ಗುರುವಾರ , ಮೇ 13, 2021
34 °C

ಐಪಿಎಲ್ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ: ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯಿಂದ ಶಾಸಕರಿಗೆ ನೀ ಬೇಕಿದ್ದ ಎಂಟು ಸಾವಿರ ಐಪಿಎಲ್ ಕ್ರಿಕೆಟ್‌ನ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಯಬೇಕು~ ಎಂದು ಶಾಸಕ ಅಶೋಕ್ ಎಂ. ಪಟ್ಟಣ ಸರ್ಕಾರವನ್ನು ಒತ್ತಾಯಿಸಿದರು.ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕ್ರಿಕೆಟ್ ಪಂದ್ಯದ ಶೇ 20 ರಷ್ಟು ಟಿಕೆಟ್‌ಗಳನ್ನು ಶಾಸಕರಿಗೆ ಮೀಸಲಿಡ ಲಾಗಿತ್ತು. ಇದರ ದುರುಪಯೋಗದ ಬಗ್ಗೆ ಕಳೆದ ಅಧಿವೇಶನದಲ್ಲಿ ಸರ್ಕಾರದ ಗಮನವನ್ನು ಸೆಳೆದಿದ್ದರೂ ಸರ್ಕಾರ ಇನ್ನು ಯಾವುದೇ ಕ್ರಮವನ್ನು ಕೈಗೊಂಡಿಲ್ಲ~ ಎಂದು ಅವರು ಆರೋಪಿಸಿದರು.`ಟಿಕೆಟ್‌ಗಳಿಂದ ಸುಮಾರು ಒಂದು ಕೋಟಿ ಮೊತ್ತದ ಹಣವನ್ನು ಕೆಎಸ್‌ಸಿಎ ಪದಾಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದರ ನೇರ ಹೊಣೆಯನ್ನು ಅಕಾಡೆಮಿಯೇ ಹೊರಬೇಕಾಗುತ್ತದೆ.

 

ಕ್ರಿಕೆಟ್ ಪಂದ್ಯವನ್ನು ಪ್ರೋತ್ಸಾಹಿಸಲು ರಕ್ಷಣಾ ಇಲಾಖೆಯ ವಶದಲ್ಲಿದ್ದ ಜಾಗವನ್ನು ಸರ್ಕಾರವು ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಕೊಡಿಸಿದೆ. ಅದಕ್ಕಾಗಿ ಗೌರವಾರ್ಥ ಪಾಸುಗಳನ್ನು ಕೊಡು ವುದು ಕೆಎಸ್‌ಸಿಎ ಸೌಜನ್ಯ. ಅದನ್ನು ಬಿಟ್ಟು ಉಚಿತ ಪಾಸು ಕೊಡಿ ಎಂದು ಕೇಳಿಲ್ಲ~ ಎಂದು ಅವರು ಹೇಳಿದರು.`ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ ದಾಸ್ ಪೈ ಅವರು ಶಾಸಕರಿಗೆ ಉಚಿತ ಟಿಕೆಟ್ ನೀಡಬೇಡಿ ಎಂದು ಹೇಳಿದ್ದರು. ಆದರೆ, ಇವರು ಅಧಿಕಾರದಲ್ಲಿದ್ದಾಗ ಪಾಸುಗಳಿಗೆ ಬೇಡಿಕೆ ಇಟ್ಟಿದ್ದರು~ ಎಂದು ವ್ಯಂಗ್ಯವಾಡಿದರು.ಶಾಸಕ ನೆ.ಲ.ನರೇಂದ್ರಬಾಬು ಮಾತನಾಡಿ, `ಇಂದು ಕ್ರಿಕೆಟ್ ಕೇವಲ ಆಟವಾಗಿ ಉಳಿದಿಲ್ಲ, ಬದಲಾಗಿ ಜೂಜಾಗಿ ಮಾರ್ಪಟ್ಟಿದೆ. ಕ್ರೀಡೆಗೆ ಸಾಕಷ್ಟು ಅನುದಾನವನ್ನು ನೀಡಲಾಗುತ್ತಿದ್ದರೂ ಅದು ಸರಿಯಾಗಿ ಬಳಕೆ ಆಗುತ್ತಿಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಪದಾಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತದೆ~ ಎಂದು ಹೇಳಿದರು.`ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯು 8 ಸಾವಿರ ಟಿಕೆಟ್‌ಗಳನ್ನು ಯಾರಿಗೆ ನೀಡಿದೆ ಎಂದು ಸಾರ್ವಜನಿಕರಿಗೆ ತಿಳಿಯಲು ಸರ್ಕಾರ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಿ.ಸಿ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.