆಯ ಸಾಕ್ಷರತೆ ಪ್ರಮಾಣ ಕೂಡ ಐದು ವರ್ಷದಲ್ಲಿ ಶೇ 80 ಮೀರಿಲ್ಲ. ಹೆರಿಗೆ ವೇಳೆ 120ರಿಂದ 130 ತಾಯಂದಿರು (ಲಕ್ಷಕ್ಕೆ) ಸಾಯುವುದು ಕಡಿಮೆಯಾಗಿಲ್ಲ. ಡಾ.ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಐದು ತಾಲ್ಲೂಕು ಹಿಂದುಳಿದ ಪಟ್ಟಿಗೆ ಸೇರಿವೆ. ಅಭಿವೃದ್ಧಿ ದರದಲ್ಲಿ ರಾಯಚೂರು ಜಿಲ್ಲೆಗಿಂತ ತುಮಕೂರು ಹಿಂದಿದೆ ಎಂದು ಸರ್ಕಾರದ ವರದಿಯೇ ಹೇಳಿದೆ. ಇಂಥ ನಕಾರಾತ್ಮಕ ಅಂಶಗಳ ನಡುವೆ ಜಿಲ್ಲೆಯ ಶಾಸಕರ ಆದಾಯ ಮಾತ್ರ ಕೋಟಿ- ಕೋಟಿ ಏರಿಕೆಯಾಗಿದೆ.2008ರಲ್ಲಿ ಆಯ್ಕೆಯಾಗಿದ್ದ ಜಿಲ್ಲೆಯ 11 ಶಾಸಕರಲ್ಲಿ 9 ಶಾಸಕರು ಮತ್ತೆ ಸ್ಪರ್ಧಿಸಿದ್ದು, 2013ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆದಾಯ ವಿವರಗಳನ್ನು ತಾಳೆ ಹಾಕಿದಾಗ ಸಂಪತ್ತಿನ ಗಳಿಕೆ ಹೆಚ್ಚಿರುವುದು ಕಂಡು ಬಂದಿದೆ. ಆರು ಶಾಸಕರು ತಮ್ಮ ಪತ್ನಿ ಜತೆಗೂಡಿ ಗಳಿಸಿರುವ ಆದಾಯದಲ್ಲಾಗಿರುವ ಏರಿಕೆಯ ಝಲಕ್ `ಪ್ರಜಾವಾಣಿ' ಓದುಗರಿಗಾಗಿ ಇಲ್ಲಿದೆ.ಮಕ್ಕಳ ಆಸ್ತಿ ಬಿಟ್ಟ ಶಿವಣ್ಣ

ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಶಿವಣ್ಣ ಸತತ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಇದೀಗ ಮತ್ತೆ ಸ್ಪರ್ಧಿಸಿದ್ದಾರೆ. ಪಿಯುಸಿ, ಸಿಪಿಇಡಿ ತರಬೇತಿ ಪಡೆದಿರುವ ಶಿವಣ್ಣ ಅವರಿಗೆ 2008ರಲ್ಲಿದ್ದ ಒಟ್ಟಾರೆ ಸಂಪತ್ತು ರೂ. 5.10 ಕೋಟಿ. ಆಗ ಮಕ್ಕಳು ಕೂಡ ಜತೆಗಿದ್ದರು. ಆಸ್ತಿಯೂ ಒಟ್ಟಿಗಿತ್ತು.ಈಗ ಮಕ್ಕಳಿಂದ ಸ್ವತಂತ್ರರಾಗಿರುವ ಶಿವಣ್ಣ ಸಂಪತ್ತಿನ ಮೌಲ್ಯ ರೂ. 7 ಕೋಟಿ ಮೀರಿದೆ. ಈ ಸಲದ ಸಂಪತ್ತಿನ ಪಟ್ಟಿಯಲ್ಲಿ ಅಂತರಸನಹಳ್ಳಿಯ ಇಟ್ಟಿಗೆ ಕಾರ್ಖಾನೆ, ನಿವೇಶನ ತೋರಿಸಿಲ್ಲ. ಜತೆಗೆ 2008ರಲ್ಲಿ ರೂ. 3.20 ಕೋಟಿ ಮೌಲ್ಯದ 132 ನಿವೇಶನ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಈ ಬಾರಿ  ನಿವೇಶನ ಮಾರಾಟದ ವಿವರ ನಮೂದಿಸಿದ್ದರೆ, ಲಾಭಾಂಶ, ಆದಾಯದ ವಿವರ ದಾಖಲಿಸಿಲ್ಲ.ಐದು ವರ್ಷದಲ್ಲಿ ಬೆಂಗಳೂರು ಪೀಣ್ಯದಲ್ಲಿ ಪತ್ನಿ ಹೆಸರಿನಲ್ಲಿ 60 ಲಕ್ಷ ಮೌಲ್ಯದ ನಿವೇಶನ ಕೊಂಡಿದ್ದಾರೆ. ಚಿನ್ನ 350 ಗ್ರಾಂ ನಿಂದ 850 ಗ್ರಾಂಗೆ ಹೆಚ್ಚಿದೆ. 5 ಕೆ.ಜಿ ಬೆಳ್ಳಿ ಸಂಪಾದಿಸಿದ್ದಾರೆ. ಮಕ್ಕಳಿಗೆ 1.25 ಕೋಟಿ ಸಾಲ ನೀಡಿದ್ದಾರೆ. 1.5 ಕೋಟಿಯ ಬೃಹತ್ ಮನೆ ಕಟ್ಟಿಸಿಕೊಂಡಿದ್ದಾರೆ. ಐದು ವರ್ಷದ ಅಧಿಕಾರದ ಅವಧಿಯಲ್ಲಿ ಸಂಪತ್ತು ಒಂದೂವರೆ ಪಟ್ಟು ಹೆಚ್ಚಿದೆ.ಗೌಡರ ಪೌಲ್ಟ್ರಿಫಾರಂ

ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಮತ್ತೆ ಬಿಜೆಪಿ ಅಭ್ಯರ್ಥಿ. ಬಿ.ಕಾಂ ಪದವೀಧರರಾದ ಗೌಡರ ಸಂಪತ್ತು ಕೂಡ ಶಾಸಕರಾದ ಮೇಲೆ ದುಪ್ಪಟ್ಟು ಆಗಿದೆ. ಶಾಸಕರಾಗುವ ಮುನ್ನ ಗೌಡರು ಹಾಗೂ ಪತ್ನಿ ಬಳಿ ಒಂದು ಕೆ.ಜಿ ಆಭರಣ ಇತ್ತು. ಈಗ 4.5 ಕೆ.ಜಿ ಬೆಳ್ಳಿ ಇದೆ. ಅರ್ಧ ಕೆ.ಜಿ ಬಂಗಾರ ಕೊಂಡಿದ್ದಾರೆ. ಸ್ಕಾರ್ಫಿಯೋ ಬದಲಿಗೆ ಇನ್ನೋವಾ ಕಾರು ಬಂದಿದೆ.ಕಳೆದ ಚುನಾವಣೆ ವೇಳೆ ಹುತ್ರಿದುರ್ಗದಲ್ಲಿ 30 ಎಕರೆ ಜಂಟಿ ಕುಟುಂಬದ ಕೃಷಿ ಭೂಮಿ ತೋರಿಸಿದ್ದರು. ಆದರೆ ಈಗ ಐದು ಎಕರೆ ತೋರಿಸಿದ್ದಾರೆ. ಬೆಳ್ಳಾವಿಯಲ್ಲಿ 10 ಎಕರೆ ಜಮೀನು ಖರೀದಿಸಿ 3 ಕೋಟಿ ಮೌಲ್ಯದ ಎರಡು ಪೌಲ್ಟ್ರಿಫಾರಂ ಮಾಡಿದ್ದಾರೆ. ಬೆಂಗಳೂರು ಎಚ್‌ಎಸ್‌ಆರ್ ನಗರದಲ್ಲಿ ಪತಿ-ಪತ್ನಿ 4.5 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡದ ಒಡೆಯರಾಗಿದ್ದಾರೆ. ಐದೇ ವರ್ಷದಲ್ಲಿ ಸಂಪತ್ತು ನಾಲ್ಕರಿಂದ ಏಳೂವರೆ ಕೋಟಿಗೂ ಏರಿಕೆಯಾಗಿದೆ.ಬಂಕ್ ಮಾಲೀಕ ಬಿಬಿಆರ್

ಶಾಸಕ ಬಿ.ಬಿ.ರಾಮಸ್ವಾಮಿಗೌಡ ಕಾಂಗ್ರೆಸ್‌ನಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿ.ಎ ಪದವೀಧರರಾಗಿದ್ದು, 2008ರಲ್ಲಿದ್ದ ಸಂಪತ್ತು 2013ರ ವೇಳೆಗೆ ಎರಡೂವರೆ ಪಟ್ಟು ಹೆಚ್ಚಿದೆ. ಆಗ 10 ಕೋಟಿ ಇದ್ದ ಸಂಪತ್ತು ಐದು ವರ್ಷಗಳಲ್ಲಿ ರೂ. 27.62 ಕೋಟಿಗೆ ಹೆಚ್ಚಿದೆ. ಶಾಸಕರಾದ ನಂತರ ಕುಣಿಗಲ್‌ನಲ್ಲೇ ರೂ. 2.25 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ಕಟ್ಟಿಸಿದ್ದಾರೆ. 900 ಗ್ರಾಂ ಚಿನ್ನ ಒಂದೂವರೆ ಕೆ.ಜಿ.ಗೆ ಹೆಚ್ಚಿದೆ. 1 ಕೆ.ಜಿ ಇದ್ದ ಬೆಳ್ಳಿ 9 ಕೆ.ಜಿ.ಗೆ ಹೆಚ್ಚಿದೆ. 59 ಎಕರೆ ಕೃಷಿ ಭೂಮಿಯಲ್ಲಿ ಬದಲಾವಣೆ ಆಗದಿದ್ದರೂ ಅದರ ಮೌಲ್ಯ ರೂ. 1.52 ಕೋಟಿಯಿಂದ ರೂ. 3.35 ಕೋಟಿಗೆ ಜಿಗಿದಿದೆ. ಇವರು 2008ರಲ್ಲೇ ಬೆಂಗಳೂರಿನಲ್ಲಿ ಚಿತ್ರಮಂದಿರ, ಪೆಟ್ರೋಲ್ ಬಂಕ್ ಒಡೆಯರು. ಈಗ ಈ ಆಸ್ತಿ ವಿವಾದದಲ್ಲಿದೆ. ಇದರ ಮೌಲ್ಯ 10 ಕೋಟಿಗೂ ಹೆಚ್ಚು.ಬಾರ್ ಮಾಲೀಕ ಕೃಷ್ಣಪ್ಪ

ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ. 2008ರಲ್ಲಿ ಶಾಸಕರಾಗಿದ್ದ ಅವಧಿಯಲ್ಲಿ ಇದ್ದ ನಗದು 50 ಸಾವಿರದಿಂದ 2 ಲಕ್ಷಕ್ಕೇರಿದೆ. ಠೇವಣಿ 8.30 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿದೆ. ಅಲ್ಲದೆ ಬೆಂಗಳೂರಿನ ಬಾರ್‌ವೊಂದರ ಮೇಲೆ 25 ಲಕ್ಷ ಹೂಡಿಕೆ ಮಾಡಿದ್ದಾರೆ.ಟೆಂಪೋ ಟ್ರಾಕ್ಸ್ ಹೋಗಿ ಆ ಜಾಗಕ್ಕೆ ಮಹೀಂದ್ರ ಜೀಪು, ಟೊಯೋಟಾ ಕ್ವಾಲಿಸ್, ಇನ್ನೋವಾ (ಒಟ್ಟು 41 ಲಕ್ಷ) ಬಂದಿವೆ. ಶಾಸಕರಾದ ನಂತರ 40 ಲಕ್ಷ ನೀಡಿ 15 ಎಕರೆ ಕೃಷಿ ಭೂಮಿ ಖರೀದಿಸಿದ್ದಾರೆ.ನಾಗೇಶ್ ಆಸ್ತಿ 3 ಪಟ್ಟು ಹೆಚ್ಚಳ

ತಿಪಟೂರು ಕ್ಷೇತ್ರದ ಶಾಸಕ ಬಿ.ಸಿ.ನಾಗೇಶ್ ಆಸ್ತಿ ಐದು ವರ್ಷದ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಿದೆ. ರೂ. 1.21 ಲಕ್ಷ ಠೇವಣಿ ಐದೇ ವರ್ಷದಲ್ಲಿ ರೂ. 79 ಲಕ್ಷಕ್ಕೆ ಏರಿದೆ. ಟಾಟಾ ಸುಮೋ ಜತೆಗೆ ಟ್ರ್ಯಾಕ್ಟರ್, ಸ್ಕೂಟಿ ಬಂದಿದೆ. 350 ಗ್ರಾಂ ಇದ್ದ ಚಿನ್ನ 260 ಗ್ರಾಂಗೆ ಇಳಿದರೂ; ಹೊಸದಾಗಿ 2 ಕೆ.ಜಿ ಬೆಳ್ಳಿ ಖರೀದಿಸಿದ್ದಾರೆ. ಹಾಲ್ಕುರಿಕೆಯ 54 ಎಕರೆ ಕೃಷಿ ಭೂಮಿ 2008ರಲ್ಲಿ 26 ಲಕ್ಷ ಮೌಲ್ಯ ತೋರಿಸಲಾಗಿದೆ. ಈಗಲೂ ಅಷ್ಟೇ ಮೌಲ್ಯ ದಾಖಲಿಸಲಾಗಿದೆ.ಕಳೆದ ಸಲ ಬೆಂಗಳೂರಿನಲ್ಲಿ ಇಲ್ಲದ ಪಿತ್ರಾರ್ಜಿತ ಆಸ್ತಿ ಈ ಸಲ ಅವರ ಕೈ ಸೇರಿದೆ. ಅದರ ಮೌಲ್ಯವೇ ರೂ. 1.20 ಕೋಟಿ. ಇದಕ್ಕೆ ಅಣ್ಣನೂ ಒಡೆಯ. ವ್ಯಾಪಾರ, ಕೃಷಿ ಇವರ ವೃತ್ತಿ. 2008ರಲ್ಲಿ ಇದ್ದ ಸ್ಥಿರಾಸ್ತಿ ರೂ. 1.80 ಕೋಟಿಯಿಂದ 3.33 ಕೋಟಿಗೆ ಹೆಚ್ಚಿದೆ. ಚರಾಸ್ತಿ ರೂ. 1.20 ಕೋಟಿಯಿಂದ ರೂ. 2.40 ಕೋಟಿಗೆ ಜಿಗಿದಿದೆ.ಬೆಂಜ್ ಕಾರಿನ ಸುರೇಶ್ ಬಾಬು

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸುರೇಶ್‌ಬಾಬು ಜೆಡಿಎಸ್ ಶಾಸಕರು. ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರ ಸಂಪತ್ತಿನ ಗಳಿಕೆ ಕೂಡ 1 ಕೋಟಿಯಿಂದ ರೂ. 2.61 ಕೋಟಿಗೆ ಜಿಗಿದಿದೆ.ಹತ್ತನೇ ತರಗತಿಯಷ್ಟೇ ಓದಿರುವ ಸುರೇಶ್‌ಬಾಬು ಬಳಿ 2008ರಲ್ಲಿ ಟಾಟಾ ಸಫಾರಿ, ಮಾರುತಿ ಕಾರು ಇತ್ತು. ಐದು ವರ್ಷದಲ್ಲಿ ಅವರ ಬಳಿ 64 ಲಕ್ಷದ ಬೆಂಜ್ ಕಾರು ಬಂದಿದೆ. ಜತೆಗೆ 10 ಲಕ್ಷ ಮೌಲ್ಯದ ಹೊಂಡಾ ಸಿಟಿ ಕಾರು ಕೊಂಡಿದ್ದಾರೆ.800 ಗ್ರಾಂ ಇದ್ದ ಚಿನ್ನಾಭರಣ ಈಗ ಒಂದೂವರೆ ಕೆ.ಜಿ.ಗೆ ಹೆಚ್ಚಿದೆ. 25 ಕೆ.ಜಿ. ಬೆಳ್ಳಿ ಸಂಗ್ರಹ 30 ಕೆ.ಜಿ.ಗೆ ಏರಿದೆ. 10 ಲಕ್ಷ ಮೌಲ್ಯದ ಪೀಠೋಪಕರಣಗಳಿವೆ. ಚರಾಸ್ತಿ ಮೌಲ್ಯ ರೂ. 1.45 ಕೋಟಿ.2008ರಲ್ಲೂ ಕೃಷಿ ಭೂಮಿ ಇರಲಿಲ್ಲ. ಶಾಸಕರಾದ ಬಳಿಕವೂ ಭೂಮಿ ಖರೀದಿಸಿಲ್ಲ. ಆದರೆ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ರೂ. 1.50 ಕೋಟಿ ಮನೆ ಬಂದಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಅಂದಾಜು ರೂ. 75 ಲಕ್ಷದ ಮೂರಂತಸ್ತಿನ ಮನೆ ಕಟ್ಟ ತೊಡಗಿದ್ದಾರೆ.

ಪ್ರತಿಕ್ರಿಯಿಸಿ (+)