ಮಂಗಳವಾರ, ಮಾರ್ಚ್ 2, 2021
24 °C

ಐಪಿಎಲ್‌ ಪಂದ್ಯ: ಸಂಚಾರ ದಟ್ಟಣೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್‌ ಪಂದ್ಯ: ಸಂಚಾರ ದಟ್ಟಣೆ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್‌ ಕ್ರಿಕೆಟ್‌ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯ ಜನ ಕ್ರೀಡಾಂಗಣದತ್ತ ಹರಿದು ಬಂದಿದ್ದರಿಂದ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ಕಿಂಗ್ಸ್‌ ತಂಡಗಳ ನಡುವೆ ಸಂಜೆ ನಾಲ್ಕು ಗಂಟೆಗೆ ಪಂದ್ಯ ನಿಗದಿಯಾಗಿತ್ತು. ಹೀಗಾಗಿ ಮಧ್ಯಾಹ್ನದಿಂದಲೇ ಪ್ರೇಕ್ಷಕರು ಕ್ರೀಡಾಂಗಣದ ಕಡೆಗೆ ಧಾವಿಸಿದರು. ಮುಂಜಾಗ್ರತಾ ಕ್ರಮವಾಗಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತಾದರೂ ಎಂ.ಜಿ.ರಸ್ತೆ, ಸೇಂಟ್ ಮಾರ್ಕ್ಸ್, ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ, ಶಿವಾಜಿನಗರ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಕೆಲ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು.ರಾತ್ರಿ ಎಂಟು ಗಂಟೆಗೆ ಪಂದ್ಯ ಮುಗಿದ ಬಳಿಕವೂ ಇದೇ ಪರಿಸ್ಥಿತಿ ಮುಂದುವರಿಯಿತು. ಸಂಚಾರ ವ್ಯವಸ್ಥೆ ನಿರ್ವಹಣೆಗೆ ಕ್ರೀಡಾಂಗಣದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.‘ಐಪಿಎಲ್‌ ಹಿನ್ನೆಲೆಯಲ್ಲಿ ನಾಲ್ವರು ಎಸಿಪಿ, 17 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 108 ಸಿಬ್ಬಂದಿಯನ್ನು ಸಂಚಾರ ನಿರ್ವಹಣಾ ಕಾರ್ಯಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಪಂದ್ಯದ ಆರಂಭ ಹಾಗೂ ಮುಕ್ತಾಯದ ಸಂದರ್ಭದಲ್ಲಿ ಕೆಲ ಕಾಲ ದಟ್ಟಣೆ ಉಂಟಾಯಿತು. ಸಿಬ್ಬಂದಿ ಅರ್ಧ ತಾಸಿನೊಳಗೆ ಸಂಚಾರ ಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು’ ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿ ಬಾಬು ರಾಜೇಂದ್ರ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.