ಗುರುವಾರ , ನವೆಂಬರ್ 14, 2019
19 °C
ಗಡಿ ಗ್ರಾಮ ಕೋತಿಗುಂಟ್ಲಹಳ್ಳಿಯ ಸಂಕಟ

ಐದ್ ವರ್ಷಕ್ಕೊಮ್ಮೆ ಮಾತ್ರ ನಮ್ ನೆನಪು...!

Published:
Updated:

ಕೋಲಾರ: ನಮ್ ಹಳ್ಳಿಗೆ ಇದುವರ್ಗೆ ಯಾವ ದೊಡ್ಡ ಮುಖಂಡ್ರೂ ಬರ್ಲಿಲ್ಲ. ನಮ್ ಕಷ್ಟ ಏನಂತ ಕೇಳ್ಲಿಲ್ಲ..

-ಜಿಲ್ಲೆಯ ಮಾಲೂರು ತಾಲ್ಲೂಕಿನ ಗಡಿ ಗ್ರಾಮ ಕೋತಿಗುಂಟ್ಲಹಳ್ಳಿಯ ರೈತ ಆನಂದ ನಗುತ್ತಲೇ ಈ ಮಾತುಗಳನ್ನು ಹೇಳಿದರು.

ಕಳೆದ್ ಬಾರಿ ಚುನಾವಣೇಲಿ ಓಟ್ ಕೇಳೋಕೆ ಕೃಷ್ಣಯ್ಯಶೆಟ್ರು ಬಂದಿದ್ರು, ಆಮೇಲ್ ಅವರೂ ಬರ‌್ಲಿಲ್ಲ. ಅವರತ್ರ ಹೋಗಿ ನಾವೂ ಏನೂ ಕೇಳ್ಲಿಲ್ಲ ಎಂದು ಮೌನವಾದರು.ಸುಮಾರು 2 ತಿಂಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ದಿನ್ನೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಈ ಹಳ್ಳಿಯ ಜನರಿಗೆ ತಮ್ಮ ಜಮೀನಿನ ಕೊಳವೆಬಾವಿಯಿಂದಲೇ ಅವರು ನೀರು ಕೊಡುತ್ತಿದ್ದಾರೆ. ಅವರ ಹಳ್ಳಿಯ ಪಕ್ಕದಲ್ಲೇ ತಮಿಳುನಾಡಿನ ಹೊಸೂರು ತಾಲ್ಲೂಕಿಗೆ ಸೇರಿದ ಚಿನ್ನಾರಿ ದೊಡ್ಡಿ ಗ್ರಾಮವೂ ಇದೆ.ಕೋತಿಗುಂಟ್ಲಹಳ್ಳಿಯ ಜನ ಅಲ್ಲಿಗೂ ಹೋಗಿ ನೀರು ಸಂಗ್ರಹಿಸಿ ತರುವುದು ವಾಡಿಕೆಯಾಗಿದೆ.ಸುಮಾರು ಎರಡೂವರೆ ಕಿಮೀ ದೂರವಿರುವ ಗ್ರಾಮ ಪಂಚಾಯಿತಿ ಕೇಂದ್ರ ದಿನ್ನೇಹಳ್ಳಿಗೆ ಈ ಜನ ನಡೆದೇ ಹೋಗಿ ಬಸ್ ಹಿಡಿಯುವ ಕಷ್ಟ ಹಲವು ವರ್ಷಗಳಿಂದ ತಪ್ಪಿಲ್ಲ. ಬೆಂಗಳೂರು ಕಡೆಗೆ ಹೋಗಬೇಕೆಂದರೆ ಅವರು ಚಿನ್ನಾರಿ ದೊಡ್ಡಿ ಸಮೀಪ ಹೊಸೂರಿನಿಂದ ಬರುವ ತಮಿಳುನಾಡು ಸಾರಿಗೆ ಬಸ್ ಅನ್ನು ನೆಚ್ಚಿಕೊಂಡಿದ್ದಾರೆ.ದಿನ್ನೇಹಳ್ಳಿಯಿಂದ ಈ ಹಳ್ಳಿಗೆ ಡಾಂಬರು ರಸ್ತೆಯೂ ಇಲ್ಲ. ಮಣ್ಣಿನ ರಸ್ತೆಯ ನೂರಾರು ಹಳ್ಳಗಳನ್ನು ದಾಟಿ ಈ ಗಡಿ ಗ್ರಾಮಕ್ಕೆ `ಪ್ರಜಾವಾಣಿ' ಪ್ರತಿನಿಧಿ ಮಂಗಳವಾರ ಮಧ್ಯಾಹ್ನ ತೆರಳಿದಾಗ ಗ್ರಾಮ ಮೌನವನ್ನು ಹೊದ್ದಿತ್ತು.ಯಾಕೆ ನಿಮ್ಮ ರಸ್ತೆಗೆ ಡಾಂಬರು ಬಂದಿಲ್ಲ, ನೀರಿನ ಸಮಸ್ಯೆ ಹಾಗೇ ಉಳಿದಿದೆ ಎಂದು ಕೇಳಿದರೆ, ಅಂಚಿನಲ್ಲಿರುವ ಹಳ್ಳಿ ಎಂದು ಯಾರೂ ಇಲ್ಲಿಗೆ ಬರಲ್ಲ. ದಿನ್ನೇಹಳ್ಳಿಗೆ ಬಂದು ಹಂಗೇ ವಾಪಸ್ ಹೊರ್ಟೋಗ್ತಾರೆ ಎಂದು ಕೂಲಿ ರಾಜಪ್ಪ ವಿಷಾದದಿಂದ ಹೇಳಿದರು. ನಮ್ಮ ಹಳ್ಳಿಗೆ ಚರಂಡಿ ವ್ಯವಸ್ಥೆಯೇ ಇಲ್ಲ ಎಂಬ ಮಾತನ್ನೂ ಸೇರಿಸಿದರು.2002ರಲ್ಲಿ ನವಗ್ರಾಮಗಳಲ್ಲಿ ನಮ್ಮ ಗ್ರಾಮವೂ ಸೇರಿದಾಗ ಕೊರೆದ ಕೊಳವೆಬಾವಿಯಲ್ಲಿ ಇದುವರೆಗೂ ನೀರಿತ್ತು. ಈಗ ನೀರಿಲ್ಲ. ಮತ್ತೆ ಆಳಕ್ಕೆ ಪೈಪುಗಳನ್ನು ಇಳಿಸಬೇಕು ಎಂದು ಹೇಳಿದ ಪಂಚಾಯಿತಿ ಸುಮ್ಮನಾಗಿದೆ. ಹೀಗಾಗಿ ನಮ್ಮ ತೋಟದ ನೀರನ್ನೇ ಜನರಿಗೆ ಕೊಡುತ್ತಿದ್ದೇವೆ.ನಿರಂತರ ವಿದ್ಯುತ್ ಇರುವುದರಿಂದ ನೀರು ದೊರಕುತ್ತಿದೆ. ಅದೂ ಇಲ್ಲವಾಗಿದ್ದರೆ ಜನರ ಕಷ್ಟ ಹೆಚ್ಚಾಗುತ್ತಿತ್ತು ಎಂದು ಆನಂದ ತಿಳಿಸಿದರು.ರಾಜಕೀಯ ಇಲ್ಲ: ಈ ಗಡಿಗ್ರಾಮದಲ್ಲಿ ರಾಜಕೀಯ ಮೇಲಾಟಗಳಿಲ್ಲ ಎಂಬುದು ವಿಶೇಷ. ಆನಂದ ಅವರ ಪ್ರಕಾರ, ಪ್ರತಿ ಬಾರಿಯೂ ದಿನ್ನೇಹಳ್ಳಿಯವರೇ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಸದಸ್ಯರಾಗುವ ಅವಕಾಶ ಈ ಗ್ರಾಮದ ಜನರಿಗೆ ಒಮ್ಮೆಯೂ ಸಿಕ್ಕಿಲ್ಲ. ಆದರೂ ಇಲ್ಲಿನ ಜನ ಪಕ್ಷಭೇದ ಮರೆತು, ರಾಜಕೀಯ ಲೆಕ್ಕಾಚಾರಗಳಿಲ್ಲದೆ ಯಾರಿಗೆ ಬೇಕೋ ಅವರಿಗೆ ಮತಚಲಾಯಿಸಿ ಸುಮ್ಮನಾಗುತ್ತಾರೆ.ಐದು ವರ್ಷಕ್ಕೊಮ್ಮೆ ಓಟ್ ಕೇಳೋಕೆ ಹಲವರು ಬರ‌್ತಾರೆ, ಆಮೇಲೆ ಯಾರೂ ಈ ಕಡೆಗೆ ತಲೆ ಹಾಕಲ್ಲ. ನಾವೂ ಅಷ್ಟಾಗಿ ತಲೆಕೆಡಿಸ್ಕಳಲ್ಲ ಎಂಬುದು ಇಲ್ಲಿನ ಕೆಲವರ ನುಡಿ. ಸೋಮವಾರ ಜೆಡಿಎಸ್‌ನ ಮಂಜುನಾಥ ಅವರು ಪ್ರಚಾರಕ್ಕೆ ಬಂದಿದ್ದರು. ಅವರನ್ನು ಬಿಟ್ಟರೆ ಇನ್ಯಾರೂ ಇಲ್ಲಿಗೆ ಮ ಯಾಚಿಸಲು ಬಂದಿಲ್ಲ ಎಂದು ಕೆಲವರು ತಿಳಿಸಿದರು.ದಿನ್ನೇಹಳ್ಳಿ ಗ್ರಾಮದ ಮುಖ್ಯಸ್ಥಳದಲ್ಲಿ ನಿಂತು ಕೋತಿಗುಂಟ್ಲಪಲ್ಲಿ ಎಲ್ಲಿ ಎಂದು ಕೇಳಿದರೆ ಗ್ರಾಮಸ್ಥರು `ಅದೋ ಅಲ್ಲಿ, ತಗ್ಗಿನಲ್ಲಿದೆಯಲ್ಲಾ ಅದೇ `ಎಂದು ಕೈ ತೋರಿಸುತ್ತರೆ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ನಡೆದಷ್ಟೂ ದಾರಿ ದೂರ ಎಂಬ ಮಾತಿಗೆ ರೂಪಕವಾಗಿರುವ ಆ ಹಳ್ಳಿ ಅಭಿವೃದ್ಧಿಯ ವಿಚಾರದಲ್ಲಿ ತನ್ನ ಮೌನ ಇಂದಿಗೂ ಮುರಿದಿಲ್ಲ.

ಪ್ರತಿಕ್ರಿಯಿಸಿ (+)