ಐಪಿಎಲ್ ವಿವಾದಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚೆ: ಉನ್ನತ ಮಟ್ಟದ ತನಿಖೆಗೆ ಒತ್ತಾಯ

7

ಐಪಿಎಲ್ ವಿವಾದಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚೆ: ಉನ್ನತ ಮಟ್ಟದ ತನಿಖೆಗೆ ಒತ್ತಾಯ

Published:
Updated:
ಐಪಿಎಲ್ ವಿವಾದಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚೆ: ಉನ್ನತ ಮಟ್ಟದ ತನಿಖೆಗೆ ಒತ್ತಾಯ

ನವದೆಹಲಿ (ಪಿಟಿಐ): ಐಪಿಎಲ್ ಸುತ್ತ ಒಂದರ ಹಿಂದೊಂದು ವಿವಾದಗಳು ಸುತ್ತು ಹಾಕಿಕೊಳ್ಳುತ್ತಿರುವಂತೆ ಈ ಟ್ವೆಂಟಿ-20 ಟೂರ್ನಿಯ ಎಲ್ಲ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಕೂಗು ಶುಕ್ರವಾರ ಲೋಕಸಭೆಯಲ್ಲಿ ಕೇಳಿ ಬಂದಿದೆ.

ಒಂದು ವೇಳೆ, ಸರ್ಕಾರ ಐಪಿಎಲ್ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಭಾನುವಾರದಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಮಾಜಿ ಕ್ರಿಕೆಟಿಗ ಬಿಜೆಪಿ ಸಂಸದ ಕೀರ್ತಿ ಆಜಾದ್ ಎಚ್ಚರಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕೀರ್ತಿ ಆಜಾದ್, ಐಪಿಎಲ್ ಕ್ರಿಕೆಟ್‌ನ್ನು ಕೇವಲ ಮನರಂಜನೆಯನ್ನಾಗಿ ಬದಲಾಯಿಸಿದೆ. ಈ ಟೂರ್ನಿಯ ಸುತ್ತ ಒಂದರ ಹಿಂದೆ ಒಂದರಂತೆ ವಿವಾದಗಳು ಸುತ್ತಿಕೊಳ್ಳುತ್ತಿವೆ ಎಂದು ಹೇಳಿದರು.

ಬೆಂಗಳೂರು ರಾಯಲ್  ಚಾಲೆಂಜರ್ಸ್‌ ಆಟಗಾರ ಆಸ್ಟ್ರೇಲಿಯಾದ ಲೂಕ್ ಪಾಮರ್ಸ್‌ಬ್ಯಾಚ್  ದೆಹಲಿಯ ಹೋಟೆಲ್‌ನಲ್ಲಿ ಭಾರತೀಯ ಮೂಲದ ಅಮೆರಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಆಜಾದ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ ಇತರ ಕೆಲವು ಸದಸ್ಯರು ನಾಚಿಕೆಗೇಡು, ನಾಚಿಕೆಗೇಡು... ಎಂದು ಕೂಗಿದರು.

ಈ ಪ್ರಕರಣ ನಡೆಯುವ ಮುನ್ನ ಐವರು ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಬಾಲಿವುಡ್ ನಟ ಶಾರೂಖ್ ಖಾನ್ ಕುಡಿದು ರಂಪಾಟ ಮಾಡಿದ ಘಟನೆಯೂ ನಡೆದಿತ್ತು ಎಂದು ಆಜಾದ್ ವಿವರಿಸಿದರು.

`ಐಪಿಎಲ್‌ನವರು ಕ್ರಿಕೆಟನ್ನು  ನೃತ್ಯ, ನಾಟಕಕ್ಕೆ  ಇಳಿಸಿದ್ದಾರೆ. ಬಿಸಿಸಿಐ ಮತ್ತು ಐಪಿಎಲ್ ಇಲ್ಲಿನ ಕಾನೂನುಗಳನ್ನೇ ಮೀರಿ ನಿಂತಂತೆ ಕಾಣುತ್ತಿದೆ.  ನಾವು ಪತ್ರಗಳನ್ನು ಬರೆಯುತ್ತಲೇ ಇದ್ದೇವೆ. ಆದರೆ ಯಾವುದೇ ಪ್ರಯೋಜನವಿಲ್ಲ~ ಎಂದು ಅವರು ಆರೋಪಿಸಿದರು.

ಐಪಿಎಲ್‌ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತಾವು ಈ ಹಿಂದೆಯೂ ಪ್ರಸ್ತಾಪಿಸಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಕ್ರಮ ಕೈಗೊಳ್ಳದೇ ಹೋದರೆ ಭಾನುವಾರದಿಂದ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಆಮರಣಾಂತ ಉಪವಾಸ ಆರಂಭಿಸುವುದಾಗಿ ಆಜಾದ್ ಎಚ್ಚರಿಸಿದರು.

ಆಜಾದ್ ಅವರನ್ನು ಜೆಡಿಯು ಮುಖಂಡ ಶರದ್ ಯಾದವ್ ಬೆಂಬಲಿಸಿದರು. ಕೀರ್ತಿ ಅವರು ಅತ್ಯಂತ ಗಂಭೀರ ವಿಚಾರವನ್ನು ಮುಂದಿಟ್ಟಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

`ಐಪಿಎಲ್ ಒಂದು ನಾಟಕ, ಅದು ಭಾರತದ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ~ ಎಂದೂ ಅವರು ಆರೋಪಿಸಿದರು.

ಟೂರ್ನಿ ಸ್ಥಗಿತ ಗೊಳಿಸಿ-ಲಾಲು: ಐಪಿಎಲ್ ಸುತ್ತ ಹಲವು ವಿವಾದಗಳು ಸುತ್ತಿಕೊಂಡಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಬೇಕು ಎಂದು ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಆಗ್ರಹಿಸಿದ್ದಾರೆ.

ಸಂಸತ್ ಭವನದ ಹೊರಗಡೆ ಸುದ್ದಿಗಾರರು ಐಪಿಎಲ್ ವಿವಾದಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಲಾಲು ಈ ರೀತಿ ಹೇಳಿದ್ದಾರೆ.

ಶಾರೂಖ್ ಖಾನ್ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಲಾಲು, ಖಾನ್ ಜೊತೆ ವಾಗ್ವಾದ ನಡೆಸಿದ ಪೊಲೀಸ್ ಸಿಬ್ಬಂದಿ ಕೆಲವು ಪಕ್ಷಗಳ ಆಣತಿ ಮೇರೆಗೆ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ತಾಳ್ಮೆ ವಹಿಸಿ- ಶಾರೂಕ್‌ಗೆ ಫಾರೂಕ್ ಸಲಹೆ: ಬಾಲಿವುಡ್ ನಟ ಶಾರೂಖ್‌ಖಾನ್ ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳ ನಡುವೆ ನಡೆದ ವಾಗ್ವಾದ ಪ್ರಕರಣ `ದುರದೃಷ್ಟಕರ~ ಎಂದು ಹೇಳಿರುವ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ, ತಾಳ್ಮೆ ವಹಿಸುವಂತೆ ಶಾರೂಕ್ ಖಾನ್‌ಗೆ ಸಲಹೆ ನೀಡಿದ್ದಾರೆ.

`ಶಾರೂಕ್ ತಮ್ಮ ಹೆಗಲ ಮೇಲೆ ಬಹಳಷ್ಟು ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಅವರು ತೋರುವ ವರ್ತನೆ ಉದ್ಯಮ, ಯುವ ಜನಾಂಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದಿರುವ ಘಟನೆ ದುರದೃಷ್ಟಕರ~ ಎಂದು ಸಂಸತ್ತಿನ ಹೊರಗಡೆ ಫಾರೂಕ್ ಸುದ್ದಿಗಾರರಿಗೆ ತಿಳಿಸಿದರು.

ದುಃಖಕರ-ಖುರ್ಷಿದ್: ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ವಾಗ್ವಾದ ಪ್ರಕರಣ ದುಃಖಕರವಾದದ್ದು ಎಂದು ಹೇಳಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಪ್ರತಿಯೊಂದು ವಿಷಯದಲ್ಲೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 ಶಾರೂಕ್ ಖಾನ್ ಪ್ರಕರಣದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖುರ್ಷಿದ್,~ ಎಲ್ಲಾ ವಿಚಾರದಲ್ಲೂ ಸರ್ಕಾರ ಮಧ್ಯಪ್ರವೇಶಬೇಕು ಎನ್ನುವುದು ಸರಿಯಲ್ಲ. ಶಾರೂಖ್ ಖಾನ್ ಪ್ರಕರಣಕ್ಕೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಆ ವಿಚಾರ ನಮ್ಮ ಮುಂದೆ ಇಲ್ಲ. ನಮ್ಮ ಮುಂದೆ ಆ ವಿಚಾರ ಬಂದರೆ ಖಂಡಿತವಾಗಿಯೂ ಗಂಭೀರವಾಗಿ ಪರಿಗಣಿಸುತ್ತೇವೆ~ ಎಂದು  ಹೇಳಿದರು.

ಮರು ಪರಿಶೀಲನೆಗೆ ಮಮತಾ ಮನವಿ

ಕೋಲ್ಕತ್ತ (ಐಎಎನ್‌ಎಸ್):  ವಿವಾದದಲ್ಲಿ ಸಿಲುಕಿರುವ ಬಾಲಿವುಡ್ ನಟ ಶಾರೂಖ್ ಖಾನ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಾಂಖೇಡೆ ಕ್ರೀಡಾಂಗಣ ಪ್ರವೇಶಕ್ಕೆ ಖಾನ್‌ಗೆ ಐದು ವರ್ಷಗಳ ನಿಷೇಧ ಹೇರಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಂಬೈ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿದ್ದಾರೆ.

ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ತಾವು ಬಯಸುವುದಿಲ್ಲ ಎಂದು ಹೇಳಿದ ಮಮತಾ, ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿರುವುದರಿಂದ ತಮ್ಮ ಹೇಳಿಕೆಯನ್ನು ತಿರುಚದಂತೆ ಮಾಧ್ಯಮಗಳಿಗೆ ಮನವಿ ಮಾಡಿದರು.

`ವ್ಯಾಪಾರದ ವಿಚಾರದಲ್ಲಿ ಮಹಾರಾಷ್ಟ್ರ ದೇಶದ ರಾಜಧಾನಿ. ಸಚಿನ್ ತೆಂಡೂಲ್ಕರ್ ಅವರಿಂದ ಶಾರೂಖ್ ವರೆಗೆ ಎಲ್ಲರೂ ನಮಗೆ ಆತ್ಮೀಯರೇ. ಈ ವಿಚಾರದ ಬಗ್ಗೆ ನಾನು  ಪ್ರತಿಕ್ರಿಯಿಸುವುದು ಸೂಕ್ತವೆನಿಸುತ್ತದೆಯೇ ಎಂಬುದು ನನಗೆ ತಿಳಿದಿಲ್ಲ~ ಎಂದು ಮಮತಾ ಹೇಳಿದರು.

`ಐಪಿಎಲ್ ನಿಷೇಧಿಸಿ~

ನವದೆಹಲಿ (ಪಿಟಿಐ):  `ಸಭ್ಯರ ಆಟ~ ಎಂದು ಕರೆಯಲಾಗುವ ಕ್ರಿಕೆಟ್ ಆಟವನ್ನು ಹಣದ ಮತ್ತು ಅನೈತಿಕತೆಯ `ಅಸಭ್ಯ~ ಪ್ರದರ್ಶನದ ಮಟ್ಟಕ್ಕೆ ಇಳಿಸುವ ಮೂಲಕ ದೇಶದ ಭದ್ರತೆಗೆ ಬೆದರಿಕೆಯೊಡ್ಡಿರುವ ಐಪಿಎಲ್‌ನ್ನು ನಿಷೇಧಿಸುವಂತೆ ಜನತಾ ಪಕ್ಷದ ಮುಖ್ಯಸ್ಥ ಸುಬ್ರಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಸಿನೆಮಾ ಜಗತ್ತಿನಲ್ಲಿ ತೊಡಗಿಕೊಂಡಿರುವ ಅಥವಾ ರಾಜಕೀಯಕ್ಕೆ ಸೇರಿದ ವ್ಯಕ್ತಿಗಳು ಮಾಲೀಕರಾಗಿರುವ ತಂಡಗಳಿಗೆ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ಹೇರಿದ ಬಳಿಕ ನಿಷೇಧವನ್ನು ಹಿಂಪಡೆಯಬಹುದು ಎಂದು ಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry